ವಾಷಿಂಗ್ಟನ್: ಇರಾನ್ ಮತ್ತೆ ದಾಳಿ ನಡೆಸುವ ಸಾಧ್ಯತೆ ಹಿನ್ನೆಲೆಯಲ್ಲಿ ಕತಾರ್‌ನಲ್ಲಿರುವ ಅಮೆರಿಕದ ಸೇನಾ ನೆಲೆಯಲ್ಲಿರುವ ಕೆಲವು ಸಿಬ್ಬಂದಿಯ ಸ್ಥಳಾಂತರಕ್ಕೆ ಸೂಚಿಸಲಾಗಿದೆ ಎಂದು ಅಮೆರಿಕದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕತಾರ್‌ನ ಅಲ್ ಉದೈದ್ ಏರ್ ಬೇಸ್‌ನಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಸುದ್ದಿಸಂಸ್ಥೆ ದಿ ಅಸೋಸಿಯೇಟೆಡ್ ಪ್ರೆಸ್ ಗೆ ತಿಳಿಸಿದ್ದಾರೆ. ಕಾರ್ಯಾಚರಣೆಯ ಭದ್ರತೆಯ ಅಗತ್ಯವನ್ನು ಉಲ್ಲೇಖಿಸಿ, ಈ ಸ್ಥಳಾಂತರ ಕಡ್ಡಾಯವೇ ಅಥವಾ ತಾತ್ಕಾಲಿಕವೇ ಎಂಬುದರ ಬಗ್ಗೆ ಹೆಚ್ಚಿನ ವಿವರ ನೀಡಲು ಅಧಿಕಾರಿ ನಿರಾಕರಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಕತಾರ್, ಸದ್ಯದ ಪ್ರಾದೇಶಿಕ ಉದ್ವಿಗ್ನತೆ ಹಿನ್ನೆಲೆಯಲ್ಲಿ ಇಂತಹ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಹೇಳಿದೆ.
ನಾಗರಿಕರು ಮತ್ತು ನಿವಾಸಿಗಳ ಸುರಕ್ಷತೆ ಕತಾರ್ ನ ಪ್ರಮುಖ ಆದ್ಯತೆಯಾಗಿದ್ದು, ನಿರ್ಣಾಯಕ ಮೂಲಸೌಕರ್ಯ ಮತ್ತು ಮಿಲಿಟರಿ ಸೌಲಭ್ಯಗಳ ರಕ್ಷಣೆ ಸೇರಿದಂತೆ ಎಲ್ಲಾ ಅಗತ್ಯ ಕ್ರಮಗಳನ್ನು ಮುಂದುವರೆಸಿದೆ ಎಂದು IMO ಪುನರುಚ್ಚರಿಸಿದೆ ಎಂದು ಕತಾರ್‌ನ ಮಾಧ್ಯಮ ಕಚೇರಿ ಎಕ್ಸ್ ಪೋಸ್ಟ್ ನಲ್ಲಿ ತಿಳಿಸಿದೆ.
ಮತ್ತೊಂದೆಡೆ ಈ ಕ್ರಮದ ಕುರಿತ ಪ್ರತಿಕ್ರಿಯಿಸಲು ಅಮೆರಿಕ ನಿರಾಕರಿಸಿದೆ. ಕತಾರ್‌ನಲ್ಲಿರುವ ಅಮೆರಿಕದ ರಾಜತಾಂತ್ರಿಕರು ಅಥವಾ ಇತರ ನಾಗರಿಕರಿಗೆ ಭದ್ರತಾ ಮುನ್ನೆಚ್ಚರಿಕೆ ಬಗ್ಗೆ ತಕ್ಷಣದ ಪ್ರತಿಕ್ರಿಯೆಯನ್ನು ಅಮೆರಿಕದ ವಿದೇಶಾಂಗ ಇಲಾಖೆ ನೀಡಿಲ್ಲ. ಜೂನ್‌ನಲ್ಲಿ ದೋಹಾದಲ್ಲಿರುವ ಯುಎಸ್ ನಾಗರಿಕರಿಗೆ ರಾಯಭಾರಿ ಕಚೇರಿ ತಾತ್ಕಾಲಿಕ ನೆರವಿಗೆ ಸಲಹೆ ನೀಡಿತ್ತು. ಆದರೆ ರಾಯಭಾರಿಗಳ ಸ್ಥಳಾಂತರ ಅಥವಾ ದೇಶ ತೊರೆಯಲು ಅಮೆರಿಕನ್ನರಿಗೆ ಸಲಹೆ ನೀಡಿರಲಿಲ್ಲ.
ಸಮೀಪದ ಇರಾನ್‌ನಲ್ಲಿ ಸರ್ಕಾರಿ ವಿರೋಧಿ ಪ್ರತಿಭಟನೆಗಳು ಮುಂದುವರಿದಿರುವ ಕಾರಣ ಮುನ್ನೆಚ್ಚರಿಕ ಕ್ರಮ ಕೈಗೊಳ್ಳಲಾಗಿದೆ. ಸರ್ಕಾರವು ಪ್ರತಿಭಟನಾಕಾರರ ವಿರುದ್ಧ ಪ್ರತೀಕಾರವನ್ನು ಮುಂದುವರಿಸಿದರೆ ದೇಶದಲ್ಲಿ ಮಿಲಿಟರಿ ಕಾರ್ಯಾಚರಣೆಗಳನ್ನು ನಡೆಸಲು ಸಿದ್ಧ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಇರಾನ್ ನಲ್ಲಿ ಪರಮಾಣು ಕೇಂದ್ರಗಳ ಮೇಲಿನ ಅಮೆರಿಕದ ದಾಳಿಗೆ ಪ್ರತೀಕಾರವಾಗಿ ಸಾವಿರಾರು ಅಮೆರಿಕದ ಸೇನಾ ಸಿಬ್ಬಂದಿ ಹೊಂದಿರುವ ಕತಾರ್ ವಾಯು ನೆಲೆ ಮೇಲೆ ಜೂನ್‌ನಲ್ಲಿ ಇರಾನ್ ದಾಳಿ ನಡೆಸಿತ್ತು.