ನೇಪಾಳ ಪ್ರವಾಹ 
ವಿದೇಶ

ನೇಪಾಳ ಜಲಪ್ರಳಯ: ಕಠ್ಮಂಡು ತಲುಪಿದ ಭಾರತದ ಪರಿಹಾರ ಸಾಮಗ್ರಿ ಹೊತ್ತ 4ನೇ ವಿಮಾನ, ರಕ್ಷಣಾ ಸಾಧನ–ವಿಧಿವಿಜ್ಞಾನ ತಜ್ಞರ ತಂಡ ರವಾನೆ..!

ಭೀಕರ ಪ್ರವಾಹದಲ್ಲಿ ಸಿಲುಕಿ ಮೃತಪಟ್ಟು, ಗುರುತು ಸಿಗದಂತಾಗಿರುವ ಶವಗಳನ್ನು ಭಾರತದ ವಿಧಿವಿಜ್ಞಾನ ತಜ್ಞರ ತಂಡ ಗುರ್ತಿಸಲಿದೆ. ಇವರು ಕ್ಷಿಪ್ರ ಡಿಎನ್‌ಎ ಪರೀಕ್ಷೆಗಳ ಮೂಲಕ ಮೃತರ ಗುರುತು ಪತ್ತೆ ಹಚ್ಚಲಿದ್ದಾರೆ.

ಕಠ್ಮಂಡು: ಭೀಕರ ಪ್ರವಾಹ ಮತ್ತು ಸರಣಿ ಭೂಕುಸಿತದಿಂದ ತತ್ತರಿಸಿರುವ ನೆರೆರಾಷ್ಟ್ರ ನೇಪಾಳದ ನೆರವಿಗೆ ಭಾರತ ಧಾವಿಸಿದೆ.

ಭಾರತೀಯ ವಾಯುಪಡೆಯ 4ನೇ ವಿಶೇಷ ಪರಿಹಾರ ವಿಮಾನವು 11 ಟನ್ ಅತ್ಯಾಧುನಿಕ ರಕ್ಷಣಾ ಸಾಮಗ್ರಿಗಳೊಂದಿಗೆ ಕಠ್ಮಂಡುವಿನ ತ್ರಿಭುವನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಿದೆ.

ನೇಪಾಳ ಸರ್ಕಾರದ ವಿಶೇಷ ಮನವಿಯ ಮೇರೆಗೆ ಭಾರತ ಈ ಬಾರಿ ಅತ್ಯಂತ ತಾಂತ್ರಿಕ ನೈಪುಣ್ಯತೆ ಹೊಂದಿರುವ ವಿಶೇಷ ತಂಡಗಳನ್ನು ರವಾನಿಸಿದೆ.

ಉತ್ತರಾಖಂಡದ ಸಿಲ್ಕ್ಯಾರಾ ಸುರಂಗ ರಕ್ಷಣಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಭಾರತದ ಅತ್ಯಂತ ಅನುಭವಿ ಸುರಂಗ ಮತ್ತು ಮಣ್ಣು ಕುಸಿತ ರಕ್ಷಣಾ ತಜ್ಞರು ಈಗ ನೇಪಾಳಕ್ಕೆ ಭೇಟಿ ನೀಡಿದ್ದಾರೆ. ಮಣ್ಣಿನ ಅವಶೇಷಗಳ ಅಡಿಯಲ್ಲಿ ಸಿಲುಕಿರುವವರನ್ನು ಹುಡುಕಲು ಇವರು ಆಧುನಿಕ ಉಪಕರಣಗಳನ್ನು ಬಳಸಲಿದ್ದಾರೆ.

ಭೀಕರ ಪ್ರವಾಹದಲ್ಲಿ ಸಿಲುಕಿ ಮೃತಪಟ್ಟು, ಗುರುತು ಸಿಗದಂತಾಗಿರುವ ಶವಗಳನ್ನು ಭಾರತದ ವಿಧಿವಿಜ್ಞಾನ ತಜ್ಞರ ತಂಡ ಗುರ್ತಿಸಲಿದೆ. ಇವರು ಕ್ಷಿಪ್ರ ಡಿಎನ್‌ಎ ಪರೀಕ್ಷೆಗಳ ಮೂಲಕ ಮೃತರ ಗುರುತು ಪತ್ತೆ ಹಚ್ಚಲಿದ್ದಾರೆ.

