ಅಬುದಾಬಿ: ಯುನೈಟೆಡ್ ಅರಬ್ ಎಮಿರೇಟ್ಸ್ (UAE) ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರ ಅನಿರೀಕ್ಷಿತ ಭಾರತ ಪ್ರವಾಸ ದಕ್ಷಿಣ ಏಷ್ಯಾದ ಭೌಗೋಳಿಕ ಹಾಗೂ ರಾಜಕೀಯ ಸಮೀಕರಣಗಳ ಮೇಲೆ ಏರಿಳಿತದ ಪರಿಣಾಮವನ್ನು ಬೀರುವಂತಿದೆ. ಇದು ಪಾಕಿಸ್ತಾನಕ್ಕೆ ಪರೋಕ್ಷ ಹಿನ್ನಡೆಯನ್ನು ತಂದಿದೆ.
ಶೇಖ್ ನಹ್ಯಾನ್ ಅವರ ಮೂರು ಗಂಟೆಗಳ ಭೇಟಿಯ ನಂತರ, ಇಸ್ಲಾಮಾಬಾದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ನಿರ್ವಹಿಸುವ ಯೋಜನೆಯನ್ನು ಅಬುದಾಬಿ ರದ್ದುಗೊಳಿಸಿದೆ. ಆಗಸ್ಟ್ 2025ರಲ್ಲಿ ಈ ಯೋಜನೆಯ ಒಪ್ಪಂದವಾಗಿತ್ತು. ಈ ಬೆಳವಣಿಗೆಯನ್ನು ಪಾಕಿಸ್ತಾನದ ದಿ ಎಕ್ಸ್‌ಪ್ರೆಸ್ ಟ್ರಿಬ್ಯೂನ್ ದೃಢಪಡಿಸಿದೆ.
UAE ಯೋಜನೆಯಲ್ಲಿ ಆಸಕ್ತಿ ಕಳೆದುಕೊಂಡ ನಂತರ ಮತ್ತು ಕಾರ್ಯಾಚರಣೆಗಳನ್ನು ಹೊರಗುತ್ತಿಗೆ ಮಾಡಲು ಸ್ಥಳೀಯ ಪಾಲುದಾರರನ್ನು ಹೆಸರಿಸಲು ವಿಫಲವಾದ ನಂತರ ಯೋಜನೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ವರದಿ ಮಾಡಿದೆ.
ಯಾವುದೇ ರಾಜಕೀಯ ಕಾರಣ ಇದಕ್ಕೆ ಕಾರಣವಲ್ಲ. ಯುಎಇ ಮತ್ತು ಸೌದಿ ಅರೇಬಿಯಾ ನಡುವೆ ಬೆಳೆಯುತ್ತಿರುವ ಅಸಮಾಧಾನದ ಹಿನ್ನೆಲೆಯಲ್ಲಿ ಹೀಗೆ ಆಗಿದೆ. ಯೆಮೆನ್‌ನಲ್ಲಿನ ಪ್ರತಿಸ್ಪರ್ಧಿ ಗುಂಪುಗಳಿಗೆ ಬೆಂಬಲ ವಿಚಾರವಾಗಿ ಒಮ್ಮೆ ಗಲ್ಫ್ ಮಿತ್ರರಾಷ್ಟ್ರಗಳಾಗಿದ್ದ ರಿಯಾದ್ ಮತ್ತು ಅಬುಧಾಬಿ ಅಸಾಮಾನ್ಯ ಸಾರ್ವಜನಿಕ ಘರ್ಷಣೆಯಲ್ಲಿ ಸಿಲುಕಿಕೊಂಡಿವೆ ಎಂದು ಪಾಕಿಸ್ತಾನದ ಮಾಧ್ಯಮಗಳು ವರದಿ ಮಾಡಿವೆ.
