ವಾಷಿಂಗ್ಟನ್: ಚೀನಾವು ಅತ್ಯಂತ ವೇಗವಾಗಿ ("ಹಾಟ್ ಅಂಡ್ ಹೆವಿ") ಪರಮಾಣು ಶಸ್ತ್ರಾಸ್ತ್ರಗಳನ್ನು ಅಭಿವೃದ್ಧಿಪಡಿಸುತ್ತಿದ್ದು, ಮುಂದಿನ ಒಂದು ದಶಕದಲ್ಲಿ ಅಮೆರಿಕದ ಪರಮಾಣು ಶಕ್ತಿಗೆ ಸರಿಸಮನಾಗಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಭೇಟಿಯಾದ ಮರುದಿನವೇ ಟ್ರಂಪ್ ಅವರು ಈ ಹೇಳಿಕೆ ನೀಡಿದ್ದಾರೆ. ಪರಮಾಣು ಪ್ರಸರಣ ತಡೆ ಕುರಿತು ಮಾತುಕತೆ ನಡೆಸಲು ಮೂರು ದೇಶಗಳ ನಾಯಕರು ಒಪ್ಪಿಕೊಂಡಿದ್ದಾರೆ.
ರಷ್ಯಾ ಮತ್ತು ಅಮೆರಿಕ ತಲಾ ಸಾವಿರಾರು ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದುವ ಮೂಲಕ ಜಗತ್ತಿನಲ್ಲಿ ಮುಂಚೂಣಿಯಲ್ಲಿವೆ. ಇದೇ ವೇಳೆ ಚೀನಾ ಕೂಡ ತನ್ನ ಪರಮಾಣು ಶಸ್ತ್ರಾಸ್ತ್ರಗಳ ಸಂಗ್ರಹವನ್ನು ತ್ವರಿತವಾಗಿ ವಿಸ್ತರಿಸುತ್ತಿದೆ.
ಚೀನಾದ ಸೇನಾ ಸಾಮರ್ಥ್ಯ ಹೆಚ್ಚಳ ಕುರಿತು ಪೆಂಟಗನ್ ಬಿಡುಗಡೆ ಮಾಡಿದ ವಾರ್ಷಿಕ ವರದಿಯ ಪ್ರಕಾರ, 2024ರ ಅಂತ್ಯದವರೆಗೆ ಚೀನಾದ ಪರಮಾಣು ಸಿಡಿತಲೆಗಳ ಸಂಖ್ಯೆ 600ರ ಆಸುಪಾಸಿನಲ್ಲಿತ್ತು. ಆದರೆ, 2030ರ ವೇಳೆಗೆ ಈ ಸಂಖ್ಯೆ 1,000 ದಾಟುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.
ಏತನ್ಮಧ್ಯೆ ಶ್ವೇತಭವನದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಟ್ರಂಪ್ ಅವರು, ಪರಮಾಣು ಶಸ್ತ್ರಾಸ್ತ್ರಗಳ ವಿಸ್ತರಣೆಯಲ್ಲಿ ಚೀನಾ ಮುಂದಿನ 10 ವರ್ಷಗಳಲ್ಲಿ ನಮ್ಮನ್ನು ಹಿಂದಿಕ್ಕಲಿದ್ದಾರೆ. ಅವರು ಅತ್ಯಂತ ತೀವ್ರಗತಿಯಲ್ಲಿ ಈ ಕೆಲಸ ಮಾಡುತ್ತಿದ್ದಾರೆ. ಅವರ ಬಳಿ ಸಾಕಷ್ಟು ಶಸ್ತ್ರಾಸ್ತ್ರಗಳಿವೆ ಎಂದು ಹೇಳಿದ್ದಾರೆ.
ಗುರುವಾರ ದಕ್ಷಿಣ ಚೀನಾದ ಶೆನ್ಜೆನ್ ನಗರದಲ್ಲಿ ಕ್ಸಿ ಜಿನ್ಪಿಂಗ್ ಮತ್ತು ಪುಟಿನ್ ಅವರೊಂದಿಗೆ ನಡೆದ ಶೃಂಗಸಭೆಯ ಬಳಿಕ ಟ್ರಂಪ್ ಮೊದಲ ಬಾರಿಗೆ ಸಾರ್ವಜನಿಕವಾಗಿ ಮಾತನಾಡಿದ್ದಾರೆ.
ದೀರ್ಘಕಾಲದಿಂದ ಅಮೆರಿಕದ ಪ್ರತಿಸ್ಪರ್ಧಿಗಳೆಂದು ಪರಿಗಣಿಸಲ್ಪಟ್ಟಿರುವ ಈ ಎರಡು ರಾಷ್ಟ್ರಗಳ ನಾಯಕರೊಂದಿಗೆ ನಡೆದ ಸಭೆಯ ಕುರಿತು ಅವರು ಪ್ರತಿಕ್ರಿಯಿಸಿದ್ದಾರೆ.
ಶುಕ್ರವಾರ ಟ್ರಂಪ್ ಜೊತೆಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ, ಮೂರು ಪರಮಾಣು ಶಕ್ತಿಶಾಲಿ ರಾಷ್ಟ್ರಗಳು ಮಾತುಕತೆ ನಡೆಸುವುದು ಅತ್ಯಗತ್ಯ ಎಂದು ಹೇಳಿದ್ದಾರೆ.
ಈ ಭೂಮಿಯ ಮೇಲಿರುವ ಬಹುಪಾಲು ಪರಮಾಣು ಶಸ್ತ್ರಾಸ್ತ್ರಗಳು ಈ ಮೂರು ದೇಶಗಳ ಬಳಿಯೇ ಇವೆ. ಈ ಮೂರು ರಾಷ್ಟ್ರಗಳ ನಾಯಕರು ನಿಯಮಿತವಾಗಿ ಮಾತುಕತೆ ನಡೆಸಬಾರದು ಎನ್ನುವುದು ಕೇವಲ ಅಸಂಬದ್ಧವಷ್ಟೇ ಅಲ್ಲ, ಅಪಾಯಕಾರಿ ಕೂಡ ಎಂದು ಹೇಳಿದ್ದಾರೆ.
ಪರಮಾಣು ಯುದ್ಧ ಗೆಲ್ಲಲು ಸಾಧ್ಯವಿಲ್ಲ
ಮೂವರು ನಾಯಕರ ನಡುವಿನ ಸಭೆಯ ಬಳಿಕ ಜಂಟಿ ಹೇಳಿಕೆ ಬಿಡುಗಡೆ ಮಾಡಲಾಗಿದ್ದು, “ಪರಮಾಣು ಯುದ್ಧವನ್ನು ಗೆಲ್ಲಲು ಸಾಧ್ಯವಿಲ್ಲ ಮತ್ತು ಅಂತಹ ಯುದ್ಧ ಎಂದಿಗೂ ನಡೆಯಬಾರದು” ಎಂದು ನಾಯಕರು ಒಪ್ಪಿಕೊಂಡಿದ್ದಾರೆ. ಅಲ್ಲದೆ, ಪರಮಾಣು ಅಪಾಯಗಳನ್ನು ಕಡಿಮೆ ಮಾಡುವುದು ಮತ್ತು ಪರಮಾಣು ಶಸ್ತ್ರಾಸ್ತ್ರಗಳ ಪ್ರಸರಣ ತಡೆಯುವ ಕುರಿತು ಮಾತುಕತೆ ನಡೆಸುವುದಾಗಿಯೂ ತಿಳಿಸಿದ್ದಾರೆ.
ಸಭೆಗೂ ಮುನ್ನ ಚೀನಾ ಪರಮಾಣು ಶಸ್ತ್ರಾಸ್ತ್ರ ನಿಯಂತ್ರಣ ಮಾತುಕತೆಗೆ ಒಪ್ಪಿಕೊಳ್ಳುವ ಬಗ್ಗೆ ತಜ್ಞರು ಅನುಮಾನ ವ್ಯಕ್ತಪಡಿಸಿದ್ದರು.
ಅಮೆರಿಕ ಮತ್ತು ರಷ್ಯಾಕ್ಕಿಂತ ಕಡಿಮೆ ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿರುವ ಚೀನಾ, ಈ ಹಿಂದೆ ಎರಡೂ ರಾಷ್ಟ್ರಗಳೊಂದಿಗೆ ಶಸ್ತ್ರಾಸ್ತ್ರ ನಿಯಂತ್ರಣ ಮಾತುಕತೆಯಲ್ಲಿ ಭಾಗವಹಿಸಲು ಹಿಂದೇಟು ಹಾಕಿತ್ತು.
ಪರಮಾಣು ಯುದ್ಧವನ್ನು ತಪ್ಪಿಸುವ ಉದ್ದೇಶವನ್ನು ಮೂವರು ನಾಯಕರು ವ್ಯಕ್ತಪಡಿಸಿರುವುದು ಸಕಾರಾತ್ಮಕ ಬೆಳವಣಿಗೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಈ ಹೇಳಿಕೆಯು ಅರ್ಥಪೂರ್ಣ ಶಸ್ತ್ರಾಸ್ತ್ರ ನಿಯಂತ್ರಣ ಒಪ್ಪಂದಕ್ಕೆ ಸಮನಲ್ಲ. ಆದರೂ ಸ್ಥಿರತೆ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಇದು ಉತ್ತಮ ಆರಂಭ” ಎಂದು ವಿದೇಶಾಂಗ ಸಂಬಂಧಗಳ ಮಂಡಳಿಯ ರಕ್ಷಣಾ ಮತ್ತು ರಾಷ್ಟ್ರೀಯ ಭದ್ರತಾ ಕಾರ್ಯಕ್ರಮದ ನಿರ್ದೇಶಕಿ ಎರಿನ್ ಡಿ. ಡಂಬಾಚರ್ ಹೇಳಿದ್ದಾರೆ.
ಈ ಕುರಿತು ಚೀನಾ ರಾಯಭಾರ ಕಚೇರಿ ತಕ್ಷಣಕ್ಕೆ ಪ್ರತಿಕ್ರಿಯೆ ನೀಡಿಲ್ಲ. ಆದರೆ, ಜುಲೈನಲ್ಲಿ ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರೆ ಮಾವೊ ನಿಂಗ್, “ರಾಷ್ಟ್ರೀಯ ಭದ್ರತೆಯನ್ನು ಕಾಪಾಡಿಕೊಳ್ಳಲು ಅಗತ್ಯವಿರುವ ಕನಿಷ್ಠ ಮಟ್ಟದಲ್ಲೇ ಚೀನಾ ತನ್ನ ಪರಮಾಣು ಸಾಮರ್ಥ್ಯವನ್ನು ಇರಿಸಿಕೊಂಡಿದೆ. ಯಾವುದೇ ರೀತಿಯ ಪರಮಾಣು ಶಸ್ತ್ರಾಸ್ತ್ರ ಸ್ಪರ್ಧೆಯಲ್ಲಿ ಚೀನಾ ಭಾಗವಹಿಸುವುದಿಲ್ಲ ಎಂದು ಹೇಳಿದ್ದರು.
ಕೃತಕ ಬುದ್ಧಿಮತ್ತೆ ಸುರಕ್ಷತೆ, ಎನ್ವಿಡಿಯಾ ಮುಖ್ಯಸ್ಥನ ಬಗ್ಗೆಯೂ ಚರ್ಚೆ
ಪರಮಾಣು ಭದ್ರತೆಯ ಹೊರತಾಗಿ, ಕೃತಕ ಬುದ್ಧಿಮತ್ತೆ (ಎಐ) ಕ್ಷೇತ್ರದಲ್ಲಿಯೂ ಕೆಲವು ಜಂಟಿ ಸುರಕ್ಷತಾ ನಿಯಮಗಳನ್ನು ರೂಪಿಸಲು ಕ್ಸಿ ಜಿನ್ಪಿಂಗ್ ಅವರೊಂದಿಗೆ ಒಪ್ಪಿಕೊಂಡಿರುವುದಾಗಿ ಟ್ರಂಪ್ ತಿಳಿಸಿದ್ದಾರೆ. ಆದರೆ, ಈ ಕುರಿತು ಹೆಚ್ಚಿನ ವಿವರಗಳನ್ನು ನೀಡಿಲ್ಲ. ವೇಗವಾಗಿ ಅಭಿವೃದ್ಧಿಯಾಗುತ್ತಿರುವ ತಂತ್ರಜ್ಞಾನದಿಂದ ಭವಿಷ್ಯದಲ್ಲಿ ಭಾರೀ ಹಾನಿ ಸಂಭವಿಸಬಹುದು ಅಥವಾ ಮಾನವಕುಲಕ್ಕೇ ಅಪಾಯ ಎದುರಾಗಬಹುದು ಎಂಬ ಎಚ್ಚರಿಕೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಒಪ್ಪಂದ ಮಹತ್ವ ಪಡೆದುಕೊಂಡಿದೆ.
