ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು "ಅದ್ಭುತ ನಾಯಕ" ಹಾಗೂ "ತುಂಬಾ ಗಟ್ಟಿಯಾದ ವ್ಯಕ್ತಿ" ಎಂದು ಬಣ್ಣಿಸಿದ್ದು, ಭಾರತ-ಅಮೆರಿಕ ವ್ಯಾಪಾರ ಸಂಬಂಧಗಳು ಈಗ ನ್ಯಾಯಯುತ ಮತ್ತು ಸಮತೋಲನದ ಹಂತಕ್ಕೆ ತಲುಪಿವೆ ಎಂದು ಹೇಳಿದ್ದಾರೆ.
Axios ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಟ್ರಂಪ್, ತಾವು ಹೆಚ್ಚು ಮೆಚ್ಚುವ ಜಾಗತಿಕ ನಾಯಕರ ಪಟ್ಟಿಯಲ್ಲಿ ಮೋದಿ ಹಾಗೂ ಕ್ಸಿ ಜಿನ್‌ಪಿಂಗ್ ಅವರ ಹೆಸರನ್ನು ಉಲ್ಲೇಖಿಸಿದರು.
ತಮ್ಮ ಪ್ರಭಾವ, ನಾಯಕತ್ವದ ಸಾಮರ್ಥ್ಯ ಮತ್ತು ಫಲಿತಾಂಶ ನೀಡುವ ಗುಣದಿಂದ ಈ ನಾಯಕರು ವಿಶೇಷವಾಗಿ ಗುರುತಿಸಿಕೊಂಡಿದ್ದಾರೆ ಎಂದು ಹೇಳಿದರು.
"ಮೊದಿ ತುಂಬಾ ಉತ್ತಮ ನಾಯಕ. ಭಾರತದಲ್ಲಿ ಉತ್ತಮ ಬೆಳವಣಿಗೆಗಳು ನಡೆಯುತ್ತಿವೆ. ಅವರು ಯುದ್ಧಗಳಿಂದ ದೂರ ಉಳಿಯುತ್ತಾರೆ, ಅದು ಬುದ್ಧಿವಂತಿಕೆಯ ನಡೆ. ಭಾರತವು ವಿಶ್ವದ ಅತಿ ದೊಡ್ಡ ಜನಸಂಖ್ಯೆ ಹೊಂದಿರುವ ದೇಶವಾಗಿದೆ. ಮೋದಿ ನಿಜಕ್ಕೂ ಅದ್ಭುತ ನಾಯಕ" ಎಂದು ಶ್ಲಾಘಿಸಿದರು.
ಇದೇ ವೇಳೆ ಭಾರತ-ಅಮೆರಿಕ ಆರ್ಥಿಕ ಸಂಬಂಧಗಳ ಬಗ್ಗೆ ಮಾತನಾಡಿದ ಟ್ರಂಪ್, "ನಾವು ಈಗ ಭಾರತದೊಂದಿಗೆ ನ್ಯಾಯಯುತ ವ್ಯಾಪಾರ ನಡೆಸುತ್ತಿದ್ದೇವೆ. ಹಿಂದೆ ಅವರು ನಮ್ಮನ್ನು ಸಾಕಷ್ಟು ಲಾಭಕ್ಕೆ ಬಳಸಿಕೊಳ್ಳುತ್ತಿದ್ದರು. ಅದಕ್ಕೆ ನಾನು ಭಾರತವನ್ನು ದೂಷಿಸುವುದಿಲ್ಲ. ಅದಕ್ಕೆ ಅವಕಾಶ ಕೊಟ್ಟ ನಮ್ಮ ರಾಜಕಾರಣಿಗಳೇ ಕಾರಣ. ಆದರೆ, ಈಗ ಎರಡೂ ದೇಶಗಳ ನಡುವೆ ದೊಡ್ಡ ಮಟ್ಟದ ವ್ಯಾಪಾರ ನಡೆಯುತ್ತಿದೆ" ಎಂದು ಹೇಳಿದರು.
"ಈಗಿನ ವ್ಯವಸ್ಥೆಯಿಂದ ಭಾರತ ಅಷ್ಟಾಗಿ ಸಂತೋಷವಾಗಿಲ್ಲ, ಏಕೆಂದರೆ ಹಿಂದೆ ಅವರಿಗೆ ಹೆಚ್ಚು ಲಾಭವಾಗುತ್ತಿತ್ತು. ಆದರೂ ಮೋದಿ ಅತ್ಯುತ್ತಮ ನಾಯಕ" ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಂದರ್ಶನದ ವೇಳೆ ಟ್ರಂಪ್ ಅವರು ಚೀನಾ ಅಧ್ಯಕ್ಷj ನಾಯಕತ್ವವನ್ನೂ ಪ್ರಶಂಸಿಸಿದರು. ಮೋದಿ ಮತ್ತು ಕ್ಸಿ ಇಬ್ಬರೂ ತಮ್ಮದೇ ಆದ ವಿಶಿಷ್ಟ ವ್ಯಕ್ತಿತ್ವ ಹಾಗೂ ಪ್ರಭಾವಿ ನಾಯಕತ್ವದ ಮೂಲಕ ಜಾಗತಿಕ ವೇದಿಕೆಯಲ್ಲಿ ಗುರುತಿಸಿಕೊಂಡಿದ್ದಾರೆ ಎಂದು ಹೇಳಿದರು.
