ಜ್ವಾಲಾಮುಖಿ ಕುಳಿಯೊಳಗೆ ಬಿದ್ದ ವ್ಯಕ್ತಿ 
ವಿದೇಶ

ಜ್ವಾಲಾಮುಖಿ ಕುಳಿಗೆ ಬಿದ್ದ 'ಯೆಮೆನ್‌ನ ಸ್ಪೈಡರ್-ಮ್ಯಾನ್': ದುರಂತ ಕ್ಯಾಮೆರಾದಲ್ಲಿ ಸೆರೆ! Video

ಯೆಮೆನ್‌ನ ದಕ್ಷಿಣ ಭಾಗದ ಧಾಲೆ ಪ್ರಾಂತ್ಯದಲ್ಲಿರುವ ಹಾರ್ದಾ ಅಣೆಕಟ್ಟು ಜ್ವಾಲಾಮುಖಿ ಕುಳಿಯ ಕಡಿದಾದ ಗೋಡೆಯನ್ನು ಏರುತ್ತಿದ್ದ ವೇಳೆ ಹಿಡಿತ ತಪ್ಪಿ ಸುಮಾರು 120 ಮೀಟರ್ (393 ಅಡಿ) ಆಳದ ಕುಳಿಯೊಳಗೆ ಬಿದ್ದಿದ್ದಾರೆ.

ಕೈರೋ: "ಯೆಮೆನ್‌ನ ಸ್ಪೈಡರ್-ಮ್ಯಾನ್" ಎಂದು ಖ್ಯಾತಿ ಪಡೆದಿದ್ದ ಸಾಹಸಿ ಪರ್ವತಾರೋಹಕನೊಬ್ಬ, ಯಾವುದೇ ಸುರಕ್ಷತಾ ಉಪಕರಣಗಳಿಲ್ಲದೆ ಜ್ವಾಲಾಮುಖಿಯ ಕುಳಿಯ ಬಂಡೆಗೋಡೆಯನ್ನು ಏರಲು ಯತ್ನಿಸುತ್ತಿದ್ದಾಗ ಕೆಳಗೆ ಬಿದ್ದು ಮೃತಪಟ್ಟಿದ್ದಾನೆ.

30 ವರ್ಷದ ಅಲ್-ಕಾಕಾ ಇಬ್ನ್ ಅಂಟರ್ ಶುಕ್ರವಾರ ಯೆಮೆನ್‌ನ ದಕ್ಷಿಣ ಭಾಗದ ಧಾಲೆ ಪ್ರಾಂತ್ಯದಲ್ಲಿರುವ ಹಾರ್ದಾ ಅಣೆಕಟ್ಟು ಜ್ವಾಲಾಮುಖಿ ಕುಳಿಯ ಕಡಿದಾದ ಗೋಡೆಯನ್ನು ಏರುತ್ತಿದ್ದ ವೇಳೆ ಹಿಡಿತ ತಪ್ಪಿ ಸುಮಾರು 120 ಮೀಟರ್ (393 ಅಡಿ) ಆಳದ ಕುಳಿಯೊಳಗೆ ಬಿದ್ದಿದ್ದಾರೆ ಎಂದು ನಾಗರಿಕ ರಕ್ಷಣಾ ಪ್ರಾಧಿಕಾರ ತಿಳಿಸಿದೆ.

ಅವರ ಬೀಳುತ್ತಿರುವ ಕ್ಷಣವನ್ನು ಸೆರೆಹಿಡಿದಿರುವ ವಿಡಿಯೊವನ್ನು ಪ್ರಾಧಿಕಾರ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದೆ. ಸುಮಾರು 10 ಸೆಕೆಂಡುಗಳ ಆ ವಿಡಿಯೊದಲ್ಲಿ, ಅಂಟರ್ ಯಾವುದೇ ಸುರಕ್ಷತಾ ಸಾಧನವಿಲ್ಲದೆ ಕಲ್ಲಿನ ಬಂಡೆಯನ್ನು ಏರುತ್ತಿರುವುದು ಕಾಣಿಸುತ್ತದೆ. ಅವರು ಏರುತ್ತಿದ್ದ ಬಂಡೆಯ ಮೇಲೆ ಅರೇಬಿಕ್ ಭಾಷೆಯಲ್ಲಿ ಕೆಲವು ಹೆಸರುಗಳನ್ನು ಬಿಳಿ ಬಣ್ಣದಲ್ಲಿ ಬರೆಯಲಾಗಿತ್ತು.

