ನವದೆಹಲಿ: ಇಸ್ಲಾಮಿಕ್ ರಾಷ್ಟ್ರದ ವಿದ್ಯುತ್ ಗ್ರಿಡ್‌ನ ಮೇಲಿನ ದಾಳಿಗಳನ್ನು ಸ್ಥಗಿತಗೊಳಿಸುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನಿರ್ಧಾರವನ್ನು ಟೀಕಿಸಿರುವ ಇರಾನ್‌ನ ಪ್ರಮುಖ ಸರ್ಕಾರಿ ಒಡೆತನದ ಮಾಧ್ಯಮಗಳು, ಇದು ಅಮೆರಿಕದ ಹಿಂಜರಿಕೆಗೆ ಸಾಕ್ಷಿಯಾಗಿದೆ. ಈ ಕುರಿತಂತೆ ರಿಯಾಯಿತಿ ನೀಡುವ ಅಥವಾ ಹಿಂದೆ ಸರಿಯುವ ಇರಾನ್ ತನ್ನ ಬಲ ಏನೆಂಬುದನ್ನು ತೋರಿಸಲು ಬಯಸುತ್ತದೆ ಎಂದಿವೆ.
ಇರಾನ್‌ನ ವಿದ್ಯುತ್ ಸ್ಥಾವರಗಳು ಮತ್ತು ಸಂಬಂಧಿತ ಮೂಲಸೌಕರ್ಯಗಳ ಮೇಲಿನ ದಾಳಿಯನ್ನು ಐದು ದಿನಗಳ ಕಾಲ ತಡೆಹಿಡಿಯುವಂತೆ ಸೇನೆಗೆ ಸೂಚಿಸಿದ್ದೇನೆ ಎನ್ನುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಯನ್ನು ಟೆಹ್ರಾನ್‌ನ ಮಾಧ್ಯಮಗಳು ಅಪಹಾಸ್ಯ ಮಾಡಿವೆ.
ಇರಾನ್ ಜೊತೆಗೆ ಚರ್ಚೆಗಳು ನಡೆಯುತ್ತಿವೆ ಎಂಬ ಅಮೆರಿಕದ ಹೇಳಿಕೆಗಳಿಗೆ ವಿರುದ್ಧವಾಗಿ, ಅಮೆರಿಕದೊಂದಿಗೆ ಯಾವುದೇ ಮಾತುಕತೆ ನಡೆಯುತ್ತಿಲ್ಲ. ನೇರ ಮಾತುಕತೆಗಳಷ್ಟೇ ಅಲ್ಲದೆ, ಮಧ್ಯವರ್ತಿಗಳ ಮೂಲಕ ಪರೋಕ್ಷ ಮಾತುಕತೆಗಳೂ ನಡೆಯುತ್ತಿಲ್ಲ ಎಂದು ಇರಾನ್‌ನ ಸರ್ಕಾರಿ ಮಾಧ್ಯಮ ಪ್ರೆಸ್ ಟಿವಿ ವರದಿ ಮಾಡಿದೆ.
ಇರಾನ್‌ನ ವಿಶ್ವಾಸಾರ್ಹ ಮಿಲಿಟರಿ ಬೆದರಿಕೆಗಳು ಮತ್ತು ಅಮೆರಿಕ ಮತ್ತು ಪಶ್ಚಿಮದಲ್ಲಿ ಹೆಚ್ಚುತ್ತಿರುವ ಆರ್ಥಿಕ ಒತ್ತಡಗಳಿಂದಾಗಿ ಟ್ರಂಪ್ ದಾಳಿಯ ಪ್ರಸ್ತಾಪವನ್ನು ಹಿಂತೆಗೆದುಕೊಂಡಿದ್ದಾರೆ ಎಂದು ಹಿರಿಯ ಭದ್ರತಾ ಅಧಿಕಾರಿಯೊಬ್ಬರು ಹೇಳಿದ್ದಾರೆ ಎಂದು ಪ್ರೆಸ್ ಟಿವಿ ವರದಿ ಮಾಡಿದೆ.
