ಜಾರ್ಜಿಯಾದ ಅಟ್ಲಾಂಟಾದಲ್ಲಿ ನಡೆದ ಮಧ್ಯಂತರ ಚುನಾವಣೆ ಫಲಿತಾಂಶ ವೀಕ್ಷಣಾ ಕಾರ್ಯಕ್ರಮದಲ್ಲಿ, ಡೆಮೋಕ್ರಾಟ್ ಸೆನೆಟರ್ ಜಾನ್ ಒಸಾಫ್ ಪರವಾಗಿ ಆರಂಭಿಕ ಚುನಾವಣಾ ಫಲಿತಾಂಶಗಳು ಪ್ರಕಟವಾಗುತ್ತಿದ್ದಂತೆ ಬೆಂಬಲಿಗರು ಸಂಭ್ರಮ ವ್ಯಕ್ತಪಡಿಸಿದರು.  
ವಿದೇಶ

ಅಮೆರಿಕ ಮಧ್ಯಂತರ ಚುನಾವಣೆ: ಡೆಮೋಕ್ರಾಟ್ ಪಕ್ಷ ಮುನ್ನಡೆ, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆ ಹಿನ್ನಡೆ

ಆರಂಭಿಕ ಗೆಲುವು ಕಾಂಗ್ರೆಸ್‌ನ ಎರಡೂ ಸದನಗಳನ್ನು ತನ್ನ ಹಿಡಿತಕ್ಕೆ ತೆಗೆದುಕೊಳ್ಳುವ ಡೆಮಾಕ್ರಟಿಕ್ ಪಕ್ಷದ ನಿರೀಕ್ಷೆಯನ್ನು ಹೆಚ್ಚಿಸಿವೆ.

ವಾಷಿಂಗ್ಟನ್: ಅಮೆರಿಕದ ಮಧ್ಯಂತರ ಚುನಾವಣೆಯ ಆರಂಭಿಕ ಫಲಿತಾಂಶಗಳಲ್ಲಿ ಡೆಮೋಕ್ರಾಟ್ ಪಕ್ಷ ನಿನ್ನೆ ಮಂಗಳವಾರ ಸೆನೆಟ್‌ನ ಒಂದು ಸ್ಥಾನವನ್ನು ರಿಪಬ್ಲಿಕನ್ ಪಕ್ಷದಿಂದ ತನ್ನ ತೆಕ್ಕೆಗೆ ಪಡೆದುಕೊಂಡಿದೆ. ಈ ಬೆಳವಣಿಗೆ ಯುಎಸ್ ಕಾಂಗ್ರೆಸ್ ನ ಎರಡೂ ಸದನಗಳ ಮೇಲೆ ನಿಯಂತ್ರಣ ಸಾಧಿಸುವ ಡೆಮೋಕ್ರಾಟ್ ಪಕ್ಷದ ಪ್ರಯತ್ನಕ್ಕೆ ಮತ್ತಷ್ಟು ಬಲ ನೀಡಿದೆ. ಇದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ದೊಡ್ಡ ರಾಜಕೀಯ ಹಿನ್ನಡೆಯಾಗುವ ಸಾಧ್ಯತೆಯಿದೆ.

ಉತ್ತರ ಕೆರೊಲಿನಾದಲ್ಲಿ ಡೆಮೋಕ್ರಾಟ್ ಪಕ್ಷದ ಜನಪ್ರಿಯ ಮಾಜಿ ಗವರ್ನರ್ ರಾಯ್ ಕೂಪರ್, ಸೆನೆಟ್ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಬೆಂಬಲದೊಂದಿಗೆ ಕಣಕ್ಕಿಳಿದಿದ್ದ ಅಭ್ಯರ್ಥಿಯನ್ನು ಸೋಲಿಸಿದ್ದಾರೆ. ಇದೇ ವೇಳೆ ಜಾರ್ಜಿಯಾದಲ್ಲಿ ಡೆಮೋಕ್ರಾಟ್ ಪಕ್ಷದ ಯುವ ನಾಯಕ ಜಾನ್ ಒಸಾಫ್ ಅವರು ಸೆನೆಟ್‌ಗೆ ಮರು ಆಯ್ಕೆಯಾಗಿದ್ದಾರೆ ಎಂದು ಮಾಧ್ಯಮಗಳ ಚುನಾವಣಾ ಫಲಿತಾಂಶದ ಅಂದಾಜುಗಳು ತಿಳಿಸಿವೆ.

