ಅಮೆರಿಕದ ವಾಷಿಂಗ್ಟನ್ ಡಿ.ಸಿ.ಯಲ್ಲಿ ವೈಟ್ ಹೌಸ್ ಸಮೀಪ ನಡೆದ ಗುಂಡಿನ ದಾಳಿ ಘಟನೆ ನಂತರ, ನ್ಯಾಷನಲ್ ಗಾರ್ಡ್ ಸದಸ್ಯರು ರಸ್ತೆಯ ಮೇಲೆ ಕಾವಲು ನಿಂತಿರುವ ದೃಶ್ಯ. 
ವಿದೇಶ

ಅಮೆರಿಕ ಶ್ವೇತಭವನ ಬಳಿ ಮತ್ತೆ ಗುಂಡಿನ ದಾಳಿ: ಪ್ರತಿದಾಳಿಗೆ ಬಂದೂಕುಧಾರಿ ಸಾವು-Video

ಶ್ವೇತಭವನದ ಹೊರಗೆ ಶಂಕಿತ 20 ಸುತ್ತು ಗುಂಡು ಹಾರಿಸಿದ್ದು. ಅಮೆರಿಕದ ಭದ್ರತಾ ಪಡೆಘಟನೆಯ ಬಗ್ಗೆ ತನಿಖೆ ನಡೆಸುತ್ತಿದೆ.

ವಾಷಿಂಗ್ಟನ್: ಅಮೆರಿಕಾದ ಶ್ವೇತಭವನ ಸಂಕೀರ್ಣದ ಬಳಿ ಗುಂಡಿನ ದಾಳಿ ನಡೆದಿದ್ದು, ಪೆನ್ಸಿಲ್ವೇನಿಯಾ ಅವೆನ್ಯೂ NW ಬಳಿ ಫೈರಿಂಗ್​ ನಡೆದಿದೆ. ಗುಂಡಿನ ದಾಳಿ ನಡೆದಾಗ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶ್ವೇತಭವನದಲ್ಲೇ ಇದ್ದರು ಎನ್ನಲಾಗಿದೆ. ​

ಶ್ವೇತಭವನದ ಹೊರಗೆ ಶಂಕಿತ 20 ಸುತ್ತು ಗುಂಡು ಹಾರಿಸಿದ್ದು. ಅಮೆರಿಕದ ಭದ್ರತಾ ಪಡೆಘಟನೆಯ ಬಗ್ಗೆ ತನಿಖೆ ನಡೆಸುತ್ತಿದೆ. ಅಮೆರಿಕದ ಸೀಕ್ರೆಟ್ ಸರ್ವಿಸ್ ನಿನ್ನೆ ಶನಿವಾರ ತಡರಾತ್ರಿ ಬಿಡುಗಡೆ ಮಾಡಿದ ಪ್ರಕಟಣೆಯ ಪ್ರಕಾರ, ಸಂಜೆ ಸುಮಾರು 6 ಗಂಟೆಯ ನಂತರ ವ್ಯಕ್ತಿಯೋರ್ವ ಭದ್ರತಾ ತಪಾಸಣಾ ಕೇಂದ್ರದತ್ತ ಬಂದು ತನ್ನ ಬ್ಯಾಗಿನಿಂದ ಗನ್ ತೆಗೆದು ಕರ್ತವ್ಯದಲ್ಲಿದ್ದ ಅಧಿಕಾರಿಗಳ ಮೇಲೆ ಗುಂಡಿನ ದಾಳಿ ಆರಂಭಿಸಿದ್ದ ಎನ್ನಲಾಗಿದೆ.

ಭದ್ರತಾ ತಪಾಸಣಾ ಕೇಂದ್ರದ ಬಳಿ ಗುಂಡಿನ ದಾಳಿ ನಡೆಸಿದ ವ್ಯಕ್ತಿಯನ್ನು, ಪ್ರತಿಯಾಗಿ ಗುಂಡು ಹಾರಿಸಿದ ಅಧಿಕಾರಿಗಳು ಹೊಡೆದುರುಳಿಸಿದ್ದು, ಆತ ಮೃತಪಟ್ಟಿದ್ದಾನೆ ಎಂದು ಯುಎಸ್ ಸೀಕ್ರೆಟ್ ಸರ್ವಿಸ್ ತಿಳಿಸಿದೆ. ಕಳೆದ ಒಂದು ತಿಂಗಳ ಅವಧಿಯಲ್ಲಿ ಅಧ್ಯಕ್ಷ Donald Trump ಅವರ ಸುತ್ತಮುತ್ತ ನಡೆದ ಮೂರನೇ ಗುಂಡಿನ ದಾಳಿ ಘಟನೆ ಇದಾಗಿದೆ.