ವಿಡಿಯೋ ವೈರಲ್

ವಿಡಿಯೊದಲ್ಲಿ ಅವರು ಬಲಗೈಯಿಂದ ಬಂಡೆಯನ್ನು ಹಿಡಿದುಕೊಂಡು, ಎಡಗೈಯನ್ನು ಗಾಳಿಯಲ್ಲಿ ಎತ್ತಿರುವುದು ಕಾಣುತ್ತದೆ. ಕೆಲವೇ ಕ್ಷಣಗಳಲ್ಲಿ ಅವರ ಬಲಗೈಯ ಹಿಡಿತ ತಪ್ಪಿ, ಅವರು ಆಳವಾದ ಕುಳಿಯೊಳಗೆ ಬೀಳುತ್ತಾರೆ.

ಅಂಟರ್ ಅವರ ಮೃತದೇಹವನ್ನು ಹೊರತೆಗೆದಲು ಡೈವರ್‌ಗಳು ಹಾಗೂ ಜಲತಜ್ಞರನ್ನು ಒಳಗೊಂಡ ರಕ್ಷಣಾ ತಂಡಗಳನ್ನು ಕಳುಹಿಸಲಾಯಿತು. ಬಳಿಕ ನೀರಿನ ಮೇಲ್ಮೈಯಿಂದ ಸುಮಾರು 30 ಮೀಟರ್ (100 ಅಡಿ) ಆಳದಲ್ಲಿ ಡೈವರ್‌ಗಳು ಅವರ ಮೃತದೇಹವನ್ನು ಪತ್ತೆಹಚ್ಚಿದರು.

ಸುಮಾರು ನಾಲ್ಕು ಗಂಟೆಗಳ ಕಾಲ ನಡೆದ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಅತ್ಯಂತ ಸಂಕೀರ್ಣವಾಗಿತ್ತು ಎಂದು ನಾಗರಿಕ ರಕ್ಷಣಾ ಪ್ರಾಧಿಕಾರ ತಿಳಿಸಿದೆ. ಕುಳಿಯ ಸುತ್ತಲಿನ ಕಡಿದಾದ ಮತ್ತು ಕಲ್ಲುಗಳಿಂದ ಕೂಡಿದ ಪ್ರದೇಶದಿಂದಾಗಿ ರಕ್ಷಣಾ ಕಾರ್ಯಕ್ಕೆ ಅಡಚಣೆ ಉಂಟಾಯಿತು ಎಂದು ಹೇಳಲಾಗಿದೆ.

ವಿಶಿಷ್ಟ ಜ್ವಾಲಾಮುಖಿ ಕುಳಿ

ಹಾರ್ದಾ ಅಣೆಕಟ್ಟು (Haradhat Damt) ಯೆಮೆನ್‌ನ ದಕ್ಷಿಣ ಧಾಲೆ ಪ್ರಾಂತ್ಯದ ದಮ್ತ್ ನಗರದ ಸಮೀಪದಲ್ಲಿರುವ ವಿಶಿಷ್ಟ ಜ್ವಾಲಾಮುಖಿ ಕುಳಿಯಾಗಿದೆ. ಈ ಪ್ರದೇಶದ ಪ್ರಮುಖ ಆಕರ್ಷಣೆಯಾಗಿರುವ ಈ ಕುಳಿಯು ಕಡಿದಾದ ಕಲ್ಲಿನ ಗೋಡೆಗಳನ್ನು ಹೊಂದಿದ್ದು, ಅದರ ತಳಭಾಗದಲ್ಲಿ ಬಿಸಿ ಗಂಧಕಯುಕ್ತ ಸರೋವರವಿದೆ.

