ವಾಷಿಂಗ್ಟನ್: ಅಮೆರಿಕದ ಮೆಸಚೂಸೆಟ್ಸ್‌ನಲ್ಲಿ ಅತ್ಯಂತ ಆಘಾತಕಾರಿ ಮತ್ತು ಕ್ರೂರ ಘಟನೆಯೊಂದು ನಡೆದಿದ್ದು, 17 ವರ್ಷದ ಭಾರತೀಯ ಮೂಲದ ಬಾಲಕನೊಬ್ಬ ತನ್ನ ಸ್ವಂತ ತಾಯಿ ಮತ್ತು 14 ವರ್ಷದ ಕಿರಿಯ ಸಹೋದರನನ್ನು ಭೀಕರವಾಗಿ ಹತ್ಯೆ ಮಾಡಿದ್ದಾನೆ.
ಮೆಸಚೂಸೆಟ್ಸ್‌ನ ಆಕ್ಟನ್ ನಗರದಲ್ಲಿರುವ ಅವರ ನಿವಾಸದಲ್ಲಿ ಈ ಘಟನೆ ನಡೆದಿದೆ. ಹತ್ಯೆಯಾದವರನ್ನು ಸುಧಾ ವೆಂಕಟೇಶನ್ (45) ಮತ್ತು ಸಿದ್ಧಾರ್ಥ್ ಅರವಿಂದ್ (14) ಎಂದು ಗುರುತಿಸಲಾಗಿದೆ.
ರಾತ್ರಿಯಿಡೀ ನಡೆದ ಶೋಧ ಕಾರ್ಯಾಚರಣೆ ಬಳಿಕ ಅರ್ಜುನ್ ಅರವಿಂದ್‌ನನ್ನು ಬುಧವಾರ ಮುಂಜಾನೆ ಪೊಲೀಸರು ಬಂಧಿಸಿದ್ದಾರೆ.
ಈತನ ವಿರುದ್ಧ ಎರಡು ಕೊಲೆ ಪ್ರಕರಣಗಳು, ಕುಟುಂಬ ಸದಸ್ಯರ ಮೇಲೆ ಹಲ್ಲೆ, ಅನುಮತಿಯಿಲ್ಲದೆ ವಾಹನ ಬಳಕೆ ಹಾಗೂ ವಾಹನ ಕಳವು ಸೇರಿದಂತೆ ಹಲವು ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆಕ್ಟನ್-ಬಾಕ್ಸ್‌ಬರೋ ಪ್ರಾದೇಶಿಕ ಪ್ರೌಢಶಾಲೆಯ ವಿದ್ಯಾರ್ಥಿಯಾಗಿರುವ ಅರ್ಜುನ್, ಮಂಗಳವಾರ ತನ್ನ ಮನೆಯಲ್ಲೇ ತಾಯಿ ಮತ್ತು ಸಹೋದರನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ, ಬಳಿಕ ತಾಯಿಯ ಹೋಂಡಾ ಅಕಾರ್ಡ್ ಕಾರಿನಲ್ಲಿ ಪರಾರಿಯಾಗಿದ್ದಾನೆ ಎಂದು ಪೊಲೀಸರು ಆರೋಪಿಸಿದ್ದಾರೆ.
ಮಿಡ್ಲ್‌ಸೆಕ್ಸ್ ಜಿಲ್ಲಾ ಅಟಾರ್ನಿ ಮರಿಯನ್ ರಯಾನ್ ಮತ್ತು ಆಕ್ಟನ್ ಪೊಲೀಸ್ ಮುಖ್ಯಸ್ಥ ಡಗ್ಲಸ್ ಸ್ಟರ್ನಿಯೋಲೊ ಅವರ ಪ್ರಕಾರ, ಬೋಸ್ಟನ್‌ನಿಂದ ಸುಮಾರು 48 ಕಿ.ಮೀ. ದೂರದಲ್ಲಿರುವ ಆಕ್ಟನ್‌ನ ಮಾರ್ಥಾ ಲೇನ್‌ನಲ್ಲಿರುವ ಕುಟುಂಬದ ಮನೆಯಲ್ಲಿ ಮಂಗಳವಾರ ಈ ಘಟನೆ ನಡೆದಿದೆ.