ಕಾನೂನು ಜಾರಿಗೊಳಿಸುವ ಸಂಸ್ಥೆಯು ಎಕ್ಸ್ ಸೋಷಿಯಲ್ ಮೀಡಿಯಾದಲ್ಲಿ ಪ್ರಕಟಿಸಿದ ಮಾಹಿತಿ ಪ್ರಕಾರ, 17ನೇ ಸ್ಟ್ರೀಟ್ ಮತ್ತು ಪೆನ್ಸಿಲ್ವೇನಿಯಾ ಅವೆನ್ಯೂ ಪ್ರದೇಶದಲ್ಲಿ ಸಂಜೆ 6 ಗಂಟೆಯ ನಂತರ ಆ ವ್ಯಕ್ತಿ “ತನ್ನ ಬ್ಯಾಗ್‌ನಿಂದ ಶಸ್ತ್ರಾಸ್ತ್ರ ಹೊರತೆಗೆದು ಗುಂಡಿನ ದಾಳಿ ಆರಂಭಿಸಿದ್ದಾನೆ ಎಂದು ತಿಳಿಸಿದೆ.

ಇದಕ್ಕೆ ಪ್ರತಿಯಾಗಿ ಭದ್ರತಾ ಪಡೆ ಯೋಧರು ಗುಂಡು ಹಾರಿಸಿ ಶಂಕಿತನನ್ನು ಹೊಡೆದಿದ್ದಾರೆ. ಬಳಿಕ ಅವನನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ನಂತರ ಆತ ಮೃತಪಟ್ಟಿದ್ದಾನೆ ಎಂದು ಸೀಕ್ರೆಟ್ ಸರ್ವಿಸ್ ಹೇಳಿದೆ. ತನಿಖೆಯ ಬಗ್ಗೆ ಬಹಿರಂಗವಾಗಿ ಮಾತನಾಡಲು ಅನುಮತಿ ಇಲ್ಲದ ಕಾರಣ ಅನಾಮಧೇಯವಾಗಿರಲು ಬಯಸಿದ ಕಾನೂನು ಜಾರಿಗೊಳಿಸುವ ಅಧಿಕಾರಿಯೊಬ್ಬರು, ಶಂಕಿತನನ್ನು 21 ವರ್ಷದ ನಸಿರೆ ಬೆಸ್ಟ್ ಎಂದು ಗುರುತಿಸಿದ್ದಾರೆ.

ಮೂರನೇ ಘಟನೆ

ಕಳೆದ ಏಪ್ರಿಲ್‌ನಲ್ಲಿ ನಡೆದ ವೈಟ್ ಹೌಸ್ ಕರಸ್ಪಾಂಡೆಂಟ್ಸ್ ಅಸೋಸಿಯೇಶನ್ ಡಿನ್ನರ್ ವೇಳೆ ಮತ್ತು ಮೇ ತಿಂಗಳ ಆರಂಭದಲ್ಲಿ ವಾಷಿಂಗ್ಟನ್ ಸ್ಮಾರಕದ ಬಳಿ ನಡೆದ ಗುಂಡಿನ ದಾಳಿಗಳ ಘಟನೆಗಳ ನಂತರ, ಕಳೆದ ಒಂದು ತಿಂಗಳಲ್ಲಿ ಅಧ್ಯಕ್ಷರ ಸಮೀಪ ಗುಂಡಿನ ದಾಳಿ ನಡೆದ ಮೂರನೇ ಘಟನೆ ಇದಾಗಿದೆ.

ನಿನ್ನೆ ರಾತ್ರಿ ನಡೆದ ಘಟನೆಯಲ್ಲಿ ಒಬ್ಬ ಪ್ರೇಕ್ಷಕನಿಗೂ ಗುಂಡು ತಗುಲಿತ್ತು. ಆದರೆ ಆತನಿಗೆ ಶಂಕಿತನು ಮೊದಲು ಹಾರಿಸಿದ ಗುಂಡು ತಗುಲಿತೇ ಅಥವಾ ನಂತರ ಅಧಿಕಾರಿಗಳು ಹಾರಿಸಿದ ಗುಂಡು ತಗುಲಿತೇ ಎಂಬುದು ಸ್ಪಷ್ಟವಾಗಿಲ್ಲ ಎಂದು ಕಾನೂನು ಜಾರಿಗೊಳಿಸುವ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸೀಕ್ರೆಟ್ ಸರ್ವಿಸ್ ತನ್ನ ಯಾವುದೇ ಅಧಿಕಾರಿಗಳಿಗೆ ಗಾಯಗಳಾಗಿಲ್ಲ ಎಂದು ಹೇಳಿದ್ದು, ಘಟನೆಯ ಸಮಯದಲ್ಲಿ ವೈಟ್ ಹೌಸ್‌ನಲ್ಲಿದ್ದ ಡೊನಾಲ್ಡ್ ಟ್ರಂಪ್ ಅವರಿಗೆ ಸಹ ಯಾವುದೇ ಪರಿಣಾಮವಾಗಿಲ್ಲ ಎಂದು ಸ್ಪಷ್ಟಪಡಿಸಿದೆ.

