ಯುದ್ಧದಲ್ಲೂ ಮಕ್ಕಳ ರಕ್ಷಣೆ ಅಗತ್ಯ, ಶಾಲೆಗಳ ಗುರಿಯಾಗಿಸುವವರ ವಿರುದ್ಧ ಇಡೀ ವಿಶ್ವ ಒಗ್ಗೂಡಲಿ: ವಿಶ್ವಸಂಸ್ಥೆಯಲ್ಲಿ ಭಾರತದ ಆಗ್ರಹ..!

ಶಿಕ್ಷಣವು ಶಾಶ್ವತ ಶಾಂತಿ ನಿರ್ಮಾಣದ ಪ್ರಮುಖ ಅಡಿಪಾಯವಾಗಿದ್ದು, ಮಕ್ಕಳಿಗೆ ಕಲಿಯುವ, ಬೆಳೆಯುವ ಮತ್ತು ತಮ್ಮ ಸಂಪೂರ್ಣ ಸಾಮರ್ಥ್ಯವನ್ನು ಸಾಧಿಸುವ ಅವಕಾಶವನ್ನು ಯಾವುದೇ ಸಂದರ್ಭದಲ್ಲೂ ಕಸಿದುಕೊಳ್ಳಬಾರದು.
Harish Parvathaneni
Updated on

ನ್ಯೂಯಾರ್ಕ್: ಸಶಸ್ತ್ರ ಸಂಘರ್ಷಗಳಿಂದ ಬಾಧಿತವಾಗಿರುವ ಪ್ರದೇಶಗಳಲ್ಲಿ ಶಾಲೆಗಳು ಮತ್ತು ಮಕ್ಕಳನ್ನು ಗುರಿಯಾಗಿಸಿ ನಡೆಯುತ್ತಿರುವ ದಾಳಿಗಳಿಗೆ ಅಂತ್ಯ ಹಾಡಲು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತ ಒತ್ತಾಯಿಸಿದೆ.

ಮಕ್ಕಳ ರಕ್ಷಣೆ ಬಗ್ಗೆ ಮಾತನಾಡುವುದಷ್ಟೇ ಸಾಕಾಗುವುದಿಲ್ಲ, ಅವರ ಮೇಲೆ ದಾಳಿ ನಡೆಸುವವರನ್ನು ಹೊಣೆಗಾರರನ್ನಾಗಿ ಮಾಡುವುದು ಅತ್ಯಗತ್ಯ ಎಂದು ಹೇಳಿದೆ.

ಸಂಘರ್ಷದಿಂದ ಬಾಧಿತ ಮಕ್ಕಳ ಶಿಕ್ಷಣದ ರಕ್ಷಣೆ ಮತ್ತು ತಡೆಗಟ್ಟುವಿಕೆಯನ್ನು ಬಲಪಡಿಸುವ ಕುರಿತು ನಡೆದ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಮುಕ್ತ ಚರ್ಚೆಯಲ್ಲಿ ವಿಶ್ವಸಂಸ್ಥೆಯಲ್ಲಿನ ಭಾರತದ ಶಾಶ್ವತ ಪ್ರತಿನಿಧಿ ರಾಯಭಾರಿ ಹರೀಶ್ ಪರ್ವತನೇನಿ ಮಾತನಾಡಿ, ಯುದ್ಧ ಅಥವಾ ಸಶಸ್ತ್ರ ಸಂಘರ್ಷದ ಸಂದರ್ಭದಲ್ಲಿಯೂ ಶಿಕ್ಷಣವು ಮಕ್ಕಳ ಮೂಲಭೂತ ಹಕ್ಕಾಗಿಯೇ ಉಳಿಯಬೇಕು ಎಂದು ಹೇಳಿದರು.

ಶಿಕ್ಷಣವು ಶಾಶ್ವತ ಶಾಂತಿ ನಿರ್ಮಾಣದ ಪ್ರಮುಖ ಅಡಿಪಾಯವಾಗಿದ್ದು, ಮಕ್ಕಳಿಗೆ ಕಲಿಯುವ, ಬೆಳೆಯುವ ಮತ್ತು ತಮ್ಮ ಸಂಪೂರ್ಣ ಸಾಮರ್ಥ್ಯವನ್ನು ಸಾಧಿಸುವ ಅವಕಾಶವನ್ನು ಯಾವುದೇ ಸಂದರ್ಭದಲ್ಲೂ ಕಸಿದುಕೊಳ್ಳಬಾರದು ಎಂದು ತಿಳಿಸಿದರು.

