ಸಂಗ್ರಹ ಚಿತ್ರ 
ವಿದೇಶ

ಮುರಿದುಬಿದ್ದ ಶಾಂತಿ ಒಪ್ಪಂದ: ಇರಾನ್ ಮೇಲೆ ಅಮೆರಿಕ ಭಾರಿ ವೈಮಾನಿಕ ದಾಳಿ; ಮೂರು ಗಲ್ಫ್ ರಾಷ್ಟ್ರಗಳ ಮೇಲೆ ಟೆಹ್ರಾನ್ ಪ್ರತಿದಾಳಿ, ಮಧ್ಯಪ್ರಾಚ್ಯ ಮತ್ತೆ ಉದ್ವಿಗ್ನ..!

ಹಾರ್ಮುಜ್ ಜಲಸಂಧಿಯಲ್ಲಿ ನೌಕಾಯಾನಕ್ಕೆ ಬೆದರಿಕೆ ಒಡ್ಡುವ ಇರಾನ್‌ನ ಸಾಮರ್ಥ್ಯವನ್ನು ಮತ್ತಷ್ಟು ಕುಗ್ಗಿಸುವ ಉದ್ದೇಶದಿಂದ ಈ ದಾಳಿಗಳನ್ನು ನಡೆಸಲಾಗಿದೆ.

ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷ ಮತ್ತೆ ತಾರಕಕ್ಕೇರಿದ್ದು, ಜೂನ್ 17 ರಂದು ಮಾಡಿಕೊಳ್ಳಲಾಗಿದ್ದ ತಾತ್ಕಾಲಿಕ ಕದನ ವಿರಾಮ ಒಪ್ಪಂದವು ಸಂಪೂರ್ಣವಾಗಿ ಮುರಿದುಬಿದ್ದಿದೆ.

ಇರಾನ್ ಮೇಲೆ ಅಮೆರಿಕದ ಭಾರಿ ವೈಮಾನಿಕ ದಾಳಿ ನಡೆಸಿದ್ದು, ಇದಕ್ಕೆ ತಕ್ಷಣವೇ ಪ್ರತಿಕ್ರಿಯಿಸಿದ ಇರಾನ್, ಬಹ್ರೇನ್, ಕುವೈತ್ ಹಾಗೂ ಕತಾರ್‌ನಲ್ಲಿರುವ ಗುರಿಗಳತ್ತ ಕ್ಷಿಪಣಿಗಳು ಮತ್ತು ಡ್ರೋನ್‌ಗಳನ್ನು ಉಡಾಯಿಸಿದೆ. ಇದರಿಂದ ಮಧ್ಯಪ್ರಾಚ್ಯದಲ್ಲಿ ಮತ್ತೆ ಯುದ್ಧದ ಕಾರ್ಮೋಡ ಕವಿದಿದೆ.

ಈ ದಾಳಿಗಳು ನಡೆಯುವ ಕೆಲವೇ ಗಂಟೆಗಳ ಮೊದಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಹಾರ್ಮುಜ್ ಜಲಸಂಧಿಯಲ್ಲಿ ವ್ಯಾಪಾರ ಹಡಗುಗಳ ಮೇಲೆ ಇರಾನ್ ನಡೆಸಿದ ದಾಳಿಯೊಂದಿಗೆ ತಾತ್ಕಾಲಿಕ ಕದನ ವಿರಾಮ ಒಪ್ಪಂದವು ಅಂತ್ಯಗೊಂಡಿದೆ ಎಂದು ಘೋಷಿಸಿದ್ದರು.

ಇರಾನ್ ವಿರುದ್ಧದ ಈ ಕಾರ್ಯಾಚರಣೆ, ಸಮುದ್ರ ಮಾರ್ಗಗಳ ಸುರಕ್ಷತೆಯನ್ನು ಕಾಪಾಡುವ ಉದ್ದೇಶದಿಂದ ಕೈಗೊಳ್ಳಲಾಗಿದೆ ಎಂದು ಅಮೆರಿಕ ಸೇನೆ ತಿಳಿಸಿದೆ.

