ದಕ್ಷಿಣ ಲೆಬನಾನ್‌ನಲ್ಲಿ ಇಸ್ರೇಲಿ ಮಿಲಿಟರಿ ದಾಳಿಯ ನಂತರ ಬ್ಯೂಫೋರ್ಟ್ ಕ್ಯಾಸಲ್ ಬಳಿಯ ಪ್ರದೇಶದಲ್ಲಿ ದಟ್ಟ ಹೊಗೆ ಕಾಣಿಸಿಕೊಂಡಿರುವುದು. 
ವಿದೇಶ

ಕದನ ವಿರಾಮ ಒಪ್ಪಂದವಾದ 24 ಗಂಟೆಗಳಲ್ಲೇ ಲೆಬನಾನ್ ಮೇಲೆ ಇಸ್ರೇಲ್ ದಾಳಿ; ಐವರ ಸಾವು; ಮಧ್ಯಪ್ರಾಚ್ಯದಲ್ಲಿ ಮತ್ತೆ ಉದ್ವಿಗ್ನತೆ

ಲೆಬನಾನ್‌ನ ರಾಷ್ಟ್ರೀಯ ಸುದ್ದಿ ಸಂಸ್ಥೆ (NNA) ಪ್ರಕಾರ, ಶನಿವಾರ ಮುಂಜಾನೆ ದಕ್ಷಿಣ ಲೆಬನಾನ್‌ನ ವಿವಿಧ ಪ್ರದೇಶಗಳ ಮೇಲೆ ಇಸ್ರೇಲ್ 12ಕ್ಕೂ ಹೆಚ್ಚು ವೈಮಾನಿಕ ದಾಳಿಗಳನ್ನು ನಡೆಸಿದೆ ಎಂದು ತಿಳಿದುಬಂದಿದೆ.

ಲೆಬನಾನ್: ಇಸ್ರೇಲ್ ಮತ್ತು ಹಿಜ್ಬುಲ್ಲಾ ನಡುವೆ ಕದನ ವಿರಾಮ ಜಾರಿಯಾದ 24 ಗಂಟೆಗಳಲ್ಲೇ ಲೆಬನಾನ್‌ನಲ್ಲಿ ಮತ್ತೆ ರಕ್ತಪಾತ ಮುಂದುವರಿದಿದೆ. ಇಸ್ರೇಲ್ ನಡೆಸಿದ ಸರಣಿ ವೈಮಾನಿಕ ದಾಳಿಗಳಲ್ಲಿ ಐವರು ಸಾವನ್ನಪ್ಪಿದ್ದು, ಇದರ ಬೆನ್ನಲ್ಲೇ ಮಧ್ಯಪ್ರಾಚ್ಯದಲ್ಲಿ ಪರಿಸ್ಥಿತಿ ಮತ್ತೆ ಉದ್ವಿಗ್ನಗೊಂಡಿದೆ.

ಲೆಬನಾನ್‌ನ ರಾಷ್ಟ್ರೀಯ ಸುದ್ದಿ ಸಂಸ್ಥೆ (NNA) ಪ್ರಕಾರ, ಶನಿವಾರ ಮುಂಜಾನೆ ದಕ್ಷಿಣ ಲೆಬನಾನ್‌ನ ವಿವಿಧ ಪ್ರದೇಶಗಳ ಮೇಲೆ ಇಸ್ರೇಲ್ 12ಕ್ಕೂ ಹೆಚ್ಚು ವೈಮಾನಿಕ ದಾಳಿಗಳನ್ನು ನಡೆಸಿದೆ ಎಂದು ತಿಳಿದುಬಂದಿದೆ.

ಇತ್ತೀಚಿನ ದಿನಗಳಲ್ಲಿ ಸಂಘರ್ಷದ ಕೇಂದ್ರಬಿಂದುವಾಗಿದ್ದ ನಬಾತಿಯೆ ಪ್ರದೇಶ ಮತ್ತು ಸುತ್ತಮುತ್ತಲಿನ ಭಾಗಗಳು ಪ್ರಮುಖವಾಗಿ ಗುರಿಯಾಗಿವೆ ಎಂದು ವರದಿಗಳು ತಿಳಿಸಿವೆ.

