ಬೀಜಿಂಗ್: ಭಾರತದ 77ನೇ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ಭಾರತ ಮತ್ತು ಚೀನಾ ಸಂಬಂಧದ ಬಗ್ಗೆ ಮಹತ್ವದ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
ಭಾರತ ಮತ್ತು ಚೀನಾ ಉತ್ತಮ ನೆರೆಹೊರೆಯವರು, ಸ್ನೇಹಿತರು ಮತ್ತು ಪಾಲುದಾರರು" ಎಂದು ಬಣ್ಣಿಸಿದ್ದು, "ಡ್ರ್ಯಾಗನ್ ಮತ್ತು ಆನೆ ಒಟ್ಟಿಗೆ ನೃತ್ಯ" ಸಾಧಿಸುವುದು ಎರಡೂ ದೇಶಗಳಿಗೆ ಸರಿಯಾದ ಆಯ್ಕೆಯಾಗಿದೆ ಎಂದು ಹೇಳಿದ್ದಾರೆ.
77 ನೇ ಗಣರಾಜ್ಯೋತ್ಸವದಂದು ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಶುಭಾಶಯ ಕೋರಿರುವ ಅಧ್ಯಕ್ಷ ಕ್ಸಿ, ಉಭಯ ರಾಷ್ಟ್ರಗಳು ಮತ್ತು ಜನರ ಮೂಲಭೂತ ಹಿತಾಸಕ್ತಿಗಳೊಂದಿಗೆ ಭಾರತ ಮತ್ತು ಚೀನಾ ಸಂಬಂಧದಲ್ಲಿ ಸುಧಾರಣೆಯಾಗಿದ್ದು, ಅಭಿವೃದ್ಧಿಯನ್ನು ಮುಂದುವರೆಸಿವೆ. ಜಾಗತಿಕ ಶಾಂತಿ ಮತ್ತು ಸಮೃದ್ಧಿಯನ್ನು ಕಾಪಾಡುವಲ್ಲಿಯೂ 'ಬಹಳ ಮಹತ್ವದ್ದಾಗಿದೆ' ಎಂದು ಜಿನ್‌ಪಿಂಗ್ ಹೇಳಿದ್ದಾರೆ.
'ಎರಡೂ ದೇಶಗಳು ಉತ್ತಮ ಸ್ನೇಹಿತರಾಗಿರುವುದೇ ಸರಿಯಾದ ಆಯ್ಕೆ ಎಂದು ಚೀನಾ ನಂಬಿದೆ ಎಂದು ಅವರು ಹೇಳಿದ್ದಾರೆ ಎಂದು ಚೀನಾದ ಸರ್ಕಾರಿ ಸುದ್ದಿಸಂಸ್ಥೆ ಕ್ಸಿನ್ಹುವಾ ವರದಿ ಮಾಡಿದೆ.
ಆರೋಗ್ಯಕರ ಮತ್ತು ಸ್ಥಿರವಾದ ಸಂಬಂಧವನ್ನು ಮುನ್ನಡೆಸಲು ಎರಡೂ ದೇಶಗಳು ವಿನಿಮಯ ಮತ್ತು ಸಹಕಾರವನ್ನು ವಿಸ್ತರಿಸುತ್ತವೆ ಎಂದು ಅವರು ಆಶಯ ವ್ಯಕ್ತಪಡಿಸಿದ್ದಾರೆ.
ಪೂರ್ವ ಲಡಾಖ್ ಬಿಕ್ಕಟ್ಟಿನ ನಂತರ 2020 ರಿಂದ ಸ್ಥಗಿತಗೊಂಡ ಉಭಯ ದೇಶಗಳ ನಡುವಿನ ಸಂಬಂಧಗಳು ಪ್ರಧಾನಿ ನರೇಂದ್ರ ಮೋದಿ ಮತ್ತು ಅಧ್ಯಕ್ಷ ಕ್ಸಿ ನಡುವಿನ ಎರಡು ಶೃಂಗಸಭೆಗಳ ನಂತರ ಸುಧಾರಿಸಲು ಪ್ರಾರಂಭಿಸಿದವು.