ಅಮೆರಿಕ ಸೇನೆಯ ಪ್ರಕಾರ, ಹಾರ್ಮುಜ್ ಜಲಸಂಧಿಯಲ್ಲಿ ನೌಕಾಯಾನಕ್ಕೆ ಬೆದರಿಕೆ ಒಡ್ಡುವ ಇರಾನ್‌ನ ಸಾಮರ್ಥ್ಯವನ್ನು ಮತ್ತಷ್ಟು ಕುಗ್ಗಿಸುವ ಉದ್ದೇಶದಿಂದ ಈ ದಾಳಿಗಳನ್ನು ನಡೆಸಲಾಗಿದೆ. ವಿಶ್ವದ ಒಟ್ಟು ತೈಲ ಮತ್ತು ನೈಸರ್ಗಿಕ ಅನಿಲ ಸಾಗಣೆಯ ಸುಮಾರು 20 ಪ್ರತಿಶತ ಇದೇ ಜಲಸಂಧಿಯ ಮೂಲಕ ನಡೆಯುವುದರಿಂದ, ಈ ಪ್ರದೇಶದಲ್ಲಿ ಯಾವುದೇ ಸಂಘರ್ಷ ಜಾಗತಿಕ ಇಂಧನ ಮಾರುಕಟ್ಟೆಯ ಮೇಲೆ ನೇರ ಪರಿಣಾಮ ಬೀರುತ್ತದೆ ಎಂದು ಹೇಳಿದೆ.

ಈ ನಡುವೆ ಇರಾನ್ ಸರ್ಕಾರಿ ಮಾಧ್ಯಮಗಳು, ಬುಶೆಹರ್ ಸೇರಿದಂತೆ ಹಲವು ಪ್ರಮುಖ ಪ್ರದೇಶಗಳಲ್ಲಿ ಸ್ಫೋಟಗಳು ಸಂಭವಿಸಿವೆ. ಪರಮಾಣು ವಿದ್ಯುತ್ ಸ್ಥಾವರ ಹೊಂದಿರುವ ಬುಶೆಹರ್ ನಗರ, ದಕ್ಷಿಣದ ಚಬಹಾರ್, ಕೊನಾರಕ್, ಬಂದರ್ ಅಬ್ಬಾಸ್ ಮತ್ತು ಸಿರಿಕ್ ಬಂದರು ನಗರಗಳಲ್ಲಿ ಸ್ಫೋಟಗಳ ಶಬ್ದ ಕೇಳಿಬಂದಿದೆ ಎಂದು ತಿಳಿಸಿವೆ. ಆದರೆ, ಈ ದಾಳಿಗಳಿಂದ ಉಂಟಾದ ಹಾನಿಯ ಸಂಪೂರ್ಣ ವಿವರ ಇನ್ನೂ ಬಹಿರಂಗವಾಗಿಲ್ಲ.

ಇತ್ತ ಬಹ್ರೇನ್, ಕುವೈತ್ ಮತ್ತು ಕತಾರ್ ಕಡೆಗೆ ಇರಾನ್ ಉಡಾಯಿಸಿದ ಕ್ಷಿಪಣಿಗಳು ಹಾಗೂ ಡ್ರೋನ್‌ಗಳ ಪರಿಣಾಮದ ಕುರಿತು ಆರಂಭಿಕ ಮಾಹಿತಿ ಲಭ್ಯವಾಗಿಲ್ಲ. ಆದರೆ, ಕುವೈತ್ ಸೇನೆ ತನ್ನ ವಾಯು ರಕ್ಷಣಾ ವ್ಯವಸ್ಥೆಗಳನ್ನು ಸಕ್ರಿಯಗೊಳಿಸಿ, ಹಲವು ಡ್ರೋನ್‌ಗಳು ಮತ್ತು ಕ್ಷಿಪಣಿಗಳನ್ನು ಮಧ್ಯದಲ್ಲೇ ಹೊಡೆದುರುಳಿಸಲಾಗಿದೆ ಎಂದು ತಿಳಿಸಿದೆ.

