ಅಮೆರಿಕ ವೈಮಾನಿಕ ದಾಳಿ 
ವಿದೇಶ

'ತಪ್ಪು ನಿರ್ಧಾರ ತೆಗೆದುಕೊಂಡಿದ್ದೀರಿ, ಅದರ ಬೆಲೆ ತೆರಬೇಕಾಗುತ್ತದೆ': Hormuz ಬಂದ್ ಮಾಡಿದ ಇರಾನ್, ಅಮೆರಿಕ ಮತ್ತೊಂದು ವೈಮಾನಿಕ ದಾಳಿ

ವಿಶ್ವದ ಅತ್ಯಂತ ಪ್ರಮುಖ ಇಂಧನ ಸಾಗಣೆ ಮಾರ್ಗವಾದ ಹಾರ್ಮುಜ್ ಜಲಸಂಧಿಯನ್ನು "ಮುಂದಿನ ಸೂಚನೆ ಬರುವವರೆಗೆ ಮುಚ್ಚಲಾಗುವುದು" ಎಂದು ಇರಾನ್ ಘೋಷಿಸಿದ ಕೆಲವೇ ಗಂಟೆಗಳಲ್ಲಿ ಅಮೆರಿಕ ಮತ್ತೊಮ್ಮೆ ವೈಮಾನಿಕ ದಾಳಿ ನಡೆಸಿದೆ.

ವಾಷಿಂಗ್ಟನ್: ಹಾರ್ಮುಜ್ ಜಲಸಂಧಿ ಬಂದ್ ಮಾಡಿದ ಇರಾನ್ ವಿರುದ್ಧ ಅಮೆರಿಕ ಮತ್ತೆ ಕೆಂಡಾಮಂಡಲವಾಗಿದ್ದು, 'ತಪ್ಪು ನಿರ್ಧಾರ ತೆಗೆದುಕೊಂಡಿದ್ದೀರಿ, ಅದರ ಬೆಲೆ ತೆರಬೇಕಾಗುತ್ತದೆ' ಎಂದು ಹೇಳಿ ವೈಮಾನಿಕ ದಾಳಿ ಆರಂಭಿಸಿದೆ.

ಹೌದು.. ವಿಶ್ವದ ಅತ್ಯಂತ ಪ್ರಮುಖ ಇಂಧನ ಸಾಗಣೆ ಮಾರ್ಗವಾದ ಹಾರ್ಮುಜ್ ಜಲಸಂಧಿಯನ್ನು "ಮುಂದಿನ ಸೂಚನೆ ಬರುವವರೆಗೆ ಮುಚ್ಚಲಾಗುವುದು" ಎಂದು ಇರಾನ್ ಘೋಷಿಸಿದ ಕೆಲವೇ ಗಂಟೆಗಳಲ್ಲಿ ಅಮೆರಿಕ ಮತ್ತೊಮ್ಮೆ ವೈಮಾನಿಕ ದಾಳಿ ನಡೆಸಿದೆ. ಈ ವಾರದಲ್ಲಿ ಅಮೆರಿಕ ಇರಾನ್ ಮೇಲೆ ನಡೆಸಿದ ಮೂರನೇ ಸುತ್ತಿನ ದಾಳಿ ಇದಾಗಿದೆ.

ಈ ಕುರಿತು ಹೇಳಿಕೆ ಕೂಡ ಬಿಡುಗಡೆ ಮಾಡಿರುವ ಇರಾನ್, 'ಅನುಮೋದಿತ ಸಮುದ್ರ ಮಾರ್ಗವನ್ನು ಬಿಟ್ಟು ಸಾಗುತ್ತಿದ್ದ ಹಡಗಿನ ಮೇಲೆ ಎಚ್ಚರಿಕೆ ಗುಂಡಿನ ದಾಳಿ ನಡೆಸಿದ ಬಳಿಕ ಹೋರ್ಮುಜ್ ಜಲಸಂಧಿಯನ್ನು ಮುಚ್ಚುವ ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿದೆ.

