ಡೊನಾಲ್ಟ್ ಟ್ರಂಪ್ 
ವಿದೇಶ

Iran ಮುಗಿಸಲು ಅಮೆರಿಕ ಮಾಸ್ಟರ್ ಪ್ಲ್ಯಾನ್: ಹಿಂದೆಂದೂ ಕಾಣದ ಭೀಕರ 'ಆರ್ಥಿಕ ಯುದ್ಧ' ಘೋಷಣೆ!

ಇರಾನ್‌ ವಿರುದ್ಧದ ಅಮೆರಿಕದ ಮುಂದಿನ ಕಾರ್ಯತಂತ್ರವು ಆರ್ಥಿಕ ಒತ್ತಡ ಮತ್ತು ಬಂದರುಗಳ ಮೇಲಿನ ಭೌತಿಕ ನಿರ್ಬಂಧ ಎಂಬ ಎರಡು ಪ್ರಮುಖ ಅಂಶಗಳನ್ನು ಒಳಗೊಂಡಿರಲಿದೆ ಎಂದು ಬೆಸೆಂಟ್‌ ವಿವರಿಸಿದ್ದಾರೆ.

ವಾಷಿಂಗ್ಟನ್‌: ಇರಾನ್‌ ವಿರುದ್ಧ ಅಮೆರಿಕ ಮತ್ತಷ್ಟು ಆಕ್ರಮಣಕಾರಿ ಹೆಜ್ಜೆ ಇಡಲು ಸಜ್ಜಾಗಿದೆ. ಇರಾನ್‌ನ ಆರ್ಥಿಕತೆಯನ್ನು ಜಾಗತಿಕ ಮಟ್ಟದಲ್ಲಿ ಪ್ರತ್ಯೇಕಿಸುವ ನಿಟ್ಟಿನಲ್ಲಿ, ಜಗತ್ತು ಹಿಂದೆಂದೂ ಕಂಡಿರದ ರೀತಿಯ ಆರ್ಥಿಕ ಒತ್ತಡ ಹೇರಲಾಗುವುದು ಎಂದು ಅಮೆರಿಕಾ ಎಚ್ಚರಿಕೆ ನೀಡಿದೆ,

ಕನ್ಸರ್ವೇಟಿವ್‌ ದೂರದರ್ಶನ ಜಾಲ ನ್ಯೂಸ್‌ಮ್ಯಾಕ್ಸ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಅಮೆರಿಕಾ ಹಣಕಾಸು ಸಚಿವ ಸ್ಕಾಟ್‌ ಬೆಸೆಂಟ್‌ ಮುಂದಿನ ವಾರ ಮತ್ತಷ್ಟು ಕಠಿಣ ಕ್ರಮಗಳ ಘೋಷಣೆ ಮಾಡುವ ಸುಳಿವನ್ನು ನೀಡಿದ್ದಾರೆ.

ಹಾರ್ಮುಜ್ ಜಲಸಂಧಿ ವಿಚಾರದಲ್ಲಿ ಉಭಯ ರಾಷ್ಟ್ರಗಳ ನಡುವಿನ ಸಂಘರ್ಷ ತೀವ್ರಗೊಂಡಿರುವ ಬೆನ್ನಲ್ಲೇ ಅಮೆರಿಕದ ಈ ಎಚ್ಚರಿಕೆ ಹೊರಬಿದ್ದಿದ್ದು, ಜಾಗತಿಕ ತೈಲ ಮಾರುಕಟ್ಟೆ ಮತ್ತು ಇಂಧನ ಪೂರೈಕೆ ಮೇಲೂ ಪರಿಣಾಮ ಬೀರುವ ಆತಂಕ ಹೆಚ್ಚಾಗಿದೆ.

ಇರಾನ್‌ ವಿರುದ್ಧದ ಅಮೆರಿಕದ ಮುಂದಿನ ಕಾರ್ಯತಂತ್ರವು ಆರ್ಥಿಕ ಒತ್ತಡ ಮತ್ತು ಬಂದರುಗಳ ಮೇಲಿನ ಭೌತಿಕ ನಿರ್ಬಂಧ ಎಂಬ ಎರಡು ಪ್ರಮುಖ ಅಂಶಗಳನ್ನು ಒಳಗೊಂಡಿರಲಿದೆ ಎಂದು ಬೆಸೆಂಟ್‌ ವಿವರಿಸಿದ್ದಾರೆ.