ಅಮೆರಿಕದೊಂದಿಗೆ ಯಾವುದೇ ಮಾತುಕತೆಗಳು ನಡೆಯುತ್ತಿಲ್ಲ. ಇದೊಂದು ಮಾನಸಿಕ ಯುದ್ಧವಾಗಿದ್ದು, ಇದರಿಂದ ಹಾರ್ಮುಜ್ ಜಲಸಂಧಿ ಸಂಚಾರಕ್ಕೆ ಮುಕ್ತವಾಗುವುದಿಲ್ಲ ಅಥವಾ ಇಂಧನ ಮಾರುಕಟ್ಟೆಗಳನ್ನು ಸ್ಥಿರಗೊಳಿಸುವುದಿಲ್ಲ. 'ದಾಳಿಯನ್ನು ಐದು ದಿನಗಳು ಸ್ಥಗಿತ' ಎಂಬುದನ್ನು ಇರಾನ್ ಯುಎಸ್ ಇನ್ನೂ ದಾಳಿ ಮಾಡಬಹುದು ಎಂಬ ಎಚ್ಚರಿಕೆಯಾಗಿ ನೋಡುತ್ತದೆ. ಇದು ಶಾಂತಿ ಪ್ರಯತ್ನವಲ್ಲ. ಅಮೆರಿಕ ದಾಳಿ ಮಾಡಿದರೆ, ಇರಾನ್ ಪೂರ್ಣ ಮಿಲಿಟರಿ ಬಲದಿಂದ ಪ್ರತಿಕ್ರಿಯಿಸುತ್ತದೆ ಎಂದು ಅಧಿಕಾರಿ ಸ್ಪಷ್ಟಪಡಿಸಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಮೆಹರ್ ನ್ಯೂಸ್, ಇಂಧನ ಸ್ಥಾವರಗಳ ಮೇಲಿನ ಇತ್ತೀಚಿನ ದಾಳಿಗಳು ಮತ್ತು ಇರಾನ್‌ನ ಪ್ರತೀಕಾರವು ಅಮೆರಿಕ ತನ್ನ ಕ್ರಮಗಳನ್ನು ಪುನರ್ವಿಮರ್ಶಿಸುವಂತೆ ಒತ್ತಾಯಿಸಿದೆ ಮತ್ತು ಟ್ರಂಪ್ ಅವರ ಬೆದರಿಕೆಗಳೇ ಸುಳ್ಳು. ಅಮೆರಿಕ ಐದು ದಿನ ದಾಳಿಯನ್ನು ಸ್ಥಗಿತಗೊಳಿಸುವುದಾಗಿ ಹೇಳಿರುವುದೇ ಇದಕ್ಕೆ ಸಾಕ್ಷಿ ಎಂದಿದೆ.
ಟೆಹ್ರಾನ್ ಟೈಮ್ಸ್, ಟ್ರಂಪ್ ಅವರು ರಾಜತಾಂತ್ರಿಕತೆಯಂತೆ ನಟಿಸುತ್ತಿದ್ದಾರೆ. ಆದರೆ, ವಾಸ್ತವವಾಗಿ ಹಿಂದೆ ಸರಿಯುತ್ತಿದ್ದಾರೆ. ಆದರೆ, ಅದನ್ನು ಶಾಂತಿ ಅಥವಾ ಮಾತುಕತೆಯ ಪ್ರಯತ್ನವೆಂದು ಹೇಳುತ್ತಿದ್ದಾರೆ ಎಂದಿದೆ.
ಇರಾನ್‌ನ ಸರ್ಕಾರಿ ಪ್ರಸಾರಕ IRIB, ಇರಾನ್‌ನ ಮಿಲಿಟರಿ ಎಚ್ಚರಿಕೆಗಳು ಮತ್ತು ಕ್ರಮಗಳಿಂದಾಗಿ ಅಮೆರಿಕವು ದಾಳಿಗೆ ವಿರಾಮ ನೀಡಿದೆ. ಬದಲಿಗೆ ಅಮೆರಿಕವು ಶಾಂತಿಯಿಂದ ಇರಲು ನಿರ್ಧರಿಸಿದ್ದರಿಂದ ಅಲ್ಲ. ಹಾರ್ಮುಜ್ ಜಲಸಂಧಿಯನ್ನು ನಿರ್ಬಂಧಿಸುವ ಬೆದರಿಕೆಗಳು ಮತ್ತು ಇಂಧನ ಮೂಲಸೌಕರ್ಯದ ಮೇಲಿನ ದಾಳಿಗಳಂತಹ ಹಿಂದಿನ ಮತ್ತು ಸದ್ಯದ ಕ್ರಮಗಳಿಂದಾಗಿ ಅಮೆರಿಕ ಈ ಕ್ರಮ ಕೈಗೊಂಡಿದೆ. ಏಕೆಂದರೆ, ಇರಾನ್ ಇವುಗಳ ಮೇಲೆ ಬಲವಾದ ಹತೋಟಿ ಹೊಂದಿದೆ ಎಂದು ಸೂಚಿಸಿದೆ.
ಟ್ರಂಪ್ 'ಮತ್ತೆ ಹಿಂದೆ ಸರಿದರು' ಎಂದು ಪ್ರೆಸ್ ಟಿವಿ ಘೋಷಿಸಿದೆ.
ರಾಷ್ಟ್ರೀಯ ಭದ್ರತೆ ಮತ್ತು ವಿದೇಶಾಂಗ ನೀತಿ ಆಯೋಗದ ವಕ್ತಾರ ಇಬ್ರಾಹಿಂ ರೆಝಾಯಿ Xನಲ್ಲಿ ಪೋಸ್ಟ್‌ನಲ್ಲಿ, 'ಟ್ರಂಪ್ ಮತ್ತು ಅಮೆರಿಕ ಮತ್ತೆ ಹಿಂದೆ ಸರಿದಿದ್ದಾರೆ. ಇರಾನ್ ಆತ್ಮವಿಶ್ವಾಸದಿಂದ ಮುಂದುವರಿಯುತ್ತಿದೆ. ದುಷ್ಟ ಶಕ್ತಿಗೆ ಮತ್ತೊಂದು ಸೋಲಾಗಿದೆ' ಎಂದು ಹೇಳಿದ್ದಾರೆ.
ಇರಾನಿನ ಯಾವುದೇ ಮಾಧ್ಯಮಗಳು ಡೊನಾಲ್ಡ್ ಟ್ರಂಪ್ ಹೇಳಿದಂತೆ ಇರಾನ್ ಜೊತೆಗೆ ಮಾತುಕತೆ ನಡೆದಿರುವುದನ್ನು ಒಪ್ಪಿಕೊಂಡಿಲ್ಲ.