ನಿನ್ನೆ ಸಾಯಂಕಾಲ ವೈಟ್ ಹೌಸ್‌ನಲ್ಲಿ ಕೆಲಸ ಮಾಡುತ್ತಿದ್ದ ಪತ್ರಕರ್ತರು ಸರಣಿ ಗುಂಡಿನ ಸದ್ದು ಕೇಳಿದುದಾಗಿ ಹೇಳಿದ್ದು, ನಂತರ ಅವರನ್ನು ಪ್ರೆಸ್ ಬ್ರೀಫಿಂಗ್ ಕೊಠಡಿಯೊಳಗೆ ಆಶ್ರಯ ಪಡೆಯಲು ಸೂಚಿಸಲಾಯಿತು.

ಸಾಮಾಜಿಕ ಜಾಲತಾಣದ ಪೋಸ್ಟ್‌ನಲ್ಲಿ FBI ನಿರ್ದೇಶಕ ಕಾಶ್ ಪಟೇಲ್, ಅಧಿಕಾರಿಗಳು ಗುಂಡಿನ ದಾಳಿ ಪ್ರಕರಣಕ್ಕೆ ಸ್ಪಂದಿಸುತ್ತಿದ್ದಾರೆ ಎಂದು ಹೇಳಿ, ಸಾಧ್ಯವಾದಷ್ಟು ಬೇಗ ಸಾರ್ವಜನಿಕರಿಗೆ ಮಾಹಿತಿ ನೀಡುತ್ತೇವೆ ಎಂದಿದ್ದಾರೆ.

ಗುಂಡಿನ ದಾಳಿಯ ಸಾಕ್ಷ್ಯಗಳು ವೈಟ್ ಹೌಸ್ ಸಂಕೀರ್ಣದ ಹೊರಭಾಗದ ಪಾದಚಾರಿ ದಾರಿಯಲ್ಲಿ ಕಂಡುಬಂದವು. ಅಲ್ಲಿ ಹಳದಿ ಬಣ್ಣದ ಕ್ರೈಂ ಸೀನ್ ಟೇಪ್‌ಗಳನ್ನು ಹಾಕಲಾಗಿದ್ದು, ಯುಎಸ್ ಸೀಕ್ರೆಟ್ ಸರ್ವಿಸ್ ಅಧಿಕಾರಿಗಳು ನೆಲದ ಮೇಲೆ ಈ ಹಿಂದೆ ಹಲವು ವರ್ಷಗಳಿಂದ ಕಿತ್ತಳೆ ಬಣ್ಣದ ಸಾಕ್ಷ್ಯ ಚಿಹ್ನೆಗಳನ್ನು ಇಟ್ಟಿದ್ದರು. ತುರ್ತು ವೈದ್ಯಕೀಯ ಸಿಬ್ಬಂದಿ ಬಳಸುವ ನೇರಳೆ ಬಣ್ಣದ ಶಸ್ತ್ರಚಿಕಿತ್ಸಾ ಕೈಗವಸುಗಳು ಹಾಗೂ ವೈದ್ಯಕೀಯ ಕಿಟ್‌ಗಳೂ ಅಲ್ಲಿದ್ದವು.

ಎಕ್ಸ್ ನಲ್ಲಿ ಹಂಚಿಕೊಂಡ ಪೋಸ್ಟ್‌ನಲ್ಲಿ ABC News‌ನ ಹಿರಿಯ ವೈಟ್ ಹೌಸ್ ವರದಿಗಾರ್ತಿ ಸೆಲಿನಾ ವಾಂಗ್, “ಡಜನ್‌ಗಟ್ಟಲೆ ಗುಂಡಿನ ಸದ್ದು ಕೇಳಿದ ಕ್ಷಣ” ಎಂದು ಹೇಳಿದ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಪ್ರತಿದಿನ ವೈಟ್ ಹೌಸ್ ವರದಿಗಾರರು ಮಾಡುವಂತೆ, ಸಾಮಾಜಿಕ ಜಾಲತಾಣದ ಪೋಸ್ಟ್‌ಗಾಗಿ ಮೊಬೈಲ್‌ನಲ್ಲಿ ವಿಡಿಯೋ ಚಿತ್ರೀಕರಿಸುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ವಾಂಗ್ ತಿಳಿಸಿದ್ದಾರೆ.

