ವಾಷಿಂಗ್ಟನ್: ಅಮೆರಿಕದಲ್ಲಿ ಜನ್ಮಸಿದ್ಧ ಪೌರತ್ವ (Birthright Citizenship) ಕುರಿತಂತೆ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದ ಬೆನ್ನಲ್ಲೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾಡಿರುವ ಸಾಮಾಜಿಕ ಜಾಲತಾಣದ ಪೋಸ್ಟ್ ಹೊಸ ರಾಜಕೀಯ ಚರ್ಚೆಗೆ ಕಾರಣವಾಗಿದೆ.
ಜನ್ಮಸಿದ್ಧ ಪೌರತ್ವವನ್ನು ನಿರ್ಬಂಧಿಸುವ ತಮ್ಮ ಕಾರ್ಯನಿರ್ವಾಹಕ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿದ ಕೆಲವೇ ಗಂಟೆಗಳಲ್ಲಿ ಟ್ರಂಪ್, ಅಚ್ಚರಿಯ ರೀತಿಯಲ್ಲಿ ಚೀನಾ ಹಾಗೂ ಅದರ ಅಧ್ಯಕ್ಷ ಕ್ಸಿ ಜಿನ್'ಪಿಂಗ್ ಅವರಿಗೆ ಅಭಿನಂದನೆ ಸಲ್ಲಿಸಿದ್ದು, ಈ ಪೋಸ್ಟ್ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.
ಟ್ರಂಪ್ ತಮ್ಮ ಸಾಮಾಜಿಕ ಜಾಲತಾಣ Truth Socialನಲ್ಲಿ, "ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಮತ್ತು ಮಹಾನ್ ಚೀನಾ ದೇಶಕ್ಕೆ ಭಾರೀ ಜನ್ಮಸಿದ್ಧ ಪೌರತ್ವದ ಗೆಲುವಿಗೆ ಅಭಿನಂದನೆಗಳು" ಎಂದು ಬರೆದುಕೊಂಡಿದ್ದಾರೆ. ಆದರೆ, ಈ ವಿಚಾರದಲ್ಲಿ ಚೀನಾವನ್ನು ಏಕೆ ಉಲ್ಲೇಖಿಸಿದರು ಎಂಬುದನ್ನು ಅವರು ಎಲ್ಲಿಯೂ ಸ್ಪಷ್ಟಪಡಿಸಿಲ್ಲ.
ರಾಜಕೀಯ ವಿಶ್ಲೇಷಕರ ಪ್ರಕಾರ, ಇದು ಸುಪ್ರೀಂ ಕೋರ್ಟ್ ತೀರ್ಪಿನ ವಿರುದ್ಧ ಟ್ರಂಪ್ ವ್ಯಕ್ತಪಡಿಸಿದ ವ್ಯಂಗ್ಯಾತ್ಮಕ ಪ್ರತಿಕ್ರಿಯೆಯಾಗಿದೆ ಎಂದು ಹೇಳಿದ್ದಾರ.
ಚೀನಾದಲ್ಲಿ ಅಮೆರಿಕದಂತೆಯೇ ಜನ್ಮಸ್ಥಳದ ಆಧಾರದ ಮೇಲೆ ಸ್ವಯಂಚಾಲಿತ ನಾಗರಿಕತ್ವ ನೀಡುವ ವ್ಯವಸ್ಥೆ ಇಲ್ಲ. ಅಲ್ಲಿ ನಾಗರಿಕತ್ವವನ್ನು ಮುಖ್ಯವಾಗಿ ಪೋಷಕರ ರಾಷ್ಟ್ರೀಯತೆಯ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ. ಈ ಕಾರಣದಿಂದಲೇ ಟ್ರಂಪ್ ಚೀನಾವನ್ನು ಉಲ್ಲೇಖಿಸಿ ಅಮೆರಿಕದ ನ್ಯಾಯಾಂಗ ವ್ಯವಸ್ಥೆಯನ್ನು ಪರೋಕ್ಷವಾಗಿ ಟೀಕಿಸಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಅಮೆರಿಕದ ಸುಪ್ರೀಂ ಕೋರ್ಟ್ ಮಂಗಳವಾರ 6-3 ಬಹುಮತದ ತೀರ್ಪಿನಲ್ಲಿ, ಅಮೆರಿಕದಲ್ಲಿ ಜನಿಸುವ ಬಹುತೇಕ ಎಲ್ಲ ಮಕ್ಕಳಿಗೂ ಜನ್ಮದ ಆಧಾರದ ಮೇಲೆ ಅಮೆರಿಕದ ನಾಗರಿಕತ್ವ ದೊರೆಯುವ ಸಂವಿಧಾನಾತ್ಮಕ ಹಕ್ಕು ಮುಂದುವರಿಯಲಿದೆ ಎಂದು ಸ್ಪಷ್ಟಪಡಿಸಿತ್ತು. ಈ ಮೂಲಕ ಟ್ರಂಪ್ ಸರ್ಕಾರದ ಜನ್ಮಸಿದ್ಧ ಪೌರತ್ವವನ್ನು ನಿರ್ಬಂಧಿಸುವ ಕಾರ್ಯನಿರ್ವಾಹಕ ಆದೇಶವನ್ನು ತಿರಸ್ಕರಿಸಿತ್ತು.