ಆರಂಭಿಕ ಗೆಲುವು ಕಾಂಗ್ರೆಸ್‌ನ ಎರಡೂ ಸದನಗಳನ್ನು ತನ್ನ ಹಿಡಿತಕ್ಕೆ ತೆಗೆದುಕೊಳ್ಳುವ ಡೆಮೋಕ್ರಾಟ್ ನಿರೀಕ್ಷೆಯನ್ನು ಹೆಚ್ಚಿಸಿವೆ.

ಡೊನಾಲ್ಡ್ ಟ್ರಂಪ್ ಅಧಿಕಾರಕ್ಕೆ ಬಂದ ಎರಡು ವರ್ಷಗಳ ಆಡಳಿತದ ಏರಿಳಿತಗಳು ಹಾಗೂ ವಿಭಜಕ ನೀತಿಗಳ ಕುರಿತು ಜನರು ನೀಡುತ್ತಿರುವ ತೀರ್ಪು ಎಂದೇ ಈ ಚುನಾವಣೆಯನ್ನು ಪರಿಗಣಿಸಲಾಗಿದೆ.

ಜೀವನ ನಿರ್ವಹಣಾ ವೆಚ್ಚ ಏರಿಕೆ, ಡೊನಾಲ್ಡ್ ಟ್ರಂಪ್ ಅವರ ವ್ಯಾಪಾರ ಸಂಘರ್ಷಗಳು ಹಾಗೂ ಇರಾನ್ ವಿರುದ್ಧ ಅವರು ಆರಂಭಿಸಿದ ಯುದ್ಧದ ಕುರಿತು ಜನರಲ್ಲಿ ಆಕ್ರೋಶ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಅಮೆರಿಕದ ಇತಿಹಾಸದಲ್ಲೇ ಅತ್ಯಂತ ಜನಪ್ರಿಯತೆ ಕಳೆದುಕೊಂಡ ಅಧ್ಯಕ್ಷರಲ್ಲಿ ಟ್ರಂಪ್ ಒಬ್ಬರು ಎಂದು ಸಮೀಕ್ಷೆಗಳು ತಿಳಿಸಿವೆ.

ಡೆಮೋಕ್ರಾಟ್ ಪಕ್ಷದ ಹೌಸ್ ನಾಯಕ ಹಕೀಮ್ ಜೆಫ್ರೀಸ್, ದೇಶವು ನಾಟಕೀಯ ಬದಲಾವಣೆಯ ಹೊಸ್ತಿಲಲ್ಲಿದೆ ಎಂದು ಹೇಳಿದ್ದಾರೆ. ತಮ್ಮ ಪಕ್ಷ ಮತ್ತೆ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನಲ್ಲಿ ಬಹುಮತ ಗಳಿಸಲಿದೆ ಎಂಬ ವಿಶ್ವಾಸವನ್ನೂ ವ್ಯಕ್ತಪಡಿಸಿದ್ದಾರೆ.

ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಚುನಾವಣೆಯಲ್ಲಿಯೂ ರಿಪಬ್ಲಿಕನ್ ಪಕ್ಷದ ದುರ್ಬಲತೆ ಫ್ಲೋರಿಡಾದ ಫಲಿತಾಂಶಗಳಲ್ಲಿ ಗೋಚರಿಸಿದೆ. ಟ್ರಂಪ್ ಅವರ ಪಕ್ಷಕ್ಕೆ ಅನುಕೂಲವಾಗುವಂತೆ ಮರುವಿಂಗಡಣೆ ಮಾಡಲಾಗಿದ್ದ ಹಲವು ಕ್ಷೇತ್ರಗಳಲ್ಲಿ ಡೆಮೋಕ್ರಾಟ್ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದು ಚುನಾವಣಾ ಫಲಿತಾಂಶದ ಅಂದಾಜುಗಳು ತಿಳಿಸಿವೆ.

