

ವಿಶ್ವಸಂಸ್ಥೆ: ತನ್ನದೇ ದೇಶದ ನಾಗರಿಕರ ಮೇಲೆ ಬಾಂಬ್ ದಾಳಿ ನಡೆಸುವ ಮತ್ತು ವ್ಯವಸ್ಥಿತ ನರಮೇಧದಲ್ಲಿ ತೊಡಗಿರುವ ದೇಶದಿಂದ ಇಂತಹ ಹೇಯ ಕೃತ್ಯಗಳು ಆಶ್ಚರ್ಯ ತರುವುದಿಲ್ಲ ಎಂದು ಜಾಗತಿಕ ವೇದಿಕೆಯಲ್ಲಿ ಪಾಕಿಸ್ತಾನವನ್ನು ತರಾಟೆಗೆ ತೆಗೆದುಕೊಂಡಿದೆ.
ವಿಶ್ವಸಂಸ್ಥೆಯ ‘ಸಶಸ್ತ್ರ ಸಂಘರ್ಷಗಳಲ್ಲಿ ನಾಗರಿಕರ ರಕ್ಷಣೆ’ ಕುರಿತ ವಾರ್ಷಿಕ ಚರ್ಚೆಯ ಸಂದರ್ಭದಲ್ಲಿ ಪಾಕಿಸ್ತಾನಿ ನಿಯೋಗವು ಜಮ್ಮು ಮತ್ತು ಕಾಶ್ಮೀರ ವಿಷಯವನ್ನು ಪ್ರಸ್ತಾಪಿಸಲು ಯತ್ನಿಸಿತು. ಇದಕ್ಕೆ ಭಾರತದ ಕಾಯಂ ಪ್ರತಿನಿಧಿ ರಾಯಭಾರಿ ಹರೀಶ್ ಪರ್ವತನೇನಿ ಅವರು ತಕ್ಕ ಪ್ರತ್ಯುತ್ತರ ನೀಡಿದರು.
ಚರ್ಚೆಯ ವೇಳೆ ಪಾಕಿಸ್ತಾನದ ವಿಶ್ವಸಂಸ್ಥೆ ಪ್ರತಿನಿಧಿ ಆಸಿಮ್ ಇಫ್ತಿಖಾರ್ ಅಹ್ಮದ್ ಅವರು, ಜಮ್ಮು-ಕಾಶ್ಮೀರ ವಿಚಾರವನ್ನು ಪ್ರಸ್ತಾಪಿಸಿ ಭಾರತದ ವಿರುದ್ಧ ಆರೋಪಗಳನ್ನು ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಭಾರತ, ಪಾಕಿಸ್ತಾನವನ್ನು ನೇರವಾಗಿ ಗುರಿಯಾಗಿಸಿಕೊಂಡು ತೀವ್ರ ಟೀಕೆ ಮಾಡಿದರು.
ಜನಾಂಗ ಹತ್ಯೆಗಳ ಕಳಂಕಿತ ಇತಿಹಾಸ ಹೊಂದಿರುವ ಪಾಕಿಸ್ತಾನ ಭಾರತದ ಆಂತರಿಕ ವಿಚಾರಗಳ ಬಗ್ಗೆ ಮಾತನಾಡುವುದು ಅತ್ಯಂತ ವ್ಯಂಗ್ಯದ ಸಂಗತಿ ಎಂದು ತಿರುಗೇಟು ನೀಡಿದರು.
ಅಫ್ಘಾನಿಸ್ತಾನದಲ್ಲಿ ಪಾಕಿಸ್ತಾನ ಸೇನೆಯ ಗಡಿ ದಾಳಿಗಳ ಪರಿಣಾಮವಾಗಿ ನಾಗರಿಕರು ಭಾರೀ ಪ್ರಮಾಣದಲ್ಲಿ ಸಾವನ್ನಪ್ಪುತ್ತಿರುವುದನ್ನು ಉಲ್ಲೇಖಿಸಿದರು.