ಹಾರ್ಮುಜ್ ಜಲಸಂಧಿಯಲ್ಲಿನ ನಿರಂತರ ದಿಗ್ಬಂಧನದಿಂದ ಇರಾನ್‌ನ ಬಂದರುಗಳಿಗೆ ಯಾವುದೇ ವಸ್ತುಗಳು ಒಳಗೆ ಹೋಗದಂತೆ ಹಾಗೂ ಅಲ್ಲಿಂದ ಹೊರಬರದಂತೆ ಮಾಡುವ ಉದ್ದೇಶವಿದೆ. ಮುಂದಿನ ವಾರ ಈ ವಿಚಾರದಲ್ಲಿ ಮತ್ತಷ್ಟು ಘೋಷಣೆಗಳನ್ನು ನಿರೀಕ್ಷಿಸಬಹುದು ಎಂದು ಸುಳಿವು ನೀಡಿದ್ದಾರೆ.

ವಿಶ್ವದ ಪ್ರಮುಖ ತೈಲ ಸಾಗಣೆ ಮಾರ್ಗಗಳಲ್ಲಿ ಒಂದಾಗಿರುವ ಹಾರ್ಮುಜ್ ಜಲಸಂಧಿ ವಿಚಾರವೇ ಇದೀಗ ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷದ ಪ್ರಮುಖ ಕೇಂದ್ರಬಿಂದುವಾಗಿದೆ. ಈ ಜಲಮಾರ್ಗದ ಮೂಲಕ ಪ್ರತಿದಿನ ಅಪಾರ ಪ್ರಮಾಣದ ಕಚ್ಚಾ ತೈಲ ಮತ್ತು ಇಂಧನ ಸಾಗಣೆಯಾಗುವುದರಿಂದ, ಇಲ್ಲಿ ಉಂಟಾಗುವ ಯಾವುದೇ ಅಡ್ಡಿಯು ಜಾಗತಿಕ ತೈಲ ಮಾರುಕಟ್ಟೆಯ ಮೇಲೆ ನೇರ ಪರಿಣಾಮ ಬೀರುವ ಸಾಧ್ಯತೆಯಿದೆ.

ಇರಾನ್‌ ವಿರುದ್ಧದ ಯುದ್ಧದಲ್ಲಿ ಅಮೆರಿಕದ ತಕ್ಷಣದ ಆದ್ಯತೆ ಅಮೆರಿಕನ್ನರಿಗೆ ತೈಲ ಮತ್ತು ಪೆಟ್ರೋಲ್‌ ಬೆಲೆಗಳನ್ನು ಕಡಿಮೆ ಮಾಡುವುದು ಎಂದು ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್‌ ಹೇಳಿದ್ದಾರೆ. ಇರಾನ್‌ ಪರಮಾಣು ಅಸ್ತ್ರ ಪಡೆಯದಂತೆ ತಡೆಯುವುದು ಎರಡನೇ ಆದ್ಯತೆಯಾಗಿದೆ ಎಂದು ಅವರು ತಿಳಿಸಿದ್ದಾರೆ.

ಈ ನಿಲುವು ಅಮೆರಿಕದ ಹಿಂದಿನ ಹೇಳಿಕೆಗಳಿಗೆ ಹೋಲಿಸಿದರೆ ಹೆಚ್ಚು ಕಠಿಣವಾಗಿದೆ. ಆಗಸ್ಟ್‌ 4ರಂದು ಬೆಸೆಂಟ್‌ ಅವರು ಸಿಎನ್‌ಬಿಸಿಗೆ ನೀಡಿದ ಸಂದರ್ಶನದಲ್ಲಿ, ಹೋರ್ಮುಜ್ ಜಲಸಂಧಿಯನ್ನು ಪುನಃ ತೆರೆಯುವ ಕುರಿತು ಇರಾನ್‌ನೊಂದಿಗೆ ಕೆಲವೇ ದಿನಗಳಲ್ಲಿ ಒಪ್ಪಂದವಾಗಬಹುದು ಎಂಬ ಆಶಾವಾದ ವ್ಯಕ್ತಪಡಿಸಿದ್ದರು. ಅವರ ಈ ಹೇಳಿಕೆಯ ಬಳಿಕ ಅಮೆರಿಕದ ಷೇರು ಮಾರುಕಟ್ಟೆಯಲ್ಲಿ ಏರಿಕೆ ಕಂಡುಬಂದಿದ್ದರೆ, ಕಚ್ಚಾ ತೈಲದ ಬೆಲೆ ಇಳಿಕೆಯಾಗಿತ್ತು.