ಇದಕ್ಕೆ ಪ್ರಮುಖ ಉದಾಹರಣೆಯಾಗಿ, 2024ರ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್ 13 ಅಂಕಗಳ ಅಂತರದಿಂದ ಗೆದ್ದಿದ್ದ ಕ್ಷೇತ್ರದಲ್ಲಿ ರಿಪಬ್ಲಿಕನ್ ಸಂಸದೆ ಅನಾ ಪೌಲಿನಾ ಲೂನಾ ಅವರು ಅತ್ಯಂತ ಕಡಿಮೆ ಅಂತರದ ಮುನ್ನಡೆಯನ್ನು ಕಾಯ್ದುಕೊಳ್ಳಲು ಹೋರಾಡುತ್ತಿದ್ದಾರೆ.

ಸೆನೆಟ್‌ನಲ್ಲಿ ಡೆಮೋಕ್ರಾಟ್ ಪಕ್ಷಕ್ಕೆ ಮಹತ್ವದ ಮುನ್ನಡೆ

ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನಲ್ಲಿ ಡೆಮೋಕ್ರಾಟ್ ಪಕ್ಷ ರಿಪಬ್ಲಿಕನ್ ಪಕ್ಷವನ್ನು ಸೋಲಿಸಿ ಬಹುಮತ ಪಡೆಯಲಿದೆ ಎಂದು ವ್ಯಾಪಕವಾಗಿ ನಿರೀಕ್ಷಿಸಲಾಗಿದೆ. ಆದರೆ, ರಿಪಬ್ಲಿಕನ್ ಪಕ್ಷ ಅಲ್ಪ ಬಹುಮತ ಹೊಂದಿರುವ ಸೆನೆಟ್‌ನಲ್ಲಿನ ಸ್ಪರ್ಧೆ ತೀವ್ರ ಪೈಪೋಟಿಯಿಂದ ಕೂಡಿರಲಿದೆ ಎಂದು ಅಂದಾಜಿಸಲಾಗಿದೆ.

69 ವರ್ಷದ ರಾಯ್ ಕೂಪರ್ ಅವರು ಉತ್ತರ ಕೆರೊಲಿನಾದಲ್ಲಿ ರಿಪಬ್ಲಿಕನ್ ರಾಷ್ಟ್ರೀಯ ಸಮಿತಿಯ ಮಾಜಿ ಅಧ್ಯಕ್ಷ ಮೈಕೆಲ್ ವಾಟ್ಲಿ ಅವರನ್ನು ಸೋಲಿಸಿದ್ದಾರೆ. ಟ್ರಂಪ್ ತಮ್ಮ ಮೂರೂ ಅಧ್ಯಕ್ಷೀಯ ಚುನಾವಣಾ ಪ್ರಚಾರಗಳಲ್ಲಿ ಗೆಲುವು ಸಾಧಿಸಿದ್ದ ರಾಜ್ಯವೇ ಉತ್ತರ ಕೆರೊಲಿನಾ.

ಈ ಗೆಲುವು ಸೆನೆಟ್‌ನಲ್ಲಿ ರಿಪಬ್ಲಿಕನ್ ಪಕ್ಷ ಹೊಂದಿರುವ 53-47ರ ಬಹುಮತವನ್ನು ಮೀರಿಸಲು ಪ್ರಯತ್ನಿಸುತ್ತಿರುವ ಡೆಮೋಕ್ರಾಟ್ ಪಕ್ಷಕ್ಕೆ ನಿರ್ಣಾಯಕ ಮುನ್ನಡೆ ಒದಗಿಸಿದೆ.

