ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 
ವಿದೇಶ

ಇರಾನ್ ಸಂಘರ್ಷಕ್ಕೆ $70 ಬಿಲಿಯನ್ ತುರ್ತು ನಿಧಿ ಕೋರಿದ ಅಮೆರಿಕಾ: ಟ್ರಂಪ್ ವಿರುದ್ಧ ಸಿಡಿದೆದ್ದ Republican senator, ಸ್ವಪಕ್ಷದಲ್ಲೇ ಭಿನ್ನಮತ ಸ್ಫೋಟ..!

ಅಮೆರಿಕದ ಜನತೆಗೆ ಸರ್ಕಾರ ಹೇಳುತ್ತಿರುವುದಕ್ಕಿಂತ ಹೆಚ್ಚಿನ ಮಾಹಿತಿ ತಿಳಿಯಬೇಕಿದೆ. ಯುದ್ಧವು ಮೂಲ ಯೋಜನೆಯಂತೆ ಸಾಗುತ್ತಿದೆಯೇ ಅಥವಾ ಇಲ್ಲವೇ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ.

ವಾಷಿಂಗ್ಟನ್: ಇರಾನ್ ವಿರುದ್ಧದ ಯುದ್ಧ ಹಾಗೂ ಅದರ ಹೆಚ್ಚುತ್ತಿರುವ ವೆಚ್ಚದ ವಿಚಾರದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸ್ವಪಕ್ಷದಲ್ಲೇ ತೀವ್ರ ವಿರೋಧ ಎದುರಾಗುತ್ತಿದೆ.

ಇರಾನ್ ಸಂಘರ್ಷಕ್ಕೆ ಹೆಚ್ಚುವರಿಯಾಗಿ 70 ಬಿಲಿಯನ್ ಡಾಲರ್ ತುರ್ತು ನಿಧಿ ಮಂಜೂರು ಮಾಡುವಂತೆ ಟ್ರಂಪ್ ಆಡಳಿತ ಕಾಂಗ್ರೆಸ್‌ಗೆ ಮನವಿ ಸಲ್ಲಿಸಿದ ಬೆನ್ನಲ್ಲೇ ರಿಪಬ್ಲಿಕನ್ ಪಕ್ಷದೊಳಗಿನ ಭಿನ್ನಮತ ಸ್ಫೋಟಗೊಂಡಿದೆ.

ಬುಧವಾರ ನಡೆದ ರಿಪಬ್ಲಿಕನ್ ಪಕ್ಷದ ಸಂಸದರು ಮತ್ತು ಸೆನೆಟರ್‌ಗಳ ಮುಚ್ಚಿದ ಬಾಗಿಲಿನ ಸಭೆಯಲ್ಲಿ ಟ್ರಂಪ್ ಹಾಗೂ ಬಿಲ್ ಕ್ಯಾಸಿಡಿ ನಡುವೆ ತೀವ್ರ ವಾಗ್ವಾದ ನಡೆದಿರುವುದು ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.

ಇರಾನ್ ಯುದ್ಧದ ಉದ್ದೇಶ, ಅದರ ಮುಂದಿನ ತಂತ್ರಗಾರಿಕೆ ಹಾಗೂ ಅಮೆರಿಕದ ತೆರಿಗೆದಾರರ ಹಣದ ಬಳಕೆ ಕುರಿತು ಕ್ಯಾಸಿಡಿ ನೇರವಾಗಿ ಪ್ರಶ್ನೆ ಎತ್ತಿದ್ದಾರೆ ಎಂದು ವರದಿಯಾಗಿದೆ.

ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಕ್ಯಾಸಿಡಿ, “ಅಮೆರಿಕದ ಜನತೆಗೆ ಸರ್ಕಾರ ಹೇಳುತ್ತಿರುವುದಕ್ಕಿಂತ ಹೆಚ್ಚಿನ ಮಾಹಿತಿ ತಿಳಿಯಬೇಕಿದೆ. ಯುದ್ಧವು ಮೂಲ ಯೋಜನೆಯಂತೆ ಸಾಗುತ್ತಿದೆಯೇ ಅಥವಾ ಇಲ್ಲವೇ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ” ಎಂದು ಹೇಳಿದ್ದಾರೆ.

