ವಾಷಿಂಗ್ಟನ್ : ಜೋರ್ಡಾನ್‌ನಲ್ಲಿರುವ ಅಮೆರಿಕದ ನೆಲೆಗಳ ಮೇಲೆ ಇರಾನ್ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿ ನಡೆಸಿದ ಬಳಿಕ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತೀವ್ರ ಆಕ್ರೋಶಗೊಂಡಿದ್ದು, ಇರಾನ್ ವಿರುದ್ಧ ಕಠಿಣ ಪ್ರತಿಕ್ರಿಯೆ ನೀಡುವುದಾಗಿ ಘೋಷಿಸಿದ್ದಾರೆ.
ಇಸ್ಲಾಮಿಕ್ ಗಣರಾಜ್ಯವನ್ನು ಕೆಟ್ಟದಾಗಿ ಹೊಡೆದು (Beat the f**king sh*t out) ಮಟ್ಟಹಾಕುವುದಾಗಿ ಹೇಳಿದ್ದಾರೆ. ಇರಾನ್ ದಾಳಿಯ ಕುರಿತು 'ಫಾಕ್ಸ್ ನ್ಯೂಸ್'ಗೆ ಪ್ರತಿಕ್ರಿಯಿಸಿದ ಟ್ರಂಪ್, ಇರಾನ್ ಗೆ ದೊಡ್ಡ ಹೊಡೆತ ನೀಡುತ್ತೇವೆ. ಅವರ ಮೇಲೆ ಕೆಟ್ಟದಾಗಿ ದಾಳಿ ನಡೆಸಿ ಮಟ್ಟ ಹಾಕ್ತೀವಿ. ಅವರಿಗೆ ತೀವ್ರ ಪೆಟ್ಟು ಬೀಳಲಿದೆ ಎಂದರು.
ಅಮೆರಿಕದ ನೆಲೆಗಳತ್ತ ಹಾರಿಬಂದ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ತಮ್ಮ ಪಡೆಗಳು ಯಶಸ್ವಿಯಾಗಿ ತಡೆಹಿಡಿದಿವೆ. ಅಲ್ಲದೆ, ದಾಳಿಗೆ ಪ್ರತಿಕ್ರಿಯಿಸಲು ಸೈನಿಕರಿಗೆ ಕೆಲವೇ ನಿಮಿಷಗಳ ಸಮಯವಿತ್ತು ಎಂದು ಅವರು ತಿಳಿಸಿದ್ದಾರೆ.
'ಫಾಕ್ಸ್ ನ್ಯೂಸ್' ವರದಿಯ ಪ್ರಕಾರ, ಆ ಪ್ರದೇಶವನ್ನು ರಕ್ಷಿಸಲು ಅಮೆರಿಕದ ಪಡೆಗಳು ತಕ್ಷಣವೇ ಕಾರ್ಯಾಚರಣೆ ನಡೆಸಿವೆ. ಸಿಬ್ಬಂದಿ ಸಮನ್ವಯದೊಂದಿಗೆ ಕ್ಷಿಪಣಿಗಳು ತಮ್ಮ ಗುರಿಗಳನ್ನು ತಲುಪದಂತೆ ನೋಡಿಕೊಂಡಿದ್ದಾರೆ ಎಂದು ಟ್ರಂಪ್ ಹೇಳಿಕೊಂಡಿದ್ದಾರೆ.