ಇರಾನ್‌ನ ಸರ್ಕಾರಿ ಸುದ್ದಿ ಸಂಸ್ಥೆ IRNA ಪ್ರಕಟಿಸಿದ ಹೇಳಿಕೆಯಲ್ಲಿ, "ಈ ಘಟನೆಯ ಬಳಿಕ ಮಧ್ಯಪ್ರಾಚ್ಯದಲ್ಲಿನ ಅಮೆರಿಕದ ಹಸ್ತಕ್ಷೇಪ ಕೊನೆಗೊಳ್ಳುವವರೆಗೆ ಹಾರ್ಮುಜ್ ಜಲಸಂಧಿಯನ್ನು ಮುಚ್ಚಲಾಗುವುದು. ಅಲ್ಲಿಯವರೆಗೆ ಯಾವುದೇ ಹಡಗುಗಳಿಗೆ ಸಂಚಾರಕ್ಕೆ ಅವಕಾಶ ನೀಡುವುದಿಲ್ಲ" ಎಂದು ರೆವಲ್ಯೂಷನರಿ ಗಾರ್ಡ್ ತಿಳಿಸಿದೆ.

ಅಮೆರಿಕ ವೈಮಾನಿಕ ದಾಳಿ

ಹಾರ್ಮುಜ್ ಬಂದ್ ಕುರಿತ ಇರಾನ್ ಘೋಷಣೆಯ ಬೆನ್ನಲ್ಲೇ ಅಮೆರಿಕ ದಕ್ಷಿಣ ಇರಾನ್‌ನ ಹಲವು ಪ್ರದೇಶಗಳ ಮೇಲೆ ವೈಮಾನಿಕ ದಾಳಿ ನಡೆಸಿತು. ಹಾರ್ಮುಜ್ ಜಲಸಂಧಿಯ ಮೂಲಕ ಸಂಚರಿಸುತ್ತಿದ್ದ ಸೈಪ್ರಸ್ ಧ್ವಜ ಹೊಂದಿದ್ದ ಕಂಟೇನರ್ ಹಡಗಿನ ಮೇಲೆ ಇರಾನ್ ಬಹಿರಂಗ ದಾಳಿ ನಡೆಸಿದೆ ಎಂದು ಅಮೆರಿಕ ಆರೋಪಿಸಿದೆ.

ಅಮೆರಿಕದ ಸೆಂಟ್ರಲ್ ಕಮಾಂಡ್ (CENTCOM) ಪ್ರಕಾರ, ಹಡಗಿನಲ್ಲಿದ್ದ ನಾಗರಿಕ ಸಿಬ್ಬಂದಿಯೊಬ್ಬರು ನಾಪತ್ತೆಯಾಗಿದ್ದು, ಹಡಗಿನಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಹಾಗೂ ಎಂಜಿನ್ ಕೊಠಡಿಗೆ ತೀವ್ರ ಹಾನಿಯಾಗಿರುವುದರಿಂದ ಪ್ರಯಾಣ ಮುಂದುವರಿಸಲು ಸಾಧ್ಯವಾಗಿಲ್ಲ.

ಶನಿವಾರ ರಾತ್ರಿ ವಾಷಿಂಗ್ಟನ್ ಸಮಯ ಸಂಜೆ 7.15ಕ್ಕೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನಿರ್ದೇಶನದಂತೆ ಈ ದಾಳಿಗಳು ಆರಂಭಗೊಂಡಿವೆ ಎಂದು ಸೆಂಟ್‌ಕಾಮ್ ತಿಳಿಸಿದೆ.

ಇರಾನ್‌ನಲ್ಲಿ ಭಾರೀ ಸ್ಫೋಟ

ಅಮೆರಿಕದ ದಾಳಿಯ ಬಳಿಕ ಇರಾನ್‌ನ ಸರ್ಕಾರಿ ಮಾಧ್ಯಮಗಳು ದೇಶದ ದಕ್ಷಿಣ ಕರಾವಳಿ ಭಾಗಗಳಲ್ಲಿ ಹಲವು ಸ್ಫೋಟಗಳು ಸಂಭವಿಸಿರುವುದಾಗಿ ವರದಿ ಮಾಡಿವೆ. ಇಂಧನ ಮತ್ತು ಪೆಟ್ರೋಕೆಮಿಕಲ್ ಕೇಂದ್ರಗಳಾದ ಬುಶೆಹರ್ ಹಾಗೂ ಅಸಲೂಯೆಹ್, ಪ್ರಮುಖ ಬಂದರು ನಗರಗಳಾದ ಬಂದರ್ ಅಬ್ಬಾಸ್, ಪೋರ್ಟ್-ಎ ದಯ್ಯರ್ ಹಾಗೂ ಹೋರ್ಮುಜ್ ಜಲಸಂಧಿ ಸಮೀಪದ ಸಿರಿಕ್ ಪ್ರದೇಶಗಳಲ್ಲೂ ಸ್ಫೋಟಗಳು ಸಂಭವಿಸಿರುವುದಾಗಿ ತಿಳಿಸಲಾಗಿದೆ.