ಇದೇ ವೇಳೆ ಇತ್ತೀಚೆಗೆ ಟ್ರಂಪ್ ಆಡಳಿತವು ಇರಾನ್‌ನೊಂದಿಗೆ ಮಾಡಿಕೊಂಡಿರುವ ಚೌಕಟ್ಟಿನ ಒಪ್ಪಂದದ ಬಗ್ಗೆಯೂ ಅವರು ಅನುಮಾನ ವ್ಯಕ್ತಪಡಿಸಿದ್ದಾರೆ.

ಈ ಒಪ್ಪಂದವು ಅಮೆರಿಕ ಘೋಷಿಸಿದ ಗುರಿಗಳನ್ನು ಸಾಧಿಸದೇ ಇರಾನ್‌ಗೆ ಕೆಲವು ಆರ್ಥಿಕ ಲಾಭಗಳನ್ನು ನೀಡುವ ಸಾಧ್ಯತೆಯಿದೆ ಎಂಬ ಆತಂಕವನ್ನು ವ್ಯಕ್ತಪಡಿಸಿದ್ದಾರೆ.

ಇರಾನ್ ಯುದ್ಧ ಆರಂಭವಾದಾಗ ಟ್ರಂಪ್‌ಗೆ ಬಲವಾದ ಬೆಂಬಲ ವ್ಯಕ್ತವಾಗಿದ್ದರೂ, ಸಂಘರ್ಷ ದೀರ್ಘವಾಗುತ್ತಿರುವಂತೆ ರಿಪಬ್ಲಿಕನ್ ಪಕ್ಷದೊಳಗೇ ಅಸಮಾಧಾನ ಹೆಚ್ಚುತ್ತಿದೆ.

ಯುದ್ಧಕ್ಕೆ ಖರ್ಚಾಗುತ್ತಿರುವ ಅಪಾರ ಹಣ, ಅಮೆರಿಕದ ಸೈನಿಕರ ಮೇಲಿನ ಒತ್ತಡ ಹಾಗೂ ಸ್ಪಷ್ಟ ಫಲಿತಾಂಶದ ಕೊರತೆ ಹಲವು ನಾಯಕರು ಚಿಂತೆಗೀಡಾಗುವಂತೆ ಮಾಡಿದೆ.

ಮುಂಬರುವ ಕಾಂಗ್ರೆಸ್ ಚುನಾವಣೆಗಳ ಹಿನ್ನೆಲೆಯಲ್ಲಿ ಈ ಯುದ್ಧ ಟ್ರಂಪ್‌ಗೆ ರಾಜಕೀಯ ಸವಾಲಾಗಿ ಪರಿಣಮಿಸುತ್ತಿದೆ. ಪಕ್ಷದೊಳಗಿನ ಭಿನ್ನಾಭಿಪ್ರಾಯಗಳು ಹೆಚ್ಚಿದರೆ ಚುನಾವಣೆಯಲ್ಲಿ ಅದರ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಈ ರಾಜಕೀಯ ಸಂಘರ್ಷದ ನಡುವೆಯೇ ಅಮೆರಿಕ ಸೆನೆಟ್ ಯುದ್ಧವನ್ನು ಅಂತ್ಯಗೊಳಿಸುವಂತೆ ಸೂಚಿಸುವ ಸಾಂಕೇತಿಕ ನಿರ್ಣಯವೊಂದನ್ನು ಅಂಗೀಕರಿಸಿದೆ.

ಡೆಮಾಕ್ರಾಟ್ ಸದಸ್ಯರೊಂದಿಗೆ ಕೆಲ ರಿಪಬ್ಲಿಕನ್ ಸೆನೆಟರ್‌ಗಳೂ ಈ ನಿರ್ಣಯಕ್ಕೆ ಬೆಂಬಲ ನೀಡಿರುವುದು ವಿಶೇಷ. ಕ್ಯಾಸಿಡಿಯೂ ಈ ನಿರ್ಣಯಕ್ಕೆ ಬೆಂಬಲ ಸೂಚಿಸಿದ ನಾಯಕರಲ್ಲಿ ಒಬ್ಬರಾಗಿದ್ದಾರೆ.