ನೇಪಾಳದಲ್ಲಿರುವ ಭಾರತದ ರಾಯಭಾರಿ ನವೀನ್ ಶ್ರೀವಾಸ್ತವ ಅವರು ಈ ಕುರಿತು ಮಾಹಿತಿ ನೀಡಿದ್ದು, ಪರಿಹಾರ ಸಾಮಗ್ರಿಗಳಲ್ಲಿ ಕಂಬಳಿಗಳು, ಸ್ಲೀಪಿಂಗ್ ಬ್ಯಾಗ್‌ಗಳು, ಪ್ಲಾಸ್ಟಿಕ್ ಶೀಟ್‌ಗಳು ಹಾಗೂ ನೈರ್ಮಲ್ಯ ಕಿಟ್‌ಗಳು ಸೇರಿದಂತೆ ಅಗತ್ಯ ವಸ್ತುಗಳಿವೆ ಎಂದು ತಿಳಿಸಿದ್ದಾರೆ.

ಆಗಸ್ಟ್‌ 26ರಂದು ನೇಪಾಳದಲ್ಲಿ ಸಂಭವಿಸಿದ ಭೀಕರ ಭೋಟೆ ಕೋಶಿ ನದಿ ಪ್ರವಾಹದ ಬಳಿಕ ರಕ್ಷಣಾ ಹಾಗೂ ಪರಿಹಾರ ಕಾರ್ಯಾಚರಣೆಗಳು ಮತ್ತಷ್ಟು ತೀವ್ರಗೊಂಡಿವೆ. ಭಾರತವೂ ಭೂ ಹಾಗೂ ವಾಯು ಮಾರ್ಗಗಳ ಮೂಲಕ ನೆರವು ಹೆಚ್ಚಿಸಿದೆ.

ವಿದೇಶಾಂಗ ಸಚಿವಾಲಯದ ಅಧಿಕೃತ ಅಂಕಿಅಂಶಗಳ ಪ್ರಕಾರ, ಪ್ರವಾಹ ಪೀಡಿತ ಪ್ರದೇಶಗಳಿಂದ ಈವರೆಗೆ 88 ಭಾರತೀಯರನ್ನು ರಕ್ಷಿಸಲಾಗಿದೆ. ಇದೇ ವೇಳೆ, 120 ಭಾರತೀಯರು ಚೀನಾದಿಂದ ನೇಪಾಳ ಪ್ರವೇಶಿಸಿದ್ದಾರೆ ಎಂದು ತಿಳಿಸಲಾಗಿದೆ.

230 ಅಡಿ ಉದ್ದದ ಸೇತುವೆ ನಿರ್ಮಾಣಕ್ಕೆ ಉಪಕರಣ

ಭಾರತದ ಮೂಲಸೌಕರ್ಯ ನೆರವಿನ ಬಗ್ಗೆಯೂ ವಿದೇಶಾಂಗ ಸಚಿವ ಎಸ್. ಜೈಶಂಕರ್ ಮಾಹಿತಿ ನೀಡಿದ್ದಾರೆ. 230 ಅಡಿ ಉದ್ದದ ಸಿಂಗಲ್ ಲೇನ್ ಮಾಡ್ಯುಲರ್ ಸ್ಟೀಲ್ ಸೇತುವೆ ನಿರ್ಮಾಣಕ್ಕೆ ಅಗತ್ಯವಿರುವ ಉಪಕರಣಗಳನ್ನು ಹೊತ್ತ 16 ಟ್ರಕ್‌ಗಳು ಈಗಾಗಲೇ ನೇಪಾಳ ತಲುಪಿವೆ ಎಂದು ಅವರು ತಿಳಿಸಿದ್ದಾರೆ.

ಇದಲ್ಲದೆ, ಇನ್ನೂ ಏಳು ಸೇತುವೆಗಳಿಗೆ ಅಗತ್ಯವಿರುವ ಉಪಕರಣಗಳನ್ನು ಶೀಘ್ರದಲ್ಲೇ ನೇಪಾಳಕ್ಕೆ ಕಳುಹಿಸಲಾಗುವುದು. ಸೇತುವೆಗಳನ್ನು ತ್ವರಿತವಾಗಿ ನಿರ್ಮಿಸಿ, ಪ್ರವಾಹದಿಂದ ಕಡಿತಗೊಂಡಿರುವ ಪ್ರಮುಖ ರಸ್ತೆ ಸಂಪರ್ಕವನ್ನು ಪುನಃಸ್ಥಾಪಿಸಲು ತಾಂತ್ರಿಕ ತಂಡಗಳೂ ತೆರಳಲಿವೆ ಎಂದು ಮಾಹಿತಿ ನೀಡಿದ್ದಾರೆ.

