ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 
ವಿದೇಶ

Iran ಮೇಲಿನ ದಾಳಿಗೆ ದಿಢೀರ್ ಬ್ರೇಕ್: ಸಂಧಾನಕ್ಕೆ ಅಮೆರಿಕಾ ಮುಂದು; ಒಮಾನ್ ಮಧ್ಯಸ್ಥಿಕೆ!

ಹಾರ್ಮುಜ್ ಜಲಸಂಧಿಯನ್ನು ಮರುತೆರೆಯುವ ಕುರಿತು ಮಾತುಕತೆ ನಡೆಸಲು ಒಮಾನ್‌ನ ನಿಯೋಗ ಟೆಹ್ರಾನ್‌ಗೆ ತಲುಪಿದ ಕೆಲವೇ ಗಂಟೆಗಳ ಬಳಿಕ ಟ್ರಂಪ್ ಈ ನಿರ್ಧಾರ ಕೈಗೊಂಡಿದ್ದಾರೆ.

ವಾಷಿಂಗ್ಟನ್: ಇರಾನ್ ವಿರುದ್ಧ 13 ದಿನಗಳಿಂದ ನಿರಂತರವಾಗಿ ನಡೆಯುತ್ತಿದ್ದ ಅಮೆರಿಕದ ವೈಮಾನಿಕ ದಾಳಿಗಳಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಾತ್ಕಾಲಿಕ ವಿರಾಮ ನೀಡಿದ್ದಾರೆ ಎಂದು ವರದಿಯಾಗಿದೆ.

ರಾಜತಾಂತ್ರಿಕ ಮಾತುಕತೆಗೆ ಅವಕಾಶ ಕಲ್ಪಿಸುವ ಉದ್ದೇಶದಿಂದ ಶುಕ್ರವಾರ ಹೊಸ ದಾಳಿಗಳಿಗೆ ಅನುಮತಿ ನೀಡದಂತೆ ಅವರು ಸೇನೆಗೆ ಸೂಚಿಸಿದ್ದಾರೆ ಎಂದು ಆಕ್ಸಿಯೊಸ್ ವರದಿ ಮಾಡಿದೆ.

ವರದಿಯ ಪ್ರಕಾರ, ಹಾರ್ಮುಜ್ ಜಲಸಂಧಿಯನ್ನು ಮರುತೆರೆಯುವ ಕುರಿತು ಮಾತುಕತೆ ನಡೆಸಲು ಒಮಾನ್‌ನ ನಿಯೋಗ ಟೆಹ್ರಾನ್‌ಗೆ ತಲುಪಿದ ಕೆಲವೇ ಗಂಟೆಗಳ ಬಳಿಕ ಟ್ರಂಪ್ ಈ ನಿರ್ಧಾರ ಕೈಗೊಂಡಿದ್ದಾರೆ.

ಪ್ರಾದೇಶಿಕ ಮೂಲಗಳನ್ನು ಉಲ್ಲೇಖಿಸಿರುವ ವರದಿ ಪ್ರಕಾರ, ಒಮಾನ್ ಮತ್ತು ಇರಾನ್ ನಡುವಿನ ಮಾತುಕತೆಯಲ್ಲಿ ಗಮನಾರ್ಹ ಪ್ರಗತಿ ಕಂಡುಬಂದಿದ್ದು, ವಾರಾಂತ್ಯದೊಳಗೆ ಒಪ್ಪಂದ ಅಂತಿಮಗೊಳ್ಳುವ ಸಾಧ್ಯತೆ ಇದೆ. ಬಳಿಕ ಆ ಒಪ್ಪಂದವನ್ನು ಅಂಗೀಕರಿಸಬೇಕೇ ಅಥವಾ ಬೇಡವೇ ಎಂಬ ಅಂತಿಮ ನಿರ್ಧಾರವನ್ನು ಟ್ರಂಪ್ ಕೈಗೊಳ್ಳಲಿದ್ದಾರೆಂದು ತಿಳಿದುಬಂದಿದೆ.