ಇಸ್ಲಾಮಾಬಾದ್ ರಿಯಾದ್‌ನೊಂದಿಗೆ ರಕ್ಷಣಾ ಒಪ್ಪಂದಕ್ಕೆ ಸಹಿ ಹಾಕಿದೆ ಮತ್ತು ಸೌದಿ ಅರೇಬಿಯಾ- ಟರ್ಕಿಯೊಂದಿಗೆ "ಇಸ್ಲಾಮಿಕ್ ನ್ಯಾಟೋ" ಎಂದು ಕರೆಸಿಕೊಳ್ಳಲು ಬಯಸುತ್ತಿರುವಾಗ ಯುಎಇ ಭಾರತದೊಂದಿಗೆ ಹೊಸ ರಕ್ಷಣಾ ಒಪ್ಪಂದಗಳಿಗೆ ಸಹಿ ಹಾಕಿದೆ.
ಸೌದಿ ಅರೇಬಿಯಾ ಕೂಡ ಪಾಕಿಸ್ತಾನದ ಮಿಲಿಟರಿ ಜ್ಞಾನದ ಮೇಲೆ ಒಲವು ತೋರುತ್ತಿರುವಂತೆಯೇ ಯುಎಇ ಭಾರತದೊಂದಿಗೆ ಹೊಸ ರಕ್ಷಣಾ ಒಪ್ಪಂದಗಳಿಗೆ ಸಹಿ ಹಾಕಿದೆ. ಸುಮಾರು 4 ದಶಕಗಳ ಹಿಂದೆ, UAE ಪಾಕಿಸ್ತಾನದ ಅತಿದೊಡ್ಡ ವ್ಯಾಪಾರ ಪಾಲುದಾರ ರಾಷ್ಟ್ರಗಳಲ್ಲಿ ಒಂದಾಗಿತ್ತು. ಸಾವಿರಾರು ಪಾಕಿಸ್ತಾನಿಗಳು ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿದ್ದರು. ಎರಡೂ ದೇಶಗಳು ರಕ್ಷಣೆ, ಇಂಧನ ಮತ್ತು ಹೂಡಿಕೆ ಯೋಜನೆಗಳಲ್ಲಿ ಸಹಯೋಗ ಹೊಂದಿವೆ. ಆದರೆ ವರ್ಷ ಕಳೆಯುತ್ತಾ ಸಂಬಂಧಗಳು ಕೆಡುತ್ತಾ ಬಂದಿದೆ. ರಾಜಕೀಯ ಹಸ್ತಕ್ಷೇಪದಿಂದಾಗಿ ಕಳಪೆ ಆಡಳಿತ ಮತ್ತು ದುರಾಡಳಿತ ಪಾಕಿಸ್ತಾನದ ಸರ್ಕಾರಿ ಸ್ವಾಮ್ಯದ ಉದ್ಯಮಗಳಲ್ಲಿ ಭಾರಿ ನಷ್ಟಕ್ಕೆ ಕಾರಣವಾಗುತ್ತಿದೆ ಎಂದು ಇತ್ತೀಚಿನ ವರದಿಯೊಂದು ಹೇಳಿದೆ.
ಇಸ್ಲಾಮಾಬಾದ್ ಕಳೆದ ವರ್ಷ ತನ್ನ ಪಾಕಿಸ್ತಾನ್ ಇಂಟರ್ನ್ಯಾಷನಲ್ ಏರ್ಲೈನ್ಸ್ (ಪಿಐಎ) ಅನ್ನು ಖಾಸಗೀಕರಣಗೊಳಿಸಿತು. ಅಫ್ಘಾನಿಸ್ತಾನ ಸೇರಿದಂತೆ ಗಡಿಯಲ್ಲಿ ಸವಾಲಿನ ವಾತಾವರಣದಲ್ಲಿ ವಿಮಾನ ನಿಲ್ದಾಣಗಳನ್ನು ನಿರ್ವಹಿಸುವಲ್ಲಿ ಯುಎಇಯ ಅನುಭವದ ಹೊರತಾಗಿಯೂ, ಇಸ್ಲಾಮಾಬಾದ್ ವಿಮಾನ ನಿಲ್ದಾಣದಿಂದ ದೂರ ಸರಿಯುವ ಕ್ರಮ ಪಾಕಿಸ್ತಾನಕ್ಕೆ ಮತ್ತಷ್ಟು ಹೊಡೆತ ನೀಡುವ ಸಾಧ್ಯತೆ ಹೆಚ್ಚಾಗಿದೆ.