ಇಸ್ಲಾಮಾಬಾದ್: ನಿಷೇಧಿತ ಉಗ್ರ ಸಂಘಟನೆಯಾದ ಲಷ್ಕರ್-ಇ- ತೊಯ್ಬಾದ (LeT) ದ ಪ್ರಮುಖ ವ್ಯಕ್ತಿಗಳೊಂದಿಗೆ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಕಾಣಿಸಿಕೊಂಡು, ಆ ಸಂಘಟನೆಯ ಮುಖ್ಯಸ್ಥ ಹಫೀಜ್ ಸಯೀದ್ ಅವರನ್ನು ಶ್ಲಾಘಿಸಿ ಹಾಗೂ ಭಾರತದ ವಿರುದ್ಧ ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿದ ಪಾಕಿಸ್ತಾನದ ಮಾಜಿ ಗೃಹ ಸಚಿವ ಶೇಖ್ ರಶೀದ್ ಅಹ್ಮದ್ ತೀವ್ರ ಟೀಕೆಗೆ ಗುರಿಯಾಗಿದ್ದಾರೆ.
ಕಾರ್ಯಕ್ರಮದ ವಿಡಿಯೋವೊಂದರಲ್ಲಿ, ರಶೀದ್ ಹಿರಿಯ LeT ಕಮಾಂಡರ್ ಮತ್ತು ಪಾಕಿಸ್ತಾನ ಮರ್ಕಜಿ ಮುಸ್ಲಿಂ ಲೀಗ್ (PMML) ಅಧ್ಯಕ್ಷರೆಂದು ಗುರುತಿಸಲ್ಪಟ್ಟ ಖಾಲಿದ್ ಮಸೂದ್ ಸಂಧು ಹಾಗೂ ಭಯೋತ್ಪಾದಕ ಸಂಘಟನೆಯ ಕೇಂದ್ರ ಸಲಹಾ ಸಮಿತಿಯ ಸದಸ್ಯರೆಂದು ಬಣ್ಣಿಸಲಾದ ಖಾರಿ ಮುಹಮ್ಮದ್ ಯಾಕೂಬ್ ಶೇಖ್ ಅವರೊಂದಿಗೆ ವೇದಿಕೆಯನ್ನು ಹಂಚಿಕೊಂಡಿರುವುದು ಕಂಡುಬರುತ್ತದೆ.
ತಮ್ಮ ಭಾಷಣದ ವೇಳೆ, ರಶೀದ್, ಸಯೀದ್‌ಗೆ ಬಹಿರಂಗವಾಗಿ ಬೆಂಬಲ ವ್ಯಕ್ತಪಡಿಸಿದರು ಮತ್ತು ಜೈಲಿನಲ್ಲಿರುವ LeT ಮುಖ್ಯಸ್ಥರನ್ನು ಶ್ಲಾಘಿಸುತ್ತಾ ಹಲವು ಹೇಳಿಕೆಗಳನ್ನು ನೀಡಿದರು. ವಿಡಿಯೋದಲ್ಲಿ ರಶೀದ್ ಅವರು "ಮೇನ್ ಹಫೀಜ್ ಸಾಹಬ್ ಕಾ ಗುಲಾಮ್ ಹೂಂ" (Main Hafiz sahab ka ghulam hu) ಎಂದು ಹೇಳುತ್ತಿರುವುದು ಕೇಳಿಸುತ್ತದೆ; ಇದರರ್ಥ "ನಾನು ಹಫೀಜ್ ಸಯೀದ್‌ನ ಗುಲಾಮ" ಎಂದಾಗಿದೆ.