ಆದರೆ, ಟ್ರಂಪ್ ಈ ನಿರ್ಣಯವನ್ನು ತೀವ್ರವಾಗಿ ಟೀಕಿಸಿದ್ದು, “ಇದು ಅರ್ಥಹೀನ ಕ್ರಮ. ಇಂತಹ ಸಂದೇಶಗಳು ಇರಾನ್‌ಗೆ ಅಮೆರಿಕ ದುರ್ಬಲವಾಗಿದೆ ಎಂಬ ಭಾವನೆ ಮೂಡಿಸಬಹುದು” ಎಂದು ಹೇಳಿದ್ದಾರೆ.

ಸೆನೆಟ್‌ನ ನಿರ್ಧಾರವು ಯುದ್ಧದ ವಾಸ್ತವಿಕ ಸ್ಥಿತಿಗತಿಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂಬ ಅಭಿಪ್ರಾಯವನ್ನೂ ಅವರು ವ್ಯಕ್ತಪಡಿಸಿದ್ದಾರೆ.

ಈ ಬೆಳವಣಿಗೆಗಳ ನಡುವೆ ಟ್ರಂಪ್ ಆಡಳಿತವು ಕಾಂಗ್ರೆಸ್‌ಗೆ 70 ಬಿಲಿಯನ್ ಡಾಲರ್ ಹೆಚ್ಚುವರಿ ಯುದ್ಧ ನಿಧಿಗಾಗಿ ಮನವಿ ಸಲ್ಲಿಸಿದೆ. ಇದು ಈಗಾಗಲೇ ಇರುವ ಸುಮಾರು 867 ಬಿಲಿಯನ್ ಡಾಲರ್ ರಕ್ಷಣಾ ಬಜೆಟ್‌ಗೆ ಹೆಚ್ಚುವರಿಯಾಗಿದೆ.

ಈ ಹಣವನ್ನು ಸೈನಿಕ ಕಾರ್ಯಾಚರಣೆಗಳು, ಶಸ್ತ್ರಾಸ್ತ್ರ ಪೂರೈಕೆ, ಮಧ್ಯಪ್ರಾಚ್ಯದಲ್ಲಿನ ಅಮೆರಿಕದ ಸೇನಾ ನೆಲೆಗಳ ಭದ್ರತೆ ಹಾಗೂ ಯುದ್ಧಕ್ಕೆ ಸಂಬಂಧಿಸಿದ ಇತರ ವೆಚ್ಚಗಳಿಗೆ ಬಳಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆದರೆ, ವಿರೋಧ ಪಕ್ಷ ಮಾತ್ರವಲ್ಲದೆ ಕೆಲ ರಿಪಬ್ಲಿಕನ್ ನಾಯಕರು ಕೂಡ ಈ ವೆಚ್ಚದ ಬಗ್ಗೆ ಪ್ರಶ್ನೆ ಎತ್ತಿದ್ದಾರೆ. ಅಮೆರಿಕದ ರಾಷ್ಟ್ರೀಯ ಸಾಲದ ಪ್ರಮಾಣ ಹೆಚ್ಚುತ್ತಿರುವ ಸಂದರ್ಭದಲ್ಲಿ ಮತ್ತಷ್ಟು ಬೃಹತ್ ಮೊತ್ತದ ಹಣವನ್ನು ಯುದ್ಧಕ್ಕಾಗಿ ಬಳಸುವುದು ಸರಿಯೇ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ಜೋರಾಗಿದೆ.

ಇತ್ತೀಚಿನ ಸಮೀಕ್ಷೆಗಳು ಕೂಡ ಯುದ್ಧದ ಬಗ್ಗೆ ಜನರ ಬೆಂಬಲ ಕುಸಿಯುತ್ತಿರುವುದನ್ನು ತೋರಿಸಿವೆ. ಸಮೀಕ್ಷೆಯೊಂದರ ಪ್ರಕಾರ, ಕೇವಲ ನಾಲ್ವರಲ್ಲಿ ಒಬ್ಬ ಅಮೆರಿಕನ್ ಮಾತ್ರ ಈ ಯುದ್ಧ ಅದರ ವೆಚ್ಚಕ್ಕೆ ತಕ್ಕ ಫಲ ನೀಡಿದೆ ಎಂದು ನಂಬಿದ್ದಾನೆ. ಇದೇ ವೇಳೆ ಟ್ರಂಪ್ ಅವರ ಜನಪ್ರಿಯತೆಯ ಪ್ರಮಾಣವೂ ಅವರು ಮರು ಅಧಿಕಾರಕ್ಕೆ ಬಂದ ನಂತರದ ಕನಿಷ್ಠ ಮಟ್ಟಕ್ಕೆ ಇಳಿದಿದೆ ಎನ್ನಲಾಗಿದೆ.

