ನವದೆಹಲಿ/ನ್ಯೂಯಾರ್ಕ್: ಭಯೋತ್ಪಾದನೆಗೆ ಯಾವುದೇ ಕಾರಣ ಅಥವಾ ಸಮರ್ಥನೆ ಇರಲು ಸಾಧ್ಯವಿಲ್ಲ. ಭಯೋತ್ಪಾದಕ ಎಂದರೆ ಭಯೋತ್ಪಾದಕನೇ ಎಂದು ವಿಶ್ವಸಂಸ್ಥೆಯಲ್ಲಿ ಭಾರತ ಹೇಳಿದ್ದು, ಉಗ್ರವಾದವನ್ನು ಎದುರಿಸುವಲ್ಲಿ ದ್ವಂದ್ವ ನೀತಿಯನ್ನು ತ್ಯಜಿಸಿ, ಎಲ್ಲಾ ರಾಷ್ಟ್ರಗಳು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕು ಎಂದು ಕರೆ ನೀಡಿದೆ.
ವಿಶ್ವಸಂಸ್ಥೆಯ ಜಾಗತಿಕ ಭಯೋತ್ಪಾದನೆ ನಿಗ್ರಹ ಕಾರ್ಯತಂತ್ರ (Global Counter-Terrorism Strategy - GCTS) ಒಂಬತ್ತನೇ ಪರಿಶೀಲನಾ ವರದಿ ಅಂಗೀಕಾರದ ವೇಳೆ ಮಾತನಾಡಿದ ವಿಶ್ವಸಂಸ್ಥೆಯಲ್ಲಿನ ಭಾರತದ ಖಾಯಂ ಪ್ರತಿನಿಧಿ ರಾಯಭಾರಿ ಹರೀಶ್ ಪರ್ವತನೇನಿ, ಭಯೋತ್ಪಾದನೆಯ ಹಿಂದಿರುವ 'ಕೊಲೆಗಾರ ಸಿದ್ಧಾಂತ'ವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಬೇಕಿದೆ ಎಂದು ಹೇಳಿದರು.
"ಭಾರತ ಹಲವು ದಶಕಗಳಿಂದ ಗಡಿಯಾಚೆಗಿನ ಭಯೋತ್ಪಾದನೆಯ ಸಂತ್ರಸ್ತ ದೇಶವಾಗಿದೆ. ಸಾವಿರಾರು ಜನರು ಜೀವ ಕಳೆದುಕೊಂಡಿದ್ದಾರೆ, ಅನೇಕ ಕುಟುಂಬಗಳು ನೋವು ಅನುಭವಿಸಿವೆ. ಈ ಅನುಭವವೇ ಭಾರತದ ನಿಲುವನ್ನು ರೂಪಿಸಿದೆ. ಯಾವುದೇ ಅಹವಾಲು, ರಾಜಕೀಯ ಕಾರಣ ಅಥವಾ ಕಾರ್ಯತಂತ್ರದ ಹೆಸರಿನಲ್ಲಿ ಭಯೋತ್ಪಾದನೆಯನ್ನು ಸಮರ್ಥಿಸಲು ಸಾಧ್ಯವಿಲ್ಲ" ಎಂದು ಹೇಳಿದರು.
'ಒಳ್ಳೆಯ ಉಗ್ರ-ಕೆಟ್ಟ ಉಗ್ರ' ಎಂಬ ಭೇದ ಸಲ್ಲದು
"ಭಯೋತ್ಪಾದಕ ಎಂದರೆ ಭಯೋತ್ಪಾದಕನೇ. ಉಗ್ರವಾದಕ್ಕೆ ಯಾವುದೇ ಸಮರ್ಥನೆ ನೀಡದೆ, ಅದರ ಹಿಂದಿರುವ ಹಿಂಸಾತ್ಮಕ ಸಿದ್ಧಾಂತವನ್ನು ಜಗತ್ತು ಒಗ್ಗಟ್ಟಿನಿಂದ ನಿರ್ಮೂಲನೆ ಮಾಡಬೇಕು" ಎಂದು ಒತ್ತಿ ಹೇಳಿದರು.
