ಸ್ಯಾನ್ ಫ್ರಾನ್ಸಿಸ್ಕೋ: ವಿಶ್ವದ ಅಗ್ರಗಣ್ಯ ಚಿಪ್ ತಯಾರಿಕಾ ಸಂಸ್ಥೆ ಎನ್‌ವಿಡಿಯಾದ (Nvidia) ಸಹ-ಸಂಸ್ಥಾಪಕ ಹಾಗೂ ಸಿಇಒ ಜೆನ್ಸನ್ ಹುವಾಂಗ್ ಅವರು ತಮ್ಮ ಹುದ್ದೆಯನ್ನು ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.
ಚೀನಾದ ಗೂಢಚಾರಿಣಿ ಎಂದು ಶಂಕಿಸಲಾದ ಮಹಿಳೆಯೊಂದಿಗೆ ಸಂಬಂಧ ಹೊಂದಿದ್ದರು ಎಂಬ ಗಂಭೀರ ಆರೋಪಗಳ ಹಿನ್ನೆಲೆಯಲ್ಲಿ ಹುವಾಂಗ್ ಅವರನ್ನು ವಜಾಗೊಳಿಸಲು ಕಂಪನಿಯ ಆಡಳಿತ ಮಂಡಳಿಯು ಸಿದ್ಧತೆ ನಡೆಸುತ್ತಿದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳಾದ 'ದಿ ವಾಲ್ ಸ್ಟ್ರೀಟ್ ಜರ್ನಲ್' ಮತ್ತು 'ದಿ ನ್ಯೂಯಾರ್ಕ್ ಟೈಮ್ಸ್' ವರದಿ ಮಾಡಿವೆ.
ವಾಲ್ ಸ್ಟ್ರೀಟ್ ಜರ್ನಲ್ ವರದಿ ಪ್ರಕಾರ, ಜೆನ್ಸನ್ ಹುವಾಂಗ್ ಅವರ ಭವಿಷ್ಯ ನಿರ್ಧರಿಸುವ ಸಲುವಾಗಿ ಕಂಪನಿಯ ಆಡಳಿತ ಮಂಡಳಿ ಬುಧವಾರವೇ ಸಭೆ ಸೇರಲು ಸಿದ್ಧತೆ ನಡೆಸಿತ್ತು. ಈ ಬೆಳವಣಿಗೆ ಕುರಿತು ಮಾಹಿತಿ ಹೊಂದಿರುವ ವ್ಯಕ್ತಿಗಳನ್ನು ಉಲ್ಲೇಖಿಸಿ ಪತ್ರಿಕೆ ವರದಿ ಮಾಡಿದೆ.
ಇದೇ ವೇಳೆ, ಹುವಾಂಗ್ ಮತ್ತೊಬ್ಬ ಮಹಿಳೆಯೊಂದಿಗೂ ವಿವಾಹೇತರ ಸಂಬಂಧ ಹೊಂದಿದ್ದರು ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.
ಈ ಮಹಿಳೆ ಎನ್‌ವಿಡಿಯಾದಲ್ಲೇ ಹುವಾಂಗ್ ಅವರ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಉದ್ಯೋಗಿಯಾಗಿದ್ದಾರೆ. 63 ವರ್ಷದ ಹುವಾಂಗ್ ಮತ್ತು ಕಂಪನಿಯ ಆರೋಗ್ಯ ವಿಭಾಗದ ಉಪಾಧ್ಯಕ್ಷೆ ಕಿಂಬರ್ಲಿ ಪೊವೆಲ್ (48) ಆತ್ಮೀಯವಾಗಿ ವರ್ತಿಸುತ್ತಿರುವ ದೃಶ್ಯಗಳ ವಿಡಿಯೋ ಸಾಕ್ಷ್ಯವಿದೆ ಎಂದು ವರದಿ ತಿಳಿಸಿದೆ.