ಕೊಟ್ಟ ಅವಕಾಶ ಕಳೆದುಕೊಂಡಿದ್ದು, ಬೆಲೆ ತೆರಬೇಕಾಗುತ್ತದೆ

ಇದೇ ವೇಳೆ "ವಾಣಿಜ್ಯ ಹಡಗುಗಳ ಮೇಲಿನ ಹಿಂದಿನ ದಾಳಿಗಳ ಬಳಿಕ ಒಪ್ಪಂದದ ನಿಯಮಗಳನ್ನು ಪಾಲಿಸಲು ಇರಾನ್‌ಗೆ ಮತ್ತೊಂದು ಅವಕಾಶ ನೀಡಲಾಗಿತ್ತು. ಆದರೆ ಅದು ಮತ್ತೊಮ್ಮೆ ವಿಫಲವಾಗಿದೆ. ಇದರ ಪರಿಣಾಮವಾಗಿ ನಾಗರಿಕ ಹಡಗುಗಳ ಮೇಲೆ ದಾಳಿ ನಡೆಸುವ ಇರಾನ್‌ನ ಸಾಮರ್ಥ್ಯವನ್ನು ಮತ್ತಷ್ಟು ದುರ್ಬಲಗೊಳಿಸಲು ಅಮೆರಿಕ ಕಠಿಣ ಕ್ರಮ ಕೈಗೊಳ್ಳುತ್ತಿದೆ" ಎಂದು ಸೆಂಟ್‌ಕಾಮ್ ಹೇಳಿದೆ.

ಇರಾನ್ ತಪ್ಪು ಆಯ್ಕೆ

ಇದೇ ವಿಚಾರವಾಗಿ ಮಾತನಾಡಿರುವ ಅಮೆರಿಕದ ರಕ್ಷಣಾ ಸಚಿವ ಪೀಟ್ ಹೆಗ್ಸೆತ್, ಇರಾನ್‌ನ ಕ್ರಮವನ್ನು ತೀವ್ರವಾಗಿ ಖಂಡಿಸಿದ್ದಾರೆ. "ಇರಾನ್ ಅತ್ಯಂತ ಕೆಟ್ಟ ನಿರ್ಧಾರ ತೆಗೆದುಕೊಂಡಿದೆ. ಈಗ ಅದರ ಬೆಲೆಯನ್ನು ತೆರಬೇಕಾಗುತ್ತದೆ" ಎಂದು ಅವರು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪ್ರತಿಕ್ರಿಯಿಸಿದ್ದಾರೆ.

ಹಾರ್ಮುಜ್ ಜಲಸಂಧಿ ನಿಯಂತ್ರಣ ವಿವಾದ ಮತ್ತೆ ಉದ್ವಿಗ್ನತೆಗೆ ಕಾರಣ

ಫೆಬ್ರವರಿ 28ರಂದು ಆರಂಭವಾದ ಮಧ್ಯಪ್ರಾಚ್ಯ ಯುದ್ಧದ ಬಳಿಕ ಅಮೆರಿಕ ಮತ್ತು ಇರಾನ್ ನಡುವೆ ಉದ್ವಿಗ್ನತೆ ಮುಂದುವರಿದಿದೆ. ಜೂನ್ 17ರಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯನ್ 14 ಅಂಶಗಳ ಮಧ್ಯಂತರ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದ್ದರು. 60 ದಿನಗಳೊಳಗೆ ಅಂತಿಮ ಒಪ್ಪಂದಕ್ಕೆ ಬರಲು ಎರಡೂ ರಾಷ್ಟ್ರಗಳು ಒಪ್ಪಿಕೊಂಡಿದ್ದವು. ಆದರೆ ಜುಲೈ 8ರಂದು ಟ್ರಂಪ್, "ಆ ಒಪ್ಪಂದ ಮುಕ್ತಾಯವಾಗಿದೆ" ಎಂದು ಘೋಷಿಸಿದ್ದರು.

