ಢಾಕಾ: ಬಾಂಗ್ಲಾದೇಶಿ ನಟಿ ರೈಮಾ ಇಸ್ಲಾಂ ಶಿಮು ನಾಪತ್ತೆಯಾದ 24 ಗಂಟೆಗಳಲ್ಲೇ ಅವರ ದೇಹ ಎರಡು ತುಂಡುಗಳಾಗಿ ಚೀಲವೊಂದರಲ್ಲಿ ಪತ್ತೆಯಾಗಿತ್ತು. ಇದೀಗ ಈ ರೋಚಕ ಕೊಲೆ ರಹಸ್ಯ ಬಯಲಾಗಿದ್ದು ಹಳೇ ವೈಮನಸ್ಯ ಕಾರಣ ಎಂದು ಹೇಳಲಾಗಿದೆ.
2022ರ ಜನವರಿ 16ರಂದು ಬೆಳಗ್ಗೆ 7 ಗಂಟೆಗೆ ಶೂಟಿಂಗ್‌ಗೆ ತೆರಳುವುದಾಗಿ ಮನೆಯಿಂದ ಹೊರಟಿದ್ದ ರೈಮಾ ಇಸ್ಲಾಂ ಅವರು ಮತ್ತೆ ಮನೆಗೆ ಮರಳಿರಲಿಲ್ಲ. ಮರುದಿನ ಢಾಕಾದ ಹೊರವಲಯದ ಕೆರಾನಿಗಂಜ್‌ನ ಹಜ್ರತ್‌ಪುರ ಸೇತುವೆ ಸಮೀಪ ಪೊದೆಗಳಲ್ಲಿ ಅನುಮಾನಾಸ್ಪದ ಚೀಲ ಪತ್ತೆಯಾಯಿತು. ಚೀಲದೊಳಗೆ ರೈಮಾ ಅವರ ಶವವಿತ್ತು. ದೇಹವನ್ನು ಎರಡು ತುಂಡುಗಳಾಗಿ ಕತ್ತರಿಸಲಾಗಿತ್ತು.
ಆರಂಭದಲ್ಲಿ ಪೊಲೀಸರು ಕುಟುಂಬಸ್ಥರು, ಸಹೋದ್ಯೋಗಿಗಳು ಸೇರಿದಂತೆ ಹಲವರನ್ನು ವಿಚಾರಣೆ ನಡೆಸಿದರು. ನಟ ಜಾಯೆದ್ ಖಾನ್ ಅವರನ್ನೂ ಹಳೆಯ ವೈಮನಸ್ಸಿನ ಹಿನ್ನೆಲೆಯಲ್ಲಿ ಪ್ರಶ್ನಿಸಲಾಯಿತು. ಆದರೆ ತನಿಖೆಗೆ ಮಹತ್ವದ ಸುಳಿವು ಸಿಕ್ಕಿದ್ದು ಕುಟುಂಬದ ಕಾರಿನಲ್ಲಿ.
ಕಾರಿನೊಳಗೆ ಬ್ಲೀಚ್‌ನ ತೀವ್ರ ವಾಸನೆ ಹಾಗೂ ನೈಲಾನ್ ಹಗ್ಗ ಪತ್ತೆಯಾಗಿತ್ತು. ರೈಮಾ ಅವರ ಶವವಿದ್ದ ಚೀಲವನ್ನೂ ನೈಲಾನ್ ಹಗ್ಗದಿಂದ ಹೊಲಿಯಲಾಗಿತ್ತು. ಹೀಗಾಗಿ ಶವವನ್ನು ಇದೇ ಕಾರಿನಲ್ಲಿ ಸಾಗಿಸಿರಬಹುದೆಂಬ ಅನುಮಾನ ಪೊಲೀಸರಿಗೆ ಬಲವಾಯಿತು.
