ಅಮೆರಿಕಾ ಉಪಾಧ್ಯಕ್ಷ ಜೆಡಿ.ವ್ಯಾನ್ಸ್ 
ವಿದೇಶ

ಇಸ್ರೇಲ್-ಲೆಬನಾನ್ ಸಂಘರ್ಷ; ಶಾಂತಿ ಒಪ್ಪಂದ ಮುರಿಯುವ ಭೀತಿ: ಸ್ವಿಟ್ಜರ್ಲೆಂಡ್‌ಗೆ ಜೆ.ಡಿ ವ್ಯಾನ್ಸ್ ದೌಡು, ಇರಾನ್‌ ಸಮಾಧಾನಪಡಿಸಲು ಕಸರತ್ತು..!

ಇರಾನ್‌ನ ಅಣು ಕಾರ್ಯಕ್ರಮದ ಕುರಿತು ಪ್ರಗತಿ ಸಾಧಿಸುವ ಹಾಗೂ ಲೆಬನಾನ್‌ನಲ್ಲಿ ಶಾಶ್ವತ ಕದನ ವಿರಾಮವನ್ನು ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ ಮಾತುಕತೆ ನಡೆಸಲಿದ್ದೇವೆ.

ಮಧ್ಯಪ್ರಾಚ್ಯದಲ್ಲಿ ಶಾಂತಿ ಸ್ಥಾಪಿಸಲು ಅಮೆರಿಕ ಹೊಸ ರಾಜತಾಂತ್ರಿಕ ಪ್ರಯತ್ನಗಳನ್ನು ಆರಂಭಿಸಿದ್ದು, ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಮಹತ್ವದ ಮಾತುಕತೆಗಳಿಗಾಗಿ ಸ್ವಿಟ್ಜರ್ಲೆಂಡ್‌ಗೆ ತೆರಳಿದ್ದಾರೆ.

ಇರಾನ್‌ನ ಅಣು ಕಾರ್ಯಕ್ರಮ ಮತ್ತು ಲೆಬನಾನ್‌ನಲ್ಲಿ ಕದನ ವಿರಾಮವನ್ನು ಬಲಪಡಿಸುವುದು ಈ ಮಾತುಕತೆಗಳ ಪ್ರಮುಖ ಉದ್ದೇಶವಾಗಿದೆ.

ವಾಷಿಂಗ್ಟನ್‌ನಿಂದ ನಿರ್ಗಮಿಸುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ವ್ಯಾನ್ಸ್, "ಇರಾನ್‌ನ ಅಣು ಕಾರ್ಯಕ್ರಮದ ಕುರಿತು ಪ್ರಗತಿ ಸಾಧಿಸುವ ಹಾಗೂ ಲೆಬನಾನ್‌ನಲ್ಲಿ ಶಾಶ್ವತ ಕದನ ವಿರಾಮವನ್ನು ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ ಮಾತುಕತೆ ನಡೆಸಲಿದ್ದೇವೆ. ಈ ಎರಡು ವಿಷಯಗಳೇ ನಮ್ಮ ಪ್ರಮುಖ ಆದ್ಯತೆಗಳಾಗಿವೆ" ಎಂದು ಹೇಳಿದರು.

ಅಮೆರಿಕ-ಇರಾನ್ ನಡುವಿನ ಇತ್ತೀಚಿನ ಶಾಂತಿ ಒಪ್ಪಂದದ ಬಳಿಕ ಈ ಮಾತುಕತೆಗಳು ನಡೆಯುತ್ತಿವೆ. ಆದರೆ ಲೆಬನಾನ್‌ನಲ್ಲಿ ಇಸ್ರೇಲ್ ನಡೆಸಿದ ಹೊಸ ದಾಳಿಗಳು ಮತ್ತು ಹಿಜ್ಬುಲ್ಲಾ ಜೊತೆಗಿನ ಘರ್ಷಣೆಗಳು ಶಾಂತಿ ಪ್ರಕ್ರಿಯೆಗೆ ಸವಾಲಾಗಿ ಪರಿಣಮಿಸಿವೆ.

ಇಸ್ರೇಲ್‌ನ ನಾಲ್ವರು ಸೈನಿಕರು ಮೃತಪಟ್ಟ ಬಳಿಕ ಲೆಬನಾನ್ ಮೇಲೆ ಭಾರಿ ಪ್ರಮಾಣದ ವೈಮಾನಿಕ ದಾಳಿಗಳು ನಡೆದಿದ್ದು, ಇದರ ಪರಿಣಾಮವಾಗಿ ಸ್ವಿಟ್ಜರ್ಲೆಂಡ್‌ನಲ್ಲಿ ಶುಕ್ರವಾರ ನಡೆಯಬೇಕಿದ್ದ ಮಾತುಕತೆಗಳನ್ನು ಮುಂದೂಡಲಾಗಿತ್ತು.

