ಬಾಲಕನ ತಿಂದು ತೇಗಿದ ಮೊಸಳೆ 
ದೇಶ

ಎದೆ ನಡುಗಿಸುವ ಘಟನೆ: 12 ವರ್ಷದ ಬಾಲಕನ ಎಳೆದೊಯ್ದು ತಿಂದು ತೇಗಿದ ಮೊಸಳೆ, Video

ಬಾಲಕನ ಕಿರುಚಾಟ ಕೇಳಿ ಸುತ್ತಮುತ್ತಲಿನ ರೈತರು ಮತ್ತು ಗ್ರಾಮಸ್ಥರು ನದಿಯತ್ತ ಓಡಿ ಬಂದಿದ್ದಾರೆ. ಆದರೆ ಅಷ್ಟರಲ್ಲಿ ಬಾಲಕ ನೀರಿನಲ್ಲಿ ನಾಪತ್ತೆಯಾಗಿದ್ದ.

ಲಖನೌ: ಉತ್ತರ ಪ್ರದೇಶದ ಬಹ್ರೈಚ್ ಜಿಲ್ಲೆಯಲ್ಲಿ ನದಿ ದಡದಲ್ಲಿದ್ದ 12 ವರ್ಷದ ಬಾಲಕನನ್ನು ಬೃಹತ್ ಮೊಸಳೆಯೊಂದು ಎಳೆದೊಯ್ದು ತಿಂದು ತೇಗಿರುವ ವಿಡಿಯೋ ವ್ಯಾಪಕ ವೈರಲ್ ಆಗುತ್ತಿದೆ.

ಮೂಲಗಳ ಪ್ರಕಾರ ಬಹ್ರೈಚ್ ಜಿಲ್ಲೆಯ ಬೌಂಡಿ ಪೊಲೀಸ್ ಠಾಣಾ ವ್ಯಾಪ್ತಿಯ ಟಿಕುರಿ ಗ್ರಾಮದಲ್ಲಿ ಈ ಭೀಕರ ದುರಂತ ನಡೆದಿದ್ದು, ಹೊಲದ ಕೆಲಸ ಮುಗಿಸಿ ನದಿಯಲ್ಲಿ ಕೈಕಾಲು ತೊಳೆಯಲು ಹೋದ 12 ವರ್ಷದ ಬಾಲಕನನ್ನು ಮೊಸಳೆ ಎಳೆದೊಯ್ದು ಕೊಂದು ಹಾಕಿದೆ.

ಮೃತ ಬಾಲಕನ ಹೆಸರು ಸುನಿಲ್ ಸಿಂಗ್ ಎಂದು ಗುರುತಿಸಲಾಗಿದ್ದು, ಎಂದಿನಂತೆ ಪೋಷಕರೊಂದಿಗೆ ಹೊಲದಲ್ಲಿ ಕೆಲಸ ಮುಗಿಸಿದ ಬಳಿಕ ಮೈಮೇಲಿನ ಧೂಳು ತೊಳೆಯಲು ಹತ್ತಿರದ ಘಾಘ್ರಾ ನದಿಯ ದಡಕ್ಕೆ ಹೋಗಿದ್ದ. ನದಿಯ ನೀರಿನಲ್ಲಿ ನಿಂತು ಕೈ ಕಾಲು ತೊಳೆಯುತ್ತಿದ್ದಾಗ, ಅಲ್ಲೇ ಹೊಂಚು ಹಾಕಿದ್ದ ಬೃಹತ್ ಗಾತ್ರದ ಮೊಸಳೆ ಕ್ಷಣಾರ್ಧದಲ್ಲಿ ಬಾಲಕನ ಕಾಲನ್ನು ಕಚ್ಚಿ ಹಿಡಿದು ಆಳವಾದ ನೀರಿನೊಳಗೆ ಎಳೆದೊಯ್ದಿದೆ.