ಮಂಗಳವಾರ ಸಂಜೆ 6.30ರ ಬಳಿಕ ಟ್ಯೂಷನ್ ಶಿಕ್ಷಕಿಯೊಬ್ಬರು ನಿಗದಿತ ಭೇಟಿಗಾಗಿ ಮನೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ.
ಬಾಗಿಲು ತೆರೆಯದ ಹಿನ್ನೆಲೆಯಲ್ಲಿ ಅವರು ಅರ್ಜುನ್‌ನ ತಂದೆಯನ್ನು ಸಂಪರ್ಕಿಸಿದ್ದಾರೆ. ಕುಟುಂಬದ ಸದಸ್ಯರನ್ನು ಸಂಪರ್ಕಿಸಲು ತಂದೆ ಪ್ರಯತ್ನಿಸಿದರೂ ಸಾಧ್ಯವಾಗದ ಕಾರಣ, ಆಕ್ಟನ್ ಪೊಲೀಸರಿಗೆ ಮಾಹಿತಿ ನೀಡಿ ಕುಟುಂಬದವರ ಸುರಕ್ಷತೆ ಪರಿಶೀಲಿಸುವಂತೆ ಮನವಿ ಮಾಡಿದ್ದರು ಎಂದು ರಯಾನ್ ತಿಳಿಸಿದ್ದಾರೆ.
ಅರ್ಜುನ್‌ನ ತಂದೆ ಮಂಗಳವಾರ ಬೆಳಗ್ಗೆ ಕೆಲಸಕ್ಕೆ ತೆರಳುವ ಮುನ್ನ ಪತ್ನಿಯನ್ನು ಕೊನೆಯದಾಗಿ ನೋಡಿದ್ದರು. ಕಿರಿಯ ಮಗ ಸಿದ್ಧಾರ್ಥ್ ಮಧ್ಯಾಹ್ನದ ವೇಳೆಗೆ ಕೊನೆಯದಾಗಿ ಕಾಣಿಸಿಕೊಂಡಿದ್ದ.
ಪೊಲೀಸರು ಮನೆಗೆ ತೆರಳಿದಾಗ ಸುಧಾ ವೆಂಕಟೇಶನ್ ಮತ್ತು ಸಿದ್ಧಾರ್ಥ್ ಮೃತಪಟ್ಟಿರುವುದು ಪತ್ತೆಯಾಗಿದೆ. ಸುಧಾ ಅವರ ಮೃತದೇಹ ನೆಲಮಾಳಿಗೆಯಲ್ಲಿ ಹಾಗೂ ಸಿದ್ಧಾರ್ಥ್‌ನ ಮೃತದೇಹ ಮನೆಯ ಮೊದಲ ಮಹಡಿಯಲ್ಲಿ ಪತ್ತೆಯಾಗಿದೆ.
ಇಬ್ಬರ ದೇಹಗಳ ಮೇಲೂ ಸ್ಪಷ್ಟವಾದ ಗಾಯದ ಗುರುತುಗಳು ಕಂಡುಬಂದಿವೆ. ಆದರೆ, ಸಾವಿನ ನಿಖರ ಕಾರಣ ಮತ್ತು ಸ್ವರೂಪದ ಕುರಿತು ಮುಖ್ಯ ವೈದ್ಯಕೀಯ ಪರೀಕ್ಷಕರು ಇನ್ನೂ ವರದಿ ನೀಡಿಲ್ಲ.
ತಾಯಿ ಕಾರಿನಲ್ಲಿ ಪರಾರಿ; ಬಳಿಕ ಪೊಲೀಸರ ವಶಕ್ಕೆ
ಘಟನೆ ಬಳಿಕ ಅರ್ಜುನ್ ಮತ್ತು ಆತನ ತಾಯಿಯ ಹೋಂಡಾ ಅಕಾರ್ಡ್ ಕಾರು ನಾಪತ್ತೆಯಾಗಿತ್ತು ಎಂದು ರಯಾನ್ ತಿಳಿಸಿದ್ದಾರೆ.
ಅರ್ಜುನ್‌ಗಾಗಿ ಪೊಲೀಸರು ಶೋಧ ಆರಂಭಿಸಿದರೂ ಆರಂಭದಲ್ಲಿ ಆತನ ಸುಳಿವು ಸಿಕ್ಕಿರಲಿಲ್ಲ. ಬಳಿಕ ಕಾನೂನು ಜಾರಿ ಸಂಸ್ಥೆಗಳು ಹಾಗೂ ಸಾರ್ವಜನಿಕರಿಗೆ ಆತನ ಬಗ್ಗೆ ಎಚ್ಚರಿಕೆ ನೀಡಲಾಗಿತ್ತು.
