ದುಬೈ: ಖಮೇನಿ ಆಡಳಿತ ವಿರೋಧಿಸಿ ಇರಾನ್ ದೇಶಾದ್ಯಂತ ಪ್ರತಿಭಟನೆ ವ್ಯಾಪಿಸಿದ್ದು, ಭಾನುವಾರ ಟೆಹ್ರಾನ್ ಮತ್ತಿತರ ನಗರಗಳಲ್ಲಿ ಭಾರಿ ಪ್ರತಿಭಟನೆ ನಡೆದಿದೆ. ಎರಡು ವಾರಗಳನ್ನು ಪೂರೈಸಿರುವ ಪ್ರತಿಭಟನೆಯಿಂದ ಸಂಭವಿಸಿರುವ ಹಿಂಸಾಚಾರದಲ್ಲಿ 116 ಜನರು ಸಾವನ್ನಪ್ಪಿದ್ದಾರೆ ಎಂದು ಮಾನವ ಹಕ್ಕುಗಳ ಹೋರಾಟಗಾರರು ಹೇಳಿದ್ದಾರೆ.
ಇರಾನ್‌ನ ಆಂತರಿಕ ಪ್ರಕ್ಷುಬ್ಧ ಪರಿಸ್ಥಿತಿಗೆ ಅಮೆರಿಕ ಪ್ರತಿಕ್ರಿಯೆ ನೀಡುವ ನಿರ್ಧಾರ ಮಾಡಿದ್ದು, ಮಧ್ಯಪ್ರಾಚ್ಯದ ಪ್ರಮುಖ ದೇಶವೊಂದರ ಆಂತರಿಕ ಬಿಕ್ಕಟ್ಟಿನಲ್ಲಿ ಹಸ್ತಕ್ಷೇಪ ಮಾಡುವ ಸಾಧ್ಯತೆ ದಟ್ಟವಾಗಿದೆ. ಇರಾನ್‌ನಲ್ಲಿ ಅಮೆರಿಕದ ಹಸ್ತಕ್ಷೇಪ ಸಾಧ್ಯತೆಯ ಬಗ್ಗೆ ತಿಳಿಯುತ್ತಿದ್ದಂತೇ ಇರಾನ್‌ನ ಪರಮಶತ್ರು ಇಸ್ರೇಲ್ ಕೂಡಾ ಆ್ಯಕ್ಟೀವ್ ಆಗಿದ್ದು, ಸಂಭಾವ್ಯ ಪಾತ್ರ ನಿರ್ವಹಣೆಗೆ ಸಜ್ಜಾಗುತ್ತಿದ್ದಾರೆ.
ಈ ಮಧ್ಯೆ ಒಂದು ವೇಳೆ ಅಮೆರಿಕ ದಾಳಿ ಮಾಡಿದ್ರೆ ಪ್ರತಿದಾಳಿ ಮಾಡುವುದಾಗಿ ಇರಾನ್ ತಿರುಗೇಟು ನೀಡಿದೆ. ಇರಾನ್ ಮೇಲೆ ದಾಳಿ ನಡೆದರೆ, ಆಕ್ರಮಿತ ಪ್ರದೇಶ (ಇಸ್ರೇಲ್ ಅನ್ನು ಉಲ್ಲೇಖಿಸಿ) ಮತ್ತು ಈ ಪ್ರದೇಶದ ಎಲ್ಲಾ ಅಮೆರಿಕನ್ ಮಿಲಿಟರಿ ಕೇಂದ್ರಗಳು, ನೆಲೆಗಳು ಮತ್ತು ಹಡಗುಗಳು ನಮ್ಮ ಟಾರ್ಗೆಟ್ ಆಗುತ್ತವೆ ಎಂದು ಇರಾನ್ ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಕರ್ ಖಲೀಬಾಫ್ ಎಚ್ಚರಿಕೆ ನೀಡಿದ್ದಾರೆ.
ಇರಾನ್ ರಾಜಧಾನಿಯ ಸಂಸತ್ತಿನಲ್ಲಿ ಮಾಡಿದ ಭಾಷಣದಲ್ಲಿ ಸ್ಪೀಕರ್ ಮೊಹಮ್ಮದ್ ಬಕರ್ ಖಲೀಬಾಫ್ ಈ ಎಚ್ಚರಿಕೆ ನೀಡಿದ್ದಾರೆ. ಅಮೆರಿಕ ಮತ್ತು ಇಸ್ರೇಲ್ ಜೊತೆ ಯುದ್ಧಕ್ಕೆ ಇರಾನ್ ಸನ್ನದ್ಧವಾಗಿದೆ ಎಂದು ಗುಡುಗಿದ್ದಾರೆ. ಇರಾನ್ ಸ್ವಾತಂತ್ರ್ಯವನ್ನು ನೋಡುತ್ತಿದೆ, ಬಹುಶಃ ಹಿಂದೆಂದಿಗಿಂತಲೂ. USA ಸಹಾಯ ಮಾಡಲು ಸಿದ್ಧವಾಗಿದೆ ಎಂದು ಸೋಶಿಯಲ್ ಟ್ರೂತ್ ನಲ್ಲಿ ಟ್ರಂಪ್ ಬರೆದುಕೊಂಡಿದ್ದರು.
ನಾವು ಅವರೊಂದಿಗೆ ಅತ್ಯಂತ ಕಠಿಣ ರೀತಿಯಲ್ಲಿ ವ್ಯವಹರಿಸುತ್ತೇವೆ ಮತ್ತು ಬಂಧಿಸಲ್ಪಟ್ಟವರನ್ನು ಶಿಕ್ಷಿಸುತ್ತೇವೆ ಎಂಬುದನ್ನು ಇರಾನ್ ಜನರು ತಿಳಿಯಬೇಕು ಎಂದು ಖಲೀಬಾಫ್ ಹೇಳುವ ಮೂಲಕ ನೇರವಾಗಿ ಇಸ್ರೇಲ್ ಗೆ ವಾರ್ನಿಂಗ್ ನೀಡಿದ್ದಾರೆ.