ಇದೇ ವೇಳೆ, ಅಗತ್ಯವಿದ್ದರೆ ಭಾರೀ ಸೇನಾ ಕಾರ್ಯಾಚರಣೆ ನಡೆಸಲು ಅಮೆರಿಕ ಸೇನೆ ಸಿದ್ಧತೆಯನ್ನು ಮುಂದುವರಿಸಿದ್ದು, ತುರ್ತು ಪರಿಸ್ಥಿತಿ ಎದುರಾದರೆ ಕ್ಷಿಪ್ರವಾಗಿ ಕಾರ್ಯಾಚರಣೆ ಆರಂಭಿಸುವಂತೆ ಸನ್ನದ್ಧ ಸ್ಥಿತಿಯಲ್ಲಿದೆ. ಆದರೆ, ಈ ದಿಕ್ಕಿನಲ್ಲಿ ಯಾವುದೇ ಹೊಸ ಆದೇಶವನ್ನು ಟ್ರಂಪ್ ನೀಡಿಲ್ಲ ಎಂದು ವರದಿ ತಿಳಿಸಿದೆ.

ಕಳೆದ ಎರಡು ವಾರಗಳಿಂದ ಪ್ರತಿದಿನ ಮಧ್ಯಾಹ್ನ ಸೇನಾ ಅಧಿಕಾರಿಗಳು ದಾಳಿಯ ಯೋಜನೆಗಳನ್ನು ಟ್ರಂಪ್ ಮುಂದೆ ಮಂಡಿಸುತ್ತಿದ್ದರು. ಅವರು ಅನುಮೋದಿಸಿದ ಕೆಲವೇ ಗಂಟೆಗಳಲ್ಲಿ ವೈಮಾನಿಕ ದಾಳಿಗಳು ಆರಂಭವಾಗುತ್ತಿದ್ದವು. ಆದರೆ, ಶುಕ್ರವಾರವೂ ಇದೇ ರೀತಿಯ ಯೋಜನೆ ಸಲ್ಲಿಕೆಯಾಗಿದ್ದರೂ, ಟ್ರಂಪ್ ಅದಕ್ಕೆ ಅನುಮೋದನೆ ನೀಡದೆ ದಾಳಿ ನಡೆಸಬಾರದು ಎಂದು ಸೂಚಿಸಿದ್ದಾರೆ ಎಂದು ವರದಿ ಹೇಳಿದೆ.

ಈ ಕುರಿತು ಶ್ವೇತಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್, ಅಮೆರಿಕಕ್ಕೆ ಇರಾನ್‌ನ ಸಾಮರ್ಥ್ಯವನ್ನು ಸಂಪೂರ್ಣವಾಗಿ ನಾಶ ಮಾಡುವ ಶಕ್ತಿ ಇದೆ ಎಂದು ಹೇಳಿದರೂ, ಸದ್ಯದ ಪರಿಸ್ಥಿತಿಯಲ್ಲಿ ದಾಳಿಗಿಂತ ಒಪ್ಪಂದದ ಮೂಲಕ ಸಮಸ್ಯೆ ಬಗೆಹರಿಸುವುದೇ ಉತ್ತಮ ತಂತ್ರ ಎಂದು ಅಭಿಪ್ರಾಯಪಟ್ಟರು.

"ನಾವು ಈಗ ಇರಾನ್ ಜೊತೆ ಮಾತುಕತೆ ನಡೆಸುತ್ತಿದ್ದೇವೆ. ದಿನದಿಂದ ದಿನಕ್ಕೆ ಅವರು ಗಂಭೀರವಾಗಿ ಮಾತುಕತೆಗೆ ಬರುತ್ತಿದ್ದಾರೆ. ನಾವು ಯಾವಾಗ ಬೇಕಾದರೂ ಕಾರ್ಯಾಚರಣೆಗೆ ಸಿದ್ಧವಾಗಿದ್ದೇವೆ. ಆದರೆ, ಈಗ ಸಂವಾದಕ್ಕೆ ಆದ್ಯತೆ ನೀಡಿದ್ದೇವೆ," ಎಂದು ಹೇಳಿದರು.