ಬಾಲಕನ ಕಿರುಚಾಟ ಕೇಳಿ ಸುತ್ತಮುತ್ತಲಿನ ರೈತರು ಮತ್ತು ಗ್ರಾಮಸ್ಥರು ನದಿಯತ್ತ ಓಡಿ ಬಂದಿದ್ದಾರೆ. ಆದರೆ ಅಷ್ಟರಲ್ಲಿ ಬಾಲಕ ನೀರಿನಲ್ಲಿ ನಾಪತ್ತೆಯಾಗಿದ್ದ. ಈ ವೇಳೆ ನದಿಯಲ್ಲಿ ಮೊಸಳೆ ಬಾಲಕನ ದೇಹವನ್ನು ತಿನ್ನಲು ಯತ್ನಿಸುತ್ತಿರುವ ದೃಶ್ಯ ಕಂಡಿದೆ.

ತಕ್ಷಣವೇ ಗ್ರಾಮಸ್ಥರು ದೋಣಿ ಮತ್ತು ಬಲೆಗಳ ಸಹಾಯದಿಂದ ಸುಮಾರು 5 ಗಂಟೆಗಳ ಕಾಲ ಹುಡುಕಾಟ ನಡೆಸಿದರು. ಅಂತಿಮವಾಗಿ ಬಾಲಕನ ಮೃತದೇಹ ನದಿಯ ಆಳದಲ್ಲಿ ಪತ್ತೆಯಾಗಿದೆ. ಮಗನ ಶವ ಕಂಡು ಹೆತ್ತವರ ಆಕ್ರಂದನ ಮುಗಿಲು ಮುಟ್ಟಿದೆ.

ಇನ್ನು ಮೃತ ಬಾಲಕ 6ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ. ಕೆಲ ವರ್ಷಗಳ ಹಿಂದೆಯೇ ತಂದೆ-ತಾಯಿಯನ್ನು ಕಳೆದುಕೊಂಡಿದ್ದ ಆತ, ಒಬ್ಬ ಸಹೋದರ ಹಾಗೂ ಇಬ್ಬರು ಸಹೋದರಿಯರನ್ನು ಅಗಲಿದ್ದಾನೆ.

ಅಂದಹಾಗೆ ಘಾಘ್ರಾ ನದಿಯಲ್ಲಿ ಮೊಸಳೆಗಳ ಕಾಟ ಹೆಚ್ಚಾಗಿದೆ ಎಂದು ಆರೋಪಿಸಿದ ಸ್ಥಳೀಯರು, ಈ ಹಿಂದೆ ಮೊಸಳೆಗಳು ಸಾಕಷ್ಟು ಸಾಕು ಪ್ರಾಣಿಗಳನ್ನು ಕಚ್ಚಿಕೊಂಡು ಹೋದ ಘಟನೆಗಳು ವರದಿಯಾಗಿದ್ದವು.

ಇದೀಗ ಮನುಷ್ಯರ ಮೇಲೆ ದಾಳಿ ಮಾಡಲಾರಂಭಿಸಿವೆ. ಈ ಬಗ್ಗೆ ಸಾಕಷ್ಟು ಬಾರಿ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಸೂಕ್ತ ಕ್ರಮಕೈಗೊಂಡಿಲ್ಲ. ಸೂಕ್ತ ಸುರಕ್ಷತಾ ಕ್ರಮ ಕೈಗೊಳ್ಳದ ಅರಣ್ಯ ಇಲಾಖೆಯ ವಿರುದ್ಧ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವೈರಲ್ ವಿಡಿಯೋ ಕುರಿತು ಸ್ಪಷ್ಟನೆ

ಇನ್ನು ಘಟನೆಯ ಕುರಿತು ಪ್ರತಿಕ್ರಿಯಿಸಿದ ಠಾಣಾಧಿಕಾರಿ ಟಿ.ಎನ್. ಮೌರ್ಯ, ಮೊಸಳೆಯ ದಾಳಿ ನಡೆದಿರುವುದನ್ನು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೊ ನೈಜವಾಗಿರುವುದನ್ನು ದೃಢಪಡಿಸಿದರು.

ಅರಣ್ಯಾಧಿಕಾರಿ ಸಾಕಿಬ್ ಅನ್ಸಾರಿ ಅವರ ಪ್ರಕಾರ, ಮೊಸಳೆ ಬಾಲಕನ ದೇಹವನ್ನು ಭಾಗಶಃ ತಿಂದಿದ್ದು, ಬಲಗಾಲು ಹಾಗೂ ಸೊಂಟದ ಕೆಳಭಾಗ ತೀವ್ರವಾಗಿ ಹಾನಿಗೊಳಗಾಗಿತ್ತು ಎಂದು ಹೇಳಿದ್ದಾರೆ.