ಮಕ್ಕಳ ರಕ್ಷಣೆಯ ವಿಷಯದಲ್ಲಿ ಹೊಣೆಗಾರಿಕೆ ಅತ್ಯಂತ ಮುಖ್ಯ ಎಂದು ಒತ್ತಿ ಹೇಳಿದ ಅವರು, "ಹೊಣೆಗಾರಿಕೆ ಇಲ್ಲದ ರಕ್ಷಣೆ ಅಪೂರ್ಣ. ಶಾಲೆಗಳು ಮತ್ತು ಮಕ್ಕಳನ್ನು ಗುರಿಯಾಗಿಸಿ ದಾಳಿ ನಡೆಸುವವರು ಶಿಕ್ಷೆಯಿಂದ ತಪ್ಪಿಸಿಕೊಳ್ಳಬಾರದು. ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಂಡು ಅವರನ್ನು ಹೊಣೆಗಾರರನ್ನಾಗಿ ಮಾಡಲೇಬೇಕು" ಎಂದು ಹೇಳಿದರು.

ಈ ನಡುವೆ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಯ 2025ರ "ಮಕ್ಕಳು ಮತ್ತು ಸಶಸ್ತ್ರ ಸಂಘರ್ಷ" ಕುರಿತ ವಾರ್ಷಿಕ ವರದಿಯು ಪರಿಸ್ಥಿತಿ ಅತ್ಯಂತ ಆತಂಕಕಾರಿ ಮಟ್ಟಕ್ಕೆ ತಲುಪಿರುವುದನ್ನು ಬಹಿರಂಗಪಡಿಸಿದೆ.

Harish Parvathaneni
ಹಾರ್ಮುಜ್ ಜಲಸಂಧಿ ಬಿಕ್ಕಟ್ಟು: 'ಪ್ರಚೋದನಕಾರಿ ಕ್ರಮ' ಬೇಡ; ವಿಶ್ವಸಂಸ್ಥೆ ಭದ್ರತಾ ಮಂಡಳಿಗೆ ಇರಾನ್ ಎಚ್ಚರಿಕೆ

ವರದಿಯ ಪ್ರಕಾರ, 2025ರಲ್ಲಿ ಮಕ್ಕಳ ವಿರುದ್ಧ 38,558 ಗಂಭೀರ ಉಲ್ಲಂಘನೆಗಳು ದಾಖಲಾಗಿದ್ದು, 24,174 ಮಕ್ಕಳು ನೇರವಾಗಿ ಬಾಧಿತರಾಗಿದ್ದಾರೆ. ಇವರಲ್ಲಿ 15,493 ಬಾಲಕರು, 7,990 ಬಾಲಕಿಯರು ಹಾಗೂ 691 ಮಕ್ಕಳ ಲಿಂಗವನ್ನು ಗುರುತಿಸಲಾಗಿಲ್ಲ. ಈ ವರದಿ ಪ್ರಕಟವಾಗಲು ಆರಂಭವಾದ ಬಳಿಕ ಇದೇ ಮೊದಲ ಬಾರಿಗೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಮಕ್ಕಳು ಗಂಭೀರ ಉಲ್ಲಂಘನೆಗಳಿಗೆ ಒಳಗಾಗಿದ್ದಾರೆ ಎಂದು ವಿಶ್ವಸಂಸ್ಥೆ ತಿಳಿಸಿದೆ.