ಅದೇ ದಿನ ಸಂಜೆ ನಡೆದ ವೈಟ್ ಹೌಸ್ ಕರಸ್ಪಾಂಡೆಂಟ್ಸ್ ಅಸೋಸಿಯೇಷನ್ ಔತಣಕೂಟದಲ್ಲಿ ಮಾತನಾಡಿದ ಟ್ರಂಪ್, "ಈ ಕ್ಷಣದಲ್ಲಿ ಇರಾನ್ ಒಪ್ಪಂದಕ್ಕೆ ಸಿದ್ಧವಾಗಿದೆ ಎಂದು ನನಗೆ ಅನಿಸುತ್ತಿಲ್ಲ. ಆದರೆ, ಅವರು ಏನು ಹೇಳಲು ಬಯಸುತ್ತಾರೆ ಎಂಬುದನ್ನು ಕೇಳಲು ನಾನು ಸಿದ್ಧನಿದ್ದೇನೆ ಎಂದು ತಿಳಿಸಿದರು.

ಟ್ರಂಪ್ ಅವರ ಈ ಹಠಾತ್ ನಿರ್ಧಾರ ಅಮೆರಿಕದ ಪ್ರಾದೇಶಿಕ ಮಿತ್ರ ರಾಷ್ಟ್ರಗಳಿಗೂ ಅಚ್ಚರಿ ಮೂಡಿಸಿದೆ. ವರದಿಯ ಪ್ರಕಾರ, ಇಸ್ರೇಲ್ ಭದ್ರತಾ ಸಚಿವ ಸಂಪುಟ ಮತ್ತು ಇಸ್ರೇಲ್ ರಕ್ಷಣಾ ಪಡೆ (ಐಡಿಎಫ್) ಶುಕ್ರವಾರ ಮತ್ತೊಂದು ಸುತ್ತಿನ ಅಮೆರಿಕದ ವೈಮಾನಿಕ ದಾಳಿ ನಡೆಯಲಿದೆ ಎಂದು ನಿರೀಕ್ಷಿಸಿ, ಇರಾನ್ ಪ್ರತಿದಾಳಿಗೆ ಸಜ್ಜಾಗಿತ್ತು.

ಅಮೆರಿಕದ ಅಂತಿಮ ನಿರ್ಧಾರದ ಬಗ್ಗೆ ಸ್ಪಷ್ಟ ಮಾಹಿತಿ ಸಿಗದ ಕಾರಣ ಇಡೀ ದಿನ ಇಸ್ರೇಲ್ ಸೇನೆ ಹೈ ಅಲರ್ಟ್‌ನಲ್ಲೇ ಇತ್ತು. ಬಳಿಕ ಶುಕ್ರವಾರ ರಾತ್ರಿ ಟ್ರಂಪ್ ಹೊಸ ದಾಳಿಗಳಿಗೆ ಅನುಮೋದನೆ ನೀಡಿಲ್ಲ ಎಂಬ ಮಾಹಿತಿಯನ್ನು ಇಸ್ರೇಲ್ ಅಧಿಕಾರಿಗಳಿಗೆ ಅಧಿಕೃತವಾಗಿ ತಿಳಿಸಲಾಯಿತು ಎಂದು ವರದಿ ತಿಳಿಸಿದೆ.

ಇನ್ನೊಂದೆಡೆ, ಇರಾನ್ ಆರೋಗ್ಯ ಸಚಿವಾಲಯದ ವಕ್ತಾರ ಹೊಸೈನ್ ಕರ್ಮನ್‌ಪೂರ್ ಅವರು, "ಇರಾನ್‌ನಲ್ಲಿ ಶಾಂತಿಯುತ ರಾತ್ರಿ ಕಳೆಯಿತು" ಎಂದು ಎಕ್ಸ್ ಸಾಮಾಜಿಕ ಜಾಲತಾಣದಲ್ಲಿ ಬರೆದು ದಾಳಿಗೆ ವಿರಾಮ ಸಿಕ್ಕಿರುವುದನ್ನು ಪರೋಕ್ಷವಾಗಿ ದೃಢಪಡಿಸಿದ್ದಾರೆ.