ನ್ಯಾಟೋ ಶೃಂಗಸಭೆಯಿಂದ ಹಿಂದಿರುಗಿದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿದ ಡೊನಾಲ್ಡ್ ಟ್ರಂಪ್, ಇರಾನ್‌ನಲ್ಲಿ ನಡೆದ ಸ್ಫೋಟಗಳ ವಿಡಿಯೊಗಳನ್ನು ಹಂಚಿಕೊಂಡು, "ಇದು ನಿನ್ನೆ ಇರಾನ್ ಹಡಗುಗಳ ಮೇಲೆ ನಡೆಸಿದ ದಾಳಿಗೆ ನೀಡಿದ ಪ್ರತೀಕಾರ. ಮತ್ತೆ ಇಂತಹ ದಾಳಿ ನಡೆದರೆ ಪರಿಸ್ಥಿತಿ ಇನ್ನಷ್ಟು ಭೀಕರವಾಗಲಿದೆ" ಎಂದು ಎಚ್ಚರಿಕೆ ನೀಡಿದ್ದಾರೆ.

ಇದಕ್ಕೂ ಮೊದಲು ಟ್ರಂಪ್, "ಯಾವುದೇ ಕ್ರಮ ಕೈಗೊಳ್ಳಬೇಕಾದರೂ ಅದು ಅತ್ಯಂತ ವೇಗವಾಗಿ ನಡೆಯಲಿದೆ. ಅಗತ್ಯವಿದ್ದರೆ ನಾವು ಕೆಲಸವನ್ನು ಸಂಪೂರ್ಣ ಮುಗಿಸುತ್ತೇವೆ" ಎಂದು ಹೇಳಿದ್ದರು. ಜೊತೆಗೆ ಇರಾನ್‌ನ ವಿದ್ಯುತ್ ಸ್ಥಾವರಗಳು, ಸಮುದ್ರದ ನೀರನ್ನು ಕುಡಿಯುವ ನೀರನ್ನಾಗಿ ಪರಿವರ್ತಿಸುವ ಡಿಸಲಿನೇಷನ್ ಘಟಕಗಳು ಹಾಗೂ ದೇಶದ ಪ್ರಮುಖ ತೈಲ ರಫ್ತು ಕೇಂದ್ರವಾದ ಖಾರ್ಗ್ ದ್ವೀಪವನ್ನೂ ಗುರಿಯಾಗಿಸಬಹುದೆಂಬ ಎಚ್ಚರಿಕೆಯನ್ನು ಮತ್ತೊಮ್ಮೆ ಪುನರುಚ್ಚರಿಸಿದ್ದಾರೆ.

ಮಂಗಳವಾರ ಹಾರ್ಮುಜ್ ಜಲಸಂಧಿಯಲ್ಲಿ ಮೂರು ವ್ಯಾಪಾರ ಹಡಗುಗಳ ಮೇಲೆ ದಾಳಿ ನಡೆದ ನಂತರ ಅಮೆರಿಕ ಮೊದಲ ಹಂತದ ವೈಮಾನಿಕ ದಾಳಿಗಳನ್ನು ನಡೆಸಿತ್ತು. ಇದಕ್ಕೆ ಪ್ರತಿಯಾಗಿ ಇರಾನ್ ಪರ್ಷಿಯನ್ ಗಲ್ಫ್ ಪ್ರದೇಶದಲ್ಲಿರುವ ಅಮೆರಿಕದ ಸೇನಾ ನೆಲೆಗಳನ್ನು ಗುರಿಯಾಗಿಸಿ ದಾಳಿ ನಡೆಸಿತ್ತು. ಇದೀಗ ಎರಡೂ ರಾಷ್ಟ್ರಗಳು ಮತ್ತೊಮ್ಮೆ ನೇರವಾಗಿ ಪರಸ್ಪರ ದಾಳಿ ನಡೆಸಿರುವುದು ಪರಿಸ್ಥಿತಿಯನ್ನು ಮತ್ತಷ್ಟು ಗಂಭೀರಗೊಳಿಸಿದೆ.