ವಿಶ್ವಸಂಸ್ಥೆಯ ಅಫ್ಘಾನಿಸ್ತಾನ ಸಹಾಯ ಮಿಷನ್ (UNAMA) ಅಂದಾಜು ಪ್ರಕಾರ, 2026ರ ಮೊದಲ ಮೂರು ತಿಂಗಳಲ್ಲಿ ನಡೆದ ಗಡಿ ದಾಳಿಗಳಿಂದ ಸುಮಾರು 750 ನಾಗರಿಕರು ಸಾವಿಗೀಡಾಗಿದ್ದಾರೆ ಅಥವಾ ಗಾಯಗೊಂಡಿದ್ದಾರೆ. ಈ ಪೈಕಿ 95 ನಾಗರಿಕ ಹಾನಿ ಘಟನೆಗಳಲ್ಲಿ 94 ಪ್ರಕರಣಗಳಿಗೆ ಪಾಕಿಸ್ತಾನ ಭದ್ರತಾ ಪಡೆಗಳೇ ಕಾರಣವೆಂದು ಯುಎನ್ ವರದಿಗಳನ್ನು ಉಲ್ಲೇಖಿಸಿ ಭಾರತ ಆರೋಪಿಸಿತು.
ಇದೇ ವೇಳೆ ರಂಜಾನ್ ಸಮಯದಲ್ಲಿ ಕಾಬೂಲ್‌ನಲ್ಲಿ ನಡೆದಿದ್ದ ವೈಮಾನಿಕ ದಾಳಿಯನ್ನು ಭಾರತ ಪ್ರಸ್ತಾಪಿಸಿತು.
ಮಾರ್ಚ್ ತಿಂಗಳಲ್ಲಿ ಪಾಕಿಸ್ತಾನವು ‘ಒಮೀದ್ ಅಡಿಕ್ಷನ್ ಟ್ರೀಟ್‌ಮೆಂಟ್ ಆಸ್ಪತ್ರೆ’ ಮೇಲೆ ದಾಳಿ ನಡೆಸಿದ ಪರಿಣಾಮ 269 ನಾಗರಿಕರು ಸಾವನ್ನಪ್ಪಿ, 122 ಮಂದಿ ಗಾಯಗೊಂಡಿದ್ದಾರೆ. ಆಸ್ಪತ್ರೆಯನ್ನು ಯಾವುದೇ ರೀತಿಯಲ್ಲೂ ಸೈನಿಕ ಗುರಿಯೆಂದು ಪರಿಗಣಿಸಲಾಗುವುದಿಲ್ಲ, ಸಂಜೆಯ ತರಾವಿಹ್ ಪ್ರಾರ್ಥನೆಯ ಬಳಿಕ ನಿರಪರಾಧಿಗಳ ಮೇಲೆ ದಾಳಿ ನಡೆಸಿ, ಅಂತರರಾಷ್ಟ್ರೀಯ ಕಾನೂನುಗಳ ಬಗ್ಗೆ ಉಪದೇಶ ನೀಡುವುದು ಪಾಕಂಡತನ ಎಂದು ತೀವ್ರ ವಾಗ್ದಾಳಿ ನಡೆಸಿತು.
ಅಫ್ಘಾನಿಸ್ತಾನದಲ್ಲಿ ಗಡಿ ದಾಳಿಗಳ ಪರಿಣಾಮ 94 ಸಾವಿರಕ್ಕೂ ಹೆಚ್ಚು ಜನರು ಸ್ಥಳಾಂತರಗೊಂಡಿದ್ದಾರೆ ಎಂಬ ವಿಶ್ವಸಂಸ್ಥೆ ಅಂದಾಜನ್ನೂ ಭಾರತ ಮಂಡಿಸಿತು.
ತನ್ನ ದೇಶೀಯ ವೈಫಲ್ಯಗಳನ್ನು ಮರೆಮಾಚಲು ಪಾಕಿಸ್ತಾನ ಹೊರಗಿನ ಸಂಘರ್ಷಗಳನ್ನು ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿದ ಭಾರತ, ಇದು ಹೊಸ ವಿಚಾರವಲ್ಲ ಎಂದೂ ತಿಳಿಸಿತು.
