ವಾಷಿಂಗ್ಟನ್: ಅಮೆರಿಕದ ಮಧ್ಯಂತರ ಚುನಾವಣೆಯಲ್ಲಿ ತೀವ್ರ ಅನುಭವಿಸುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ದೇಶದ ಆರ್ಥಿಕತೆಯ ಬಗ್ಗೆ ಅಮೆರಿಕನ್ನರಿಗೆ ತೀವ್ರ ಅಸಮಾಧಾನ ಇದೆ ಎಂದು ಸಿಎನ್ಎನ್ ಮತದಾರರ ಸಮೀಕ್ಷೆ ತಿಳಿಸಿದೆ.
ಅಮೆರಿಕದ ಸ್ಥಿತಿಗತಿ, ಆರ್ಥಿಕತೆ ಮತ್ತು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕಾರ್ಯವೈಖರಿಯ ಬಗ್ಗೆ ಮತದಾರರಲ್ಲಿ ತೀವ್ರ ಅಸಮಾಧಾನ ಇದೆ ಎಂದು ಸಿಎನ್ಎನ್ ಮತದಾರರ ಸಮೀಕ್ಷೆಯ ಪ್ರಾಥಮಿಕ ಫಲಿತಾಂಶಗಳು ತಿಳಿಸಿವೆ.
ಸಮೀಕ್ಷೆಗೆ ಒಳಗಾದವರಲ್ಲಿ ಸುಮಾರು ಮುಕ್ಕಾಲು ಭಾಗದಷ್ಟು ಮತದಾರರು, ದೇಶವು ಸಾಗುತ್ತಿರುವ ದಿಕ್ಕಿನ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದ್ದಾರೆ. ಇವರಲ್ಲಿ ಪ್ರತಿ 10 ಮಂದಿಯಲ್ಲಿ ಸುಮಾರು 4 ಮಂದಿ ತಮಗೆ 'ಕೋಪ'ವಿದೆ ಎಂದು ಹೇಳಿಕೊಂಡಿದ್ದಾರೆ.
ಈ ಅಸಮಾಧಾನಕ್ಕೆ ಎರಡು ಪ್ರಮುಖ ಕಾರಣಗಳನ್ನು ಪ್ರಾಥಮಿಕ ಫಲಿತಾಂಶ ಸೂಚಿಸುತ್ತವೆ. ಟ್ರಂಪ್ ಅವರ ಅಧ್ಯಕ್ಷೀಯ ಅವಧಿಯ ಬಗ್ಗೆ ಹೆಚ್ಚುತ್ತಿರುವ ಅಸಮಾಧಾನ ಮತ್ತು ಆರ್ಥಿಕತೆಯ ಕುರಿತಾದ ಆತಂಕಗಳು. ಈ ಭಾವನೆಗಳು ಅಂತಿಮ ಫಲಿತಾಂಶದ ಮೇಲೆ ಯಾವ ರೀತಿಯ ಪ್ರಭಾವ ಬೀರುತ್ತವೆ ಎಂಬುದು ಇನ್ನೂ ಸ್ಪಷ್ಟವಾಗಬೇಕಿದೆ. ವಿಶೇಷವಾಗಿ ಸಾಂಪ್ರದಾಯಿಕವಾಗಿ ರಿಪಬ್ಲಿಕನ್ ಪಕ್ಷದ ಪ್ರಾಬಲ್ಯವಿರುವ ರಾಜ್ಯಗಳಲ್ಲಿ, ಸೆನೆಟ್ ಸ್ಥಾನಗಳಿಗಾಗಿ ನಡೆಯುತ್ತಿರುವ ಸ್ಪರ್ಧೆ ಅನಿರೀಕ್ಷಿತವಾಗಿ ತೀವ್ರಗೊಂಡಿದೆ.
ಸುಮಾರು 10 ರಲ್ಲಿ 6 ಮತದಾರರು, ಅಧ್ಯಕ್ಷರಾಗಿ ಟ್ರಂಪ್ ಅವರ ಕಾರ್ಯವೈಖರಿಯನ್ನು ಒಪ್ಪುವುದಿಲ್ಲ ಎಂದು ಹೇಳಿದ್ದಾರೆ. ಇವರಲ್ಲಿ ಅರ್ಧದಷ್ಟು ಜನರು ತೀವ್ರ ಅಸಮ್ಮತಿ ವ್ಯಕ್ತಪಡಿಸಿದ್ದಾರೆ. ಗಮನಾರ್ಹ ಸಂಗತಿಯೆಂದರೆ, 2024 ರ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್‌ಗೆ ಮತ ಹಾಕಿದವರಲ್ಲಿ ಪ್ರತಿ 5 ಮಂದಿಯಲ್ಲಿ ಒಬ್ಬರು, ಈಗ ಅವರ ಕಾರ್ಯವೈಖರಿಯ ಬಗ್ಗೆ ಅತೃಪ್ತರಾಗಿರುವುದಾಗಿ ತಿಳಿಸಿದ್ದಾರೆ.
ಸಮೀಕ್ಷೆಯಲ್ಲಿ ಪಾಲ್ಗೊಂಡವರಲ್ಲಿ ಸುಮಾರು ಮೂರನೇ ಎರಡರಷ್ಟು ಜನ, ಟ್ರಂಪ್ ಆರ್ಥಿಕ ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಜೀವನ ವೆಚ್ಚ ಏರಿಕೆಗೆ, ಟ್ರಂಪ್ ಅವರ ನೀತಿಗಳೇ ಕಾರಣ ಎಂದು ಬಹುತೇಕರು ದೂಷಿಸಿದ್ದಾರೆ.