ನಿನ್ನೆ ಬೆಳಗ್ಗೆ ಟ್ರಂಪ್ ಇರಾನ್ ಒಪ್ಪಂದದ ಬಗ್ಗೆ ನೀಡಿದ ಹೇಳಿಕೆಗಳ ಕುರಿತು ಮಾತನಾಡುತ್ತಿದ್ದ ವಾಂಗ್, ಹಿನ್ನಲೆಯಲ್ಲಿ ಗುಂಡಿನ ಸದ್ದು ಕೇಳುತ್ತಿದ್ದಂತೆಯೇ ಬೆಚ್ಚಿಬಿದ್ದು ಮಾಧ್ಯಮ ಟೆಂಟ್ ಒಳಗೆ ಅಡಗಿಕೊಳ್ಳುತ್ತಿರುವುದು ಕಾಣುತ್ತದೆ. ಈ ಟೆಂಟ್‌ಗಳು ವೈಟ್ ಹೌಸ್ ಡ್ರೈವ್‌ವೇ ಪಕ್ಕದಲ್ಲಿದ್ದು, ಅಲ್ಲಿ ಪ್ರಸಾರ ಸಂಸ್ಥೆಗಳು ವರದಿಗಳನ್ನು ಚಿತ್ರೀಕರಿಸುತ್ತವೆ.

ವಾಂಗ್ ಅವರ ವಿಡಿಯೋ X ನಲ್ಲಿ ಸಾವಿರಾರು ಬಾರಿ ಹಂಚಿಕೆಯಾಗಿದ್ದು, ಕನಿಷ್ಠ 30 ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಿಸಲ್ಪಟ್ಟಿತ್ತು. ಮೆಟ್ರೋಪಾಲಿಟನ್ ಪೊಲೀಸ್ ಇಲಾಖೆ ತನ್ನ X ಖಾತೆಯಲ್ಲಿ, ಸೀಕ್ರೆಟ್ ಸರ್ವಿಸ್ ಸ್ಥಳದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಜನರು ಆ ಪ್ರದೇಶದಲ್ಲಿ ಓಡಾಡದಂತೆ ಎಚ್ಚರಿಕೆ ನೀಡಿದೆ.

ಈ ಘಟನೆ ನಡೆದ ಸ್ಥಳವೇ ಕಳೆದ ನವೆಂಬರ್‌ನಲ್ಲಿ ವೆಸ್ಟ್ ವರ್ಜೀನಿಯಾ ನ್ಯಾಷನಲ್ ಗಾರ್ಡ್‌ನ ಇಬ್ಬರು ಸದಸ್ಯರ ಮೇಲೆ ದಾಳಿ ನಡೆದ ಪ್ರದೇಶದ ಸಮೀಪದಲ್ಲಿದೆ. ಯುಎಸ್ ಆರ್ಮಿ ಸ್ಪೆಷಲಿಸ್ಟ್ ಸಾರಾ ಬೆಕ್‌ಸ್ಟ್ರೋಮ್ (20ವ) ಮೃತಪಟ್ಟಿದ್ದರು. ಆಂಡ್ರೂ ವುಲ್ಫ್ (ಆಗ 24) ಗಂಭೀರವಾಗಿ ಗಾಯಗೊಂಡಿದ್ದರು. ಆ ಪ್ರಕರಣದಲ್ಲಿ ರಹ್ಮಾನುಲ್ಲಾ ಲಕಾನ್ವಾಲ್ ವಿರುದ್ಧ ಆರೋಪ ದಾಖಲಿಸಲಾಗಿದೆ.