ಈ ಸಂದರ್ಭದಲ್ಲಿ 1971ರ ‘ಆಪರೇಷನ್ ಸರ್ಚ್‌ಲೈಟ್’ ಉದಾಹರಣೆ ನೀಡಿದ ಭಾರತ, ಆಗಿನ ಪೂರ್ವ ಪಾಕಿಸ್ತಾನದಲ್ಲಿ, ಇಂದಿನ ಬಾಂಗ್ಲಾದೇಶದಲ್ಲಿ, ಪಾಕಿಸ್ತಾನ ನಡೆಸಿದ ವ್ಯವಸ್ಥಿತ ಹಿಂಸಾಚಾರವನ್ನು ನೆನಪಿಸಿತು. ಆ ಸಮಯದಲ್ಲಿ ಸಾವಿರಾರು ಜನರನ್ನು ಗುರಿಯಾಗಿಸಿಕೊಂಡು ಹತ್ಯೆಯನ್ನು ನಡೆಸಲಾಗಿತ್ತು ಎಂದು ಭಾರತ ತಿಳಿಸಿತು.
ಗಡಿ ದಾಟಿ ನಡೆಯುತ್ತಿರುವ ಭಯೋತ್ಪಾದನೆ ಕುರಿತೂ ಭಾರತ ಮತ್ತೆ ಆತಂಕ ವ್ಯಕ್ತಪಡಿಸಿತು. ಭಯೋತ್ಪಾದಕ ಸಂಘಟನೆಗಳಿಗೆ ಆಶ್ರಯ ನೀಡುವ ಅಥವಾ ಬೆಂಬಲಿಸುವ ರಾಷ್ಟ್ರಗಳನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೊಣೆಗಾರರನ್ನಾಗಿ ಮಾಡಬೇಕು ಎಂದು ಭಾರತ ಒತ್ತಾಯಿಸಿತು.
“ಯಾವುದೇ ಕಾರಣವೂ ನಾಗರಿಕರ ಮೇಲೆ ಉದ್ದೇಶಪೂರ್ವಕ ದಾಳಿ ನಡೆಸುವುದನ್ನು ಸಮರ್ಥಿಸಲು ಸಾಧ್ಯವಿಲ್ಲ” ಎಂದು ಹೇಳಿತು.
ಅಂತರರಾಷ್ಟ್ರೀಯ ಕಾನೂನಿಗೆ ಅನುಸಾರವಾಗಿ ಸಂಘರ್ಷದ ಸಂದರ್ಭಗಳಲ್ಲಿ ಡ್ರೋನ್‌ಗಳು, ಕೃತಕ ಬುದ್ಧಿಮತ್ತೆ ಮತ್ತು ಸ್ವಾಯತ್ತ ವ್ಯವಸ್ಥೆಗಳ ಬಳಕೆಯನ್ನು ನಿಯಂತ್ರಿಸುವ ಅಗತ್ಯವನ್ನು ಒತ್ತಿ ಹೇಳಿತು.
ಕೇವಲ ಮಾನವೀಯ ನೆರವು ನೀಡುವುದರಿಂದ ನಾಗರಿಕರ ರಕ್ಷಣೆ ಸಾಧ್ಯವಿಲ್ಲ; ರಾಜಕೀಯ ಉದ್ದೇಶಕ್ಕಾಗಿ ನಡೆಯುವ ಹಿಂಸಾಚಾರ ಮತ್ತು ಭಯೋತ್ಪಾದನೆಯನ್ನು ಸಮಗ್ರವಾಗಿ ಎದುರಿಸಬೇಕೆಂದು ವಿಶ್ವಸಂಸ್ಥೆಯಲ್ಲಿ ಆಗ್ರಹಿಸಿತು.
Advertisement