ಹಾರ್ಮುಜ್ ಜಲಸಂಧಿ  
ವಿದೇಶ

ಅಮೆರಿಕದೊಂದಿಗಿನ ಒಪ್ಪಂದಕ್ಕೆ Good Bye; 'Hormuz ಮೇಲಿನ ಸಂಪೂರ್ಣ ನಿಯಂತ್ರಣ ನಮ್ಮದೇ' ಎಂದ ಇರಾನ್

ಅಮೆರಿಕ ಒಪ್ಪಂದದ ಷರತ್ತುಗಳನ್ನು ಪದೇ ಪದೇ ಉಲ್ಲಂಘಿಸಿದ್ದು ಮಾತ್ರವಲ್ಲ, ಇರಾನ್ ಬಂದರುಗಳ ಮೇಲೆ ಮತ್ತೆ ನೌಕಾ ನಿರ್ಬಂಧ ಹೇರಿ ಒಪ್ಪಂದವನ್ನೇ ಸಂಪೂರ್ಣವಾಗಿ ಮುರಿದಿದೆ ಎಂದು ಆರೋಪಿಸಿದೆ.

ಟೆಹ್ರಾನ್: ಹಾರ್ಮುಜ್ ಜಲಸಂಧಿಯ ಮೇಲಿನ ಉದ್ವಿಗ್ನತೆ ಮತ್ತಷ್ಟು ತೀವ್ರವಾಗಿರುವ ನಡುವೆಯೇ, ಅಮೆರಿಕದೊಂದಿಗೆ ಕಳೆದ ತಿಂಗಳು ಮಾಡಿಕೊಂಡಿದ್ದ 'ತಾತ್ಕಾಲಿಕ ತಿಳಿವಳಿಕೆ ಒಪ್ಪಂದ (MoU)'ದಿಂದ ಅಧಿಕೃತವಾಗಿ ಹಿಂದೆ ಸರಿಯುತ್ತಿರುವುದಾಗಿ ಇರಾನ್ ಘೋಷಿಸಿದೆ.

ಅಮೆರಿಕ ಒಪ್ಪಂದದ ಷರತ್ತುಗಳನ್ನು ಪದೇ ಪದೇ ಉಲ್ಲಂಘಿಸಿದ್ದು ಮಾತ್ರವಲ್ಲ, ಇರಾನ್ ಬಂದರುಗಳ ಮೇಲೆ ಮತ್ತೆ ನೌಕಾ ನಿರ್ಬಂಧ ಹೇರಿ ಒಪ್ಪಂದವನ್ನೇ ಸಂಪೂರ್ಣವಾಗಿ ಮುರಿದಿದೆ ಎಂದು ಆರೋಪಿಸಿದೆ.

ಇರಾನ್ ವಿದೇಶಾಂಗ ಸಚಿವಾಲಯ ಈ ಕುರಿತು ಹೇಳಿಕ ನೀಡಿದೆ. ಅಮೆರಿಕ ತನ್ನ ಬದ್ಧತೆಯನ್ನು ಪಾಲಿಸದಿರುವ ಹಿನ್ನೆಲೆಯಲ್ಲಿ, ತಾವು ಕೂಡ ಇನ್ನು ಮುಂದೆ ಆ ಒಪ್ಪಂದದ ಯಾವುದೇ ಅಂಶಗಳಿಗೆ ಬದ್ಧರಾಗಿರುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ಅಮೆರಿಕ ಇರಾನ್ ಬಂದರುಗಳ ಮೇಲೆ ಮತ್ತೊಮ್ಮೆ ನೌಕಾ ನಿರ್ಬಂಧ (ಬ್ಲಾಕೇಡ್) ಜಾರಿಗೊಳಿಸಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.