ನಬಾತಿಯೆ ನಗರ ಮತ್ತು ಅದರ ಹೊರವಲಯಗಳ ಮೇಲೆ ಇಸ್ರೇಲ್ ಫಿರಂಗಿ ದಾಳಿಯನ್ನೂ ನಡೆಸಿದೆ ಎಂದು ವರದಿಯಾಗಿದೆ.

ಅರಬ್ ಸಲಿಮ್ ಪಟ್ಟಣದಲ್ಲಿ ನಡೆದ ವೈಮಾನಿಕ ದಾಳಿಯಲ್ಲಿ ಮೂವರು ಸಾವನ್ನಪ್ಪಿದ್ದರೆ, ಡೀರ್ ಜಹ್ರಾನಿಯಲ್ಲಿ ಒಬ್ಬರು ಮೃತಪಟ್ಟಿದ್ದಾರೆ. ಜೊತೆಗೆ, ಡ್ವೇರ್ ಪಟ್ಟಣದ ಪ್ರವೇಶದ್ವಾರದಲ್ಲಿ ಬೈಕ್ ಮೇಲೆ ಸಾಗುತ್ತಿದ್ದ ವ್ಯಕ್ತಿಯ ಮೇಲೆ ಇಸ್ರೇಲಿ ಡ್ರೋನ್ ದಾಳಿ ನಡೆಸಿದ್ದು, ಮತ್ತೊಬ್ಬರು ಮೃತಪಟ್ಟಿದ್ದಾರೆಂದು ತಿಳಿಸಿವೆ.

ಶುಕ್ರವಾರ ಅಮೆರಿಕ ಮತ್ತು ಕತಾರ್ ಮಧ್ಯಸ್ಥಿಕೆಯಲ್ಲಿ ಇಸ್ರೇಲ್ ಹಾಗೂ ಇರಾನ್ ಬೆಂಬಲಿತ ಹಿಜ್ಬುಲ್ಲಾ ನಡುವೆ ತಕ್ಷಣದ ಕದನ ವಿರಾಮ ಒಪ್ಪಂದಕ್ಕೆ ಬರಲಾಗಿತ್ತು.

ಅಮೆರಿಕ ಹಾಗೂ ಕತಾರ್ ಮಧ್ಯಸ್ಥಿಕೆಯಲ್ಲಿ ನಡೆದ ಮಾತುಕತೆಯ ಬಳಿಕ ಈ ಒಪ್ಪಂದ ಸಾಧ್ಯವಾಗಿದೆ ಎಂದು ಅಮೆರಿಕದ ಅಧಿಕಾರಿಗಳು ತಿಳಿಸಿದ್ದರು.

ಅಮೆರಿಕದಲ್ಲಿನ ಇಸ್ರೇಲ್ ರಾಯಭಾರಿಯೂ, ಹಿಜ್ಬುಲ್ಲಾ ಕದನ ವಿರಾಮವನ್ನು ಗೌರವಿಸಿದರೆ ಇಸ್ರೇಲ್ ಕೂಡ ಅದನ್ನು ಪಾಲಿಸುತ್ತದೆ ಎಂದು ಹೇಳಿದ್ದರು. ಆದರ, ಹಿಂದಿನ ಕದನ ವಿರಾಮಗಳಂತೆ ಈ ಬಾರಿಯೂ ದಾಳಿಗಳು ನಿಲ್ಲದಿರುವುದು ಪರಿಸ್ಥಿತಿಯನ್ನು ಮತ್ತಷ್ಟು ಸಂಕೀರ್ಣಗೊಳಿಸಿದೆ.

ಇದಕ್ಕೂ ಮುನ್ನ ಶುಕ್ರವಾರ ಲೆಬನಾನ್ ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ದಕ್ಷಿಣ ಮತ್ತು ಪೂರ್ವ ಲೆಬನಾನ್‌ನಲ್ಲಿ ಇಸ್ರೇಲ್ ನಡೆಸಿದ ವೈಮಾನಿಕ ದಾಳಿ ಹಾಗೂ ಬಾಂಬ್ ದಾಳಿಗಳಲ್ಲಿ 47 ಮಂದಿ ಸಾವನ್ನಪ್ಪಿದ್ದರು ಎಂದು ತಿಳಿಸಿತ್ತು.