ತನಿಖೆಯ ಬಳಿಕ ರೈಮಾ ಅವರ ಪತಿ ಶಖಾವತ್ ಅಲಿ ನೋಬೆಲ್ ಹಾಗೂ ಅವರ ಸ್ನೇಹಿತ ಎಸ್‌ಎಂವೈ ಅಬ್ದುಲ್ಲಾ ಫರ್ಹಾದ್ ಸೇರಿದಂತೆ ಆರು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದರು. ವಿಚಾರಣೆ ವೇಳೆ ಶಖಾವತ್ ಪತ್ನಿಯನ್ನು ಹತ್ಯೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೊಲೆ ಬಳಿಕ ದೇಹ ತುಂಡು ಮಾಡಿದ ಪಾಪಿ ಪತಿ
ಪೊಲೀಸರ ಪ್ರಕಾರ, ಬೆಳಗ್ಗೆ ರೈಮಾ ಹಾಗೂ ಶಖಾವತ್ ನಡುವೆ ಜಗಳ ನಡೆದಿದ್ದು, ಶಖಾವತ್ ಆಕೆಯ ಮೇಲೆ ಹಲ್ಲೆ ನಡೆಸಿ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ. ಬಳಿಕ ಫರ್ಹಾದ್ ಸಹಾಯದಿಂದ ದೇಹವನ್ನು ತುಂಡುಗಳಾಗಿ ಕತ್ತರಿಸಿ ಚೀಲದಲ್ಲಿ ತುಂಬಿ ಕಾರಿನ ಡಿಕ್ಕಿಯಲ್ಲಿ ಇರಿಸಿದ್ದರು. ರಾತ್ರಿ ಕೆರಾನಿಗಂಜ್‌ಗೆ ತೆರಳಿ ಸೇತುವೆ ಸಮೀಪದ ಪೊದೆಗಳಲ್ಲಿ ಚೀಲವನ್ನು ಎಸೆದಿದ್ದರು ಎನ್ನಲಾಗಿದೆ.
ತನಿಖೆಯಲ್ಲಿ ದಂಪತಿಯ ವೈವಾಹಿಕ ಜೀವನದಲ್ಲೂ ಹಲವು ಸಮಸ್ಯೆಗಳಿದ್ದವು ಎಂಬುದು ಬೆಳಕಿಗೆ ಬಂದಿದೆ. ಶಖಾವತ್ ಪತ್ನಿಯ ಮೇಲೆ ಹಲ್ಲೆ ನಡೆಸುತ್ತಿದ್ದರು ಎಂದು ಆರೋಪಿಸಲಾಗಿದ್ದು, ಹತ್ಯೆಗೆ ಕೆಲವು ತಿಂಗಳುಗಳ ಮೊದಲು ರೈಮಾ ಕೌಟುಂಬಿಕ ಹಿಂಸಾಚಾರದ ದೂರು ದಾಖಲಿಸಿದ್ದರು ಎನ್ನಲಾಗಿದೆ.
ಪೊಲೀಸ್ ಕಸ್ಟಡಿಯಲ್ಲಿದ್ದ ಶಖಾವತ್ ತನ್ನ ಮಗಳಿಗೆ ಕರೆ ಮಾಡಿ ತಾಯಿಯನ್ನು ಕೊಂದಿದ್ದಕ್ಕಾಗಿ ಕ್ಷಮೆ ಕೇಳಿದ್ದಾಗಿ ಪುತ್ರಿ ಪೊಲೀಸರಿಗೆ ತಿಳಿಸಿದ್ದಾಳೆ.
ಬ್ಲೀಚ್ ವಾಸನೆಯಿಂದ ಕೊಲೆ ರಹಸ್ಯ ಬಯಲು
ಶೂಟಿಂಗ್‌ಗೆ ತೆರಳಿದ್ದಾಳೆ ಎಂಬ ಕಥೆ ಹೇಳಿ ಪ್ರಕರಣವನ್ನು ಮುಚ್ಚಿಹಾಕಲು ಯತ್ನಿಸಿದ್ದರೂ, ಕಾರಿನಲ್ಲಿದ್ದ ಬ್ಲೀಚ್‌ನ ವಾಸನೆ ಮತ್ತು ನೈಲಾನ್ ಹಗ್ಗವೇ ತನಿಖಾಧಿಕಾರಿಗಳಿಗೆ ಕೊಲೆಯ ರಹಸ್ಯ ಬಯಲು ಮಾಡಲು ಪ್ರಮುಖ ಸುಳಿವುಗಳಾದವು.