ಈ ಮಧ್ಯೆ, ಅಮೆರಿಕ ಮತ್ತು ಇರಾನ್ ಈ ವಾರ ಸಹಿ ಹಾಕಿದ ಪ್ರಾಥಮಿಕ ಒಪ್ಪಂದದ ಭಾಗವಾಗಿದ್ದ ಹೊಸ ಕದನ ವಿರಾಮವನ್ನು ಉಲ್ಲಂಘಿಸಿರುವ ಆರೋಪವನ್ನು ಇಸ್ರೇಲ್ ಮತ್ತು ಹಿಜ್ಬುಲ್ಲಾ ಪರಸ್ಪರ ಹೊರಿಸಿವೆ. ಇದರಿಂದ ಪರಿಸ್ಥಿತಿ ಮತ್ತಷ್ಟು ಸಂಕೀರ್ಣಗೊಂಡಿದೆ.

ಸ್ವಿಟ್ಜರ್ಲೆಂಡ್‌ನಲ್ಲಿ ನಡೆಯುತ್ತಿರುವ ಮಾತುಕತೆಯಲ್ಲಿ ಇರಾನ್ ನಿಯೋಗವನ್ನು ಸಂಸತ್ ಸ್ಪೀಕರ್ ಮೊಹಮ್ಮದ್ ಬಾಘರ್ ಖಾಲಿಬಾಫ್ ನೇತೃತ್ವ ವಹಿಸಿದ್ದಾರೆ. ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ಸೇರಿದಂತೆ ಭದ್ರತೆ, ತೈಲ ಮತ್ತು ಕೇಂದ್ರ ಬ್ಯಾಂಕ್‌ನ ಹಿರಿಯ ಅಧಿಕಾರಿಗಳು ಕೂಡ ನಿಯೋಗದಲ್ಲಿದ್ದಾರೆ.

ಇದಕ್ಕೆ ಜೊತೆಯಾಗಿ ಪಾಕಿಸ್ತಾನ ಕೂಡ ಅಮೆರಿಕ-ಇರಾನ್ ಶಾಂತಿ ಮಾತುಕತೆಯಲ್ಲಿ ಭಾಗವಹಿಸುತ್ತಿದೆ. ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಶರೀಫ್ ಹಾಗೂ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ನೇತೃತ್ವದ ಉನ್ನತ ಮಟ್ಟದ ನಿಯೋಗ ಸ್ವಿಟ್ಜರ್ಲೆಂಡ್‌ಗೆ ತೆರಳಿದೆ.

ಇದರ ನಡುವೆ ಹಾರ್ಮುಜ್ ಜಲಸಂಧಿ ವಿಚಾರವೂ ಮತ್ತೆ ಉದ್ವಿಗ್ನತೆ ಸೃಷ್ಟಿಸಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, 60 ದಿನಗಳ ಕದನ ವಿರಾಮ ಅವಧಿಯಲ್ಲಿ ಹಾರ್ಮುಜ್ ಮೂಲಕ ಸಾಗುವ ಹಡಗುಗಳಿಗೆ ಯಾವುದೇ ಸುಂಕ ವಿಧಿಸುವುದಿಲ್ಲ ಎಂದು ಘೋಷಿಸಿದ್ದಾರೆ. ಆದರೆ ಶಾಂತಿ ಮಾತುಕತೆ ವಿಫಲವಾದರೆ ಅಮೆರಿಕವೇ ಸುಂಕ ವಿಧಿಸಬಹುದು ಎಂದು ಎಚ್ಚರಿಸಿದ್ದಾರೆ.

ಇನ್ನೊಂದೆಡೆ, ಅಮೆರಿಕ ಮತ್ತು ಇಸ್ರೇಲ್ ಕದನ ವಿರಾಮ ಒಪ್ಪಂದವನ್ನು ಉಲ್ಲಂಘಿಸಿವೆ ಎಂದು ಆರೋಪಿಸಿರುವ ಇರಾನ್, ಹಾರ್ಮುಜ್ ಜಲಸಂಧಿಯನ್ನು ಹಡಗು ಸಂಚಾರಕ್ಕೆ ಮುಚ್ಚುವುದಾಗಿ ಘೋಷಿಸಿದೆ.