ಇರಾನ್ ಸಂಘರ್ಷ ಈಗ ಕೇವಲ ವಿದೇಶಾಂಗ ಅಥವಾ ಭದ್ರತಾ ವಿಚಾರವಾಗಿರದೆ, ಅಮೆರಿಕದ ಒಳರಾಜಕೀಯದಲ್ಲೂ ಪ್ರಮುಖ ಚರ್ಚೆಯ ವಿಷಯವಾಗಿ ಮಾರ್ಪಟ್ಟಿದೆ. ಹೆಚ್ಚುವರಿ 70 ಬಿಲಿಯನ್ ಡಾಲರ್ ನಿಧಿ ಬೇಡಿಕೆ, ಸೆನೆಟ್‌ನ ವಿರೋಧದ ನಿರ್ಣಯ ಹಾಗೂ ಸ್ವಪಕ್ಷದ ನಾಯಕರ ಟೀಕೆಗಳು ಟ್ರಂಪ್ ಆಡಳಿತಕ್ಕೆ ಹೊಸ ರಾಜಕೀಯ ಒತ್ತಡವನ್ನು ಸೃಷ್ಟಿಸಿವೆ.

ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಈ ನಿಧಿಗೆ ಅನುಮೋದನೆ ನೀಡುತ್ತದೆಯೇ ಮತ್ತು ರಿಪಬ್ಲಿಕನ್ ಪಕ್ಷದೊಳಗಿನ ಭಿನ್ನಮತ ಯಾವ ಹಂತಕ್ಕೆ ತಲುಪುತ್ತದೆ ಎಂಬುದು ಅಮೆರಿಕ ರಾಜಕೀಯದಲ್ಲಿ ಕುತೂಹಲ ಕೆರಳಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕೋಲ್ಕತ್ತಾದಲ್ಲಿ ಭೀಕರ ದುರಂತ: ನಿರ್ಮಾಣ ಹಂತದ ಗೋದಾಮು ಕುಸಿದು 5 ಕಾರ್ಮಿಕರ ಸಾವು, 20 ಮಂದಿ ರಕ್ಷಣೆ; TMC ಅವಧಿಯ ಯೋಜನೆಗಳಿಗೆ CM ಸುವೇಂದು ಬ್ರೇಕ್..!

ಭೂಕಂಪದ ರೌದ್ರನರ್ತನಕ್ಕೆ Venezuela ತತ್ತರ; Caracasನಲ್ಲಿ ಧರೆಗುರುಳಿದ ಕಟ್ಟಡಗಳು, ಸುನಾಮಿ ಎಚ್ಚರಿಕೆ..!

ದೇಶದ ಮೊದಲ ಖಾಸಗಿ ಚಿನ್ನದ ಗಣಿ ಉದ್ಘಾಟಿಸಿದ ಆಂಧ್ರ CM; ಪ್ರತಿ ವರ್ಷ 900 ಕೆಜಿ ಚಿನ್ನ ಉತ್ಪಾದನೆ!

ಖರ್ಗೆ ಕುಟುಂಬದಿಂದ 100 ಕೋಟಿ ರೂ. ಮೌಲ್ಯದ ಸರ್ಕಾರಿ ಭೂಮಿ ಲೂಟಿ: BJP ಗಂಭೀರ ಆರೋಪ

ಸ್ವಾಮಿ ವಿವೇಕಾನಂದ ಮೆಟ್ರೋ ನಿಲ್ದಾಣದಿಂದ- ಸಿಲ್ಕ್ ಬೋರ್ಡ್ ವರೆಗೆ 1,300 ಕೋಟಿ ರೂ ವೆಚ್ಚದಲ್ಲಿ ಎಲಿವೇಟೆಡ್ ಕಾರಿಡಾರ್: ಟೋಲ್ ಬದಲು Value Capture Financing ಗೆ ಪ್ರಸ್ತಾವನೆ!