ತಮ್ಮ ಎರಡನೇ ಅವಧಿಯ ಮೊದಲ ದಿನವೇ ಟ್ರಂಪ್ ಈ ಆದೇಶಕ್ಕೆ ಸಹಿ ಹಾಕಿದ್ದರು. ಅದರ ಪ್ರಕಾರ, ಅಕ್ರಮವಾಗಿ ಅಥವಾ ತಾತ್ಕಾಲಿಕ ವೀಸಾದ ಮೇಲೆ ಅಮೆರಿಕದಲ್ಲಿರುವ ವಿದೇಶಿಗರ ಮಕ್ಕಳಿಗೆ ಜನ್ಮಸಿದ್ಧ ನಾಗರಿಕತ್ವ ನೀಡಬಾರದು ಎಂದು ಉದ್ದೇಶಿಸಲಾಗಿತ್ತು. ಆದರೆ, ಹಲವು ಫೆಡರಲ್ ನ್ಯಾಯಾಲಯಗಳು ಈ ಆದೇಶವನ್ನು ಸಂವಿಧಾನಬಾಹಿರ ಎಂದು ಹೇಳಿ ಜಾರಿಗೆ ತಡೆ ನೀಡಿದ್ದವು.
ಸುಪ್ರೀಂ ಕೋರ್ಟ್ ತೀರ್ಪಿನ ನಂತರ ಟ್ರಂಪ್ ಮತ್ತೊಂದು ಪೋಸ್ಟ್‌ನಲ್ಲೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ."ಸುಪ್ರೀಂ ಕೋರ್ಟ್ ಜನ್ಮಸಿದ್ಧ ಪೌರತ್ವವನ್ನು ಎತ್ತಿಹಿಡಿದಿದೆ. ಇದು ನಮ್ಮ ದೇಶಕ್ಕೆ ಒಳ್ಳೆಯದಲ್ಲ. ಆದರೆ, ಕಾಂಗ್ರೆಸ್ ಕಾನೂನು ತರುವ ಮೂಲಕ ಈ ಸಮಸ್ಯೆಯನ್ನು ಪರಿಹರಿಸಬಹುದು" ಎಂದು ಬರೆದುಕೊಂಡಿದ್ದಾರೆ.
ಮುಂದುವರಿದು, "ದೀರ್ಘ ಮತ್ತು ಸಂಕೀರ್ಣವಾದ ಸಂವಿಧಾನ ತಿದ್ದುಪಡಿ ಅಗತ್ಯವಿಲ್ಲ. ದೇಶಕ್ಕೆ ದುಬಾರಿ ಮತ್ತು ಅನ್ಯಾಯವಾಗಿರುವ ಜನ್ಮಸಿದ್ಧ ಪೌರತ್ವ ವ್ಯವಸ್ಥೆಯನ್ನು ಕೊನೆಗೊಳಿಸಲು ಕಾಂಗ್ರೆಸ್ ಇಂದೇ ಕ್ರಮ ಕೈಗೊಳ್ಳಬೇಕು. ಅವರಿಗೆ ನನ್ನ ಸಂಪೂರ್ಣ ಬೆಂಬಲವಿದೆ" ಎಂದು ಕರೆ ನೀಡಿದ್ದಾರೆ.
ಆದರೆ, ಅಮೆರಿಕದ ಸಂವಿಧಾನದ "14ನೇ ತಿದ್ದುಪಡಿ (Fourteenth Amendment)"ಯಲ್ಲಿ ಜನ್ಮಸಿದ್ಧ ಪೌರತ್ವಕ್ಕೆ ಸ್ಪಷ್ಟವಾದ ಮಾನ್ಯತೆ ನೀಡಲಾಗಿದೆ. ಅಮೆರಿಕದಲ್ಲಿ ಜನಿಸಿದ ಪ್ರತಿಯೊಬ್ಬರೂ, ಕೆಲವೇ ವಿನಾಯಿತಿಗಳನ್ನು ಹೊರತುಪಡಿಸಿ, ಅಮೆರಿಕದ ನಾಗರಿಕರಾಗುತ್ತಾರೆ ಎಂದು ಸಂವಿಧಾನ ಹೇಳುತ್ತದೆ. ಹೀಗಾಗಿ ಇದನ್ನು ಕೇವಲ ಕಾಂಗ್ರೆಸ್ ಕಾನೂನಿನ ಮೂಲಕ ಬದಲಾಯಿಸಲು ಸಾಧ್ಯವಿಲ್ಲ; ಸಂವಿಧಾನ ತಿದ್ದುಪಡಿಯೇ ಅಗತ್ಯ ಎಂದು ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ಸ್ಪಷ್ಟಪಡಿಸಿದೆ.
ಟ್ರಂಪ್ ಅವರ ಚೀನಾ ಕುರಿತ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದು, ಕೆಲವರು ಅದನ್ನು ವ್ಯಂಗ್ಯ ಎಂದು ವ್ಯಾಖ್ಯಾನಿಸಿದರೆ, ಮತ್ತೊಬ್ಬರು ರಾಜಕೀಯ ಸಂದೇಶವೆಂದು ವಿಶ್ಲೇಷಿಸುತ್ತಿದ್ದಾರೆ. ಆದರೆ ಟ್ರಂಪ್ ಸ್ವತಃ ಈ ಪೋಸ್ಟ್‌ನ ಉದ್ದೇಶವನ್ನು ವಿವರಿಸಿಲ್ಲ. ಇದರ ನಡುವೆಯೇ ಜನ್ಮಸಿದ್ಧ ಪೌರತ್ವದ ಕುರಿತು ಅಮೆರಿಕದಲ್ಲಿ ರಾಜಕೀಯ ಮತ್ತು ಕಾನೂನು ಚರ್ಚೆ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ.