ಸೌಂದರ್ಯ ಸ್ಪರ್ಧೆಯಲ್ಲಿ ಹೊಸ ಇತಿಹಾಸ: 7 ವರ್ಷದ ಮಗುವಿನ ತಾಯಿಗೆ ಒಲಿದ 'ಮಿಸ್ ಯೂನಿವರ್ಸ್' ಪಟ್ಟ; ಜೆನ್ನಿಫರ್ ಬ್ಯಾರೆಟೊ ಈಗ 'ವಿಶ್ವ ಸುಂದರಿ'!
27 ವರ್ಷದ ಜೆನ್ನಿಫರ್ ತಮ್ಮ ತವರು ನೆಲವಾದ ಸ್ಯಾನ್ ಜುವಾನ್‌ನಲ್ಲಿ ನಡೆದ ಸ್ಪರ್ಧೆಯಲ್ಲಿ ಈ ಕಿರೀಟವನ್ನು ಗೆಲ್ಲುವ ಮೂಲಕ ಪೋರ್ಟೊ ರಿಕೊ ದೇಶಕ್ಕೆ 6 ನೇ ಮಿಸ್ ಯೂನಿವರ್ಸ್ ಜಯವನ್ನು ತಂದುಕೊಟ್ಟಿದ್ದಾರೆ.
75ನೇ ಮಿಸ್ ಯೂನಿವರ್ಸ್ ಸೌಂದರ್ಯ ಸ್ಪರ್ಧೆಯಲ್ಲಿ ಪೋರ್ಟೊ ರಿಕೊದ ಜೆನ್ನಿಫರ್ ಬ್ಯಾರೆಟೊ ಅವರು 2026 ರ ಮಿಸ್ ಯೂನಿವರ್ಸ್ ಕಿರೀಟವನ್ನು ಮುಡಿಗೇರಿಸಿಕೊಳ್ಳುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದ್ದಾರೆ.
ಈ ಪ್ರತಿಷ್ಠಿತ ಅಂತಾರಾಷ್ಟ್ರೀಯ ಪ್ರಶಸ್ತಿಯನ್ನು ಗೆದ್ದ ಮೊದಲ ವಿವಾಹಿತ ಮಹಿಳೆ ಮತ್ತು ತಾಯಿ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ. 27 ವರ್ಷದ ಜೆನ್ನಿಫರ್ ತಮ್ಮ ತವರು ನೆಲವಾದ ಸ್ಯಾನ್ ಜುವಾನ್‌ನಲ್ಲಿ ನಡೆದ ಸ್ಪರ್ಧೆಯಲ್ಲಿ ಈ ಕಿರೀಟವನ್ನು ಗೆಲ್ಲುವ ಮೂಲಕ ಪೋರ್ಟೊ ರಿಕೊ ದೇಶಕ್ಕೆ 6 ನೇ ಮಿಸ್ ಯೂನಿವರ್ಸ್ ಜಯವನ್ನು ತಂದುಕೊಟ್ಟಿದ್ದಾರೆ.
ಬ್ಯಾರೆಟೊ ಅವರ ಈ ಕಿರೀಟದ ಪಯಣವು ಸಾಮಾನ್ಯವಾಗಿರದೆ ಬಹಳ ವಿಶೇಷವಾಗಿದೆ. ಮನೋವಿಜ್ಞಾನ ಪದವೀಧರೆಯಾಗಿರುವ ಅವರು ಎರಡು ಸ್ನಾತಕೋತ್ತರ ಪದವಿಗಳನ್ನು ಪಡೆದಿದ್ದು, ಅಮೆರಿಕದ ರಕ್ಷಣಾ ಇಲಾಖೆಯ ಆರ್ಮಿ ಫ್ಯಾಮಿಲಿ ಅಡ್ವೊಕಸಿ ಪ್ರೋಗ್ರಾಂನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದರ ಮೂಲಕ ಕೌಟುಂಬಿಕ ಹಿಂಸೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯದಿಂದ ಸಂತ್ರಸ್ತರಾದ ಸೇನಾ ಕುಟುಂಬಗಳಿಗೆ ಅವರು ನೆರವಾಗುತ್ತಿದ್ದಾರೆ. ಅಲ್ಲದೆ, ಟೆಕ್ಸಾಸ್ ಮತ್ತು ಪೋರ್ಟೊ ರಿಕೊದ ಆರೋಗ್ಯ ಸಂಸ್ಥೆಗಳಲ್ಲೂ ಸ್ವಯಂಸೇವಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಈ ಸ್ಪರ್ಧೆಯಲ್ಲಿ ಡೊಮಿನಿಕನ್ ರಿಪಬ್ಲಿಕ್ ಸುಂದರಿ ಮೊದಲ ರನ್ನರ್-ಅಪ್ ಆಗಿ ಮತ್ತು ವೆನೆಜುವೆಲಾ ಸುಂದರಿ ಎರಡನೇ ರನ್ನರ್-ಅಪ್ ಆಗಿ ಹೊರಹೊಮ್ಮಿದರೆ, ಫಿಲಿಪೈನ್ಸ್ ಮತ್ತು ನ್ಯೂಜಿಲೆಂಡ್ ಸ್ಪರ್ಧಿಗಳು ಕ್ರಮವಾಗಿ ನಾಲ್ಕು ಮತ್ತು ಐದನೇ ಸ್ಥಾನಗಳನ್ನು ಪಡೆದುಕೊಂಡರು.