ಅಂಟರ್ ಸಾಮಾಜಿಕ ಜಾಲತಾಣಗಳಲ್ಲಿ ಬಹಳ ಜನಪ್ರಿಯರಾಗಿದ್ದರು. ಯೆಮೆನ್‌ನ ಅತ್ಯಂತ ದುರ್ಗಮ ಮತ್ತು ಅಪಾಯಕಾರಿ ಪ್ರದೇಶಗಳಲ್ಲಿ ಅವರು ನಡೆಸಿದ ಸಾಹಸಮಯ ಪರ್ವತಾರೋಹಣಗಳ ವಿಡಿಯೊಗಳನ್ನು ಹಂಚಿಕೊಳ್ಳುತ್ತಿದ್ದರು. ಅವರ ಹಲವಾರು ವಿಡಿಯೊಗಳು ವೈರಲ್ ಆಗಿದ್ದವು. ಒಂದು ವಿಡಿಯೊದಲ್ಲಿ ಅವರು ಯಾವುದೇ ಸುರಕ್ಷತಾ ಸಾಧನವಿಲ್ಲದೆ ಕೇವಲ ತಮ್ಮ ಕೈಗಳ ಸಹಾಯದಿಂದ ಬಂಡೆಯ ಅಂಚಿನಲ್ಲಿ ತೂಗುಹಾಕಿಕೊಂಡು, ಕಾಲುಗಳನ್ನು ಆಳವಾದ ಇಳಿಜಾರಿನತ್ತ ನೇತಾಡಿಸುತ್ತಿರುವ ಅಪಾಯಕಾರಿ ಸಾಹಸವನ್ನು ಪ್ರದರ್ಶಿಸಿದ್ದರು.

ಈ ಘಟನೆಯ ಬಳಿಕ ನಾಗರಿಕ ರಕ್ಷಣಾ ಪ್ರಾಧಿಕಾರವು ಪರ್ವತಾರೋಹಣ ಹಾಗೂ ಸಾಹಸ ಕ್ರೀಡೆಗಳಲ್ಲಿ ತೊಡಗುವವರಿಗೆ ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಮನವಿ ಮಾಡಿದೆ. ಇದೇ ರೀತಿಯ ದುರಂತಗಳನ್ನು ತಪ್ಪಿಸಲು ಸೂಕ್ತ ರಕ್ಷಣಾತ್ಮಕ ಸುರಕ್ಷತಾ ಉಪಕರಣಗಳನ್ನು ಬಳಸುವುದು ಅತ್ಯಗತ್ಯ ಎಂದು ಪ್ರಾಧಿಕಾರ ಎಚ್ಚರಿಕೆ ನೀಡಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಕೋಲಾಹಲ: TMC ಬಂಡಾಯ ಗುಂಪು ಕಾಕೋಲಿ ಘೋಷ್ ನೇತೃತ್ವದಲ್ಲಿ NCP ಜೊತೆ ವಿಲೀನ!

Women's T20 World Cup 2026: ಪ್ರೇಕ್ಷಕರ ಸಂಖ್ಯೆಯಲ್ಲೂ ಐತಿಹಾಸಿಕ ದಾಖಲೆ ಬರೆದ India vs Pakistan ಪಂದ್ಯ!

ಉಡುಪಿ: ಸಿಎಂ ವಿಜಯ್ ಬೆನ್ನಲ್ಲೇ ಕೊಲ್ಲೂರು ಮೂಕಾಂಬಿಕಾ ದೇಗುಲಕ್ಕೆ ಮುಖೇಶ್ ಅಂಬಾನಿ ಪುತ್ರ ಅನಂತ್ ಭೇಟಿ

Women's T20 World Cup 2026: ಇತಿಹಾಸ ಬರೆದ Deepti Sharma; ಪಾಕಿಸ್ತಾನ ವಿರುದ್ಧ ಭಾರತಕ್ಕೆ 64 ರನ್ ಭರ್ಜರಿ ಜಯ

ಡೌಟೇ ಬೇಡ.. ವಿರಾಟ್ ಕೊಹ್ಲಿ, ರೋಹಿತ್ ಶರ್ಮಾಗೆ Vaibhav Sooryavanshi ಯಿಂದಲೇ ಕಂಟಕ; ಇಂಗ್ಲೆಂಡ್ ಮಾಜಿ ಸ್ಟಾರ್ ಆಟಗಾರ

SCROLL FOR NEXT