ರಕ್ಷಣಾ ಕಾರ್ಯಾಚರಣೆ ನಡೆಸುತ್ತಿರುವುದು. 
ವಿದೇಶ

Tunisian ಕರಾವಳಿಯಲ್ಲಿ ದೋಣಿ ಮುಳುಗಡೆ; ಇಬ್ಬರು ಸಾವು, 12 ಮಂದಿಗಾಗಿ ಶೋಧ ಕಾರ್ಯಾಚರಣೆ

ಜಾರ್ಜಿಸ್ ಮತ್ತು ಬೆನ್ ಗರ್ಡೇನ್ ನಗರಗಳ ನಡುವಿನ ಪ್ರದೇಶದಿಂದ ಗುರುವಾರ ಮುಂಜಾನೆ ದೋಣಿ ಹೊರಟಿತ್ತು. ಶನಿವಾರ ಜೀವ ರಕ್ಷಕ ಜಾಕೆಟ್ ಧರಿಸಿದ್ದ ಏಕೈಕ ಬದುಕುಳಿದ ವ್ಯಕ್ತಿಯನ್ನು ವಾಣಿಜ್ಯ ಹಡಗೊಂದು ಪತ್ತೆಹಚ್ಚಿ ರಕ್ಷಿಸಿದೆ.

ಟುನಿಸ್: ದಕ್ಷಿಣ ಟುನೀಶಿಯಾ ಕರಾವಳಿಯಲ್ಲಿ ವಲಸಿಗರನ್ನು ಹೊತ್ತೊಯ್ಯುತ್ತಿದ್ದ ದೋಣಿ ಮುಳುಗಿದ ಪರಿಣಾಮ ಕನಿಷ್ಠ ಇಬ್ಬರು ಮೃತಪಟ್ಟಿದ್ದು, ಸುಮಾರು 12 ಮಂದಿ ನಾಪತ್ತೆಯಾಗಿದ್ದಾರೆ ಎಂದು ಟುನೀಶಿಯಾದ ರಾಷ್ಟ್ರೀಯ ಗಾರ್ಡ್ ಶನಿವಾರ ತಿಳಿಸಿದೆ. .

ಟುನೀಶಿಯಾದ ಸರ್ಕಾರಿ ಸುದ್ದಿ ಸಂಸ್ಥೆ TAPಗೆ ರಾಷ್ಟ್ರೀಯ ಗಾರ್ಡ್ ವಕ್ತಾರ ಹೌಸೆಮ್ ಎಡ್ಡಿನ್ ಜೆಬಾಬ್ಲಿ ಮಾಹಿತಿ ನೀಡಿದ್ದು, ಎರಡು ಮೃತದೇಹಗಳನ್ನು ಹೊರತೆಗೆದು ಸಮೀಪದ ಜೆರ್ಬಾ ದ್ವೀಪದ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ತಿಳಿಸಿದ್ದಾರೆ. ಸುಮಾರು 15 ಮಂದಿ ದೋಣಿಯಲ್ಲಿ ಪ್ರಯಾಣಿಸುತ್ತಿದ್ದರು ಎಂದು ಅವರು ರಾಷ್ಟ್ರೀಯ ರೇಡಿಯೊ ಮೊಸಾಯಿಕ್ ಎಫ್‌ಎಂಗೆ ಹೇಳಿದ್ದಾರೆ.

ಜಾರ್ಜಿಸ್ ಮತ್ತು ಬೆನ್ ಗರ್ಡೇನ್ ನಗರಗಳ ನಡುವಿನ ಪ್ರದೇಶದಿಂದ ಗುರುವಾರ ಮುಂಜಾನೆ ದೋಣಿ ಹೊರಟಿತ್ತು. ಶನಿವಾರ ಜೀವ ರಕ್ಷಕ ಜಾಕೆಟ್ ಧರಿಸಿದ್ದ ಏಕೈಕ ಬದುಕುಳಿದ ವ್ಯಕ್ತಿಯನ್ನು ವಾಣಿಜ್ಯ ಹಡಗೊಂದು ಪತ್ತೆಹಚ್ಚಿ ರಕ್ಷಿಸಿದೆ. ಬದುಕುಳಿದ ವ್ಯಕ್ತಿಯ ಹೇಳಿಕೆಯನ್ನು ಆಧರಿಸಿ ಈ ಮಾಹಿತಿ ನೀಡಲಾಗಿದೆ.

ಇತರರ ರಕ್ಷಣಾ ಕಾರ್ಯಾಚರಣೆಗೆ ಹೆಲಿಕಾಪ್ಟರ್ ಹಾಗೂ ಕರಾವಳಿ ರಕ್ಷಣಾ ಪಡೆಗಳ ದೋಣಿಗಳನ್ನು ಸ್ಥಳಕ್ಕೆ ಕಳುಹಿಸಲಾಗಿದೆ. ದೋಣಿಯಲ್ಲಿದ್ದ ವಲಸಿಗರು ಇಟಲಿಯತ್ತ ತೆರಳುತ್ತಿದ್ದರು ಎಂದು ಶಂಕಿಸಲಾಗಿದೆ.