ಹಾರ್ಮುಜ್ ಜಲಸಂಧಿಯಲ್ಲಿ ಸಾಗುತ್ತಿದ್ದ ಹಡಗುಗಳ ಮೇಲೆ ಇರಾನ್ ನಡೆಸಿದ ದಾಳಿಗೆ ಪ್ರತಿಯಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಮೆರಿಕ ಹೇಳಿದೆ.

ಈ ಬೆಳವಣಿಗೆಯಿಂದ ವಿಶ್ವದ ಒಟ್ಟು ತೈಲ ಮತ್ತು ನೈಸರ್ಗಿಕ ಅನಿಲ ಸಾಗಣೆಯ ಸುಮಾರು 20 ಪ್ರತಿಶತ ನಡೆಯುವ ಹಾರ್ಮುಜ್ ಜಲಸಂಧಿ ಮತ್ತೆ ಜಾಗತಿಕ ಉದ್ವಿಗ್ನತೆಯ ಕೇಂದ್ರಬಿಂದುವಾಗಿದೆ.

ಇರಾನ್ ಉಪ ವಿದೇಶಾಂಗ ಸಚಿವ ಕಾಜೆಂ ಘರೀಬಾಬಾದಿ ಮಾತನಾಡಿ, "ಯಾವುದೇ ಬೆಲೆ ತೆತ್ತರೂ ಹಾರ್ಮುಜ್ ಜಲಸಂಧಿಯ ಮೇಲೆ ಇರಾನ್ ಸಂಪೂರ್ಣ ಸಾರ್ವಭೌಮ ನಿಯಂತ್ರಣ ಸಾಧಿಸುತ್ತದೆ. ಸಾಮಾನ್ಯ ಸಂದರ್ಭಗಳಲ್ಲಿ ಒಮನ್ ಜತೆ ನಿಯಂತ್ರಣ ಹಂಚಿಕೊಂಡಿದ್ದರೂ, ಯುದ್ಧದ ಪರಿಸ್ಥಿತಿಯಲ್ಲಿ ರಾಷ್ಟ್ರೀಯ ಭದ್ರತೆಯ ಕಾರಣದಿಂದ ಜಲಸಂಧಿಯ ಸಂಪೂರ್ಣ ನಿಯಂತ್ರಣ ಇರಾನ್ ಕೈಯಲ್ಲಿರಬೇಕು" ಎಂದು ಹೇಳಿದ್ದಾರೆ. "ಅಮೆರಿಕದೊಂದಿಗೆ ಯಾವುದೇ ಹೊಸ ಮಾತುಕತೆ ಆರಂಭಿಸುವ ಪ್ರಶ್ನೆಯೇ ಇಲ್ಲ" ಎಂದೂ ಘೋಷಿಸಿದ್ದಾರೆ.

ಇನ್ನೊಂದೆಡೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್‌ಗೆ ಮತ್ತೊಮ್ಮೆ ಕಠಿಣ ಎಚ್ಚರಿಕೆ ನೀಡಿದ್ದಾರೆ. ಇರಾನ್ ದಾಳಿ ಮುಂದುವರಿಸಿದರೆ ದೇಶದ ವಿದ್ಯುತ್ ಸ್ಥಾವರಗಳು, ಉಪ್ಪುನೀರು ಶುದ್ಧೀಕರಣ ಘಟಕಗಳು ಸೇರಿದಂತೆ ನಾಗರಿಕ ಮೂಲಸೌಕರ್ಯಗಳ ಮೇಲೂ ದಾಳಿ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.

ಇದರ ಜೊತೆಗೆ, ಇರಾನ್‌ನ ಪ್ರಮುಖ ತೈಲ ರಫ್ತು ಕೇಂದ್ರವಾಗಿರುವ 'ಖಾರ್ಗ್ ದ್ವೀಪ (Kharg Island)'ವನ್ನು ಅಮೆರಿಕ ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳುವ ಸಾಧ್ಯತೆಯನ್ನೂ ಟ್ರಂಪ್ ಪ್ರಸ್ತಾಪಿಸಿದ್ದಾರೆ.