ಉನ್ನತ ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಗಳಲ್ಲಿ ಎನ್‌ವಿಡಿಯಾದ ಚಿಪ್ ತಂತ್ರಜ್ಞಾನದ ಬಳಕೆಯನ್ನು ವಿಸ್ತರಿಸುವ ಪ್ರಯತ್ನಗಳಲ್ಲಿ ಪೊವೆಲ್ ಪ್ರಮುಖ ಪಾತ್ರ ವಹಿಸಿದ್ದಾರೆ.
ಕ್ಯಾಲಿಫೋರ್ನಿಯಾದ ಸ್ಯಾನ್ ಜೋಸ್‌ನಲ್ಲಿ ನಡೆದ ಸಮಾವೇಶವೊಂದರಲ್ಲಿ ಭಾಗವಹಿಸಿದ್ದ ವೇಳೆ, ಹೋಟೆಲ್‌ನಲ್ಲಿ ಇಬ್ಬರೂ ಆತ್ಮೀಯವಾಗಿರುವುದನ್ನು ಕೆಲವರು ಗಮನಿಸಿದ್ದಾರೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.
ಇದಕ್ಕೂ ಮೊದಲು, ಸಿಂಗಾಪುರ ಮೂಲದ ದತ್ತಾಂಶ ಕೇಂದ್ರ ಕಂಪನಿ ಮೆಗಾಸ್ಪೀಡ್‌ನ ಹಿರಿಯ ಕಾರ್ಯನಿರ್ವಾಹಕಿ ಆಲಿಸ್ ಹುವಾಂಗ್ ಅವರೊಂದಿಗೆ ಸಂಬಂಧ ಹೊಂದಿದ್ದ ವಿಚಾರವನ್ನು ಜೆನ್ಸನ್ ಒಪ್ಪಿಕೊಂಡಿದ್ದರು.
2024 ಮತ್ತು 2025ರಲ್ಲಿ ತೈವಾನ್‌ನ ತೈಪೆಯಲ್ಲಿ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡಿದ್ದ ಛಾಯಾಚಿತ್ರಗಳು ಲಭ್ಯವಾಗಿದ್ದವು ಎಂದು ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿತ್ತು.
ಈ ನಡುವೆ, ಆಲಿಸ್ ಹುವಾಂಗ್ ಚೀನಾದ ರಾಜ್ಯ ಭದ್ರತಾ ಸಚಿವಾಲಯದ ಪರವಾಗಿ ಕಾರ್ಯನಿರ್ವಹಿಸುವ ವ್ಯಕ್ತಿಯಾಗಿದ್ದಾರೆ ಎಂದು ಆರೋಪಿಸಿ ಅಮೆರಿಕದ ಗುಪ್ತಚರ ಇಲಾಖೆ ಈ ವರ್ಷದ ಆಂತರಿಕ ವರದಿಯೊಂದನ್ನು ಹಂಚಿಕೊಂಡಿತ್ತು ಎನ್ನಲಾಗಿದೆ.
ತಮ್ಮೊಂದಿಗೆ ಯಾವುದೇ ಕುಟುಂಬ ಸಂಬಂಧ ಹೊಂದಿರದ ಆಲಿಸ್ ಹುವಾಂಗ್ ಅವರೊಂದಿಗೆ ಸಂಬಂಧ ಹೊಂದಿದ್ದ ವಿಚಾರವನ್ನು ಜೆನ್ಸನ್ ಭಾನುವಾರ ಎನ್‌ವಿಡಿಯಾ ಉದ್ಯೋಗಿಗಳಿಗೆ ಬರೆದ ಪತ್ರದಲ್ಲಿ ಒಪ್ಪಿಕೊಂಡಿದ್ದರು. "ನಾನು ನನ್ನ ಪತ್ನಿಗೆ ದ್ರೋಹ ಮಾಡಿದ್ದೇನೆ" ಎಂದು ಅವರು ಪತ್ರದಲ್ಲಿ ತಿಳಿಸಿದ್ದರು.