ಇರಾನ್ ಸರ್ವೋಚ್ಚ ನಾಯಕನ ಸಲಹೆಗಾರ ಮೊಹಮ್ಮದ್ ಮೊಖ್ಬರ್, ಅಮೆರಿಕ ತನ್ನ 14 ಅಂಶಗಳ ಒಪ್ಪಂದದ ಮೊದಲ ಷರತ್ತಾದ "ಎಲ್ಲಾ ಮುಂಚೂಣಿಗಳಲ್ಲೂ ಕದನ ವಿರಾಮ" ಜಾರಿಗೆ ತರಲು ವಿಫಲವಾಗಿದೆ ಎಂದು ಆರೋಪಿಸಿದ್ದಾರೆ.

ಆದರೆ, ಲೆಬನಾನ್‌ನ ಪರಿಸ್ಥಿತಿ ನಿಧಾನವಾಗಿ ಸುಧಾರಿಸುತ್ತಿದೆ ಎಂದು ವ್ಯಾನ್ಸ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. "ಇಸ್ರೇಲ್ ಮತ್ತು ಲೆಬನಾನ್ ಎರಡೂ ಸುರಕ್ಷಿತವಾಗಿರುವಂತೆ ನೋಡಿಕೊಳ್ಳುವುದು ನಮ್ಮ ಗುರಿ. ಸಮಸ್ಯೆ ಏನೆಂದರೆ, ಒಂದು ಕಡೆಯಿಂದ ಗುಂಡಿನ ದಾಳಿ ನಡೆದರೆ ಮತ್ತೊಂದು ಕಡೆ ಪ್ರತಿಕ್ರಿಯೆ ಬರುತ್ತದೆ. ಈ ಚಕ್ರವನ್ನು ನಿಲ್ಲಿಸಿ ಕದನ ವಿರಾಮವನ್ನು ಉಳಿಸಿಕೊಳ್ಳುವುದು ಮುಖ್ಯ ಎಂದು ಹೇಳಿದರು.

ಸ್ವಿಟ್ಜರ್ಲೆಂಡ್‌ನಲ್ಲಿ ನಡೆಯುತ್ತಿರುವ ಈ ಮಾತುಕತೆಗಳು ಮಧ್ಯಪ್ರಾಚ್ಯದ ಭವಿಷ್ಯವನ್ನು ನಿರ್ಧರಿಸುವ ಮಹತ್ವದ ಬೆಳವಣಿಗೆಯಾಗಿ ಪರಿಣಮಿಸಿದ್ದು, ಇರಾನ್ ಅಣು ಕಾರ್ಯಕ್ರಮ, ಲೆಬನಾನ್ ಕದನ ವಿರಾಮ ಹಾಗೂ ಹಾರ್ಮುಜ್ ಜಲಸಂಧಿಯ ಸ್ಥಿತಿ ಕುರಿತು ಮಹತ್ವದ ನಿರ್ಧಾರಗಳು ಹೊರಬೀಳುವ ಸಾಧ್ಯತೆ ಇದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಮ್ಮಲ್ಲೂ ಅಸ್ತ್ರಗಳಿವೆ, ದಾಳಿಗೆ ಸಂಪೂರ್ಣ ಸಿದ್ಧ: ಅಮೆರಿಕಾ ಆರ್ಥಿಕ ದಿಗ್ಬಂಧನಕ್ಕೆ ಇರಾನ್‌ ಪ್ರತಿರೋಧ, ಭಾರೀ ಪ್ರತೀಕಾರದ ಎಚ್ಚರಿಕೆ

‘Iran ನನ್ನ ಪುತ್ರನನ್ನು ಹತ್ಯೆ ಮಾಡಲು ಯತ್ನಿಸಿತ್ತು’: ಟೆಹ್ರಾನ್‌ ವಿರುದ್ಧ ನೆತನ್ಯಾಹು ಗಂಭೀರ ಆರೋಪ

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!

Video: ಕುದಿಯುತ್ತಿದ್ದ ಬೆಲ್ಲದ ಪಾಕಕ್ಕೆ ಬಿದ್ದ ಯುವಕ; ಅಣ್ಣನ ಸಾಲ ತೀರಿಸಲು ಕೆಲಸಕ್ಕೆ ಹೋಗಿದ್ದವನ ದಾರುಣ ಅಂತ್ಯ