ವಾಷಿಂಗ್ಟನ್: ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷವನ್ನು ನಿಲ್ಲಿಸಲು ಎರಡೂ ಅಣ್ವಸ್ತ್ರ ಸಾಮರ್ಥ್ಯ ಹೊಂದಿದ ದೇಶಗಳ ಮೇಲೆ ಶೇಕಡಾ 200ರಷ್ಟು ಸುಂಕ ವಿಧಿಸುವುದಾಗಿ ಬೆದರಿಕೆ ಹಾಕಿದ್ದೆನೆಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಈ ಮೂಲಕ ಆ ಸಂಘರ್ಷ ಅಂತ್ಯಗೊಳ್ಳಲು ತಾವು ಸಹಾಯ ಮಾಡಿದ್ದೆನೆಂಬ ತಮ್ಮ ಹಿಂದಿನ ಹೇಳಿಕೆಯನ್ನು ಪುನರಾವರ್ತಿಸಿದ್ದಾರೆ.
ವಾಷಿಂಗ್ಟನ್‌ನಲ್ಲಿ ನಡೆದ ‘ಬೋರ್ಡ್ ಆಫ್ ಪೀಸ್’ ಸಭೆಯಲ್ಲಿ ಮಾತನಾಡಿದ ಟ್ರಂಪ್, ಆ ಉದ್ವಿಗ್ನ ಪರಿಸ್ಥಿತಿಯಲ್ಲಿ ತಾವು ಲಕ್ಷಾಂತರ ಜೀವಗಳನ್ನು ಉಳಿಸಿದ್ದೇನೆಂದು ಪುನರುಚ್ಛರಿಸಿದರು. ಉದ್ವಿಗ್ನತೆಯನ್ನು ಕಡಿಮೆ ಮಾಡಲು ಹಣದಂತೆ ಪರಿಣಾಮಕಾರಿ ಯಾವುದೂ ಇಲ್ಲ ಎಂದರು.
ಸಂಘರ್ಷದ ವೇಳೆ 11 ವಿಮಾನಗಳನ್ನು ಗುಂಡಿಕ್ಕಿ ಕೆಡವಲ್ಪಡಲಾಗಿತ್ತು ಎಂದು ಹೇಳಿಕೆ ನೀಡಿದ ಅವರು, ಸಂಕಷ್ಟ ನಿವಾರಣೆಗೆ ಅಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೊಂದಿಗೆ ಮಾತನಾಡಿದ್ದೆ ಎಂದರು. ಈ ಹಿಂದೆ ಮಾತನಾಡುವ ವೇಳೆ ಟ್ರಂಪ್ 8 ವಿಮಾನಗಳನ್ನು ಹೊಡೆದುರುಳಿಸಲಾಗಿತ್ತು ಎಂದಿದ್ದರು.
ಇಲ್ಲಿ ಗಮನಿಸಬೇಕಾದ ವಿಷಯವೆಂದರೆ, ಈ ವಿವಾದದಲ್ಲಿ ಮೂರನೇ ದೇಶದ ಅಥವಾ ವ್ಯಕ್ತಿಯ ಮಧ್ಯಸ್ಥಿಕೆಯನ್ನು ಭಾರತ ನಿರಂತರವಾಗಿ ತಿರಸ್ಕರಿಸಿದೆ.
ವಿಶ್ವದಲ್ಲಿ ತಾವು ಅಂತ್ಯಗೊಳಿಸಿದ ಸಂಘರ್ಷಗಳನ್ನು ಟ್ರಂಪ್ ಪಟ್ಟಿ ಮಾಡಿದರು, ಪಾಕಿಸ್ತಾನದ ಪ್ರಧಾನಮಂತ್ರಿ ಶೆಹಬಾಜ್ ಶರೀಫ್ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಟ್ರಂಪ್ ನೇತೃತ್ವದ ಸಂಸ್ಥೆಗೆ ಸೇರ್ಪಡೆಯಾದ ಇತರೆ ದೇಶಗಳ ನಾಯಕರು ಕೂಡ ಹಾಜರಿದ್ದರು.