ಇದೇ ವೇಳೆ, ಕಳೆದ 13 ದಿನಗಳಿಂದ ಪ್ರತಿದಿನ ಹೊಸ ಕಾರ್ಯಾಚರಣೆಗಳ ಬಗ್ಗೆ ಮಾಹಿತಿ ನೀಡುತ್ತಿದ್ದ ಅಮೆರಿಕದ ಸೆಂಟ್ರಲ್ ಕಮಾಂಡ್ (CENTCOM) ಈ ಬಾರಿ ಯಾವುದೇ ಹೊಸ ದಾಳಿಯ ಕುರಿತು ಪ್ರಕಟಣೆ ನೀಡಿಲ್ಲ.

ಆದಾಗ್ಯೂ, ಹಾರ್ಮುಜ್ ಜಲಸಂಧಿ ಸುತ್ತಲಿನ ಉದ್ವಿಗ್ನತೆ ಮುಂದುವರಿದಿದ್ದು, ಪರಿಸ್ಥಿತಿ ಇನ್ನೂ ಸೂಕ್ಷ್ಮವಾಗಿಯೇ ಇದೆ ಎಂದು ವರದಿಗಳು ತಿಳಿಸಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಪಶ್ಚಿಮ ಏಷ್ಯಾದ ಉದ್ವಿಗ್ನತೆ ನಡುವೆ ಮೋದಿ- ಪೆಜೆಶ್ಕಿಯನ್ ಮಾತುಕತೆ: ದೀರ್ಘಕಾಲೀನ, ಪರಸ್ಪರ ಲಾಭದಾಯಕ ಕಾರ್ಯತಂತ್ರಕ್ಕೆ ಒತ್ತು

ಲೋಕೋಪಯೋಗಿ ಇಲಾಖೆಯಲ್ಲಿ 'ಲಂಚ'; ವಿದೇಶಿ ಷೇರು ಹೂಡಿಕೆ ಇತ್ಯಾದಿ; ಸತೀಶ್ ಜಾರಕಿಹೊಳಿ ಮನೆಯಲ್ಲಿ ಸಿಕ್ಕಿದ್ದೇನು? EDಯಿಂದ ಅಧಿಕೃತ ಹೇಳಿಕೆ

ಬದರಿನಾಥದ 'ತಪ್ತ ಕುಂಡ'ದಲ್ಲಿ 108 ಬಾರಿ ಧಾರ್ಮಿಕ ಸ್ನಾನ: ರಾಜಸ್ಥಾನದ ಇಬ್ಬರು ವೃದ್ಧೆಯರು ಸಾವು!

BRICS 2026: ಪುಟಿನ್-ಮೋದಿ ಮಾತುಕತೆ: ಕಪ್ಪು ಸಮುದ್ರದಲ್ಲಿ ಭಾರತೀಯರ ಸುರಕ್ಷತೆಯ ವಿಷಯ ಪ್ರಸ್ತಾಪ ರಷ್ಯಾ ಅಧ್ಯಕ್ಷ ಹೇಳಿದ್ದೇನು?

ಬ್ರಿಕ್ಸ್ ಶೃಂಗಸಭೆ: ಭಾರಿ ಭದ್ರತೆ, ಐಷಾರಾಮಿ ವಿಮಾನದಲ್ಲಿ ನವದೆಹಲಿಗೆ ಆಗಮಿಸಿದ ಪುಟಿನ್! "ಡೂಮ್ಸ್ ಡೇ' ವಿಶೇಷತೆ ಏನು ಗೊತ್ತಾ? Video