ಕಠ್ಮಂಡು: ನೇಪಾಳದಲ್ಲಿ ಪ್ರವಾಹಕ್ಕೆ ಬಲಿಯಾದವರ ಸಂಖ್ಯೆ 270ಕ್ಕೆ ಏರಿಕೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇತ್ತೀಚಿನ ವರ್ಷಗಳಲ್ಲಿ ದೇಶ ಕಂಡ ಅತ್ಯಂತ ಭೀಕರ ದುರಂತಗಳಲ್ಲಿ ಒಂದಾದ ಈ ಪ್ರವಾಹದಲ್ಲಿ 288 ಭಾರತೀಯ ಪ್ರವಾಸಿಗರು ಸೇರಿದಂತೆ ಸಾವಿರಾರು ಮಂದಿ ನಾಪತ್ತೆಯಾಗಿದ್ದು, ಅವರಿಗಾಗಿ ಅಧಿಕಾರಿಗಳು ತೀವ್ರ ಶೋಧ ನಡೆಸುತ್ತಿರುವಂತೆಯೇ, ಮೃತರ ಸಂಖ್ಯೆ ಗುರುವಾರ 270ಕ್ಕೆ ಏರಿಕೆಯಾಗಿದೆ.
ಬುಧವಾರ ಸಂಭವಿಸಿದ ಈ ಹಠಾತ್ ಪ್ರವಾಹ ನೇಪಾಳದ ಮೂರು ಜಿಲ್ಲೆಗಳಲ್ಲಿ ವ್ಯಾಪಕ ಹಾನಿಯನ್ನುಂಟುಮಾಡಿದೆ.ಭೋಟೆ ಕೋಶಿ ನದಿಯಲ್ಲಿ ಸಂಭವಿಸಿದ ಪ್ರವಾಹದಲ್ಲಿ ಇನ್ನೂ 93 ಮೃತದೇಹಗಳನ್ನು ಹೊರತೆಗೆದ ನಂತರ, ಸಾವಿನ ಸಂಖ್ಯೆ 270ಕ್ಕೆ ತಲುಪಿದೆ ಎಂದು ನೇಪಾಳ ಪೊಲೀಸರು ಗುರುವಾರ ತಿಳಿಸಿದ್ದಾರೆ.
ಇಲ್ಲಿಯವರೆಗೆ ಪತ್ತೆಯಾದ ಮೃತದೇಹಗಳಲ್ಲಿ ಚಿತ್ವಾನ್‌ನಲ್ಲಿ 108, ನವಾಲ್‌ಪರಸಿ ಪೂರ್ವದಲ್ಲಿ 62, ಧಾಡಿಂಗ್‌ನಲ್ಲಿ 27, ಗೋಖ್ರಾದಲ್ಲಿ 20, ರಸುವಾದಲ್ಲಿ 17, ನವಾಲ್‌ಪರಸಿ ಪಶ್ಚಿಮದಲ್ಲಿ 15, ನುವಾಕೋಟ್‌ನಲ್ಲಿ 12 ಮತ್ತು ತನಹುನ್‌ನಲ್ಲಿ 9 ಮೃತದೇಹಗಳು ಸೇರಿವೆ.
ಪ್ರವಾಹ ಪೀಡಿತ ಪ್ರದೇಶಗಳಿಂದ ಗಾಯಗೊಂಡವರು ಸೇರಿದಂತೆ ಸಂಕಷ್ಟದಲ್ಲಿದ್ದ 800ಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದೆ ಎಂದು ನೇಪಾಳ ಪೊಲೀಸ್ ವಕ್ತಾರ ಅಭಿ ನಾರಾಯಣ್ ಕಫ್ಲೆ ಮಾಹಿತಿ ನೀಡಿದ್ದಾರೆ.
ಭಾರತೀಯರ ನಾಪತ್ತೆ ಬಗ್ಗೆ MEA ಹೇಳಿದ್ದೇನು? ನಾಪತ್ತೆಯಾದವರಲ್ಲಿ ಜಲವಿದ್ಯುತ್ ಯೋಜನೆಗಳಲ್ಲಿ ಕೆಲಸ ಮಾಡುತ್ತಿರುವವರು ಮತ್ತು ಪ್ರವಾಸಿಗರ ಗುಂಪುಗಳು ಸೇರಿವೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ತಿಳಿಸಿದ್ದಾರೆ.
ತಮಿಳುನಾಡಿನ 21 ಭಾರತೀಯರನ್ನು ರಕ್ಷಿಸಲಾಗಿದೆ. ಟಿಬೆಟ್‌ನಲ್ಲಿರುವ ಸುಮಾರು 200 ಭಾರತೀಯರು ಕೂಡ ಭಾರತದಿಂದ ನೆರವು ಕೋರಿದ್ದಾರೆ. ಹಠಾತ್ ಪ್ರವಾಹದಿಂದ ಉಂಟಾಗಿರುವ ಪರಿಸ್ಥಿತಿಯನ್ನು ನಿಭಾಯಿಸಲು ನೇಪಾಳಕ್ಕೆ ಸಾಧ್ಯವಿರುವ ಎಲ್ಲ ರೀತಿಯ ಬೆಂಬಲವನ್ನು ಭಾರತ ಮುಂದುವರಿಸಲಿದೆ ಎಂದು ಅವರು ಹೇಳಿದ್ದಾರೆ.
ಒಟ್ಟು 288 ಭಾರತೀಯ ಪ್ರಜೆಗಳ ಕುರಿತು ಮಾಹಿತಿ ಲಭ್ಯವಿಲ್ಲ. ಇದರಲ್ಲಿ ತ್ರಿಶೂಲಿ ಒನ್ ವಿದ್ಯುತ್ ಯೋಜನೆಯಲ್ಲಿ ಕೆಲಸ ಮಾಡುತ್ತಿರುವ 73 ಭಾರತೀಯ ಪ್ರಜೆಗಳು ಸೇರಿದ್ದಾರೆ. ಈ ವ್ಯಕ್ತಿಗಳ ಕುರಿತು ಹೆಚ್ಚಿನ ವಿವರಗಳನ್ನು ಪಡೆಯಲು ಕಠ್ಮಂಡುವಿನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಯೋಜನೆಯ ಮುಖ್ಯಸ್ಥರೊಂದಿಗೆ ಸಂಪರ್ಕದಲ್ಲಿದೆ ಎಂದು ಜೈಸ್ವಾಲ್ ತಿಳಿಸಿದರು.
"ಈ ಕಠಿಣ ಸಮಯದಲ್ಲಿ ಭಾರತವು ನೇಪಾಳದೊಂದಿಗೆ ದೃಢವಾಗಿ ನಿಂತಿದೆ ಮತ್ತು ಆ ದೇಶದ ಅಗತ್ಯಗಳಿಗೆ ಅನುಗುಣವಾಗಿ ಎಲ್ಲ ರೀತಿಯ ನೆರವು ನೀಡಲು ನಾವು ಸಿದ್ಧರಿದ್ದೇವೆ ಎಂದು ಅವರು ಹೇಳಿದ್ದಾರೆ.