ಎರಡು ಅವಧಿಗೆ ಗವರ್ನರ್ ಆಗಿ ಸೇವೆ ಸಲ್ಲಿಸಿರುವ ಕೂಪರ್, ಸುಮಾರು ನಾಲ್ಕು ದಶಕಗಳ ರಾಜಕೀಯ ಜೀವನದಲ್ಲಿ ಈವರೆಗೆ ಯಾವುದೇ ಚುನಾವಣೆಯಲ್ಲಿ ಸೋಲು ಕಂಡಿಲ್ಲ. 2008ರ ಬಳಿಕ ಉತ್ತರ ಕೆರೊಲಿನಾದಿಂದ ಸೆನೆಟ್‌ಗೆ ಆಯ್ಕೆಯಾಗುತ್ತಿರುವ ಮೊದಲ ಡೆಮೋಕ್ರಾಟ್ ಪಕ್ಷದ ಅಭ್ಯರ್ಥಿ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ.

ಜಾರ್ಜಿಯಾದಲ್ಲಿ ಡೆಮೋಕ್ರಾಟ್ ಪಕ್ಷದ ಒಸಾಫ್ ಅವರು ರಿಪಬ್ಲಿಕನ್ ಅಭ್ಯರ್ಥಿ ಮೈಕ್ ಕಾಲಿನ್ಸ್ ಅವರನ್ನು ಸೋಲಿಸಿದ್ದಾರೆ. ಈ ಮೂಲಕ ರಿಪಬ್ಲಿಕನ್ ಪಕ್ಷ ವಶಪಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದ ಡೆಮೋಕ್ರಾಟ್ ಪಕ್ಷದ ಸ್ಥಾನವನ್ನು ಉಳಿಸಿಕೊಂಡಿದ್ದಾರೆ.

39 ವರ್ಷದ ಒಸಾಫ್ ಅವರು 2028ರ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮೋಕ್ರಾಟ್ ಪಕ್ಷದ ಅಭ್ಯರ್ಥಿಯಾಗುವ ಸಂಭಾವ್ಯ ನಾಯಕರಲ್ಲಿ ಒಬ್ಬರೆಂದು ಪರಿಗಣಿಸಲಾಗಿದೆ.

ಒಟ್ಟು 435 ಹೌಸ್ ಸ್ಥಾನಗಳು, ಸೆನೆಟ್‌ನ 100 ಸ್ಥಾನಗಳ ಪೈಕಿ 35 ಸ್ಥಾನಗಳು ಹಾಗೂ 36 ಗವರ್ನರ್ ಹುದ್ದೆಗಳಿಗೆ ಚುನಾವಣೆ ನಡೆದಿದೆ. ಕಾಂಗ್ರೆಸ್‌ನ ಎರಡೂ ಸದನಗಳ ಮೇಲೆ ನಿಯಂತ್ರಣ ಸಾಧಿಸಲು ಡೆಮೋಕ್ರಾಟ್ ಪಕ್ಷ ಹೌಸ್‌ನಲ್ಲಿ ಕನಿಷ್ಠ ಮೂರು ಸ್ಥಾನಗಳನ್ನು ಹೆಚ್ಚುವರಿಯಾಗಿ ಗೆಲ್ಲಬೇಕಿತ್ತು. ಸೆನೆಟ್‌ನಲ್ಲಿ ನಾಲ್ಕು ಸ್ಥಾನಗಳ ನಿವ್ವಳ ಹೆಚ್ಚಳದ ಅಗತ್ಯವಿತ್ತು.

ಟ್ರಂಪ್ ಆಡಳಿತದ ಮೇಲೆ ಪರಿಣಾಮ

ಈ ಚುನಾವಣಾ ಫಲಿತಾಂಶ ಡೊನಾಲ್ಡ್ ಟ್ರಂಪ್ ಅವರ ರಾಜಕೀಯ ಭವಿಷ್ಯದ ಮೇಲೆ ಗಂಭೀರ ಪರಿಣಾಮ ಬೀರಬಹುದು.