"ಅಗತ್ಯವಿದ್ದರೆ ಖಾರ್ಗ್ ದ್ವೀಪವನ್ನು ನಾವು ವಶಪಡಿಸಿಕೊಳ್ಳುತ್ತೇವೆ. ಅದನ್ನು ತಡೆಯಲು ಇರಾನ್‌ನಿಂದ ಏನೂ ಸಾಧ್ಯವಾಗುವುದಿಲ್ಲ" ಎಂದು ಹೇಳಿದ್ದಾರೆ.

ಅಮೆರಿಕ ಮೊದಲ ಬಾರಿಗೆ ಏಪ್ರಿಲ್ ಮಧ್ಯಭಾಗದಲ್ಲಿ ಇರಾನ್ ಬಂದರುಗಳ ಮೇಲೆ ನೌಕಾ ನಿರ್ಬಂಧ ಹೇರಿತ್ತು. ಬಳಿಕ ಜೂನ್ ಮಧ್ಯದಲ್ಲಿ, ಅಣು ಕಾರ್ಯಕ್ರಮ ಸೇರಿದಂತೆ ಹಲವು ವಿಷಯಗಳ ಕುರಿತು 60 ದಿನಗಳ ಮಾತುಕತೆಗೆ ಅವಕಾಶ ನೀಡುವ ಉದ್ದೇಶದಿಂದ ನಿರ್ಬಂಧವನ್ನು ಸಡಿಲಿಸಲಾಗಿತ್ತು. ಆದರೆ, ಮಾತುಕತೆ ಸ್ಥಗಿತಗೊಂಡಿದ್ದು, ಹeರ್ಮುಜ್ ಜಲಸಂಧಿಯಲ್ಲಿ ಸಂಘರ್ಷ ತೀವ್ರಗೊಂಡ ಹಿನ್ನೆಲೆಯಲ್ಲಿ ಮತ್ತೆ ನಿರ್ಬಂಧ ಜಾರಿಗೊಳಿಸಲಾಗಿದೆ.

ನಿರ್ಬಂಧವನ್ನು ಮರುಜಾರಿಗೊಳಿಸುವ ವೇಳೆ ಹeರ್ಮುಜ್ ಜಲಸಂಧಿಯಲ್ಲಿ ಸಂಚರಿಸುವ ಹಡಗುಗಳ ಮೇಲೆ 20 ಪ್ರತಿಶತ ಶುಲ್ಕ ವಿಧಿಸುವುದಾಗಿ ಟ್ರಂಪ್ ಘೋಷಿಸಿದ್ದರು. ಆದರೆ, ಪರ್ಷಿಯನ್ ಕೊಲ್ಲಿ ರಾಷ್ಟ್ರಗಳ ಮಿತ್ರರಾಷ್ಟ್ರಗಳ ಮನವಿಯ ಮೇರೆಗೆ ಆ ನಿರ್ಧಾರವನ್ನು ಕೆಲವೇ ಗಂಟೆಗಳಲ್ಲಿ ಹಿಂಪಡೆದರು.

ನೌಕಾ ನಿರ್ಬಂಧ ಜಾರಿಯಾದ ಕೆಲವೇ ಗಂಟೆಗಳಲ್ಲಿ ಹeರ್ಮುಜ್ ಜಲಸಂಧಿಯಲ್ಲಿ ಗುಂಡಿನ ಚಕಮಕಿ ನಡೆದಿರುವುದಾಗಿ ಇರಾನ್ ಸರ್ಕಾರಿ ಮಾಧ್ಯಮಗಳು ವರದಿ ಮಾಡಿವೆ. ಆದರೆ, ಘಟನೆಯ ಕುರಿತು ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಿಲ್ಲ.

