ಢಾಕಾ: ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ದಾಳಿ ಮುಂದುವರೆದಿದೆ. ಉದ್ರಿಕ್ತ ಗುಂಪೊಂದು ಮತ್ತೊಬ್ಬ ಹಿಂದೂ ವ್ಯಕ್ತಿ ಮೇಲೆ ಹಲ್ಲೆ ನಡೆಸಿದೆ.
50 ವರ್ಷದ ಖೋಕೊನ್ ದಾಸ್ ಮೇಲೆ ಹಲ್ಲೆ ನಡೆಸಿದ ನಂತರ ಅವರಿಗೆ ಬೆಂಕಿ ಹಚ್ಚಿ ಸಜೀವವಾಗಿ ಸುಟ್ಟ ಹಾಕಲು ಯತ್ನಿಸಲಾಗಿದೆ. ಇದರಿಂದ ಗಂಭೀರವಾಗಿ ಗಾಯಗೊಂಡು ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ದೇಶದ ಶರಿಯತ್‌ಪುರ ಜಿಲ್ಲೆಯಲ್ಲಿ ಡಿಸೆಂಬರ್ 31 ರಂದು ಈ ಘಟನೆ ನಡೆದಿದೆ.
ಖೋಕೊನ್ ದಾಸ್ ಮನೆಗೆ ಹೋಗುತ್ತಿದ್ದಾಗ ಅವರನ್ನು ಅಡ್ಡಗಟ್ಟಿದ ಗುಂಪೊಂದು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದು, ಬೆಂಕಿ ಹಚ್ಚುವ ಮೂಲಕ ಸಜೀವವಾಗಿ ಸುಟ್ಟಹಾಕಲು ಯತ್ನಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ.
ದಾಸ್ ಬದುಕಿದ್ದು ಹೇಗೆ ಗೊತ್ತಾ?
ಕನೇಶ್ವರ್ ಯೂನಿಯನ್‌ನ ಕೆಯೋರ್ಬಂಗಾ ಪ್ರದೇಶದಲ್ಲಿ ಫಾರ್ಮಸಿ ನಡೆಸುತ್ತಿದ್ದ ದಾಸ್, ಮನೆಗೆ ಹಿಂದಿರುಗುತ್ತಿದ್ದಾಗ ದಾಳಿ ನಡೆಸಲಾಗಿದೆ. ಉದ್ರಿಕ್ತ ಗುಂಪು ದಾಸ್ ಅವರ ಹೊಟ್ಟೆಯ ಕೆಳಭಾಗದಲ್ಲಿ ಇರಿದು, ಥಳಿಸಿದೆ. ಬಳಿಕ ಪೆಟ್ರೋಲ್ ಸುರಿದ ಬೆಂಕಿ ಹಚ್ಚಲಾಗಿದೆ. ಕೂಡಲೇ ಅವರು ಸಮೀಪದಲ್ಲಿದ್ದ ಕೆರೆಗೆ ಹಾರಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ದುಷ್ಕರ್ಮಿಗಳು ಚಾಕುವಿನಿಂದ ಇರಿದು, ತಲೆಗೆ ಹೊಡೆದು ಬೆಂಕಿ ಹಚ್ಚಿದ್ದಾರೆ ಎನ್ನಲಾಗಿದೆ.
ಇದನ್ನು ಯಾರು ಮಾಡಿದ್ದಾರೆಂದು ನಮಗೆ ತಿಳಿದಿಲ್ಲ. ನಮಗೆ ನ್ಯಾಯ ಬೇಕು. ನನ್ನ ಪತಿ ಸರಳ ವ್ಯಕ್ತಿಯಾಗಿದ್ದು, ಅವರು ಯಾರಿಗೂ ತೊಂದರೆ ಮಾಡಲ್ಲ ಎಂದು ಗಾಯಾಳು ಪತ್ನಿ ಸೀಮಾ ದಾಸ್ ಹೇಳಿರುವುದಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ದಾಸ್ ಅವರನ್ನು ತಕ್ಷಣ ಶರಿಯತ್‌ಪುರ ಸದರ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ನಂತರ ಅವರನ್ನು ಢಾಕಾ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸಾಗಿಸಲಾಯಿತು. ಅವರ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ.
ಎರಡು ವಾರಗಳಲ್ಲಿ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆದ ನಾಲ್ಕನೇ ದಾಳಿ ಇದಾಗಿದೆ.ಈ ಹಿಂದೆ ಡಿಸೆಂಬರ್ 24 ರಂದು ಬಾಂಗ್ಲಾದೇಶದ ಕಲಿಮೊಹರ್ ಯೂನಿಯನ್‌ನ ಹೊಸೈನ್‌ದಂಗ ಪ್ರದೇಶದಲ್ಲಿ 29 ವರ್ಷದ ಅಮೃತ್ ಮೊಂಡಲ್ ಎನ್ನಲಾದ ಯುವಕನ ಹತ್ಯೆಯಾಗಿತ್ತು. ಡಿಸೆಂಬರ್ 18 ರಂದು ದೀಪು ಚಂದ್ರದಾಸ್ ಎಂಬ 25 ವರ್ಷದ ಯುವಕನನ್ನು ಉದ್ರಿಕ್ತ ಗುಂಪೊಂದು ಹತ್ಯೆ ಮಾಡಿತ್ತು. ಉದ್ರಿಕ್ತರು ದಾಸ್ ಅವರನ್ನು ಹತ್ಯೆಗೈದು ಬಳಿಕ ಅವರ ಮೃತದೇಹವನ್ನು ಮರಕ್ಕೆ ಕಟ್ಟಿ ಬಕ್ಕಿ ಬೆಂಕಿ ಹಚ್ಚಲಾಗಿತ್ತು.
ಯೂನಿಸ್ ಖಾನ್ ನೇತೃತ್ವದ ಮಧ್ಯಂತರ ಸರ್ಕಾರದಡಿ ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ಸರಣಿ ದಾಳಿ ನಡೆಯುತ್ತಿದ್ದು, ವಿಶ್ವದಾದ್ಯಂತ ನಾಗರಿಕರು ಹಾಗೂ ಅನೇಕ ಮಾನವ ಹಕ್ಕುಗಳ ಸಂಘಟನೆಗಳಿಂದ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.