ತಾತ್ಕಾಲಿಕ ಕದನ ವಿರಾಮದ ಪ್ರಕಾರ 60 ದಿನಗಳ ಕಾಲ ಯಾವುದೇ ಶುಲ್ಕವಿಲ್ಲದೆ ಹಡಗುಗಳು ಹೋರ್ಮುಜ್ ಜಲಸಂಧಿಯ ಮೂಲಕ ಸಂಚರಿಸಲು ಅವಕಾಶ ನೀಡಲಾಗಿತ್ತು. ಆದರೆ, ಹಡಗುಗಳ ಸಂಚಾರ ಮಾರ್ಗವನ್ನು ನಿಯಂತ್ರಿಸುವ ಅಧಿಕಾರ ಇರಾನ್‌ಗೆ ಇರಬೇಕು ಹಾಗೂ ಮುಂದಿನ ದಿನಗಳಲ್ಲಿ ಹಡಗುಗಳಿಂದ ಸಂಚಾರ ಶುಲ್ಕ ವಸೂಲಿ ಮಾಡಲಾಗುವುದು ಎಂದು ಟೆಹ್ರಾನ್ ಪಟ್ಟು ಹಿಡಿದಿದೆ. ಈ ಬೇಡಿಕೆಯನ್ನು ಅಮೆರಿಕ ಹಾಗೂ ಗಲ್ಫ್ ರಾಷ್ಟ್ರಗಳು ಸ್ಪಷ್ಟವಾಗಿ ತಿರಸ್ಕರಿಸಿವೆ.

ಅಮೆರಿಕದ ಸೆಂಟ್ರಲ್ ಕಮಾಂಡ್ ಮಾಹಿತಿ ಪ್ರಕಾರ, ಇತ್ತೀಚಿನ ಕಾರ್ಯಾಚರಣೆಯಲ್ಲಿ ಇರಾನ್‌ನ ವಾಯು ರಕ್ಷಣಾ ವ್ಯವಸ್ಥೆಗಳು, ರಾಡಾರ್ ಕೇಂದ್ರಗಳು ಹಾಗೂ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಬಳಕೆ ಮಾಡುತ್ತಿದ್ದ 60ಕ್ಕೂ ಹೆಚ್ಚು ವೇಗದ ಸಣ್ಣ ದೋಣಿಗಳನ್ನು ಗುರಿಯಾಗಿಸಿ ದಾಳಿ ನಡೆಸಲಾಗಿದೆ. ಹೋರ್ಮುಜ್ ಜಲಸಂಧಿಯಲ್ಲಿ ಹಡಗುಗಳಿಗೆ ಬೆದರಿಕೆ ಒಡ್ಡಲು ಇದೇ ದೋಣಿಗಳನ್ನು ಹೆಚ್ಚಾಗಿ ಬಳಸಲಾಗುತ್ತಿತ್ತು ಎಂದು ಹೇಳಿದೆ.

ಈ ಮಧ್ಯೆ ತಾತ್ಕಾಲಿಕ ಕದನ ವಿರಾಮ "ಅಂತ್ಯಗೊಂಡಿದೆ" ಎಂದು ಟ್ರಂಪ್ ಹೇಳಿದ್ದರೂ, ಮಾತುಕತೆಗಳು ಮುಂದುವರಿಯಲು ಅವಕಾಶ ನೀಡುವುದಾಗಿ ತಿಳಿಸಿದ್ದಾರೆ. ಆದರೆ, ಅವರು ಮಾತುಕತೆ ನಡೆಸಬಹುದು, ಆದರೆ ಅದು ಸಮಯ ವ್ಯರ್ಥವಾಗಲಿದೆ" ಎಂಬ ಅಭಿಪ್ರಾಯವನ್ನೂ ವ್ಯಕ್ತಪಡಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಇರಾನ್ ಉಪ ವಿದೇಶಾಂಗ ಸಚಿವ ಕಾಜೆಮ್ ಘರೀಬಾಬಾದಿ, ಟ್ರಂಪ್ ಅವರ ಹೇಳಿಕೆ ಅಮೆರಿಕದ ಶಕ್ತಿಯ ಸಂಕೇತವಲ್ಲ, ಬದಲಾಗಿ ಇರಾನ್ ವಿರುದ್ಧದ ಅಮೆರಿಕದ ನೀತಿ ವಿಫಲವಾಗಿದೆ ಎಂಬುದನ್ನು ಒಪ್ಪಿಕೊಂಡಂತಾಗಿದೆ ಎಂದು ತಿರುಗೇಟು ನೀಡಿದ್ದಾರೆ.