ನಿನ್ನೆಯ ಗುಂಡಿನ ದಾಳಿ, ಏಪ್ರಿಲ್ 25ರಂದು ವಾಷಿಂಗ್ಟನ್‌ನ ಹೊಟೇಲ್ ನಲ್ಲಿ ನಡೆದ ವಾರ್ಷಿಕ ವೈಟ್ ಹೌಸ್ ಕರಸ್ಪಾಂಡೆಂಟ್ಸ್ ಅಸೋಸಿಯೇಶನ್ ಡಿನ್ನರ್ ವೇಳೆ ಅಧ್ಯಕ್ಷರ ಮೇಲೆ ಹತ್ಯೆ ಯತ್ನ ನಡೆದಿತ್ತು ಎಂಬ ಕಾನೂನು ಜಾರಿಗೊಳಿಸುವ ಸಂಸ್ಥೆಗಳ ಹೇಳಿಕೆಯ ಸುಮಾರು ಒಂದು ತಿಂಗಳ ನಂತರ ನಡೆದಿದೆ.

ಕ್ಯಾಲಿಫೋರ್ನಿಯಾದ ಟೋರನ್ಸ್‌ನ ಕೋಲ್ ಟೊಮಾಸ್ ಆಲೆನ್, ಡೊನಾಲ್ಡ್ ಟ್ರಂಪ್ ಅವರನ್ನು ಕೊಲ್ಲಲು ಯತ್ನಿಸಿದ್ದಾನೆ ಎಂಬ ಆರೋಪಗಳನ್ನು ಇತ್ತೀಚೆಗೆ ತಳ್ಳಿಹಾಕಿದ್ದು, ಇನ್ನೂ ಫೆಡರಲ್ ಬಂಧನದಲ್ಲಿದ್ದಾನೆ.

ಆ ಘಟನೆ ನಂತರ, ವಾಷಿಂಗ್ಟನ್ ಸ್ಮಾರಕದ ಸಮೀಪ ಅಧಿಕಾರಿಗಳ ಮೇಲೆ ಗುಂಡು ಹಾರಿಸಿದ್ದಾನೆ ಎಂದು ಹೇಳಲಾದ ಶಂಕಿತನ ಮೇಲೆ ಸೀಕ್ರೆಟ್ ಸರ್ವಿಸ್ ಅಧಿಕಾರಿಗಳು ಗುಂಡು ಹಾರಿಸಿದ್ದರು. ಟೆಕ್ಸಾಸ್‌ನ ಮಿಡ್‌ಲ್ಯಾಂಡ್‌ನ 45 ವರ್ಷದ ಮೈಕೆಲ್ ಮಾರ್ಕ್ಸ್ ವಿರುದ್ಧ ಮೇ 4ರಂದು ನಡೆದ ಗುಂಡಿನ ದಾಳಿ ಪ್ರಕರಣದಲ್ಲಿ ಅಮೆರಿಕದ ಜಿಲ್ಲಾ ನ್ಯಾಯಾಲಯದಲ್ಲಿ ದೂರು ದಾಖಲಿಸಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಯುದ್ಧ ಕೊನೆಗೊಳಿಸುವ ಗುರಿ: ಒಪ್ಪಂದಕ್ಕೆ ಸನಿಹದಲ್ಲಿ ಇರಾನ್-ಅಮೆರಿಕ!

Cockroach Janta Party ಬೆಳವಣಿಗೆ ಸಾರ್ವಜನಿಕ ಸಂಕಷ್ಟ ತೋರುತ್ತದೆ: ಪ್ರಶಾಂತ್ ಕಿಶೋರ್

ಆನೇಕಲ್‌ನಲ್ಲಿ ನಿರ್ಮಿಸಲಾಗುತ್ತಿರುವ ನೂತನ ಕ್ರಿಕೆಟ್ ಕ್ರೀಡಾಂಗಣದಿಂದ ಪ್ರವಾಸೋದ್ಯಮ, ಉದ್ಯೋಗ ಸೃಷ್ಟಿ: ಸಿಎಂ ಸಿದ್ದರಾಮಯ್ಯ

ನನ್ನನ್ನು ಕ್ರೂರ ಸರ್ವಾಧಿಕಾರಿ ಅನ್ನಿ, ಆದ್ರೆ 'ಗುಗ್ಗು' ಅಂತ ಮಾತ್ರ ಹೇಳಬೇಡಿ: ಡೊನಾಲ್ಡ್ ಟ್ರಂಪ್

ಬಂಗಾಳದಲ್ಲಿ 'ಫುಟ್ಬಾಲ್ ಪಾಲಿಟಿಕ್ಸ್': ಮಮತಾ ವಿನ್ಯಾಸಗೊಳಿಸಿದ್ದ ಪ್ರತಿಮೆ ತೆರವುಗೊಳಿಸಿದ ಬಿಜೆಪಿ ಸರ್ಕಾರ

SCROLL FOR NEXT