ಅಮೆರಿಕದ ಸೆಂಟ್ರಲ್ ಕಮಾಂಡ್ (CENTCOM) ಮುಖ್ಯಸ್ಥ ಅಡ್ಮಿರಲ್ ಬ್ರಾಡ್ ಕೂಪರ್ ನೀಡಿರುವ ಮಾಹಿತಿ ಪ್ರಕಾರ, ಇರಾನ್ ಬಹರೈನ್, ಕುವೈತ್ ಸೇರಿದಂತೆ ನೆರೆಯ ರಾಷ್ಟ್ರಗಳತ್ತ ಡಜನ್‌ಗಟ್ಟಲೆ ಕ್ಷಿಪಣಿಗಳು ಮತ್ತು ಡ್ರೋನ್‌ಗಳನ್ನು ಉಡಾಯಿಸಿದ್ದು, ಇದರಿಂದ ಎರಡೂ ದೇಶಗಳಲ್ಲಿ ಕ್ಷಿಪಣಿ ದಾಳಿ ಎಚ್ಚರಿಕೆ ಸೈರನ್‌ಗಳು ಮೊಳಗಿದೆ. ಪರಿಸ್ಥಿತಿ ಮತ್ತಷ್ಟು ಉದ್ವಿಗ್ನಗೊಂಡಿದೆ ಎಂದು ತಿಳಿದುಬಂದಿದೆ.

ನಿರ್ಬಂಧ ಮರುಜಾರಿಗೊಳಿಸುವ ಮುನ್ನ ಅಮೆರಿಕ ಇರಾನ್‌ನ ಹಲವು ಗುರಿಗಳ ಮೇಲೆ ಮತ್ತೊಂದು ಸುತ್ತಿನ ವೈಮಾನಿಕ ದಾಳಿಯನ್ನೂ ನಡೆಸಿದೆ. "ನಿರಪರಾಧಿಗಳ ಜೀವಕ್ಕೆ ಅಪಾಯ ಉಂಟುಮಾಡುತ್ತಿರುವ ಇರಾನ್‌ನ ಆಕ್ರಮಣಕಾರಿ ಕ್ರಮಗಳಿಗೆ ಅಮೆರಿಕ ಸೂಕ್ತ ಉತ್ತರ ನೀಡುತ್ತಿದೆ" ಎಂದು ಹೇಳಿದ್ದಾರೆ.

ಪ್ರಸ್ತುತ ಅರಬ್ಬೀ ಸಮುದ್ರದಲ್ಲಿ ಅಮೆರಿಕದ 19 ಯುದ್ಧನೌಕೆಗಳು, ಎರಡು ವಿಮಾನವಾಹಕ ನೌಕೆಗಳು, 1,000ಕ್ಕೂ ಹೆಚ್ಚು ನೌಕಾಪಡೆಯ ಯೋಧರನ್ನು ಹೊತ್ತ ನೌಕೆ ಹಾಗೂ ಮಧ್ಯಪ್ರಾಚ್ಯದಾದ್ಯಂತ ನೂರಾರು ಯುದ್ಧ ವಿಮಾನಗಳು ಕಾರ್ಯಾಚರಣೆಯಲ್ಲಿ ತೊಡಗಿವೆ.

ಫೆಬ್ರವರಿ 28ರಂದು ಅಮೆರಿಕ ಮತ್ತು ಇಸ್ರೇಲ್ ಇರಾನ್ ವಿರುದ್ಧ ಕಾರ್ಯಾಚರಣೆ ಆರಂಭಿಸಿದ ನಂತರ, ಇರಾನ್ ವಾಣಿಜ್ಯ ಹಡಗುಗಳನ್ನು ಗುರಿಯಾಗಿಸಿ ಹಾರ್ಮುಜ್ ಜಲಸಂಧಿಯ ಸಂಚಾರಕ್ಕೆ ತೀವ್ರ ಅಡ್ಡಿ ಉಂಟುಮಾಡಿತ್ತು. ಇದರ ಪರಿಣಾಮ ಜಾಗತಿಕ ತೈಲ, ರಸಗೊಬ್ಬರ ಮತ್ತು ಹಲವು ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿತ್ತು.