ಗುರುವಾರವೂ ಕಚ್ಚಾ ತೈಲದ ಬೆಲೆ ಎರಡು ಪ್ರತಿಶತಕ್ಕಿಂತ ಹೆಚ್ಚು ಕುಸಿದಿದೆ. ಹೋರ್ಮುಜ್ ಜಲಸಂಧಿ ಮತ್ತೆ ತೆರೆಯುವ ಕುರಿತು ಹೂಡಿಕೆದಾರರಲ್ಲಿ ಇನ್ನೂ ಆಶಾವಾದ ಉಳಿದಿದೆ. ಆದರೆ, ಅಮೆರಿಕ ಮತ್ತು ಇರಾನ್ ಪರಸ್ಪರ ಕಠಿಣ ಎಚ್ಚರಿಕೆಗಳನ್ನು ನೀಡುತ್ತಿರುವುದರಿಂದ ಪರಿಸ್ಥಿತಿ ಇನ್ನೂ ಅನಿಶ್ಚಿತವಾಗಿದೆ.

ಫೆಬ್ರವರಿ 28ರಂದು ಮಧ್ಯಪ್ರಾಚ್ಯದಲ್ಲಿ ಯುದ್ಧ ಆರಂಭವಾದ ಬಳಿಕ ಹೋರ್ಮುಜ್ ಜಲಸಂಧಿಯ ಮೇಲಿನ ನಿಯಂತ್ರಣವನ್ನು ಇರಾನ್‌ ಮುಂದುವರಿಸಿಕೊಂಡು ಬಂದಿದೆ ಎಂದು ವರದಿಯಾಗಿದೆ. ಈ ಮಾರ್ಗದ ಮೂಲಕ ಸಾಗುವ ಹಡಗುಗಳು ಇರಾನ್‌ನಿಂದ ಅನುಮತಿ ಪಡೆಯುವುದರ ಜತೆಗೆ ಸಾಗಣೆ ಶುಲ್ಕವನ್ನೂ ಪಾವತಿಸಬೇಕಾಗಿದೆ.

ಇದೇ ವಿಚಾರವಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಕೂಡ ಇತ್ತೀಚೆಗೆ ತಮ್ಮ ಟ್ರೂತ್‌ ಸೋಷಿಯಲ್‌ ಖಾತೆಯಲ್ಲಿ ಪ್ರತಿಕ್ರಿಯಿಸಿದ್ದರು.

ಹಾರ್ಮುಜ್ ಜಲಸಂಧಿಯ ಮೇಲೆ ಅಮೆರಿಕ ಸಂಪೂರ್ಣ ನಿಯಂತ್ರಣ ಹೊಂದಿದೆ ಎಂದು ಅವರು ಹೇಳಿಕೊಂಡಿದ್ದರು. ಅಮೆರಿಕದ ನೌಕಾ ದಿಗ್ಬಂಧನವನ್ನು ಎಲ್ಲರೂ “ಉಕ್ಕಿನ ಗೋಡೆ” ಎಂದು ಕರೆಯುತ್ತಿದ್ದಾರೆ ಮತ್ತು ಅದರ ವಿರುದ್ಧ ಇರಾನ್‌ ಏನೂ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದರು.

ಆದರೆ, ಇರಾನ್‌ ಈ ಹೇಳಿಕೆಯನ್ನು ತಳ್ಳಿಹಾಕಿದೆ. ಹಾರ್ಮುಜ್ ಜಲಸಂಧಿ ತನ್ನ ನಿಯಂತ್ರಣದಲ್ಲೇ ಇದೆ ಎಂಬ ನಿಲುವನ್ನು ಇರಾನ್‌ ನಿರಂತರವಾಗಿ ವ್ಯಕ್ತಪಡಿಸುತ್ತಿದೆ.

ಇರಾನ್‌ನ ಅರೆಸೈನಿಕ ಪಡೆ ಬಾಸಿಜ್‌ನ ಮುಖ್ಯಸ್ಥ ಹೊಸೇನ್‌ ತಾಯೆಬ್‌, ಹಾರ್ಮುಜ್ ಜಲಸಂಧಿ ಇಸ್ಲಾಮಿಕ್‌ ಗಣರಾಜ್ಯದ ನಿರ್ವಹಣೆ ಮತ್ತು ನಿಯಂತ್ರಣದಲ್ಲಿದೆ ಎಂದು ಹೇಳಿದ್ದಾರೆ. ದೇಶವು ಸಂಪೂರ್ಣ ಭದ್ರತೆಯೊಂದಿಗೆ ತನ್ನ ಹಾದಿಯಲ್ಲಿ ಮುಂದುವರಿಯುತ್ತಿದೆ ಎಂದೂ ತಿಳಿಸಿದ್ದಾರೆ.