ಬುಧವಾರ ಮುಂಜಾನೆ ಮ್ಯಾಸಚೂಸೆಟ್ಸ್‌ನ ವೇಲ್ಯಾಂಡ್‌ನಲ್ಲಿ ಪಾರ್ಕಿಂಗ್ ಸ್ಥಳವೊಂದರಲ್ಲಿ ನಡೆದ ಪ್ರತ್ಯೇಕ ಪ್ರಕರಣಕ್ಕೆ ಪೊಲೀಸರು ತೆರಳಿದ್ದಾಗ, ಅಲ್ಲಿ ಅರ್ಜುನ್ ಕಾರಿನೊಳಗೆ ಇರುವುದು ಪತ್ತೆಯಾಗಿದೆ. ಯಾವುದೇ ಪ್ರತಿರೋಧವಿಲ್ಲದೆ ಆತನನ್ನು ವಶಕ್ಕೆ ಪಡೆಯಲಾಗಿದೆ.
ಹತ್ಯೆ ಬಗ್ಗೆ ಚಾಟ್‌ಜಿಪಿಟಿಯಲ್ಲಿ ಹುಡುಕಾಟ?
ತನಿಖೆಯ ವೇಳೆ ಅರ್ಜುನ್ ಇತ್ತೀಚೆಗೆ ಆತಂಕಕಾರಿ ವರ್ತನೆ ತೋರಿಸುತ್ತಿದ್ದ ಎಂಬ ಮಾಹಿತಿ ಹೊರಬಂದಿದೆ ಎಂದು ಮಿಡ್ಲ್‌ಸೆಕ್ಸ್ ಕೌಂಟಿ ಜಿಲ್ಲಾ ಅಟಾರ್ನಿ ಕಚೇರಿ ತಿಳಿಸಿದೆ.
“ಕುಟುಂಬವನ್ನು ಕೊಲ್ಲುವ ಕುರಿತ ಸೈದ್ಧಾಂತಿಕ ವಿಚಾರಗಳು ಅಥವಾ ಕಲ್ಪನೆಗಳಿಗಾಗಿ ಆತ ಇಂಟರ್ನೆಟ್ ಮತ್ತು ಚಾಟ್‌ಜಿಪಿಟಿಯಲ್ಲಿ ಹುಡುಕಾಟ ನಡೆಸಿದ್ದ” ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಅರ್ಜುನ್ ಕೃತಕ ಬುದ್ಧಿಮತ್ತೆ ಚಾಟ್‌ಬಾಟ್ ಮೂಲಕ ‘ಗಾಥಿಕ್ ಕಾದಂಬರಿ’ ರೀತಿಯ ಕಥೆಗಳನ್ನು ರಚಿಸಲು ಸಹಾಯ ಕೇಳಿದ್ದ. ಅದಕ್ಕಾಗಿ ವಿವಿಧ ಪ್ರಶ್ನೆಗಳನ್ನು ಕೇಳಿ, ಪಾತ್ರಗಳನ್ನು ಸೃಷ್ಟಿಸಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅರ್ಜುನ್‌ನನ್ನು ಬುಧವಾರ ಲೋವೆಲ್ ಜುವೆನೈಲ್ ಕೋರ್ಟ್‌ನಲ್ಲಿ ಹಾಜರುಪಡಿಸುವ ನಿರೀಕ್ಷೆಯಿತ್ತು. ಆದರೆ, ಜುವೆನೈಲ್ ಕೋರ್ಟ್‌ಗೆ ಕೊಲೆ ಪ್ರಕರಣದ ವಿಚಾರಣೆ ನಡೆಸುವ ಅಧಿಕಾರವಿಲ್ಲದ ಕಾರಣ, ಕೊಲೆ ಮತ್ತು ಸಂಬಂಧಿತ ಹಲ್ಲೆ ಪ್ರಕರಣಗಳಲ್ಲಿ ನಂತರ ಕಾನ್ಕಾರ್ಡ್ ಜಿಲ್ಲಾ ನ್ಯಾಯಾಲಯದಲ್ಲಿ ಆತನನ್ನು ಹಾಜರುಪಡಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.