ವಾಷಿಂಗ್ಟನ್: ಅಮೆರಿಕದ ಮಾಜಿ ಅಧ್ಯಕ್ಷ ಜೋ ಬೈಡನ್ ಅವರ ಆರೋಗ್ಯ ಸ್ಥಿತಿ ಮತ್ತಷ್ಟು ಕ್ಷೀಣಿಸಿದ್ದು, ಅವರ ಪ್ರಾಸ್ಟೇಟ್ ಕ್ಯಾನ್ಸರ್ (Prostate Cancer) ದೇಹದ ಇತರ ಭಾಗಗಳಿಗೂ ಹರಡಿದೆ ಎಂದು ಅವರ ಪುತ್ರ ಹಂಟರ್ ಬೈಡನ್ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ಬಿಬಿಸಿ (BBC Newsnight) ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಈ ವಿಷಯ ಹಂಚಿಕೊಂಡಿರುವ ಅವರು, "ಕ್ಯಾನ್ಸರ್ ಈಗ ಮೂಳೆಗಳನ್ನು ಮೀರಿ ದೇಹದ ಇತರೆಡೆಗೆ ವ್ಯಾಪಿಸಿದೆ. 83 ವರ್ಷದ ನನ್ನ ತಂದೆ ತೀವ್ರ ದೈಹಿಕ ನೋವನ್ನು ಅನುಭವಿಸುತ್ತಿದ್ದಾರೆ" ಎಂದು ಭಾವುಕರಾಗಿ ಹೇಳಿದ್ದಾರೆ.
“ಕ್ಯಾನ್ಸರ್ ಅವರ ಮೂಳೆಗಳಿಗೆ ಮತ್ತು ಅದಕ್ಕೂ ಮೀರಿದ ಭಾಗಗಳಿಗೆ ಹರಡಿದೆ. ಇದು ತುಂಬಾ ನೋವಿನಿಂದ ಕೂಡಿದ್ದು, ಹಲವು ರೀತಿಯಲ್ಲಿ ಅವರ ದೈಹಿಕ ಸಾಮರ್ಥ್ಯದ ಮೇಲೆ ತೀವ್ರ ಪರಿಣಾಮ ಬೀರಿದೆ ಎಂದು ತಿಳಿಸಿದ್ದಾರೆ.
ಈ ನಡುವೆ ಹಂಟರ್ ಬೈಡನ್ ಅವರ ಹೇಳಿಕೆ ಕುರಿತು ಜೋ ಬೈಡನ್ ಅವರ ವಕ್ತಾರರು ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.
83 ವರ್ಷದ ಜೋ ಬೈಡನ್ ಅವರು 2025ರ ಮೇ ತಿಂಗಳಲ್ಲಿ ತಮಗೆ ತೀವ್ರ ಸ್ವರೂಪದ ಪ್ರಾಸ್ಟೇಟ್ ಕ್ಯಾನ್ಸರ್ ಇರುವುದು ಪತ್ತೆಯಾಗಿದೆ ಎಂದು ಬಹಿರಂಗಪಡಿಸಿದ್ದರು. ಆ ಸಂದರ್ಭದಲ್ಲಿ ಕ್ಯಾನ್ಸರ್ ಅದಾಗಲೇ ಅವರ ಮೂಳೆಗಳಿಗೆ ಹರಡಿರುವುದು ಪತ್ತೆಯಾಗಿತ್ತು.
ನಂತರ ಅಕ್ಟೋಬರ್‌ನಲ್ಲಿ ಬೈಡನ್ ಅವರ ವಕ್ತಾರರು ಅವರು ಕ್ಯಾನ್ಸರ್ ಚಿಕಿತ್ಸೆಯ ಭಾಗವಾಗಿ ವಿಕಿರಣ ಚಿಕಿತ್ಸೆ ಹಾಗೂ ಹಾರ್ಮೋನ್ ಚಿಕಿತ್ಸೆಗೆ ಒಳಗಾಗುತ್ತಿದ್ದಾರೆ ಎಂದು ತಿಳಿಸಿದ್ದರು.
2020ರ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆದ್ದು ಅಮೆರಿಕದ ಅತ್ಯಂತ ಹಿರಿಯ ವಯಸ್ಸಿನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದ ಬೈಡನ್, 2021ರಿಂದ 2025ರವರೆಗೆ ಅಧ್ಯಕ್ಷರಾಗಿದ್ದರು. ಅವರ ಅಧಿಕಾರಾವಧಿಯಲ್ಲಿಯೇ ಅವರ ಆರೋಗ್ಯದ ಕುರಿತು ಹಲವು ಬಾರಿ ಸಾರ್ವಜನಿಕವಾಗಿ ಚರ್ಚೆ ನಡೆದಿತ್ತು.
ವಯಸ್ಸು ಮತ್ತು ಆರೋಗ್ಯದ ಬಗ್ಗೆ ನಿರಂತರ ಚರ್ಚೆಗಳು ನಡೆದಿದ್ದರೂ, ಕ್ಯಾನ್ಸರ್ ಪತ್ತೆಯಾದ ಬಳಿಕವೂ ಬೈಡನ್ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಜೂನ್‌ನಲ್ಲಿ ಚಿಕಾಗೋದಲ್ಲಿ ನಡೆದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರ ಅಧ್ಯಕ್ಷೀಯ ಗ್ರಂಥಾಲಯದ ಸಮರ್ಪಣಾ ಕಾರ್ಯಕ್ರಮದಲ್ಲೂ ಅವರು ಭಾಗವಹಿಸಿದ್ದರು.
ಜೋ ಬೈಡನ್ ಅವರು 2009ರಿಂದ 2017ರವರೆಗೆ ಬರಾಕ್ ಒಬಾಮಾ ಅವರ ಅಧಿಕಾರಾವಧಿಯಲ್ಲಿ ಉಪಾಧ್ಯಕ್ಷರಾಗಿದ್ದರು. ಬಳಿಕ 2020ರ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಅವರನ್ನು ಸೋಲಿಸಿ ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.
ಈ ನಡುವೆ ಬೈಡನ್ ಅವರ ಅಧ್ಯಕ್ಷೀಯ ಅವಧಿ ಮತ್ತು ರಾಜಕೀಯ ಜೀವನವನ್ನು ಒಳಗೊಂಡಿರುವ ಅವರ ಆತ್ಮಚರಿತ್ರೆ ನವೆಂಬರ್ 17ರಂದು ಬಿಡುಗಡೆಯಾಗಲು ನಿಗದಿಯಾಗಿದೆ.