ಈ ವಿಷಯದಲ್ಲಿ ಕೆಲವು ಸುರಕ್ಷತಾ ನಿಯಮಗಳನ್ನು ರೂಪಿಸಲು ನಾವು ಒಪ್ಪಿಕೊಂಡಿದ್ದೇವೆ. ಏಕೆಂದರೆ ಇಲ್ಲಿ ಮೂರನೇ ಸ್ಥಾನ ಎಂಬುದೇ ಇಲ್ಲ” ಎಂದು ಟ್ರಂಪ್ ಹೇಳಿದ್ದಾರೆ.
ಇದೇ ವೇಳೆ ಎಐ ಸ್ಪರ್ಧೆಯಲ್ಲಿ ಅಮೆರಿಕವೇ ಗೆಲ್ಲಬೇಕು ಎಂಬ ನಿಲುವನ್ನೂ ಅವರು ಪುನರುಚ್ಚರಿಸಿದ್ದಾರೆ. “ಯಾರು ಗೆಲ್ಲುತ್ತಾರೋ, ಅವರದ್ದೇ ಮೇಲುಗೈ” ಎಂದಿದ್ದಾರೆ.
ವಾಷಿಂಗ್ಟನ್ ಮೂಲದ ಚಿಂತಕರ ಚಾವಡಿ ಸೆಂಟರ್ ಫಾರ್ ಸ್ಟ್ರಾಟೆಜಿಕ್ ಆ್ಯಂಡ್ ಇಂಟರ್ನ್ಯಾಷನಲ್ ಸ್ಟಡೀಸ್ನ ಹಿರಿಯ ಸಂಶೋಧಕಿ ಇಲಾರಿಯಾ ಮಜೊಕ್ಕೊ, ಅಮೆರಿಕ ಮತ್ತು ಚೀನಾ ನಡುವೆ ಎಐ ಸುರಕ್ಷತಾ ನಿಯಮಗಳನ್ನು ರೂಪಿಸುವುದು ಸವಾಲಿನ ಕೆಲಸ ಎಂದು ಹೇಳಿದ್ದಾರೆ.
ತಾಂತ್ರಿಕವಾಗಿ ಇದು ಕಷ್ಟದ ಕೆಲಸ. ಪರಸ್ಪರ ನಂಬಿಕೆ ಬಹಳ ಕಡಿಮೆ ಇದೆ. ಅಲ್ಲದೆ, ಎದುರಾಳಿ ದೇಶವೂ ಅದೇ ನಿಯಮಗಳನ್ನು ಪಾಲಿಸುತ್ತದೆ ಎಂಬ ನಂಬಿಕೆ ಇಲ್ಲದಿದ್ದರೆ, ತಮ್ಮ ಸಾಮರ್ಥ್ಯಕ್ಕೆ ಮಿತಿ ವಿಧಿಸುವ ಯಾವುದೇ ಒಪ್ಪಂದಕ್ಕೆ ಬರಲು ಭೌಗೋಳಿಕ ರಾಜಕೀಯ ಪರಿಸ್ಥಿತಿಯಲ್ಲಿ ಹೆಚ್ಚಿನ ಪ್ರೇರಣೆಯೂ ಇರುವುದಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಅಮೆರಿಕದ ಚಿಪ್ ತಯಾರಿಕಾ ಸಂಸ್ಥೆ ಎನ್ವಿಡಿಯಾದ ಸಹ-ಸಂಸ್ಥಾಪಕ ಜೆನ್ಸನ್ ಹುವಾಂಗ್ ಬಗ್ಗೆಯೂ ಕ್ಸಿ ಅವರೊಂದಿಗೆ ಮಾತನಾಡಿರುವುದಾಗಿ ಟ್ರಂಪ್ ತಿಳಿಸಿದ್ದಾರೆ. ಹುವಾಂಗ್ ಒಬ್ಬ “ಅಸಾಧಾರಣ ಪ್ರತಿಭಾವಂತ ವ್ಯಕ್ತಿ” ಎಂದು ಚೀನಾ ಅಧ್ಯಕ್ಷರು ಒಪ್ಪಿಕೊಂಡಿದ್ದಾರೆ ಎಂದು ಹೇಳಿದ್ದಾರೆ.