ಒಟ್ಟು 68.5 ಟನ್ ಪರಿಹಾರ ಸಾಮಗ್ರಿ ರವಾನೆ

ಇತ್ತೀಚಿನ ಪರಿಹಾರ ವಿಮಾನ ಸೇರಿದಂತೆ ಭಾರತವು ಈವರೆಗೆ ಒಟ್ಟು 68.5 ಟನ್‌ಗಳಷ್ಟು ಪರಿಹಾರ ಸಾಮಗ್ರಿಗಳನ್ನು ಕಠ್ಮಂಡುವಿಗೆ ವಾಯುಮಾರ್ಗದ ಮೂಲಕ ರವಾನಿಸಿದೆ. ಇದರಲ್ಲಿ ಅಗತ್ಯ ಔಷಧಗಳು, ಪೋರ್ಟಬಲ್ ಜನರೇಟರ್‌ಗಳು, ಆಹಾರ ಪೊಟ್ಟಣಗಳು, ನೀರು ಶುದ್ಧೀಕರಣ ಮಾತ್ರೆಗಳು ಹಾಗೂ ಭಾರಿ ತಾಂತ್ರಿಕ ಉಪಕರಣಗಳು ಸೇರಿವೆ.

ನೇಪಾಳದ ರಕ್ಷಣಾ ಹಾಗೂ ಪರಿಹಾರ ಕಾರ್ಯಾಚರಣೆಗಳಿಗೆ ಭಾರತ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಜೈಶಂಕರ್ ಪುನರುಚ್ಚರಿಸಿದ್ದಾರೆ. ಸಂಕಷ್ಟದ ಸಂದರ್ಭದಲ್ಲಿ ನೆರೆಯ ರಾಷ್ಟ್ರದೊಂದಿಗೆ ಭಾರತ ಸದಾ ನಿಲ್ಲಲಿದೆ ಎಂದು ಅವರು ಭರವಸೆ ನೀಡಿದ್ದಾರೆ.

ಭೋಟೆ ಕೋಶಿ ನದಿ ನೀರಿನ ಮಟ್ಟ ಏರಿಕೆ

ಈ ನಡುವೆ ಭೋಟೆ ಕೋಶಿ ನದಿಯಲ್ಲಿ ನೀರಿನ ಹರಿವು ದಿಢೀರ್ ಹೆಚ್ಚಾದ ಹಿನ್ನೆಲೆಯಲ್ಲಿ ನೇಪಾಳದ ರಾಷ್ಟ್ರೀಯ ವಿಪತ್ತು ಅಪಾಯ ಕಡಿತ ಮತ್ತು ನಿರ್ವಹಣಾ ಪ್ರಾಧಿಕಾರ (NDRRMA) ಎಚ್ಚರಿಕೆ ನೀಡಿದೆ.

ನಾಗರಿಕರು ಹಾಗೂ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿರುವ ತಂಡಗಳು ಅತ್ಯಂತ ಜಾಗರೂಕರಾಗಿರುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಚಿವ ಸ್ಥಾನಕ್ಕೆ ನಾಗೇಂದ್ರ ರಾಜೀನಾಮೆ ನೀಡಿದ್ರು, ಇನ್ನೂ ಲೋಕಭವನಕ್ಕೆ ತಿಳಿಸದ ಸಿಎಂ ಡಿಕೆ ಶಿವಕುಮಾರ್! ಕುತೂಹಲಕಾರಿ ನಡೆ

KPSC ಹಗರಣ: IAS ಅಧಿಕಾರಿ ಜ್ಞಾನೇಂದ್ರ ಕುಮಾರ್ ಸಿಐಡಿ ವಶಕ್ಕೆ

ನೇಪಾಳ ಪ್ರವಾಹ: ಪ್ರಾಣ ಉಳಿಸಿಕೊಳ್ಳಲು ಟೆರೇಸ್ ಮೇಲೆ ಟಿ-ಶರ್ಟ್ ಬೀಸಿದ ಯುವಕ, ರೋಚಕ ಕಾರ್ಯಾಚರಣೆಯ Video!

ಭಾರತದಲ್ಲಿ ಮುಸ್ಲಿಂ ಇರಬಾರದು ಎಂದು ಭಾವಿಸುವ ಹಿಂದೂ ಹಿಂದೂವೇ ಅಲ್ಲ- ಅಮೆರಿಕದಲ್ಲಿ ಮೋಹನ್ ಭಾಗವತ್

ಐಕಾನಿಕ್ ಟೈಮ್ಸ್ ಸ್ಕ್ವೇರ್ ಬಿಲ್ ಬೋರ್ಡ್ ನಲ್ಲಿ ಆರ್ ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗ್ವತ್ ಫೋಟೋ!