ಇತ್ತೀಚೆಗೆ ಒಮನ್ ಸಮೀಪ ಅಮೆರಿಕದ ಮೇಲ್ವಿಚಾರಣೆಯಲ್ಲಿರುವ ಸಾಗಣೆ ಮಾರ್ಗದಲ್ಲೂ ಇರಾನ್ ದಾಳಿ ನಡೆಸಿರುವುದರಿಂದ ಉದ್ವಿಗ್ನತೆ ಮತ್ತಷ್ಟು ಹೆಚ್ಚಿದೆ.

ಅಗತ್ಯವಿದ್ದರೆ ಬಲಪ್ರಯೋಗದ ಮೂಲಕ ಹಾರ್ಮುಜ್ ಜಲಸಂಧಿಯನ್ನು ಪುನಃ ತೆರೆಯುವುದಾಗಿ ಅಮೆರಿಕ ಎಚ್ಚರಿಕೆ ನೀಡಿದ್ದರೂ, ಅದಕ್ಕಾಗಿ ಇನ್ನಷ್ಟು ದೊಡ್ಡ ಪ್ರಮಾಣದ ನೌಕಾಪಡೆ ಹಾಗೂ ಸಾವಿರಾರು ಭೂಸೇನಾ ಯೋಧರನ್ನು ನಿಯೋಜಿಸಬೇಕಾಗಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಚಿವ ಸಂಪುಟ ಕಸರತ್ತು: ರಾಹುಲ್ ಭೇಟಿಗೆ ಡಿಕೆಶಿ-ಸಿದ್ದು ದೆಹಲಿ ಪ್ರಯಾಣ, ಸಚಿವಾಕಾಂಕ್ಷಿಗಳಿಗಿದು ನಿರ್ಣಾಯಕ ವಾರ..!

ರಾಹುಲ್ ಗಾಂಧಿ 'ಭಾರತ್ ಜೋಡೋ ಯಾತ್ರೆ' ಸ್ಮರಣಾರ್ಥ ಹೊಸ ಯೋಜನೆ: 'ಭಾರತ್ ಜೋಡೋ ಯುವ ಸಂಘ' ಸ್ಥಾಪನೆಗೆ ಸರ್ಕಾರ ಗ್ರೀನ್ ಸಿಗ್ನಲ್; ಪ್ರತಿ ಸಂಘಕ್ಕೆ 10 ಲಕ್ಷ ರೂ. ಅನುದಾನ..!

ಏಳು ತಲೆಮಾರುಗಳ ಪಿತೃಗಳಿಗೆ ಮೋಕ್ಷ: ಗಯಾ ಶ್ರಾದ್ಧ ಮಹಿಮೆ ಏನು; ಗಯಾದಲ್ಲೇ ಏಕೆ ಪಿಂಡ ಪ್ರಧಾನ ಮಾಡಬೇಕು?

ಚಿನ್ನಸ್ವಾಮಿ ಕ್ರೀಡಾಂಗಣ ಕಾಲ್ತುಳಿತ ದುರಂತ: ಮೂವರು IPS ಅಧಿಕಾರಿಗಳಿಗೆ ರಾಜ್ಯ ಸರ್ಕಾರ ಕ್ಲೀನ್ ಚಿಟ್..!

ರಾಜ್ಯದ ಬರ ಪರಿಸ್ಥಿತಿ ಪರಿಶೀಲನೆಗೆ ಕೇಂದ್ರ ತಂಡ ಕಳುಹಿಸಿ; ಪ್ರಧಾನಿ ಮೋದಿಗೆ CM ಡಿ.ಕೆ. ಶಿವಕುಮಾರ್ ಪತ್ರ