ವಾಷಿಂಗ್ಟನ್/ನವದೆಹಲಿ: ಅಮೆರಿಕಾ–ಇಸ್ರೇಲ್ ಇರಾನ್ ಮೇಲಿನ ದಾಳಿಗಳನ್ನು ಜಪಾನ್ 1941ರಲ್ಲಿ ನಡೆಸಿದ ಪರ್ಲ್ ಹಾರ್ಬರ್ ದಾಳಿಗೆ ಜಪಾನ್-ಅಮೆರಿಕ ದ್ವಿಪಕ್ಷೀಯ ಸಭೆಯಲ್ಲಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹೋಲಿಕೆ ಮಾಡಿ ಜಪಾನ್ ಪ್ರಧಾನಿ ಸನೇ ತಕೈಚಿ ಮುಜುಗರಕ್ಕೀಡಾದ ಪ್ರಸಂಗ ನಡೆಯಿತು.
ಇಬ್ಬರು ನಾಯಕರು ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದಾಗ ಈ ಘಟನೆ ನಡೆಯಿತು. ಒಬ್ಬ ಜಪಾನಿ ಪತ್ರಕರ್ತ ಅಮೆರಿಕಾ ಇರಾನ್ ಮೇಲೆ ದಾಳಿ ಮಾಡುವ ಮುನ್ನ ಜಪಾನ್ ಸೇರಿದಂತೆ ಯುರೋಪ್ ಮತ್ತು ಏಷ್ಯಾದ ತನ್ನ ಮೈತ್ರಿ ರಾಷ್ಟ್ರಗಳಿಗೆ ಏಕೆ ಮಾಹಿತಿ ನೀಡಲಿಲ್ಲ ಎಂದು ಪ್ರಶ್ನಿಸಿದರು.
ಆಗ ಅದಕ್ಕೆ ಉತ್ತರಿಸಿದ ಡೊನಾಲ್ಡ್ ಟ್ರಂಪ್, ಒಂದು ವಿಷಯ ಏನೆಂದರೆ, ನೀವು ತುಂಬಾ ಸೂಚನೆ ನೀಡಬಾರದು. ನಾವು ದಾಳಿ ಮಾಡಿದಾಗ, ಬಹಳ ತೀವ್ರವಾಗಿ ದಾಳಿ ಮಾಡಿದ್ದೇವೆ. ಯಾರಿಗೂ ಹೇಳಲಿಲ್ಲ, ಏಕೆಂದರೆ ನಾವು ಅನಿರೀಕ್ಷಿತ ಅಚ್ಚರಿಯನ್ನು ಸೃಷ್ಟಿಸಬೇಕೆಂದು ಬಯಸಿದ್ದೆವು ಎಂದು ಟ್ರಂಪ್ ಉತ್ತರಿಸಿದರು. ಆದರೆ ಈ ದಾಳಿಯ ಅಚ್ಚರಿಯ ಬಗ್ಗೆ ಜಪಾನ್‌ಗಿಂತ ಚೆನ್ನಾಗಿ ಯಾರಿಗೆ ತಾನೆ ಗೊತ್ತಿರಲು ಸಾಧ್ಯ, ಪರ್ಲ್ ಹಾರ್ಬರ್ ಬಗ್ಗೆ ನಿಮಗೆ ಗೊತ್ತಿಲ್ಲವೇ ಎಂದು ಟ್ರಂಪ್ ಕೇಳಿದರು.
ನೀವು ಅಚ್ಚರಿಯ ಮೇಲೆ ನಮಗಿಂತ ಹೆಚ್ಚು ನಂಬಿಕೆ ಇಟ್ಟಿದ್ದೀರಿ ಎಂದರು. ಟ್ರಂಪ್ ಉಲ್ಲೇಖಿಸಿದ “ಅಚ್ಚರಿ” ಎಂದರೆ 1941 ಡಿಸೆಂಬರ್ 7ರಂದು ಹವಾಯಿಯ ಪರ್ಲ್ ಹಾರ್ಬರ್‌ನಲ್ಲಿರುವ ಅಮೆರಿಕಾ ನೌಕಾ ತಾಣದ ಮೇಲೆ ಜಪಾನ್ ನಡೆಸಿದ ಆಕಸ್ಮಿಕ ವಾಯು ದಾಳಿ.
ಈ ದಾಳಿಯಲ್ಲಿ 2,390 ಅಮೆರಿಕನ್ನರು ಮೃತಪಟ್ಟಿದ್ದರು. ಅದಕ್ಕೆ ಹಿಂದಿನ ದಿನ ಅಮೆರಿಕಾ ಜಪಾನ್ ವಿರುದ್ಧ ಯುದ್ಧ ಘೋಷಿಸಿತು, ಇದರಿಂದ ಅಮೆರಿಕಾ ದ್ವಿತೀಯ ಮಹಾಯುದ್ಧಕ್ಕೆ ಪ್ರವೇಶಿಸಿತು. 32ನೇ ಅಮೆರಿಕಾ ಅಧ್ಯಕ್ಷ ಫ್ರಾಂಕ್ಲಿನ್ ಡಿ ರೂಸ್‌ವೆಲ್ಟ್ ಅದನ್ನು ಅಪಕೀರ್ತಿಯಲ್ಲಿ ಉಳಿಯುವ ದಿನ ಎಂದು ಕರೆದಿದ್ದರು ಎಂದರು.