ಎಐ ಕ್ಷೇತ್ರದ ಸ್ಪರ್ಧೆಯಲ್ಲಿ ಎನ್ವಿಡಿಯಾದಂತಹ ಕಂಪನಿಗಳು ತಯಾರಿಸುವ ಅತ್ಯಾಧುನಿಕ ಕಂಪ್ಯೂಟಿಂಗ್ ಚಿಪ್ಗಳ ಲಭ್ಯತೆ ನಿರ್ಣಾಯಕವಾಗಿದೆ. ಸ್ಪರ್ಧಾತ್ಮಕ ಮುನ್ನಡೆ ಕಾಯ್ದುಕೊಳ್ಳುವ ಉದ್ದೇಶದಿಂದ ಅಮೆರಿಕ ತನ್ನ ಅತ್ಯಾಧುನಿಕ ಚಿಪ್ಗಳನ್ನು ಚೀನಾಕ್ಕೆ ಮಾರಾಟ ಮಾಡುವುದನ್ನು ನಿರ್ಬಂಧಿಸಿದೆ.
ಸಿಂಗಾಪುರ ಮೂಲದ ಕಂಪನಿಯೊಂದರ ಮಾಜಿ ಚೀನೀ ಅಧಿಕಾರಿಯೊಂದಿಗಿನ ಸಂಪರ್ಕದ ವಿಚಾರವಾಗಿ ಈ ತಿಂಗಳು ಹುವಾಂಗ್ ರಾಜೀನಾಮೆ ನೀಡಿದ್ದಾರೆ. ಈ ಕಂಪನಿಯು ಎನ್ವಿಡಿಯಾ ಚಿಪ್ಗಳನ್ನು ಅಕ್ರಮವಾಗಿ ಚೀನಾಕ್ಕೆ ವರ್ಗಾಯಿಸಿರುವ ಶಂಕೆ ವ್ಯಕ್ತವಾಗಿದೆ. ಹುವಾಂಗ್ ಅವರೊಂದಿಗೆ ಸಂಪರ್ಕ ಹೊಂದಿದ್ದ ಮಹಿಳೆಯೊಬ್ಬರು ಚೀನಾ ಸರ್ಕಾರದ ಏಜೆಂಟ್ ಎಂಬ ಆರೋಪವೂ ಕೇಳಿಬಂದಿದೆ. ಆದರೆ, ಈ ಆರೋಪವನ್ನು ಚೀನಾ ನಿರಾಕರಿಸಿದೆ.
ಇತರ ಕಂಪನಿಗಳಿಗಿಂತ ನಾವು ಅಕ್ಷರಶಃ 10 ವರ್ಷ ಮುಂದಿರುವಂತೆ ಮಾಡಿದವರು ಹುವಾಂಗ್” ಎಂದು ಟ್ರಂಪ್ ಹೇಳಿದ್ದಾರೆ. ಅವರಿಗೆ ಮತ್ತೊಂದು ಅವಕಾಶ ನೀಡಬೇಕು ಎಂಬ ಅಭಿಪ್ರಾಯವನ್ನೂ ಅವರು ವ್ಯಕ್ತಪಡಿಸಿದ್ದಾರೆ.
ಕಂಪನಿ ಬುದ್ಧಿವಂತಿಕೆಯಿಂದ ನಡೆದುಕೊಳ್ಳುವುದಾದರೆ, ಆ ಪ್ರತಿಭಾವಂತ ವ್ಯಕ್ತಿಯನ್ನು ಮರಳಿ ಕರೆಸಿಕೊಂಡು, ಅವರ ಕ್ಷಮೆಯಾಚನೆಯನ್ನು ಸ್ವೀಕರಿಸಿ ಮತ್ತೆ ಕೆಲಸ ಮಾಡಲು ಅವಕಾಶ ನೀಡಬೇಕು” ಎಂದು ಹೇಳಿದ್ದಾರೆ.
ಇದೇ ವಾರ ಟ್ರಂಪ್ ಆಡಳಿತವು ಅತ್ಯಾಧುನಿಕ ಚಿಪ್ಗಳು ಮತ್ತು ಸರ್ವರ್ಗಳನ್ನು ದೂರದಿಂದಲೇ ಬಳಸುವ ಅವಕಾಶವನ್ನು ನಿರ್ಬಂಧಿಸುವ ಹೊಸ ನಿಯಮಗಳನ್ನು ಪ್ರಕಟಿಸಿದೆ.