ಉಗ್ರರಿಗೆ ಬೆಂಬಲ ನೀಡುವವರ ಮೇಲೂ ಕ್ರಮ ಆಗಬೇಕು
ಭಯೋತ್ಪಾದಕ ಕೃತ್ಯ ಎಸಗುವವರು ಮಾತ್ರವಲ್ಲದೆ, ಅದನ್ನು ಸಂಘಟಿಸುವವರು, ಹಣಕಾಸು ನೆರವು ನೀಡುವವರು ಹಾಗೂ ಆಶ್ರಯ ನೀಡುವವರನ್ನೂ ಕಾನೂನಿನ ಮುಂದೆ ತಂದು ಶಿಕ್ಷಿಸಬೇಕು. ಇದಕ್ಕಾಗಿ ಎಲ್ಲಾ ಸದಸ್ಯ ರಾಷ್ಟ್ರಗಳು ಪರಸ್ಪರ ಸಹಕಾರ ನೀಡಬೇಕು ಎಂದರು.
ಭಯೋತ್ಪಾದನೆ ವಿರುದ್ಧದ ಹೋರಾಟ ರಾಜಕೀಯದ ಸಾಧನವಾಗಬಾರದು
ಇದೇ ವೇಳೆ ಭಯೋತ್ಪಾದನೆ ವಿರುದ್ಧದ ಕ್ರಮಗಳನ್ನು ರಾಜಕೀಯಗೊಳಿಸುವುದು ಅಥವಾ ಸುಳ್ಳು ಸಮಾನತೆಗಳನ್ನು ಸೃಷ್ಟಿಸುವುದು ಅಪಾಯಕಾರಿ ಎಂದು ಎಚ್ಚರಿಕೆ ನೀಡಿತು.
"ಭಯೋತ್ಪಾದನೆ ಬೆಳೆಯಲು ಕಾರಣವಾಗುವ ಪರಿಸ್ಥಿತಿಗಳನ್ನು ಪರಿಹರಿಸಬೇಕು. ಆದರೆ, ಅದನ್ನು ಸಮರ್ಥಿಸುವ ಪ್ರಯತ್ನ ಮಾಡಬಾರದು. ಮಾನವ ಹಕ್ಕುಗಳನ್ನು ಕಾಪಾಡಬೇಕು. ಆದರೆ, ಮೊದಲ ಮಾನವ ಹಕ್ಕು ಜೀವಿಸುವ ಹಕ್ಕು; ಭಯೋತ್ಪಾದನೆ ಅದಕ್ಕೇ ನೇರ ದಾಳಿ" ಎಂದು ಹೇಳಿದರು.
ಉಗ್ರರ ಹಣಕಾಸು ಮೂಲಗಳಿಗೆ ಕಡಿವಾಣ ಅಗತ್ಯ
ಭಯೋತ್ಪಾದನೆಗೆ ಹಣಕಾಸು ನೆರವು ತಡೆಯುವುದು ಜಾಗತಿಕ ಆದ್ಯತೆಯಾಗಬೇಕು. ಹಣಕಾಸು ಗುಪ್ತಚರ ಮಾಹಿತಿಯ ವಿನಿಮಯವನ್ನು ಹೆಚ್ಚಿಸಬೇಕು, ಫೈನಾನ್ಷಿಯಲ್ ಆಕ್ಷನ್ ಟಾಸ್ಕ್ ಫೋರ್ಸ್ (FATF) ಮಾನದಂಡಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಹಾಗೂ ಯಾವುದೇ ದೇಶ ಉಗ್ರರ ಹಣದ ಸುರಕ್ಷಿತ ತಾಣವಾಗದಂತೆ ನೋಡಿಕೊಳ್ಳಬೇಕು ಎಂದು ಒತ್ತಾಯಿಸಿದರು.