ಯುದ್ಧವು 1945 ಆಗಸ್ಟ್‌ನಲ್ಲಿ ಅಮೆರಿಕಾ ಹಿರೋಶಿಮಾ ಮತ್ತು ನಾಗಾಸಾಕಿ ಮೇಲೆ ಅಣುಬಾಂಬ್‌ಗಳನ್ನು ಹಾಕುವ ಮೂಲಕ ಅಂತ್ಯವಾಯಿತು. ನಂತರ 1951 ಸೆಪ್ಟೆಂಬರ್‌ನಲ್ಲಿ ಅಮೆರಿಕಾ ಮತ್ತು ಜಪಾನ್ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿ, ಆಗಿನಿಂದ ಇಂದಿನವರೆಗೆ ಮೈತ್ರಿ ರಾಷ್ಟ್ರಗಳಾಗಿ ಉಳಿದಿವೆ.
ಡೊನಾಲ್ಡ್ ಟ್ರಂಪ್ ಅವರು ಅಮೆರಿಕಾ ಮತ್ತು ಇಸ್ರೇಲ್ ಸೇರಿ ನಡೆಸಿದ ಕಾರ್ಯಾಚರಣೆಯಲ್ಲಿ ಇರಾನ್‌ನ್ನು ಅನಿರೀಕ್ಷಿತವಾಗಿ ಅಚ್ಚರಿಗೊಳಿಸಿದ ಪರಿಣಾಮದ ಬಗ್ಗೆ ವಿವರಿಸಿದರು. ನಾವು ಅವರಿಗೆ ಅನಿರೀಕ್ಷಿತ ಅಚ್ಚರಿ ಮತ್ತು ಆಘಾತ ನೀಡಬೇಕಾಗಿತ್ತು. ಹಾಗೆಯೇ ಮಾಡಿದ್ದೇವೆ. ಆ ಅಚ್ಚರಿಯಿಂದ ಮೊದಲ ಎರಡು ದಿನಗಳಲ್ಲಿ ನಾವು ನಿರೀಕ್ಷಿಸಿದ್ದಕ್ಕಿಂತಲೂ ಹೆಚ್ಚು, ಸುಮಾರು 50 ಶೇಕಡಾ ಗುರಿಗಳನ್ನು ನಾಶ ಮಾಡಿದ್ದೇವೆ. ಎಲ್ಲರಿಗೂ ಮುಂಚಿತವಾಗಿ ಹೇಳಿದರೆ ಅದು ಅಚ್ಚರಿಯಾಗುವುದಿಲ್ಲ ಎಂದರು.
ಮಧ್ಯಪ್ರಾಚ್ಯದ ಸಂಘರ್ಷದ ಬಗ್ಗೆ ಮಾತನಾಡಿದ ಜಪಾನ್ ಪ್ರಧಾನಿ, ಯುದ್ಧ ಈಗ 21ನೇ ದಿನಕ್ಕೆ ಕಾಲಿಟ್ಟಿದ್ದು, ಜಗತ್ತು “ತೀವ್ರ ಭದ್ರತಾ ಪರಿಸ್ಥಿತಿಯನ್ನು ಅನುಭವಿಸುತ್ತಿದೆ” ಮತ್ತು ಜಾಗತಿಕ ಆರ್ಥಿಕತೆ “ಭಾರೀ ಹೊಡೆತಕ್ಕೆ ಒಳಗಾಗುವ ಸಾಧ್ಯತೆ ಇದೆ” ಎಂದು ಹೇಳಿದರು. ಜೊತೆಗೆ, ವಿಶ್ವಶಾಂತಿ ಸಾಧಿಸುವಲ್ಲಿ ಡೊನಾಲ್ಡ್ ಟ್ರಂಪ್ ಮೇಲೆ ಭರವಸೆ ವ್ಯಕ್ತಪಡಿಸಿದರು.
ಲೋಕದಲ್ಲಿ ಶಾಂತಿಯನ್ನು ಸಾಧಿಸಲು ಸಾಧ್ಯವಿರುವವರು ನೀವು ಮಾತ್ರ, ಅದಕ್ಕಾಗಿ ಅಂತಾರಾಷ್ಟ್ರೀಯ ಸಮುದಾಯದ ಅನೇಕ ಪಾಲುದಾರರೊಂದಿಗೆ ನಾನು ಸಹಕಾರ ನೀಡಲು ಸಿದ್ಧನಿದ್ದೇನೆ ಎಂದು ತಕೈಚಿ ಹೇಳಿದರು.
ತಕೈಚಿ ಅವರು ಇರಾನ್ ಪಕ್ಕದ ಪ್ರದೇಶಗಳ ಮೇಲೆ ನಡೆಸಿದ ದಾಳಿಯನ್ನು ಹಾಗೂ ಜಾಗತಿಕ ಇಂಧನ ಸರಬರಾಜಿಗೆ ಅತ್ಯಂತ ಪ್ರಮುಖವಾದ ಹಾರ್ಮುಜ್ ಜಲಸಂಧಿಯನ್ನು ಮುಚ್ಚಿದ ಕ್ರಮವನ್ನು ಖಂಡಿಸಿದರು. ಜಗತ್ತಿನ ಸಮುದ್ರ ಮಾರ್ಗದ ತೈಲ ಸಾಗಣೆಯ ಸುಮಾರು 20 ಮಿಲಿಯನ್ ಬ್ಯಾರೆಲ್ — ಅಂದರೆ ಐದನೇ ಭಾಗ — ಈ ಜಲಸಂಧಿಯಿಂದ ಸಾಗುತ್ತದೆ.
ನಮ್ಮ ನಡುವೆ ಇರುವ ಸಂಬಂಧದ ಹಿನ್ನೆಲೆಯಲ್ಲಿ ಜಪಾನ್ ಇನ್ನಷ್ಟು ಮುಂದಾಗುತ್ತದೆ ಎಂದು ನಾನು ನಿರೀಕ್ಷಿಸುತ್ತೇನೆ ಎಂದು ಟ್ರಂಪ್ ಹೇಳಿದರು.