ನ್ಯೂಯಾರ್ಕ್: ದ್ವೇಷದ ಕಾರ್ಖಾನೆಯಿಂದ ಸತ್ಯವನ್ನು ಮುಚ್ಚಿಡಲು ಸಾಧ್ಯವಿಲ್ಲ. ಹತ್ಯಾಕಾಂಡವನ್ನು ಸೇನಾ ಕಾರ್ಯಾಚರಣೆ ಎಂದು ಬಣ್ಣಿಸಿದರೆ ಪಾಪ ಕಳೆಯುವುದಿಲ್ಲ” ಎಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತವು ಪಾಕಿಸ್ತಾನವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ.
ವಿಶ್ವಸಂಸ್ಥೆಯಲ್ಲಿನ ಭಾರತದ ಶಾಶ್ವತ ಪ್ರತಿನಿಧಿ ಹರೀಶ್ ಪರ್ವತನೇನಿ ಮಾತನಾಡಿ, ಅಫ್ಘಾನಿಸ್ತಾನದ ಮೇಲೆ ಪಾಕಿಸ್ತಾನ ನಡೆಸುತ್ತಿರುವ ಸೇನಾ ದಾಳಿಗಳಿಂದ ಅಪಾರ ಪ್ರಮಾಣದ ನಾಗರಿಕ ಸಾವು-ನೋವುಗಳು ಸಂಭವಿಸುತ್ತಿವೆ ಎಂದು ಆರೋಪಿಸಿದರು.
ಇಂತಹ ಕ್ರಮಗಳು ಅಫ್ಘಾನಿಸ್ತಾನದ ಸಾರ್ವಭೌಮತ್ವಕ್ಕೆ ಧಕ್ಕೆ ತರುವುದರ ಜೊತೆಗೆ, ಇಡೀ ಪ್ರದೇಶದ ಶಾಂತಿ ಮತ್ತು ಸ್ಥಿರತೆಗೆ ಅಪಾಯ ಉಂಟುಮಾಡುತ್ತಿವೆ ಎಂದು ಹೇಳಿದರು.
“ಸಾಮೂಹಿಕ ಹತ್ಯೆಯನ್ನು ಸೇನಾ ಕಾರ್ಯಾಚರಣೆ ಎಂದು ಕರೆಯುವುದರಿಂದ ತಪ್ಪಿತಸ್ಥರು ನಿರ್ದೋಷಿಗಳಾಗುವುದಿಲ್ಲ. ನಾಗರಿಕರನ್ನು ಕೊಲ್ಲುವುದು, ಗಾಯಗೊಳಿಸುವುದು ಮತ್ತು ಮಕ್ಕಳನ್ನು ಅನಾಥರನ್ನಾಗಿಸುವುದು ಯಾವುದೇ ರೀತಿಯ ಭಯೋತ್ಪಾದನೆ ವಿರೋಧಿ ಕಾರ್ಯಾಚರಣೆ ಆಗಲು ಸಾಧ್ಯವಿಲ್ಲ” ಎಂದು ಡಿಕಾರಿದರು.
ಇದೇ ವೇಳೆ ಅಫ್ಘಾನಿಸ್ತಾನದಲ್ಲಿನ ವಿಶ್ವಸಂಸ್ಥೆಯ ನೆರವು ಮಿಷನ್ (UNAMA) ವರದಿಯನ್ನು ಉಲ್ಲೇಖಿಸಿದ ಅವರು, ಈ ವರ್ಷದ ಮೊದಲ ಮೂರು ತಿಂಗಳಲ್ಲಿ 372 ನಾಗರಿಕರು ಸಾವನ್ನಪ್ಪಿದ್ದು, 397 ಮಂದಿ ಗಾಯಗೊಂಡಿದ್ದಾರೆ. ಬಹುತೇಕ ಸಾವು-ನೋವುಗಳು ಪವಿತ್ರ ರಂಜಾನ್ ತಿಂಗಳ ಅವಧಿಯಲ್ಲಿ ಸಂಭವಿಸಿರುವುದು ಗಂಭೀರ ವಿಚಾರ. “ಯಾವ ಧರ್ಮ, ಯಾವ ಕಾನೂನು ಅಥವಾ ಯಾವ ನೈತಿಕತೆಯೂ ಇಂತಹ ಕೃತ್ಯಗಳನ್ನು ಸಮರ್ಥಿಸಲು ಸಾಧ್ಯವಿಲ್ಲ” ಎಂದು ಹೇಳಿದರು.