ಹೌಸ್‌ನಲ್ಲಿ ಬಹುಮತ ಕಳೆದುಕೊಂಡರೆ, ಟ್ರಂಪ್ ಅವರ ಶಾಸಕಾಂಗ ಕಾರ್ಯಸೂಚಿಗೆ ಡೆಮಾಕ್ರಟಿಕ್ ಪಕ್ಷ ಅಡ್ಡಿಪಡಿಸಬಹುದು. ಅಲ್ಲದೆ, ಇರಾನ್ ಯುದ್ಧ, ದಾಖಲೆಗಳಿಲ್ಲದೆ ಅಮೆರಿಕದಲ್ಲಿ ನೆಲೆಸಿರುವ ವಲಸಿಗರ ಸಾಮೂಹಿಕ ಗಡಿಪಾರು ಹಾಗೂ ಭ್ರಷ್ಟಾಚಾರದ ಆರೋಪಗಳು ಸೇರಿದಂತೆ ಟ್ರಂಪ್ ಆಡಳಿತ ವಿರುದ್ಧ ವ್ಯಾಪಕ ತನಿಖೆಗಳನ್ನು ಆರಂಭಿಸಬಹುದು.

ಸೆನೆಟ್‌ನಲ್ಲಿಯೂ ಡೆಮಾಕ್ರಟಿಕ್ ಪಕ್ಷ ಬಹುಮತ ಗಳಿಸಿದರೆ, ನ್ಯಾಯಾಂಗ ಮತ್ತು ಉನ್ನತ ಸರ್ಕಾರಿ ಹುದ್ದೆಗಳಿಗೆ ಟ್ರಂಪ್ ಮಾಡಬಹುದಾದ ನೇಮಕಾತಿಗಳಿಗೆ ತಡೆಯೊಡ್ಡುವ ಸಾಧ್ಯತೆಯಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಇಸ್ರೇಲ್‌ಗೆ ವಾರ್ಷಿಕ 3.8 ಶತಕೋಟಿ ಡಾಲರ್ ಭದ್ರತಾ ನೆರವು ಸ್ಥಗಿತ: ಅಮೆರಿಕ ಮಧ್ಯಂತರ ಚುನಾವಣೆ ನಡುವೆ ಟ್ರಂಪ್ ಘೋಷಣೆ

ಪಶ್ಚಿಮ ಏಷ್ಯಾ ಸಂಘರ್ಷದಲ್ಲಿ 23 ಭಾರತೀಯರ ಸಾವು: MEA

'2 ವಿಮಾನ, 6 ನಿವೇಶನ': EDಯಿಂದ ಅನಿಲ್ ಅಂಬಾನಿ ಸಮೂಹದ ₹510 ಕೋಟಿ ರೂ ಮೌಲ್ಯದ ಆಸ್ತಿ ವಶಕ್ಕೆ!

ಪ್ರಧಾನಿ ಮೋದಿ ಮನೆ ಸಮೀಪದ ಮಸೀದಿ ನಂತರ ಮತ್ತೊಂದು ಮಸೀದಿ ತೆರವಿಗೆ ಕೇಂದ್ರ ನಿರ್ಧಾರ; ಹೈಕೋರ್ಟ್‌ಗೆ ಮಾಹಿತಿ!

'ತುಂಡು ತುಂಡಾಗಿ ಕತ್ತರಿಸುತ್ತಾರೆ' ಹೇಳಿಕೆ: ಛಲವಾದಿ ನಾರಾಯಣಸ್ವಾಮಿ ಮನೆ ಮುಂದೆ ಕಾಂಗ್ರೆಸ್ ಪ್ರತಿಭಟನೆ; ಬಂಧನಕ್ಕೆ ಆಗ್ರಹ; Video