ಜಾರ್ಜಿಸ್ ನಗರವು ಟುನೀಶಿಯಾ ಮಾತ್ರವಲ್ಲದೆ ಆಫ್ರಿಕಾದ ಇತರೆ ಭಾಗಗಳು ಹಾಗೂ ಇತರ ಪ್ರದೇಶಗಳಿಂದ ಯುರೋಪ್ ತಲುಪಲು ಮೆಡಿಟರೇನಿಯನ್ ಸಮುದ್ರ ದಾಟಲು ಪ್ರಯತ್ನಿಸುವ ವಲಸಿಗರ ಪ್ರಮುಖ ನಿರ್ಗಮನ ಕೇಂದ್ರವಾಗಿದೆ.

2022ರಲ್ಲೂ ಇದೇ ರೀತಿಯ ದುರಂತ

2022ರಲ್ಲಿ ಜಾರ್ಜಿಸ್ ಕರಾವಳಿಯಲ್ಲಿ 18 ಮಂದಿಯನ್ನು ಹೊತ್ತೊಯ್ಯುತ್ತಿದ್ದ ದೋಣಿಯೊಂದು ನಾಪತ್ತೆಯಾಗಿತ್ತು. ತಮ್ಮ ಕುಟುಂಬ ಸದಸ್ಯರಿಗಾಗಿ ಸರಿಯಾಗಿ ಶೋಧ ನಡೆಸಲಿಲ್ಲ ಹಾಗೂ ಪತ್ತೆಯಾದ ಕೆಲವು ಮೃತದೇಹಗಳನ್ನು ಗುರುತಿಸದೆ ಮತ್ತು ಕುಟುಂಬಗಳಿಗೆ ಮಾಹಿತಿ ನೀಡದೆ ಅಂತ್ಯಕ್ರಿಯೆ ನಡೆಸಲಾಗಿದೆ ಎಂದು ಆರೋಪಿಸಿ ಕುಟುಂಬಸ್ಥರು ಹಲವು ವಾರಗಳ ಕಾಲ ಪ್ರತಿಭಟನೆ ನಡೆಸಿದ್ದರು.

2023ರಲ್ಲಿ ಯುರೋಪಿಯನ್ ಒಕ್ಕೂಟ ಮತ್ತು ಟುನೀಶಿಯಾ ನಡುವೆ ವ್ಯಾಪಕ ಒಪ್ಪಂದಕ್ಕೆ ಸಹಿ ಹಾಕಿದ ಬಳಿಕ ಟುನೀಶಿಯಾದಿಂದ ವಲಸಿಗರ ನಿರ್ಗಮನ ಪ್ರಮಾಣ ಗಣನೀಯವಾಗಿ ಕುಸಿದಿದೆ.

ಅಕ್ರಮ ವಲಸೆಯನ್ನು ನಿಯಂತ್ರಿಸಲು ಮತ್ತು ಮೆಡಿಟರೇನಿಯನ್ ಪ್ರದೇಶದಲ್ಲಿ ಮಾನವ ಕಳ್ಳಸಾಗಣೆ ತಡೆಯಲು ಟುನೀಶಿಯಾದ ಗಡಿ ನಿಯಂತ್ರಣ ವ್ಯವಸ್ಥೆ ಹಾಗೂ ಕರಾವಳಿ ರಕ್ಷಣಾ ಪಡೆಗಳಿಗೆ ಹಣಕಾಸು ಮತ್ತು ತಾಂತ್ರಿಕ ನೆರವು ನೀಡುವುದು ಈ ಒಪ್ಪಂದದ ಭಾಗವಾಗಿತ್ತು.

2023ರಲ್ಲೇ ವಲಸೆ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಟುನೀಶಿಯಾಗೆ ಯುರೋಪಿಯನ್ ಒಕ್ಕೂಟ 10.5 ಕೋಟಿ ಯುರೋ (ಸುಮಾರು 12.1 ಕೋಟಿ ಡಾಲರ್) ನೆರವು ನೀಡಿತ್ತು.

ಆದರೆ, ಟುನೀಶಿಯಾದ ದಕ್ಷಿಣ ಕರಾವಳಿಯಿಂದ ನಡೆಯುತ್ತಿರುವ ಅಪಾಯಕಾರಿ ಸಮುದ್ರಯಾನಗಳು ಸಂಪೂರ್ಣವಾಗಿ ನಿಂತಿಲ್ಲ. ವಿಶೇಷವಾಗಿ ಜಾರ್ಜಿಸ್‌ನಲ್ಲಿ, ಸಮುದ್ರದಲ್ಲಿ ನಾಪತ್ತೆಯಾಗಿರುವ ತಮ್ಮ ಕುಟುಂಬ ಸದಸ್ಯರನ್ನು ಹುಡುಕುವ ಕಾರ್ಯವನ್ನು ಕುಟುಂಬಗಳು ಹಲವು ವರ್ಷಗಳಿಂದ ಮುಂದುವರಿಸಿವೆ.