ಅಮೆರಿಕದಲ್ಲಿದ್ದಾಗ ಸಯೀದ್ ಅವರ ಫೋನ್ ಸಂಖ್ಯೆಯು ತಮ್ಮ ಫೋನ್‌ನಲ್ಲಿ ಕಾಣಿಸಿಕೊಂಡಿತ್ತು ಮತ್ತು ಆ ನಂತರ ತಮ್ಮನ್ನು ಆ ದೇಶದಿಂದ ಹೊರಹಾಕಲಾಗಿತ್ತು. ಇದಲ್ಲದೆ, "ನಾವು ಪಾಕಿಸ್ತಾನದೊಂದಿಗೆ, ಹಫೀಜ್ ಸಯೀದ್ ಅವರೊಂದಿಗೆ ಇದ್ದೇವೆ" ಎಂದು ಘೋಷಿಸುವ ಮೂಲಕ ಅವರು ಸಯೀದ್ ಮತ್ತು ಆ ಸಂಘಟನೆಗೆ ತಮ್ಮ ಬೆಂಬಲವನ್ನು ಪುನರುಚ್ಚರಿಸಿದರು. ಈ ಸಭೆಯಲ್ಲಿ ರಶೀದ್ ಭಾರತವನ್ನು ಗುರಿಯಾಗಿಸಿಕೊಂಡು ಪ್ರಚೋದನಕಾರಿ ಹೇಳಿಕೆಗಳನ್ನೂ ನೀಡಿದರು.
ಭಾರತ "ಪಾಕಿಸ್ತಾನದತ್ತ ಕಣ್ಣೆತ್ತಿ ನೋಡಿದರೆ ಅಲ್ಲಾಹನು ಅದನ್ನು ನಾಶಪಡಿಸುತ್ತಾನೆ ಎಂದು ಅವರು ಪ್ರತಿಪಾದಿಸಿದ್ದಾರೆ. ಪಾಕಿಸ್ತಾನದ ಹಿತಾಸಕ್ತಿಗೆ ವಿರುದ್ಧವಾದ ಯಾವುದೇ ಘಟನೆ ಭಾರತದಲ್ಲಿ ನಡೆಯುವುದಿಲ್ಲ ಎಂದು ಹೇಳುತ್ತಲೇ, "ಭಾರತದಲ್ಲಿ ಪಕ್ಷಿಗಳ ಕಲರವವೂ ಇರುವುದಿಲ್ಲ ಅಥವಾ ದೇವಾಲಯಗಳಲ್ಲಿ ಗಂಟೆಗಳ ನಾದವೂ ಕೇಳಿಸುವುದಿಲ್ಲ ಎಂದು ಆತ ಹೇಳಿದ್ದಾನೆ.
ನಿಷೇಧಿತ ಭಯೋತ್ಪಾದಕ ಸಂಘಟನೆಯಾದ 'ಲಷ್ಕರ್-ಎ-ತೈಬಾ' (LeT) ದ ಸದಸ್ಯರು ಅಥವಾ ಅದರೊಂದಿಗೆ ನಂಟು ಹೊಂದಿರುವ ವ್ಯಕ್ತಿಗಳೊಂದಿಗೆ ಮಾಜಿ ಸಚಿವರು ಕಾಣಿಸಿಕೊಂಡಿರುವುದು ಈ ಹೇಳಿಕೆಗಳ ಬಗ್ಗೆ ಹೆಚ್ಚಿನ ಗಮನ ಸೆಳೆಯುವಂತೆ ಮಾಡಿದೆ. ರಶೀದ್ ಅವರು 2020 ರಿಂದ 2022 ರವರೆಗೆ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ನೇತೃತ್ವದ ಸರ್ಕಾರದಲ್ಲಿ ಗೃಹ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಅವರು 'ಅವಾಮಿ ಮುಸ್ಲಿಂ ಲೀಗ್'ನ ಸ್ಥಾಪಕರು ಮತ್ತು ನಾಯಕರಾಗಿದ್ದಾರೆ.
'ಲಷ್ಕರ್-ಎ-ತೈಬಾ' ಮತ್ತು ಅದರ ನಾಯಕತ್ವದ ವಿರುದ್ಧ ದೀರ್ಘಕಾಲದಿಂದ ಅಂತರರಾಷ್ಟ್ರೀಯ ಮಟ್ಟದಲ್ಲಿ ತೀವ್ರ ನಿಗಾ ವಹಿಸಲಾಗುತ್ತಿರುವ ಹಿನ್ನೆಲೆಯಲ್ಲಿ, ಈ ಕಾರ್ಯಕ್ರಮದಲ್ಲಿ ಅವರ ಉಪಸ್ಥಿತಿ ಮತ್ತು ಹಫೀಜ್ ಸಯೀದ್ ಅವರನ್ನು ಶ್ಲಾಘಿಸುವ ಅವರ ಹೇಳಿಕೆಗಳು ಮಹತ್ವ ಪಡೆದುಕೊಂಡಿವೆ.