ಬಳಿಕ ಪಾಕಿಸ್ತಾನವನ್ನು ನೇರವಾಗಿ ಟೀಕಿಸಿದ ಅವರು, “ಸಾಮೂಹಿಕ ಹತ್ಯಾಕಾಂಡವನ್ನು ಸೇನಾ ಕಾರ್ಯಾಚರಣೆ ಎಂದು ಬಣ್ಣಿಸಿದರೆ ತಪ್ಪಿತಸ್ಥರು ನಿರ್ದೋಷಿಗಳಾಗುವುದಿಲ್ಲ. ನಾಗರಿಕರನ್ನು ಕೊಲ್ಲುವುದು, ಅಂಗವಿಕಲರನ್ನಾಗಿಸುವುದು ಮತ್ತು ಮಕ್ಕಳನ್ನು ಅನಾಥರನ್ನಾಗಿಸುವುದು ಭಯೋತ್ಪಾದನೆ ವಿರೋಧಿ ಕಾರ್ಯಾಚರಣೆ ಅಲ್ಲ ಎಂದು ಕಿಡಿಕಾರಿದರು.
ಒಂದೆಡೆ ಅಂತರರಾಷ್ಟ್ರೀಯ ಕಾನೂನು ಮತ್ತು ಇಸ್ಲಾಮಿಕ್ ಐಕ್ಯತೆಯ ಬಗ್ಗೆ ಮಾತನಾಡುತ್ತಾ, ಮತ್ತೊಂದೆಡೆ ರಂಜಾನ್ ತಿಂಗಳಲ್ಲೇ ನಿರ್ದಯವಾಗಿ ವಾಯುದಾಳಿ ನಡೆಸುವುದು ಪಾಕಂಡತನದ ಪರಮಾವಧಿಯಾಗಿದೆ ಎಂದು ಅವರು ಹೇಳಿದರು.
ಇದೇ ವೇಳೆ, ಪಾಕಿಸ್ತಾನ ತನ್ನ ದೇಶೀಯ ವೈಫಲ್ಯಗಳಿಗೆ ನೆರೆಯ ರಾಷ್ಟ್ರಗಳನ್ನು ಹೊಣೆ ಮಾಡುವುದು ಹಳೆಯ ಚಾಳಿಯಾಗಿದೆ ಎಂದು ಟೀಕಿಸಿದ ಅವರು, “ಜಗತ್ತನ್ನು ದಾರಿ ತಪ್ಪಿಸುವ ಈ ಪ್ರಯತ್ನ ಯಶಸ್ವಿಯಾಗುವುದಿಲ್ಲ” ಎಂದರು.
ಪಾಕಿಸ್ತಾನ ತನ್ನ ಗಡಿಗಳೊಳಗಿನ ಕೆಲವು ಗುಂಪುಗಳನ್ನು ‘ಫಿತ್ನಾ ಅಲ್ ಹಿಂದೂಸ್ತಾನ್’ ಎಂದು ಅಧಿಕೃತವಾಗಿ ಕರೆಯಲು ನೀಡಿರುವ ನಿರ್ದೇಶನವನ್ನು ಭಾರತ ತೀವ್ರವಾಗಿ ಖಂಡಿಸಿತು.
ಇದು ಧಾರ್ಮಿಕ ಪದಗಳ ಹೆಸರಿನಲ್ಲಿ ನಡೆಸುತ್ತಿರುವ ಅಧಿಕೃತ ಸುಳ್ಳುಪ್ರಚಾರ ಮತ್ತು ತಪ್ಪು ಮಾಹಿತಿಯ ಅಭಿಯಾನ ಎಂದು ಭಾರತ ಆರೋಪಿಸಿತು.
“ಇದು ಪಾಕಿಸ್ತಾನದ ಆಳವಾದ ಆಡಳಿತ ವ್ಯವಸ್ಥೆಯಿಂದ ನಡೆಸಲಾಗುತ್ತಿರುವ ದ್ವೇಷದ ಕಾರ್ಖಾನೆಯ ಫಲವಾಗಿದೆ. ಭಾರತ ವಿರೋಧಿ ಭಾವನೆಯನ್ನು ನಿರಂತರವಾಗಿ ಜೀವಂತವಾಗಿಟ್ಟುಕೊಂಡು ಅಧಿಕಾರ ಮತ್ತು ಸಂಪನ್ಮೂಲಗಳ ಮೇಲಿನ ನಿಯಂತ್ರಣವನ್ನು ಉಳಿಸಿಕೊಳ್ಳುವುದು ಇದರ ಉದ್ದೇಶ ಎಂದು ಪರವಥನೇನಿ ಹೇಳಿದರು.
ಅಲ್ಲದೆ, ಪಾಕಿಸ್ತಾನದ 27ನೇ ಸಂವಿಧಾನ ತಿದ್ದುಪಡಿಯನ್ನೂ ಉಲ್ಲೇಖಿಸಿದ ಅವರು, “ಸೇನೆಯು ಪರೋಕ್ಷವಾಗಿ ಆಡಳಿತದ ಮೇಲಿನ ಹಿಡಿತವನ್ನು ಮತ್ತಷ್ಟು ಬಲಪಡಿಸಿಕೊಂಡಿರುವುದು ಅದರ ಇತ್ತೀಚಿನ ಉದಾಹರಣೆಯಾಗಿದೆ” ಎಂದು ಹೇಳಿದರು.