ಅಂತಿಮ ಒಪ್ಪಂದಕ್ಕೆ ಅಡ್ಡಿಯಾಗಿರುವ ಪ್ರಮುಖ ವಿಷಯವೇ ಹಾರ್ಮುಜ್ ಜಲಸಂಧಿಯ ನಿಯಂತ್ರಣ. ಯುದ್ಧದ ಸಂದರ್ಭದಲ್ಲಿ ವಾಣಿಜ್ಯ ಹಡಗುಗಳ ಸಂಚಾರವನ್ನು ಸ್ಥಗಿತಗೊಳಿಸಿದ್ದ ಇರಾನ್, ಈಗ ಜಲಸಂಧಿಯ ಸಂಪೂರ್ಣ ನಿಯಂತ್ರಣ ತನ್ನ ಕೈಯಲ್ಲೇ ಇರಬೇಕು ಹಾಗೂ ಹಡಗುಗಳಿಂದ ಶುಲ್ಕ ವಸೂಲಿ ಮಾಡಲಾಗುವುದು ಎಂದು ಘೋಷಿಸಿದೆ.

ವಿಶ್ವದ ತೈಲ ಮತ್ತು ನೈಸರ್ಗಿಕ ಅನಿಲ ರಫ್ತಿನ ಪ್ರಮುಖ ಮಾರ್ಗವಾಗಿರುವ ಹೋರ್ಮುಜ್ ಜಲಸಂಧಿಯ ಕುರಿತ ಈ ಬೆಳವಣಿಗೆ ಜಾಗತಿಕ ಇಂಧನ ಮಾರುಕಟ್ಟೆ ಹಾಗೂ ಮಧ್ಯಪ್ರಾಚ್ಯದ ಭದ್ರತಾ ಪರಿಸ್ಥಿತಿಯ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹಾರ್ಮುಜ್ ಜಲಸಂಧಿ ಬಂದ್: ಅಮೆರಿಕಾ ಭೀಕರ ಪ್ರತಿಕಾರದ ದಾಳಿ, ಮಧ್ಯಪ್ರಾಚ್ಯದಲ್ಲಿ ಮತ್ತೆ ಭುಗಿಲೆದ್ದ ಸಂಘರ್ಷ..!

ಎಸ್ ಜಾನಕಿ ಇನ್ನಿಲ್ಲ: ದಕ್ಷಿಣ ಭಾರತದ ಗಾನ ಕೋಗಿಲೆ ಮೈಸೂರಿನಲ್ಲಿ ನಿಧನ!

5th T20I: ಬಟ್ಲರ್, ಬ್ರೂಕ್ ಅರ್ಭಟ; ಇಂಗ್ಲೆಂಡ್ ವಿರುದ್ಧ ಭಾರತಕ್ಕೆ ಹೀನಾಯ ಸೋಲು, ಸರಣಿ ವೈಟ್‌ವಾಶ್

ಖಿನ್ನತೆಗೆ ಜಾರಿದ್ದೆ, ಗುಣಪಡಿಸಲು ಮಗು ಮಾಡಿಕೊಳ್ಳಿ ಎಂದು ವೈದ್ಯರು ಹೇಳಿದ್ರು; ಹುಡುಗನ ಎಲ್ಲಿ ಹುಡುಕಲಿ?: Endometriosis ಭಯಾನಕತೆ ಬಿಚ್ಚಿಟ್ಟ ಶಮಿತಾ ಶೆಟ್ಟಿ

17 ಭಾಷೆಗಳಲ್ಲಿ 48 ಸಾವಿರ ಹಾಡುಗಳಿಗೆ ಧ್ವನಿ: 2013ರಲ್ಲಿ ಪದ್ಮಭೂಷಣ ತಿರಸ್ಕರಿಸಿದ್ದ ದಿಟ್ಟ ಗಾಯಕಿ ಎಸ್ ಜಾನಕಿ!