ಮೂವರು ನಾಯಕರ ನಡುವಿನ ಸಭೆಯಲ್ಲಿ ಉತ್ತಮ ಬಾಂಧವ್ಯ ಎಂದ ಟ್ರಂಪ್
ಕ್ಸಿ ಜಿನ್ಪಿಂಗ್ ಮತ್ತು ಪುಟಿನ್ ಅವರೊಂದಿಗಿನ ಸಭೆಯಲ್ಲಿ ಉತ್ತಮ ಹೊಂದಾಣಿಕೆ ಮತ್ತು ಆತ್ಮೀಯತೆ ಇತ್ತು ಎಂದು ಟ್ರಂಪ್ ಹೇಳಿದ್ದಾರೆ. ನಮ್ಮ ಮೂವರ ನಡುವಿನ ಸಂಬಂಧ ಅತ್ಯುತ್ತಮವಾಗಿತ್ತು ಎಂದಿದ್ದಾರೆ.
ಚೀನಾ ಮತ್ತು ರಷ್ಯಾ ನಾಯಕರಿಬ್ಬರೊಂದಿಗೂ ತಾನು ಉತ್ತಮ ಸಂಬಂಧ ಹೊಂದಿರುವುದಾಗಿ ಹೇಳಿದ ಟ್ರಂಪ್, ಲ್ಯಾಟಿನ್ ಅಮೆರಿಕದಲ್ಲಿ ಚೀನಾ ತನ್ನ ಪ್ರಭಾವ ಹೆಚ್ಚಿಸುವ ಪ್ರಯತ್ನದಿಂದ ಹಿಂದೆ ಸರಿದಿರುವುದಕ್ಕೆ ಕ್ಸಿ ಅವರೊಂದಿಗಿನ ತಮ್ಮ ಉತ್ತಮ ಬಾಂಧವ್ಯವೇ ಕಾರಣ ಎಂದು ಪ್ರತಿಪಾದಿಸಿದ್ದಾರೆ. ಪಶ್ಚಿಮ ಗೋಳಾರ್ಧದಲ್ಲಿ ಅಮೆರಿಕದ ಪ್ರಾಬಲ್ಯವನ್ನು ಮರಳಿ ಸ್ಥಾಪಿಸುವುದಾಗಿ ಟ್ರಂಪ್ ಆಡಳಿತ ಘೋಷಿಸಿದೆ.
ಚೀನಾ ವೆನೆಜುವೆಲಾದಲ್ಲಿ ತನ್ನ ಪ್ರಭಾವವನ್ನು ವಿಸ್ತರಿಸಲು ಪ್ರಯತ್ನಿಸುತ್ತಿತ್ತು. ಆದರೆ ಅಲ್ಲಿಂದ ಹಿಂದೆ ಸರಿಯುವಂತೆ ನಾನು ಹೇಳಿದಾಗ ಅವರು ಹೊರಟುಹೋದರು. ಪನಾಮ ಕಾಲುವೆಯ ವಿಚಾರದಲ್ಲಿಯೂ ಅವರು ಸಾಕಷ್ಟು ತೊಡಗಿಸಿಕೊಂಡಿದ್ದರು. ಅಲ್ಲಿಂದಲೂ ಹಿಂದೆ ಸರಿಯುವಂತೆ ಸೂಚಿಸಿದೆ ಎಂದು ಟ್ರಂಪ್ ಹೇಳಿದ್ದಾರೆ.
ದಕ್ಷಿಣ ಅಮೆರಿಕದ ವೆನೆಜುವೆಲಾದಲ್ಲಿ ರಷ್ಯಾ ಕೂಡ ಪ್ರಭಾವ ಹೊಂದಿತ್ತು ಎಂದು ಟ್ರಂಪ್ ಹೇಳಿದ್ದಾರೆ. ಆ ದೇಶದ ಆಗಿನ ನಾಯಕ ನಿಕೋಲಸ್ ಮಡುರೊ ಅವರನ್ನು ಜನವರಿಯಲ್ಲಿ ಅಮೆರಿಕದ ಪಡೆಗಳು ವಶಕ್ಕೆ ಪಡೆದಿದ್ದವು.
ವೆನೆಜುವೆಲಾದಲ್ಲಿ ರಷ್ಯಾ ಸಾಕಷ್ಟು ಪ್ರಭಾವ ಹೊಂದಿತ್ತು. ಈಗ ಅವರು ಅಲ್ಲಿಲ್ಲ. ಚೀನಾ ಕೂಡ ಅಲ್ಲಿಲ್ಲ. ಆದರೆ ನಾವು ಅಲ್ಲಿದ್ದೇವೆ ಎಂದು ಟ್ರಂಪ್ ಹೇಳಿದ್ದಾರೆ.