ಉಪ ವಿಭಾಗಾಧಿಕಾರಿ (ಎಸ್‌ಡಿಎಂ) ಪ್ರಕಾಶ್ ಸಿಂಗ್ ಮಾತನಾಡಿ, ಘಟನೆ ಕುರಿತು ಜಿಲ್ಲಾಡಳಿತಕ್ಕೆ ಮಾಹಿತಿ ನೀಡಲಾಗಿದ್ದು, ಸರ್ಕಾರದ ಪರಿಹಾರ ಯೋಜನೆಯಡಿ ಮೃತ ಬಾಲಕನ ಕುಟುಂಬಕ್ಕೆ 4 ಲಕ್ಷ ರೂ ಪರಿಹಾರಧನ ನೀಡಲಾಗುವುದು ಎಂದು ತಿಳಿಸಿದ್ದಾರೆ.

ಈ ಘಟನೆ ಮತ್ತೊಮ್ಮೆ ಘಾಘರಾ ನದಿ ತೀರದ ಗ್ರಾಮಗಳಲ್ಲಿ ಹೆಚ್ಚುತ್ತಿರುವ ಮನುಷ್ಯ-ಮೊಸಳೆ ಸಂಘರ್ಷದ ಬಗ್ಗೆ ಆತಂಕ ಮೂಡಿಸಿದೆ. ನದಿಯಲ್ಲಿ ಮೊಸಳೆಗಳ ಉಪಸ್ಥಿತಿ ತಿಳಿದಿದ್ದರೂ, ಸ್ಥಳೀಯರು ತಮ್ಮ ದೈನಂದಿನ ಅಗತ್ಯಗಳಿಗಾಗಿ ಇದೇ ನದಿಯನ್ನು ಅವಲಂಬಿಸಬೇಕಾಗಿರುವುದರಿಂದ ಇಂತಹ ದುರ್ಘಟನೆಗಳು ಮರುಕಳಿಸುತ್ತಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನವೀಕೃತಗೊಂಡ ರಾಜ್ಯದ 4 ರೈಲ್ವೆ ನಿಲ್ದಾಣಗಳನ್ನು ವರ್ಚುವಲ್​​ ಮೂಲಕ ಉದ್ಘಾಟಿಸಿದ ಪ್ರಧಾನಿ ಮೋದಿ

Namma Metro: ಮೆಟ್ರೋ ಪ್ರಯಾಣಿಕರೇ ಹುಷಾರ್; ಹುಚ್ಚಾಟ ಆಡಿದ್ರೆ ಬೀಳುತ್ತೆ 5 ರಿಂದ 25 ಸಾವಿರ ರೂ.ವರೆಗೆ ದಂಡ!

ದೀದಿಗೆ ಗಾಯದ ಮೇಲೆ ಬರೆ: ಬಿಜೆಪಿ ಸೇರ್ಪಡೆ ಬೆನ್ನಲ್ಲೇ ಮೂವರು TMC ಮಾಜಿ ಸಂಸದರು ಮತ್ತೆ ರಾಜ್ಯಸಭೆಗೆ ಅವಿರೋಧ ಆಯ್ಕೆ!

ಕರ್ನಾಟಕದಲ್ಲಿ ಮತ್ತೆ ನೈತಿಕ ಪೊಲೀಸ್ ಗಿರಿ: ವ್ಯಕ್ತಿ ಜೊತೆ ಕುಳಿತಿದ್ದ ಮುಸ್ಲಿಂ ಯುವತಿಗೆ ಬುರ್ಖಾ ತೆಗೆಯುವಂತೆ ಒತ್ತಾಯ!

ಪಂಜಾಬ್ ಚುನಾವಣೆ ಹೊಸ್ತಿಲಲ್ಲಿ ಕಾಂಗ್ರೆಸ್ ನಾಯಕ ಮನೀಶ್ ತಿವಾರಿಗೆ ಬಿಜೆಪಿ ಗಾಳ? Video