ವಾಷಿಂಗ್ಟನ್: ಮಧ್ಯಪ್ರಾಚ್ಯ ಸಂಘರ್ಷಕ್ಕೆ ಸಂಬಂಧಿಸಿದಂತೆ ಇರಾನ್ ಜೊತೆ ಶಾಂತಿ ಒಪ್ಪಂದ ಮಾಡಿಕೊಂಡಿರುವ ಅಮೆರಿಕ ಇದೀಗ ಇರಾನ್ ಗೆ ನೇರವಾಗಿಯೇ ಎಚ್ಚರಿಕೆ ನೀಡಿದೆ.
ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಗುರುವಾರ ಇರಾನ್‌ಗೆ ಕಠಿಣ ಎಚ್ಚರಿಕೆ ನೀಡಿದ್ದು, ಡಿಜಿಟಲ್ ಸಹಿಯೊಂದಿಗೆ ಮಾಡಿಕೊಂಡಿರುವ ತಿಳಿವಳಿಕಾ ಒಪ್ಪಂದದ (MoU) ಷರತ್ತುಗಳನ್ನು ಇರಾನ್ ಸಂಪೂರ್ಣವಾಗಿ ಪಾಲಿಸಿ ತನ್ನ ವರ್ತನೆಯಲ್ಲಿ ಬದಲಾವಣೆ ತರದಿದ್ದರೆ, ಸ್ಥಗಿತಗೊಳಿಸಲಾದ ಆಸ್ತಿಗಳನ್ನು ಒಳಗೊಂಡಂತೆ ಯಾವುದೇ ಪ್ರಯೋಜನಗಳನ್ನು ಪಡೆಯಲು ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
ಶ್ವೇತಭವನದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ವ್ಯಾನ್ಸ್, 'ಶಾಂತಿ ಒಪ್ಪಂದದ ಷರತ್ತುಗಳನ್ನು ಪಾಲಿಸಿದರೆ ಇರಾನ್‌ಗೆ ಮಧ್ಯಪ್ರಾಚ್ಯದಲ್ಲಿ "ಪರಿವರ್ತನಾತ್ಮಕ ಸಂಬಂಧ" ರೂಪುಗೊಳ್ಳಲಿದೆ ಎಂದು ಹೇಳಿದರು. ಅಲ್ಲದೆ ಇದನ್ನು ಅಮೆರಿಕಕ್ಕೆ "ಎಲ್ಲರಿಗೂ ಲಾಭದಾಯಕ (ವಿನ್-ವಿನ್) ಪರಿಸ್ಥಿತಿ" ಎಂದು ಬಣ್ಣಿಸಿದರು.
"ಅಮೆರಿಕ ಸಂಯುಕ್ತ ಸಂಸ್ಥಾನಕ್ಕೆ ಇದು ನಿಜಕ್ಕೂ ಎಲ್ಲರಿಗೂ ಲಾಭದಾಯಕ ಪರಿಸ್ಥಿತಿಯಾಗಿದೆ. ಇರಾನ್ ತನ್ನ ವರ್ತನೆಯನ್ನು ಬದಲಿಸಿಕೊಂಡರೆ, ಅದು ಮಧ್ಯಪ್ರಾಚ್ಯದೊಂದಿಗೆ ಪರಿವರ್ತನಾತ್ಮಕ ಸಂಬಂಧವನ್ನು ಹೊಂದಲಿದೆ. ಮಧ್ಯಪ್ರಾಚ್ಯವೂ ಇರಾನ್ ಜನರೊಂದಿಗೆ ಹೊಸ ರೀತಿಯ ಸಂಬಂಧವನ್ನು ಬೆಳೆಸಲಿದೆ. ಇದು ಅಮೆರಿಕದ ಜನರಿಗೆ ಹಾಗೂ ಅಮೆರಿಕ ಅಧ್ಯಕ್ಷರಿಗೆ ಜಯವಾಗಿದೆ," ಎಂದು ವ್ಯಾನ್ಸ್ ಹೇಳಿದರು.
ಇರಾನ್ ಸೇನಾ ಸಾಮರ್ಥ್ಯ ನಾಶ
ಸಂಘರ್ಷದ ಪರಿಣಾಮವಾಗಿ ಇರಾನ್‌ನ ಸೇನಾ ಸಾಮರ್ಥ್ಯ ಹಾಗೂ ಪರಮಾಣು ಕಾರ್ಯಕ್ರಮ ಬಹುತೇಕ ನಾಶವಾಗಿದೆ ಎಂದು ಪ್ರತಿಪಾದಿಸಿದ ವ್ಯಾನ್ಸ್, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ಅನ್ನು "ಅತ್ಯಂತ ದುರ್ಬಲ ಸ್ಥಿತಿಗೆ" ತಳ್ಳಿದ್ದು, ಇದು ತನ್ನ ವರ್ತನೆಯನ್ನು ಬದಲಿಸಿಕೊಳ್ಳಲು ಇರಾನ್‌ಗೆ ಒಂದು ಅವಕಾಶವಾಗಿದೆ ಎಂದು ಹೇಳಿದರು.
"ಒಪ್ಪಂದದ ಬಗ್ಗೆ ಅನುಮಾನ ವ್ಯಕ್ತಪಡಿಸುವವರು, 'ಇರಾನಿಯರು ತಮ್ಮ ವರ್ತನೆಯನ್ನು ಎಂದಿಗೂ ಬದಲಿಸಿಕೊಳ್ಳುವುದಿಲ್ಲ' ಎಂದು ಹೇಳುವುದನ್ನು ನಾನು ಕೇಳಿದ್ದೇನೆ. ಅದು ನಿಜವಾಗಿದ್ದರೆ, ಅವರು ಒಪ್ಪಂದದ ಯಾವುದೇ ಪ್ರಯೋಜನವನ್ನು ಪಡೆಯುವುದಿಲ್ಲ. ಆದರೆ ಪ್ರಯತ್ನಿಸುವುದು ಮೌಲ್ಯಯುತವಲ್ಲವೇ? ಅಮೆರಿಕ ಅಧ್ಯಕ್ಷರು ಇರಾನ್ ಅನ್ನು ತಳ್ಳಿರುವ ಈ ಅತ್ಯಂತ ದುರ್ಬಲ ಸ್ಥಿತಿಯು, ಅವರ ವರ್ತನೆಯಲ್ಲಿ ಬದಲಾವಣೆ ತರಲು ಪ್ರೇರೇಪಿಸುತ್ತದೆಯೇ ಎಂಬುದನ್ನು ಪರೀಕ್ಷಿಸುವುದು ತಪ್ಪೇನು?" ಎಂದು ವ್ಯಾನ್ಸ್ ಪ್ರಶ್ನಿಸಿದರು.