ಟ್ರಂಪ್ ಶರೀಫ್ ಅವರನ್ನು ಎದ್ದು ನಿಲ್ಲಲು ಕೇಳಿ, ನಾನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೊಂದಿಗೆ ಮಾತನಾಡಿದ್ದೇನೆ. ಅವರು ಉತ್ಸಾಹದಲ್ಲಿದ್ದಾರೆ. ಅವರು ನಮ್ಮನ್ನು ನೋಡುತ್ತಿದ್ದಾರೆ ಎಂದರು.
ಪಾಕಿಸ್ತಾನ ಮತ್ತು ಭಾರತ, ಅದು ದೊಡ್ಡ ವಿಷಯ. ದಯವಿಟ್ಟು ಕ್ಷಣಕಾಲ ಎದ್ದು ನಿಲ್ಲಿ. ಪಾಕಿಸ್ತಾನ ಮತ್ತು ಭಾರತ. ತುಂಬ ಧನ್ಯವಾದಗಳು ಎಂದು ಟ್ರಂಪ್ ಹೇಳಿದರು.
ಕಳೆದ ಬೇಸಿಗೆಯಲ್ಲಿ ಭಾರತ–ಪಾಕಿಸ್ತಾನ ನಡುವೆ ನಡೆದ ಯುದ್ಧವನ್ನು ತಾವು ನಿಲ್ಲಿಸಿದ್ದೇನೆಂದು ಹೇಳುವಾಗ, ಟ್ರಂಪ್ ಶರೀಫ್ ಹಾಗೂ ಪಾಕಿಸ್ತಾನದ ಫೀಲ್ಡ್ ಮಾರ್ಷಲ್ ಮತ್ತು ರಕ್ಷಣಾ ಪಡೆಗಳ ಮುಖ್ಯಸ್ಥ ಅಸೀಮ್ ಮುನೀರ್ ಅವರನ್ನು “ಉತ್ತಮ ವ್ಯಕ್ತಿ” ಎಂದು ಶ್ಲಾಘಿಸಿದರು.
“ನಾನು ಶರೀಫ್ ಮತ್ತು ನಿಮ್ಮ ಫೀಲ್ಡ್ ಮಾರ್ಷಲ್ ಜನರಲ್ ಅವರನ್ನು ಪರಿಚಯಿಸಿಕೊಂಡಾಗ ಸ್ವಲ್ಪ ಹೋರಾಟ ನಡೆಯುತ್ತಿತ್ತು. ಮಹಾನ್ ಜನರಲ್, ಮಹಾನ್ ಫೀಲ್ಡ್ ಮಾರ್ಷಲ್, ಒಳ್ಳೆಯ ವ್ಯಕ್ತಿ ಎಂದು ಹೇಳಿದರು.
ಸಂಘರ್ಷವನ್ನು ನಿಲ್ಲಿಸುವ ಮೂಲಕ “ನೀವು 25 ಮಿಲಿಯನ್ ಜೀವಗಳನ್ನು ಉಳಿಸಿದ್ದೀರಿ” ಎಂದು ಶರೀಫ್ ಹೇಳಿದ್ದರೆಂದು ಟ್ರಂಪ್ ನೆನಪಿಸಿಕೊಂಡರು. ಇದಕ್ಕೂ ಮೊದಲು, ಸಂಘರ್ಷ ಅಂತ್ಯಗೊಳಿಸುವ ಮೂಲಕ 10 ಮಿಲಿಯನ್ ಜೀವಗಳನ್ನು ಉಳಿಸಿದ್ದೇನೆಂದು ಶರೀಫ್ ಹೇಳಿದ್ದರೆಂದು ಟ್ರಂಪ್ ಹೇಳಿದ್ದರು.