ಇರಾನ್ ಸಂಸತ್ ಸ್ಪೀಕರ್ ಮೊಹಮ್ಮದ್ ಬಾಘರ್ ಖಾಲಿಬಾಫ್ ಕೂಡ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿ, "ಬೆದರಿಕೆ ಮತ್ತು ಒತ್ತಡದ ರಾಜಕೀಯದ ಯುಗ ಮುಗಿದಿದೆ. ಇರಾನ್ ಯಾವುದೇ ಒತ್ತಡಕ್ಕೂ ಮಣಿಯುವುದಿಲ್ಲ" ಎಂದು ಹೇಳಿದ್ದಾರೆ.

ಈ ಬೆಳವಣಿಗೆಗಳಿಂದ ಪರ್ಷಿಯನ್ ಗಲ್ಫ್ ಪ್ರದೇಶದಲ್ಲಿ ಮತ್ತೆ ಪೂರ್ಣ ಪ್ರಮಾಣದ ಯುದ್ಧ ಭುಗಿಲೇಳುವ ಆತಂಕ ಹೆಚ್ಚಾಗಿದೆ. ಹೋರ್ಮುಜ್ ಜಲಸಂಧಿಯಲ್ಲಿ ಉದ್ವಿಗ್ನತೆ ಮುಂದುವರಿದರೆ ಜಾಗತಿಕ ತೈಲ ಪೂರೈಕೆ ಸರಪಳಿ, ಇಂಧನ ಬೆಲೆ ಮತ್ತು ವಿಶ್ವ ಆರ್ಥಿಕತೆಯ ಮೇಲೂ ಗಂಭೀರ ಪರಿಣಾಮ ಬೀಳುವ ಸಾಧ್ಯತೆ ಇದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಯುದ್ಧದಲ್ಲಿ ಈಗಾಗಲೇ ಗೆದ್ದಿದ್ದೇವೆ, ಒಪ್ಪಂದಕ್ಕಾಗಿ ಇರಾನ್ ಬೇಡಿಕೊಳ್ಳುತ್ತಿದೆ: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್

ಅಮೆರಿಕ ದಾಳಿಗೆ ಇರಾನ್ ತಿರುಗೇಟು: ಬಹ್ರೇನ್‌ನಲ್ಲಿ ಅಮೆರಿಕಾ ನೌಕಾಪಡೆ ಕೇಂದ್ರದ ಮೇಲೆ ಕ್ಷಿಪಣಿ ದಾಳಿ; ಭಾರೀ ಬೆಂಕಿ, Video ವೈರಲ್

ಕಾರವಾರ: ಅರಬೈಲ್ ಘಾಟ್‌ನಲ್ಲಿ ಲಾರಿ- ಕ್ರೂಸರ್ ಮುಖಾಮುಖಿ ಡಿಕ್ಕಿ; Swiggyಯಲ್ಲಿ ಕೆಲಸ ಮಾಡುತ್ತಿದ್ದ ಧಾರವಾಡದ 6 ಯುವಕರು ಸ್ಥಳದಲ್ಲೇ ಸಾವು

ರಾತ್ರಿ ಇರಾನ್ ಮೇಲೆ ಮತ್ತೆ ದಾಳಿ: ಅಮೆರಿಕ ಅಧ್ಯಕ್ಷ ಟ್ರಂಪ್

ಸ್ವಪಕ್ಷದವರಿಂದಲೇ Congress ಶಾಸಕಿ ನಯನಾ ಮೋಟಮ್ಮ ವಿರುದ್ಧ ಬಿಕೆ ಹರಿಪ್ರಸಾದ್​​ಗೆ ದೂರು