"ಮೋದಿ ಮತ್ತು ಕ್ಸಿ ಜಿನ್‌ಪಿಂಗ್ ಅವರಂತಹ ವ್ಯಕ್ತಿತ್ವದ ನಾಯಕರ ಬಗ್ಗೆ ಸಿನಿಮಾ ಮಾಡಬೇಕೆಂದರೆ, ಹಾಲಿವುಡ್‌ನಲ್ಲೂ ಅವರಂತ ವ್ಯಕ್ತಿಯನ್ನು ಹುಡುಕಲು ಸಾಧ್ಯವಾಗುವುದಿಲ್ಲ" ಎಂದು ತಿಳಿಸಿದರು.
ಇಬ್ಬರೂ ತಮ್ಮ ದೇಶಗಳಲ್ಲಿ ಅಪಾರ ಪ್ರಭಾವ ಹೊಂದಿದ್ದು, ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯ ಮತ್ತು ಫಲಿತಾಂಶ ನೀಡುವ ನಾಯಕತ್ವದ ಗುಣಗಳಿಂದ ಇತರ ನಾಯಕರಿಗಿಂತ ಭಿನ್ನವಾಗಿ ಕಾಣಿಸುತ್ತಾರೆ ಎಂದು ಅಭಿಪ್ರಾಯಪಟ್ಟರು.
ಬಳಿಕ ಮೋದಿ ಅವರ ನಾಯಕತ್ವದ ಬಗ್ಗೆ ವಿಶೇಷವಾಗಿ ಮಾತನಾಡಿದ ಟ್ರಂಪ್, "ನಿಜವಾದ ಮೋದಿಯನ್ನು ನಾನು ಈಗ ಹೆಚ್ಚು ಅರ್ಥ ಮಾಡಿಕೊಂಡಿದ್ದೇನೆ. ಅವರು ತುಂಬಾ ಗಟ್ಟಿಯಾದ ವ್ಯಕ್ತಿ. ಹೊರಗೆ ಶಾಂತವಾಗಿ ಕಾಣುತ್ತಾರೆ, ಆದರೆ. ಒಳಗೆ ಅತ್ಯಂತ ದೃಢವಾದ ನಾಯಕ" ಎಂದು ಹೇಳಿದರು.
ಭಾರತದಲ್ಲಿ ಹಿಂದೆ ಆಗಾಗ ನಾಯಕತ್ವ ಬದಲಾವಣೆ ಆಗುತ್ತಿತ್ತು, "ಒಬ್ಬ ನಾಯಕ ಆರು ತಿಂಗಳು, ಮತ್ತೊಬ್ಬ ಒಂದು ವರ್ಷ ಅಧಿಕಾರದಲ್ಲಿರುತ್ತಿದ್ದರು. ಆದರೆ. ಮೋದಿ 12 ವರ್ಷಕ್ಕೂ ಹೆಚ್ಚು ಕಾಲ ಅಧಿಕಾರದಲ್ಲಿದ್ದು, ಸ್ಥಿರ ನಾಯಕತ್ವ ನೀಡುತ್ತಿದ್ದಾರೆ" ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಇತ್ತೀಚೆಗೆ ಫ್ರಾನ್ಸ್‌ನಲ್ಲಿ ನಡೆದ G7 Summit 2026 ಜಿ7 ಶೃಂಗಸಭೆಯ ವೇಳೆ ಮೋದಿ ಮತ್ತು ಟ್ರಂಪ್ ಭೇಟಿಯಾಗಿದ್ದರು. ಉಭಯ ದೇಶಗಳು ಇತ್ತೀಚಿನ ಭಿನ್ನಾಭಿಪ್ರಾಯಗಳ ಬಳಿಕ ದ್ವಿಪಕ್ಷೀಯ ಸಂಬಂಧಗಳನ್ನು ಮತ್ತಷ್ಟು ಬಲಪಡಿಸುವತ್ತ ಗಮನ ಹರಿಸುತ್ತಿರುವ ಸಂದರ್ಭದಲ್ಲೇ ಟ್ರಂಪ್ ಈ ಹೇಳಿಕೆ ನೀಡಿದ್ದಾರೆ.
ಇದೇ ವೇಳೆ, ಟ್ರಂಪ್ ಅವರು ಅಸೀಂ ಮುನೀರ್ ಹಾಗೂ ಶೆಹಬಾಜ್ ಷರೀಫ್ ಅವರನ್ನೂ ತಾವು ಇಷ್ಟಪಡುವ ನಾಯಕ ಪಟ್ಟಿಯಲ್ಲಿ ಸೇರಿಸಿದ್ದಾರೆ.