ಬಳಿಕ ಅಫ್ಘಾನಿಸ್ತಾನದ ವಿರುದ್ಧ ಪಾಕಿಸ್ತಾನ ‘ವ್ಯಾಪಾರ ಮತ್ತು ಸಾರಿಗೆ ಭಯೋತ್ಪಾದನೆ’ ನಡೆಸುತ್ತಿದೆ ಎಂದು ಆರೋಪಿಸಿದ ಅವರು, ಭೂಆವರಿತ ರಾಷ್ಟ್ರವಾಗಿರುವ ಅಫ್ಘಾನಿಸ್ತಾನಕ್ಕೆ ವ್ಯಾಪಾರ ಮಾರ್ಗಗಳನ್ನು ನಿರಾಕರಿಸುವ ಮೂಲಕ ಅಂತರರಾಷ್ಟ್ರೀಯ ಬದ್ಧತೆಗಳನ್ನು ಉಲ್ಲಂಘಿಸಲಾಗುತ್ತಿದೆ ಎಂದು ತಿಳಿಸಿತು.
ಭಾರತವು ಅಫ್ಘಾನಿಸ್ತಾನದ ರಫ್ತುಗಳಿಗೆ ಸುಂಕಮುಕ್ತ ಮಾರುಕಟ್ಟೆ ಪ್ರವೇಶ ನೀಡುತ್ತಿದೆ ಹಾಗೂ ಎರಡೂ ದೇಶಗಳ ನಡುವೆ ವಿಶೇಷ ಏರ್ ಕಾರ್ಗೋ ಕಾರಿಡಾರ್ ಅನ್ನು ಕಾರ್ಯಗತಗೊಳಿಸಿದೆ ಎಂದು ಪರವಥನೇನಿ ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ವಿಶ್ವಸಂಸ್ಥೆಯಲ್ಲಿನ ಪಾಕಿಸ್ತಾನದ ಪ್ರತಿನಿಧಿ ಅಸಿಮ್ ಇಫ್ತಿಕಾರ್ ಅಹ್ಮದ್, ಅಫ್ಘಾನಿಸ್ತಾನದ ಕುರಿತ ವಿಶ್ವಸಂಸ್ಥೆಯ ವರದಿಯ ವಿಶ್ವಾಸಾರ್ಹತೆಯನ್ನೇ ಪ್ರಶ್ನಿಸಿದರು.
ಭಯೋತ್ಪಾದನೆ ವಿರುದ್ಧದ ಕಾರ್ಯಾಚರಣೆಯಲ್ಲಿ ಸಾವನ್ನಪ್ಪಿದವರನ್ನೂ ನಾಗರಿಕ ಸಾವು-ನೋವುಗಳ ಪಟ್ಟಿಯಲ್ಲಿ ಸೇರಿಸಲಾಗಿದೆ ಎಂದು ಅವರು ಆರೋಪಿಸಿದರು.
ಇದಕ್ಕೆ ತಿರುಗೇಟು ನೀಡಿದ ಭಾರತ, ಬಹುಪಕ್ಷೀಯತೆ ಮತ್ತು ವಿಶ್ವಸಂಸ್ಥೆಯ ತತ್ವಗಳನ್ನು ಆಯ್ಕೆಮಾಡಿಕೊಂಡು ಅನುಸರಿಸಲು ಸಾಧ್ಯವಿಲ್ಲ ಎಂದು ಹೇಳಿತು.
ಅಲ್ಲದೆ, ಲಷ್ಕರ್-ಇ-ತೊಯ್ಬಾ, ಜೈಷ್-ಇ-ಮೊಹಮ್ಮದ್, ಇಸ್ಲಾಮಿಕ್ ಸ್ಟೇಟ್ ಆ್ಯಂಡ್ ಅಲ್-ಖೈದಾ ಹಾಗೂ ದಿ ರೆಸಿಸ್ಟ ದಿ ರೆಸಿಸ್ಟನ್ಸ ಫ್ರಂಟ್ ಮುಂತಾದ ಸಂಘಟನೆಗಳ ವಿರುದ್ಧ ಜಾಗತಿಕ ಸಮನ್ವಯದ ಹೋರಾಟ ಅಗತ್ಯವಿದೆ ಎಂದು ಒತ್ತಾಯಿಸಿತು.
ಗಡಿ ದಾಟಿ ನಡೆಯುವ ಭಯೋತ್ಪಾದನೆಗೆ ಅಂತ್ಯ ಹಾಡಬೇಕಾದರೆ ಅಂತರರಾಷ್ಟ್ರೀಯ ಸಮುದಾಯ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕು” ಎಂದು ಕರೆ ನೀಡಿತು.