ಇದೇ ದಿನ ಎನ್‌ವಿಡಿಯಾದ ನಿರ್ದೇಶಕರ ಮಂಡಳಿ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದು, "ಕಂಪನಿಯ ಸಂಸ್ಥಾಪಕ ಮತ್ತು ಸಿಇಒ ಜೆನ್ಸನ್ ಹುವಾಂಗ್ ವಿದೇಶಿ ಗುಪ್ತಚರ ಕಾರ್ಯಾಚರಣೆಯ ಗುರಿಯಾಗಿದ್ದಾರೆ ಎಂಬ ಇತ್ತೀಚಿನ ವರದಿಗಳ ಹಿನ್ನೆಲೆಯಲ್ಲಿ ಸ್ವತಂತ್ರ ತನಿಖೆ ಆರಂಭಿಸಲಾಗಿದೆ" ಎಂದು ತಿಳಿಸಿತ್ತು.
ಇದರ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿದ್ದ ಹುವಾಂಗ್, ನಾನು ಈ ತನಿಖೆಯನ್ನು ಬೆಂಬಲಿಸುತ್ತೇನೆ ಮತ್ತು ಸಂಪೂರ್ಣ ಸಹಕಾರ ನೀಡುತ್ತೇನೆ. ನನ್ನ ದೇಶ ಮತ್ತು ನಮ್ಮ ಕಂಪನಿಯನ್ನು ನಾನು ಪ್ರೀತಿಸುತ್ತೇನೆ ಎಂದು ಹೇಳಿದ್ದರು. ಅಲ್ಲದೆ, ಆಲಿಸ್ ಹುವಾಂಗ್ ಅವರೊಂದಿಗಿನ ತಮ್ಮ ಒಡನಾಟದ ಕುರಿತು ಸಂಸತ್ತಿನ ಸದಸ್ಯರಿಗೆ ಮುಚ್ಚಿದ ಬಾಗಿಲಿನ ಸಭೆಯಲ್ಲಿ ಮಾಹಿತಿ ನೀಡುವಂತೆ ಕಾಂಗ್ರೆಸ್ ಕೂಡ ಅವರಿಗೆ ಸೂಚಿಸಿದೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.
ಕೃತಕ ಬುದ್ಧಿಮತ್ತೆ ಕ್ಷೇತ್ರದ ತ್ವರಿತ ಬೆಳವಣಿಗೆಯಿಂದಾಗಿ ಎನ್‌ವಿಡಿಯಾ ಷೇರುಗಳ ಮೌಲ್ಯ ಗಗನಕ್ಕೇರಿದ್ದು, ಜೆನ್ಸನ್ ಹುವಾಂಗ್ ಜಾಗತಿಕ ತಂತ್ರಜ್ಞಾನ ವಲಯದ ಪ್ರಭಾವಿ ನಾಯಕರಲ್ಲಿ ಒಬ್ಬರಾಗಿದ್ದಾರೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ಶ್ವೇತಭವನದ ಹಲವು ಕಾರ್ಯಕ್ರಮಗಳಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ಕಳೆದ ತಿಂಗಳಷ್ಟೇ ಟ್ರಂಪ್ ಅವರಿಂದ ರಾಷ್ಟ್ರೀಯ ವಿಜ್ಞಾನ ಪದಕವನ್ನು ಸ್ವೀಕರಿಸಿದ್ದರು.
ಕೃತಕ ಬುದ್ಧಿಮತ್ತೆಯಿಂದ ಎದುರಾಗಬಹುದಾದ ಅಪಾಯಗಳನ್ನು ನಿಯಂತ್ರಿಸಲು ಸ್ವಯಂ ನಿಯಂತ್ರಣ ವ್ಯವಸ್ಥೆ ರೂಪಿಸುವುದಾಗಿ ಪ್ರತಿಜ್ಞೆ ಮಾಡಿದ್ದ ಜಾಗತಿಕ ತಂತ್ರಜ್ಞಾನ ನಾಯಕರ ಸಾಲಿನಲ್ಲೂ ಹುವಾಂಗ್ ಇದ್ದರು.