ಯುರೋಪಿಯನ್ ಒಕ್ಕೂಟದ ಒಪ್ಪಂದದ ಬಳಿಕ ಟುನೀಶಿಯಾದಲ್ಲಿ ವಲಸಿಗರು ಮತ್ತು ಆಶ್ರಯ ಕೋರುವವರ ಮೇಲಿನ ವರ್ತನೆ ಕುರಿತು ಮಾನವ ಹಕ್ಕುಗಳ ಸಂಘಟನೆಗಳು ಕಳವಳ ವ್ಯಕ್ತಪಡಿಸಿವೆ.

ಸಾಮೂಹಿಕ ಗಡಿಪಾರು, ಜನಾಂಗೀಯ ಹಿಂಸಾಚಾರ, ಮನಬಂದಂತೆ ಬಂಧನ ಮತ್ತು ಕಪ್ಪು ಜನಾಂಗದ ವಲಸಿಗರ ಮೇಲಿನ ದೌರ್ಜನ್ಯದ ಆರೋಪಗಳು ಕೇಳಿಬಂದಿವೆ.

ಜುಲೈನಲ್ಲಿ ಅಮ್ನೆಸ್ಟಿ ಇಂಟರ್‌ನ್ಯಾಷನಲ್, ಟುನೀಶಿಯಾದ ಗಡಿ ನಿಯಂತ್ರಣಕ್ಕೆ ಯುರೋಪಿಯನ್ ಒಕ್ಕೂಟ ನೀಡುತ್ತಿರುವ ನೆರವು ಗಂಭೀರ ಮಾನವ ಹಕ್ಕುಗಳ ಉಲ್ಲಂಘನೆಗೆ ಕಾರಣವಾಗುತ್ತಿದೆ ಎಂದು ಆರೋಪಿಸಿತ್ತು.

ನಿರಾಶ್ರಿತರು ಮತ್ತು ಆಶ್ರಯ ಕೋರುವವರಿಗೆ “ರಕ್ಷಣೆಯೂ ಇಲ್ಲ, ಸುರಕ್ಷಿತವಾಗಿ ಹೊರಬರುವ ಮಾರ್ಗವೂ ಇಲ್ಲದ ವ್ಯವಸ್ಥೆಯಲ್ಲಿ ಉದ್ದೇಶಪೂರ್ವಕವಾಗಿ ಸಿಲುಕಿಸಲಾಗುತ್ತಿದೆ” ಎಂದು ಅದು ಹೇಳಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಆರ್ಥಿಕ ದಿಗ್ಬಂಧನಕ್ಕೆ ಕೆಂಡಾಮಂಡಲ: ಅಮೆರಿಕಕ್ಕೆ ಸಾಥ್ ನೀಡುವ ದೇಶಗಳೂ ನಮಗೆ ಶತ್ರುಗಳೇ; ಇರಾನ್ ಕಠಿಣ ಎಚ್ಚರಿಕೆ

ಪಾರದೀಪ್ ಕರಾವಳಿಯಲ್ಲಿ ಭೀಕರ ದುರಂತ: 72,100 ಟನ್ ಕಬ್ಬಿಣದ ಅದಿರು ಹೊತ್ತಿದ್ದ Panama ಹಡಗು ಮುಳುಗಡೆ; ಇಬ್ಬರ ರಕ್ಷಣೆ, 22 ಮಂದಿ ನಾಪತ್ತೆ..!

Hormuz ಮೇಲೆ ಅಮೆರಿಕಾ ಕಣ್ಣು: ‘‘NEW US Territory’’ ಎಂದು ಮತ್ತೆ ನಕ್ಷೆ ಪೋಸ್ಟ್ ಮಾಡಿದ ಟ್ರಂಪ್, ಇರಾನ್ ಕೆಂಡಾಮಂಡಲ..!

ವಾಲ್ಮೀಕಿ ನಿಗಮ ಹಗರಣ: Prosecutionಗೆ ರಾಜ್ಯಪಾಲರ ಅನುಮತಿ ಕೋರಿದ CBI, ಸಚಿವ ನಾಗೇಂದ್ರಗೆ ಹೆಚ್ಚಿದ ಸಂಕಷ್ಟ..!

ಕೈಕೊಟ್ಟ ಮುಂಗಾರು: ಬರ ತಗ್ಗಿಸಲು 28 ಕೋಟಿ ರೂ. ವೆಚ್ಚದಲ್ಲಿ ಮೋಡ ಬಿತ್ತನೆಗೆ ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್..!