ಒಂದಕ್ಕಿಂತ ಹೆಚ್ಚು ಗಂಭೀರ ಉಲ್ಲಂಘನೆಗಳಿಗೆ ಒಳಗಾಗಿರುವ ಮಕ್ಕಳ ಸಂಖ್ಯೆಯೂ ಹೆಚ್ಚಾಗಿದ್ದು, 2024ರಲ್ಲಿ 3,137 ಇದ್ದ ಸಂಖ್ಯೆ 2025ರಲ್ಲಿ 3,176ಕ್ಕೆ ಏರಿಕೆಯಾಗಿದೆ. ಅಂತರರಾಷ್ಟ್ರೀಯ ಮಾನವೀಯ ಕಾನೂನು ಮತ್ತು ಮಾನವ ಹಕ್ಕುಗಳ ಕಾನೂನುಗಳನ್ನು ಸಂಘರ್ಷದಲ್ಲಿ ತೊಡಗಿರುವ ಹಲವು ಪಕ್ಷಗಳು ಉಲ್ಲಂಘಿಸುತ್ತಿದ್ದು, ಮಕ್ಕಳ ಹತ್ಯೆ, ಗಾಯಗೊಳಿಸುವುದು, ಶಾಲೆಗಳು ಹಾಗೂ ಆಸ್ಪತ್ರೆಗಳ ಮೇಲಿನ ದಾಳಿ ಮತ್ತು ಮಾನವೀಯ ನೆರವಿಗೆ ಅಡ್ಡಿಪಡಿಸುವ ಘಟನೆಗಳು ಹೆಚ್ಚುತ್ತಿರುವುದಾಗಿ ವರದಿ ಹೇಳಿದೆ. ಮಕ್ಕಳ ಮೇಲಿನ ಈ ಗಂಭೀರ ಉಲ್ಲಂಘನೆಗಳಲ್ಲಿ ಸರ್ಕಾರಿ ಪಡೆಗಳ ಪಾತ್ರವೂ ಹೆಚ್ಚಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

2025ರ ವರದಿಯ ಪ್ರಕಾರ, ಶಾಲೆಗಳ ಮೇಲಿನ ದಾಳಿಗಳು ಒಂದೇ ವರ್ಷದಲ್ಲಿ ಶೇ.44ರಷ್ಟು ಏರಿಕೆಯಾಗಿರುವುದು ಭಾರತವನ್ನು ತೀವ್ರ ಕಳವಳಕ್ಕೀಡು ಮಾಡಿದೆ. ಜಗತ್ತಿನಾದ್ಯಂತ ಸುಮಾರು 473 ಮಿಲಿಯನ್ ಮಕ್ಕಳು ಸಂಘರ್ಷ ಪೀಡಿತ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ ಅಥವಾ ಅಲ್ಲಿಂದ ಸ್ಥಳಾಂತರಗೊಂಡಿದ್ದಾರೆ.

ಇವರಲ್ಲಿ 85 ಮಿಲಿಯನ್‌ಗಿಂತ ಹೆಚ್ಚು ಮಕ್ಕಳು ಶಿಕ್ಷಣದ ಅವಕಾಶದಿಂದ ಸಂಪೂರ್ಣವಾಗಿ ವಂಚಿತರಾಗಿದ್ದಾರೆ. ಈ ಅಂಕಿ-ಅಂಶಗಳು ಅಂತರರಾಷ್ಟ್ರೀಯ ಸಮುದಾಯ ತನ್ನ ಬದ್ಧತೆಗಳನ್ನು ನೆಲಮಟ್ಟದಲ್ಲಿ ಪರಿಣಾಮಕಾರಿಯಾಗಿ ಜಾರಿಗೊಳಿಸುವಲ್ಲಿ ವಿಫಲವಾಗಿದೆ ಎಂಬುದನ್ನು ಸ್ಪಷ್ಟಪಡಿಸುತ್ತವೆ ಎಂದು ಹರೀಶ್ ಪರ್ವತನೇನಿ ಹೇಳಿದರು.

ಮಕ್ಕಳ ಶಿಕ್ಷಣವನ್ನು ರಕ್ಷಿಸುವುದು ಎಂದರೆ ಒಂದು ದೇಶದ ಭವಿಷ್ಯವನ್ನು ರಕ್ಷಿಸುವುದೇ ಆಗಿದೆ ಎಂದು ಅವರು ಅಭಿಪ್ರಾಯಪಟ್ಟರು. ಮಕ್ಕಳ ಹಕ್ಕುಗಳನ್ನು ಕಾಪಾಡುವ ಪ್ರಮುಖ ಜವಾಬ್ದಾರಿ ಸರ್ಕಾರಗಳ ಮೇಲಿದೆ ಎಂದು ಅವರು ಒತ್ತಿ ಹೇಳಿದರು.