ಇರಾನ್‌ನ ವಿದೇಶಾಂಗ ಸಚಿವ ಅಬ್ಬಾಸ್‌ ಅರಾಘ್ಚಿ ಕೂಡ ಅಮೆರಿಕ ಹಾರ್ಮುಜ್ ಜಲಸಂಧಿಯ ವಿಚಾರದಲ್ಲಿ ತಪ್ಪು ಲೆಕ್ಕಾಚಾರ ಮಾಡುತ್ತಿದೆ ಎಂದಿದ್ದಾರೆ.

ಗುಪ್ತಚರ ವೈಫಲ್ಯಗಳಿಂದಾಗಿ ಅಮೆರಿಕ ಈ ಹಿಂದೆ ಹಲವು ಬಾರಿ ತಪ್ಪು ನಿರ್ಧಾರಗಳನ್ನು ತೆಗೆದುಕೊಂಡಿದೆ. ಇರಾನ್‌ ವಿರುದ್ಧದ ಯುದ್ಧವೇ ಇದಕ್ಕೆ ಉದಾಹರಣೆಯಾಗಿದ್ದು, ಇದೀಗ ಹೋರ್ಮುಜ್ ಜಲಸಂಧಿಯ ವಿಚಾರದಲ್ಲೂ ಮತ್ತೊಂದು ದೊಡ್ಡ ತಪ್ಪು ಲೆಕ್ಕಾಚಾರ ನಡೆಯುತ್ತಿದೆ ಎಂದು ಅವರು ಹೇಳಿದ್ದಾರೆ.

ಹಾರ್ಮುಜ್ ಜಲಸಂಧಿ ವಿಚಾರದಲ್ಲಿ ಅಮೆರಿಕ ಮತ್ತು ಇರಾನ್‌ ನಡುವಿನ ಬಿಕ್ಕಟ್ಟು ಮುಂದುವರಿದಿರುವ ಹಿನ್ನೆಲೆಯಲ್ಲಿ, ಮುಂದಿನ ವಾರ ಅಮೆರಿಕ ಘೋಷಿಸಲಿರುವ ಹೊಸ ಆರ್ಥಿಕ ಕ್ರಮಗಳತ್ತ ಇದೀಗ ಜಾಗತಿಕ ಸಮುದಾಯದ ಗಮನ ನೆಟ್ಟಿದೆ. ಇವು ಜಾರಿಗೆ ಬಂದರೆ ಇರಾನ್‌ನ ಆರ್ಥಿಕತೆ ಮಾತ್ರವಲ್ಲದೆ, ಜಾಗತಿಕ ತೈಲ ಪೂರೈಕೆ ಮತ್ತು ಇಂಧನ ಬೆಲೆಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Asian Games 2026: 44 ವರ್ಷಗಳ ಬರ ನೀಗಿಸಿದ ಮಹಿಳಾ ಪಡೆ; ಚೀನಾ ಮಣಿಸಿ ಚಿನ್ನ ಗೆದ್ದ ಭಾರತ!

Asian Games 2026: 1 ನಿಮಿಷದಲ್ಲಿ 2 ಚಿನ್ನದ ಪದಕ ಗೆದ್ದ ಭಾರತ, 75 ಪದಕಗಳೊಂದಿಗೆ 5ನೇ ಸ್ಥಾನಕ್ಕೆ ಲಗ್ಗೆ!

‘CEC ಜ್ಞಾನೇಶ್ ಕುಮಾರ್ ದೇಶದ್ರೋಹಿ’: ಮುಂಬೈನಲ್ಲಿ ಭುಗಿಲೆದ್ದ Cockroach Janata Party ಪ್ರತಿಭಟನೆ, ರಾಜೀನಾಮೆಗೆ ಬಿಗಿಪಟ್ಟು..!

ಜೆಡಿಎಸ್ ಪ್ರಧಾನ ಕಾರ್ಯದರ್ಶಿಯಾಗಿ Biggboss ಮಾಜಿ ಸ್ಪರ್ಧಿ ಜಾಹ್ನವಿ ನೇಮಕ!

Pakನ ಹೊಸ ನಾಟಕ: ಕಾಶ್ಮೀರದಲ್ಲಿ ಭಾರತೀಯ ಸೇನೆಯಿಂದ ಹತ್ಯೆಗೀಡಾದ SSG ಉಗ್ರ ಜೀವಂತವಾಗಿದ್ದಾನೆ ಎಂದ ಪಾಕ್ ಸೇನೆ