ಅಮೆರಿಕ ಮತ್ತು ಇರಾನ್ ನಡುವೆ ಮಧ್ಯಪ್ರಾಚ್ಯ ಯುದ್ಧವನ್ನು ತಡೆಯಲು ಒಪ್ಪಂದವಾದ ಬಳಿಕ ಕಂಡುಬಂದ ಅತಿದೊಡ್ಡ ಹಿಂಸಾಚಾರ ಇದಾಗಿದೆ ಎನ್ನಲಾಗಿತ್ತು.

ಬಳಿಕ ಶಾಂತಿ ಒಪ್ಪಂದವಾಗಿದ್ದು, ಒಪ್ಪಂದದ ಪ್ರಕಾರ ಲೆಬನಾನ್‌ನಲ್ಲಿ ಇಸ್ರೇಲ್-ಹಿಜ್ಬುಲ್ಲಾ ನಡುವಿನ ಹೋರಾಟವೂ ನಿಲ್ಲಬೇಕಿತ್ತು. ಆದರೆ, ಪರಿಸ್ಥಿತಿ ಇನ್ನೂ ನಿಯಂತ್ರಣಕ್ಕೆ ಬಂದಿಲ್ಲ.

ಇಸ್ರೇಲ್ ಸೇನೆ ಶುಕ್ರವಾರ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, ಹಿಜ್ಬುಲ್ಲಾ ವಿರುದ್ಧ 150ಕ್ಕೂ ಹೆಚ್ಚು ದಾಳಿಗಳನ್ನು ನಡೆಸಲಾಗಿದ್ದು, "ಹಲವಾರು ಉಗ್ರರನ್ನು" ಹತ್ಯೆ ಮಾಡಲಾಗಿದೆ ಎಂದು ತಿಳಿಸಿದೆ. ಜೊತೆಗೆ, ಹಿಜ್ಬುಲ್ಲಾ ದಾಳಿಯಲ್ಲಿ ತಮ್ಮ ನಾಲ್ವರು ಸೈನಿಕರು ಮೃತಪಟ್ಟಿದ್ದಾರೆ ಎಂದು ಹೇಳಿದೆ.

ಇದೇ ವೇಳೆ, ಲೆಬನಾನ್ ಅಧ್ಯಕ್ಷ ಜೋಸೆಫ್ ಔನ್ ಅವರು ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮಾರ್ಕೋ ರೂಬಿಯೊ ಅವರೊಂದಿಗೆ ಮಾತನಾಡಿ, ಇಸ್ರೇಲ್‌ನೊಂದಿಗೆ ಶಾಂತಿ ಮಾತುಕತೆ ಮುಂದುವರಿಯಬೇಕಾದರೆ ಸಮಗ್ರ ಕದನ ವಿರಾಮ ಅಗತ್ಯ ಎಂದು ಒತ್ತಾಯಿಸಿದ್ದಾರೆ.

ಅಮೆರಿಕದ ಒತ್ತಡದ ಮೇರೆಗೆ ಲೆಬನಾನ್ ಮತ್ತು ಇಸ್ರೇಲ್ ಏಪ್ರಿಲ್‌ನಿಂದಲೇ ನೇರ ಮಾತುಕತೆ ನಡೆಸುತ್ತಿದ್ದು, ಮುಂದಿನ ಸುತ್ತಿನ ಮಾತುಕತೆ ಮಂಗಳವಾರ ಆರಂಭವಾಗಲಿದೆ.