ಈ ಪಟ್ಟಿಯಲ್ಲಿ ಎಲಾನ್ ಮಸ್ಕ್, ಜೆಫ್ ಬೆಜೋಸ್ ಮತ್ತು ಮಾರ್ಕ್ ಜುಕರ್‌ಬರ್ಗ್ ಕೂಡ ಸೇರಿದ್ದರು. ಮತ್ತೊಂದೆಡೆ, ಟ್ರಂಪ್ ಸರ್ಕಾರದ ಮೇಲ್ವಿಚಾರಣೆಯ ಬೇಡಿಕೆಗಳನ್ನು ತಿರಸ್ಕರಿಸಿದ್ದಲ್ಲದೆ, ಕೃತಕ ಬುದ್ಧಿಮತ್ತೆ ಮಾನವಕುಲದ ಅಳಿವಿಗೆ ಕಾರಣವಾಗಬಹುದು ಎಂಬ ಎಚ್ಚರಿಕೆಗಳನ್ನೂ ತಳ್ಳಿಹಾಕಿದ್ದರು.
ಇನ್ನು, ಹುವಾಂಗ್ ಮತ್ತು ಎನ್‌ವಿಡಿಯಾ ಹೂಡಿಕೆದಾರರಿಗೆ ತಮ್ಮ ಸಂಬಂಧದ ಕುರಿತು ಅಗತ್ಯ ಮಾಹಿತಿ ಬಹಿರಂಗಪಡಿಸಿಲ್ಲ ಎಂದು ಆರೋಪಿಸಿ ಕಂಪನಿಯ ಷೇರುದಾರರು ಅವರ ವಿರುದ್ಧ ಸಾಮೂಹಿಕ ಮೊಕದ್ದಮೆ ದಾಖಲಿಸಿದ್ದಾರೆ. ಅಕ್ರಮ ಸಂಬಂಧದ ವಿಚಾರವನ್ನು ಹುವಾಂಗ್ ಒಪ್ಪಿಕೊಂಡ ಬಳಿಕ ಇತ್ತೀಚಿನ ದಿನಗಳಲ್ಲಿ ಎನ್‌ವಿಡಿಯಾ ಷೇರುಗಳ ಮೌಲ್ಯ ತೀವ್ರ ಕುಸಿತ ಕಂಡಿದೆ.
ಎನ್‌ವಿಡಿಯಾ ಆರಂಭದಲ್ಲಿ ವಿಡಿಯೋ ಗೇಮ್‌ಗಳಲ್ಲಿ ಮೂರು ಆಯಾಮದ ದೃಶ್ಯಗಳನ್ನು ನಿರ್ವಹಿಸಲು ವಿನ್ಯಾಸಗೊಳಿಸಲಾದ ಗ್ರಾಫಿಕ್ಸ್ ಪ್ರೊಸೆಸಿಂಗ್ ಯುನಿಟ್‌ಗಳನ್ನು (ಜಿಪಿಯು) ಅಭಿವೃದ್ಧಿಪಡಿಸುವ ಮೂಲಕ ಗುರುತಿಸಿಕೊಂಡಿತ್ತು. ಇದೀಗ ಕೃತಕ ಬುದ್ಧಿಮತ್ತೆ ತಂತ್ರಜ್ಞಾನಕ್ಕೆ ಅಗತ್ಯವಿರುವ ಅತ್ಯಾಧುನಿಕ ಚಿಪ್‌ಗಳ ಪ್ರಮುಖ ತಯಾರಕ ಸಂಸ್ಥೆಯಾಗಿದೆ.
ಎನ್‌ವಿಡಿಯಾದ ಬಹುತೇಕ ಪ್ರೊಸೆಸರ್‌ಗಳನ್ನು ವಿಶ್ವದ ಅತಿದೊಡ್ಡ ಗುತ್ತಿಗೆ ಆಧಾರಿತ ಚಿಪ್ ತಯಾರಿಕಾ ಸಂಸ್ಥೆಯಾಗಿರುವ ತೈವಾನ್‌ನ ಟಿಎಸ್‌ಎಂಸಿ ಉತ್ಪಾದಿಸುತ್ತದೆ.