ಹೊಸ ತಂತ್ರಜ್ಞಾನ ದುರುಪಯೋಗದ ಬಗ್ಗೆ ಕಳವಳ
ಇದೇ ವೇಳೆ ಕೃತಕ ಬುದ್ಧಿಮತ್ತೆ (AI) ಸೇರಿದಂತೆ ಹೊಸ ತಂತ್ರಜ್ಞಾನಗಳನ್ನು ಉಗ್ರ ಸಂಘಟನೆಗಳು ದುರುಪಯೋಗಪಡಿಸಿಕೊಳ್ಳುತ್ತಿರುವುದು ಆತಂಕಕಾರಿ ಎಂದು ತಿಳಿಸಿದ ಅವರು, ಈ ವಿಷಯದಲ್ಲಿ ಜಾಗತಿಕ ಭಯೋತ್ಪಾದನೆ ನಿಗ್ರಹ ಕಾರ್ಯತಂತ್ರದ ಇತ್ತೀಚಿನ ಪರಿಶೀಲನೆಯಲ್ಲಿ ಒಮ್ಮತ ಮೂಡದಿರುವುದಕ್ಕೆ ನಿರಾಶೆ ವ್ಯಕ್ತಪಡಿಸಿದರು.
ಸಿಸಿಐಟಿ ಜಾರಿಗೆ ರಾಜಕೀಯ ಇಚ್ಛಾಶಕ್ತಿ ಬೇಕು
ಬಳಿಕ ಸಮಗ್ರ ಅಂತರರಾಷ್ಟ್ರೀಯ ಭಯೋತ್ಪಾದನೆ ಒಪ್ಪಂದ (Comprehensive Convention on International Terrorism - CCIT) ಜಾರಿಗೆ ಬರಲು ಸುಮಾರು ಮೂರು ದಶಕಗಳಿಂದ ವಿಳಂಬವಾಗಿರುವುದನ್ನು ಭಾರತ ಪ್ರಸ್ತಾಪಿಸಿತು.
"ಉಗ್ರರಿಗೆ ಸುರಕ್ಷಿತ ಆಶ್ರಯ, ಹಣ ಹಾಗೂ ಶಸ್ತ್ರಾಸ್ತ್ರಗಳು ದೊರೆಯದಂತೆ ತಡೆಯಲು ಈ ಕಾನೂನು ಅತ್ಯಗತ್ಯ. ಈಗ ರಾಜಕೀಯ ಇಚ್ಛಾಶಕ್ತಿ ಪ್ರದರ್ಶಿಸಿ ಸಿಸಿಐಟಿಯನ್ನು ಅಂತಿಮಗೊಳಿಸುವ ಸಮಯ ಬಂದಿದೆ" ಎಂದು ಪರ್ವತನೇನಿ ಹೇಳಿದರು.
ಇಸ್ಲಾಮೋಫೋಬಿಯಾ, ಕ್ರಿಶ್ಚಿಯನ್‌ಫೋಬಿಯಾ ಹಾಗೂ ಯಹೂದಿ ವಿರೋಧದಂತೆಯೇ ಇತರೆ ಧರ್ಮಗಳ ವಿರುದ್ಧದ ದ್ವೇಷವನ್ನೂ ವಿಶ್ವಸಂಸ್ಥೆ ಸಮಾನವಾಗಿ ಪರಿಗಣಿಸಬೇಕು ಎಂದೂ ಭಾರತ ಹೇಳಿತು.
'ದ್ವಂದ್ವ ನೀತಿ ಬಿಟ್ಟರಷ್ಟೇ ಉಗ್ರವಾದಕ್ಕೆ ಅಂತ್ಯ ಸಾಧ್ಯ'
ಭಾಷಣದ ಕೊನೆಯಲ್ಲಿ ಭಾರತ, "ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ದ್ವಂದ್ವ ನೀತಿ ಇರಬಾರದು. ಒಳ್ಳೆಯ ಉಗ್ರ, ಕೆಟ್ಟ ಉಗ್ರ ಎಂಬ ಭೇದಭಾವ ಇರಬಾರದು. ಪಾರದರ್ಶಕತೆ ಮತ್ತು ನಿಷ್ಪಕ್ಷಪಾತ ನಿಲುವಿನಿಂದ ಎಲ್ಲ ರಾಷ್ಟ್ರಗಳು ಒಗ್ಗಟ್ಟಾಗಿ ಕಾರ್ಯನಿರ್ವಹಿಸಿದಾಗ ಮಾತ್ರ ಜಗತ್ತು ಭಯೋತ್ಪಾದನೆ ಎಂಬ ಪಿಡುಗನ್ನು ನಿರ್ಮೂಲನೆ ಮಾಡಲು ಸಾಧ್ಯ" ಎಂದು ಜಾಗತಿಕ ಸಮುದಾಯಕ್ಕೆ ಕರೆ ನೀಡಿತು.