ಇದರ ನಡುವೆಯೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೇರಿದಂತೆ ಹಲವು ಅಮೆರಿಕ ಅಧಿಕಾರಿಗಳು ಲೆಬನಾನ್‌ನಲ್ಲಿ ಇಸ್ರೇಲ್ ನಡೆಸುತ್ತಿರುವ ಸೇನಾ ಕಾರ್ಯಾಚರಣೆಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆದರೆ, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, "ಅಗತ್ಯವಿರುವವರೆಗೂ ದಕ್ಷಿಣ ಲೆಬನಾನ್‌ನಲ್ಲಿ ನಮ್ಮ ಪಡೆಗಳು ಮುಂದುವರಿಯುತ್ತವೆ" ಎಂದು ಸ್ಪಷ್ಟಪಡಿಸಿದ್ದಾರೆ.

ಮಾರ್ಚ್ ಆರಂಭದಲ್ಲಿ ಅಮೆರಿಕ-ಇಸ್ರೇಲ್ ದಾಳಿಯಲ್ಲಿ ಇರಾನ್‌ನ ಪರಮೋಚ್ಚ ನಾಯಕ ಹತ್ಯೆಯಾದ ಬಳಿಕ ಪ್ರತೀಕಾರವಾಗಿ ಹಿಜ್ಬುಲ್ಲಾ ಇಸ್ರೇಲ್ ಮೇಲೆ ರಾಕೆಟ್ ದಾಳಿ ನಡೆಸಿತ್ತು. ಅದಕ್ಕೆ ಪ್ರತಿಯಾಗಿ ಇಸ್ರೇಲ್ ಭಾರೀ ವೈಮಾನಿಕ ದಾಳಿ ಹಾಗೂ ಭೂ ಕಾರ್ಯಾಚರಣೆ ಆರಂಭಿಸಿತ್ತು. ಈಗ ಕದನ ವಿರಾಮ ಘೋಷಣೆಯಾದರೂ ಹಿಂಸಾಚಾರ ಮುಂದುವರಿಯುತ್ತಿರುವುದು ಮಧ್ಯಪ್ರಾಚ್ಯದಲ್ಲಿ ಶಾಂತಿ ಸ್ಥಾಪನೆಗೆ ಮತ್ತೊಂದು ಸವಾಲಾಗಿ ಪರಿಣಮಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

NEET ಪ್ರಶ್ನೆಪತ್ರಿಕೆ ಸೋರಿಕೆ ವಿವಾದ: 3ನೇ ದಿನಕ್ಕೆ ಕಾಲಿಟ್ಟ 'Cockroach Janta Party' ಪ್ರತಿಭಟನೆ, ಕೇಂದ್ರ ಸರ್ಕಾರದ ವಿರುದ್ಧ ಕಿಡಿ

ಸಿಂಧೂ ನದಿ ನೀರು ತಡೆದರೆ ಸುಮ್ಮನಿರಲ್ಲ, ಯುದ್ಧ ಖಚಿತ: ಭಾರತದ ವಿರುದ್ಧ ಮತ್ತೆ ಉದ್ಧಟತನ ತೋರಿದ ಪಾಕಿಸ್ತಾನ..!

ಮಹಾರಾಷ್ಟ್ರ ವಿಧಾನ ಪರಿಷತ್ ಚುನಾವಣೆ ಫಲಿತಾಂಶ: ಆಡಳಿತಾರೂಢ ಮಹಾಯುತಿಗೆ 17 ಸ್ಥಾನದಲ್ಲಿ 16 ಸ್ಥಾನ!

ಸ್ವಿಟ್ಜರ್ಲೆಂಡ್‌ನಲ್ಲಿ ಮಹಾ ಸಂಧಾನ: US-Iran ಹಸ್ತಲಾಘವ, ಹಿಜ್ಬುಲ್ಲಾ–ಇಸ್ರೇಲ್ ಸಂಘರ್ಷ ತಡೆಯಲು ಹೊಸ ಸಮನ್ವಯ ವ್ಯವಸ್ಥೆ ಜಾರಿಗೆ ಸಮ್ಮತಿ..!

ಆಯುಷ್ಮಾನ್ ವಿಮೆ ಅಲ್ಲ ಭರವಸೆ ಯೋಜನೆ, ಜನಔಷಧಿ ಕೇಂದ್ರಗಳ ಸರಿಪಡಿಸಬೇಕು: ಸಚಿವ ಯು.ಟಿ. ಖಾದರ್‌ (INTERVIEW)