ಕೇರಳದ 19 ವರ್ಷದ ವಿದ್ಯಾರ್ಥಿನಿ ಮುಡಿಗೆ 'ಮಿಸ್ ಯೂನಿವರ್ಸ್ ಇಂಡಿಯಾ 2026' ಕಿರೀಟ; ಯಾರು ಈ ಅತಿಲೋಕ ಸುಂದರಿ?
ವೃತ್ತಿಪರ ಜವಾಬ್ದಾರಿಗಳ ಹೊರತಾಗಿ, ಬ್ಯಾರೆಟೊ ಅವರಿಗೆ ಪುಸ್ತಕ ಓದುವುದು ಮತ್ತು ವಾಲಿಬಾಲ್ ಆಡುವುದರಲ್ಲಿ ಹೆಚ್ಚಿನ ಆಸಕ್ತಿಯಿದೆ. ಜೊತೆಗೆ, ಪೋರ್ಟೊ ರಿಕೊದಾದ್ಯಂತ ಸ್ವಯಂಸೇವಾ ಚಟುವಟಿಕೆಗಳಲ್ಲಿ ಸಕ್ರಿಯರಾಗಿರುವ ಅವರು, 'ಪೀಡಿಯಾಟ್ರಿಕ್ ಡಯಾಬಿಟಿಸ್ ಅಸೋಸಿಯೇಷನ್ ಆಫ್ ಪೋರ್ಟೊ ರಿಕೊ' ಸಂಸ್ಥೆಯೊಂದಿಗೆ ಕೈಜೋಡಿಸಿ ಮಧುಮೇಹದಿಂದ ಬಳಲುತ್ತಿರುವ ಮಕ್ಕಳು ಮತ್ತು ಅವರ ಕುಟುಂಬಗಳಿಗೆ ಬೆಂಬಲ ನೀಡುವುದರ ಜೊತೆಗೆ ಈ ಕಾಯಿಲೆಯ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ.
ವಿಶೇಷವೆಂದರೆ, ಬ್ಯಾರೆಟೊ ಅವರಿಗೆ ಈ ಹಿಂದೆ ಯಾವುದೇ ಮಾಡೆಲಿಂಗ್ ಅಥವಾ ರ‍್ಯಾಂಪ್ ವಾಕ್ ಅನುಭವವಿಲ್ಲದೆ ಸೌಂದರ್ಯ ಸ್ಪರ್ಧೆಯ ಲೋಕಕ್ಕೆ ಕಾಲಿಟ್ಟಿದ್ದರು. 2025 ರಲ್ಲಿ ತಮ್ಮ ಸಿದ್ಧತೆಯನ್ನು ಆರಂಭಿಸಿದ ಅವರು, 2026 ರ ಜೂನ್‌ನಲ್ಲಿ ಮಿಸ್ ಯೂನಿವರ್ಸ್ ಪೋರ್ಟೊ ರಿಕೊ ಕಿರೀಟವನ್ನು ಗೆದ್ದಿದ್ದರು.
"ಹೊಸ ರಾಣಿ, ಹೊಸ ಯುಗ! ಕಿರೀಟವನ್ನು ಪೋರ್ಟೊ ರಿಕೊಗೆ ತಂದ ನಮ್ಮ ಹೊಸ ಮಿಸ್ ಯೂನಿವರ್ಸ್ ಜೆನ್ನಿಫರ್ ಬ್ಯಾರೆಟೊ ಅವರಿಗೆ ಅಭಿನಂದನೆಗಳು" ಎಂದು ಮಿಸ್ ಯೂನಿವರ್ಸ್ ಸಂಸ್ಥೆ ತನ್ನ ಅಧಿಕೃತ ಸಾಮಾಜಿಕ ಜಾಲತಾಣದಲ್ಲಿ ಸಂಭ್ರಮ ಹಂಚಿಕೊಂಡಿದೆ.