ಭಾರತದಲ್ಲಿ ಶಿಕ್ಷಣಕ್ಕೆ ನೀಡಲಾಗುತ್ತಿರುವ ಆದ್ಯತೆಯನ್ನು ಉಲ್ಲೇಖಿಸಿದ ಅವರು, ಸಂವಿಧಾನದ ಅಡಿಯಲ್ಲಿ 14 ವರ್ಷ ವಯಸ್ಸಿನವರೆಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ ಮೂಲಭೂತ ಹಕ್ಕಾಗಿ ಖಾತರಿಪಡಿಸಲಾಗಿದೆ ಎಂದು ತಿಳಿಸಿದರು. ಗುಣಮಟ್ಟದ ಶಿಕ್ಷಣವನ್ನು ದೇಶದ ಪ್ರತಿಯೊಬ್ಬ ವಿದ್ಯಾರ್ಥಿಗೂ ತಲುಪಿಸಲು ಭಾರತ ದೀಕ್ಷಾ (ಜ್ಞಾನ ಹಂಚಿಕೆಗಾಗಿ ಡಿಜಿಟಲ್ ಮೂಲಸೌಕರ್ಯ) ಎಂಬ ರಾಷ್ಟ್ರೀಯ ಡಿಜಿಟಲ್ ಶಿಕ್ಷಣ ವೇದಿಕೆಯನ್ನು ಅಭಿವೃದ್ಧಿಪಡಿಸಿದ್ದು, ಇದರಲ್ಲಿ ಹಲವು ಭಾರತೀಯ ಭಾಷೆಗಳಲ್ಲಿ ಪಠ್ಯ ವಿಷಯಗಳು ಹಾಗೂ ಕೃತಕ ಬುದ್ಧಿಮತ್ತೆ (AI) ಆಧಾರಿತ ಕಲಿಕಾ ಸೌಲಭ್ಯಗಳನ್ನು ಒದಗಿಸಲಾಗಿದೆ ಎಂದು ಹೇಳಿದರು.

ಕೋವಿಡ್-19 ಮಹಾಮಾರಿಯ ಸಂದರ್ಭದಲ್ಲಿ ಡಿಜಿಟಲ್ ಶಿಕ್ಷಣವು ಲಕ್ಷಾಂತರ ಮಕ್ಕಳಿಗೆ ಶಿಕ್ಷಣವನ್ನು ಮುಂದುವರಿಸಲು ನೆರವಾದ ಅನುಭವವನ್ನು ಹಂಚಿಕೊಂಡ ಅವರು, ಸಂಘರ್ಷದ ಸಂದರ್ಭದಲ್ಲಿಯೂ ಡಿಜಿಟಲ್ ಶಿಕ್ಷಣವು ಮಕ್ಕಳಿಗೆ ಶಿಕ್ಷಣದೊಂದಿಗೆ ಸಂಪರ್ಕ ಉಳಿಸಿಕೊಳ್ಳಲು ಪ್ರಮುಖ ಸೇತುವೆಯಾಗಬಹುದು ಎಂದು ಅಭಿಪ್ರಾಯಪಟ್ಟರು.

ನೆರೆಹೊರೆಯ ರಾಷ್ಟ್ರಗಳಿಂದ ಬಂದ ನಿರಾಶ್ರಿತರು ಹಾಗೂ ಸ್ಥಳಾಂತರಗೊಂಡ ಸಮುದಾಯಗಳ ಮಕ್ಕಳ ಶಿಕ್ಷಣಕ್ಕೂ ಭಾರತ ನಿರಂತರ ಬೆಂಬಲ ನೀಡುತ್ತಿದೆ ಎಂದು ತಿಳಿಸಿದ ಅವರು, ಹಲವು ದೇಶಗಳಲ್ಲಿ ಶಾಲೆಗಳು, ವೃತ್ತಿಪರ ತರಬೇತಿ ಕೇಂದ್ರಗಳು ಹಾಗೂ ಶಿಕ್ಷಣ ಮೂಲಸೌಕರ್ಯಗಳ ಪುನರ್‌ನಿರ್ಮಾಣಕ್ಕೂ ಭಾರತ ಸಹಕಾರ ನೀಡುತ್ತಿದೆ ಎಂದು ಹೇಳಿದರು. ಶಿಕ್ಷಣದಲ್ಲಿ ಹೂಡಿಕೆ ಮಾಡುವುದೇ ಸಂಘರ್ಷದಿಂದ ಬಾಧಿತ ಸಮಾಜಗಳ ಪುನಶ್ಚೇತನ ಮತ್ತು ಶಾಶ್ವತ ಶಾಂತಿಯತ್ತ ಸಾಗುವ ಅತ್ಯಂತ ಪರಿಣಾಮಕಾರಿ ಮಾರ್ಗವಾಗಿದೆ ಎಂದು ಅವರು ವಿಶ್ವಸಂಸ್ಥೆಯ ವೇದಿಕೆಯಲ್ಲಿ ಪುನರುಚ್ಚರಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com