ಸಂಗ್ರಹ ಚಿತ್ರ 
ವಿದೇಶ

Trump 'ಎಕನಾಮಿಕ್ ವಾರ್'ಗೆ ಡೋಂಟ್ ಕೇರ್ ಅಂದ Iran: ತೈಲ ರಾಜತಾಂತ್ರಿಕತೆಯಲ್ಲಿ ಹಠಕ್ಕೆ ಬಿದ್ದ ಟೆಹ್ರಾನ್; 'ಹೊಸ ವ್ಯವಸ್ಥೆ' ಘೋಷಿಸಿದ ಪೆಜೆಶ್ಕಿಯಾನ್..!

ಈ ಪರಿಸ್ಥಿತಿಯನ್ನು ನಿರ್ವಹಿಸಲು ಸರ್ಕಾರ ಹೊಸ ವ್ಯವಸ್ಥೆಯನ್ನು ಅಳವಡಿಸಿಕೊಂಡಿದೆ. ಇತ್ತೀಚಿನ ತಿಂಗಳುಗಳಲ್ಲಿ ಶತ್ರುಗಳ ಯೋಜನೆ ಇರಾನ್‌ನ ಗೌರವಾನ್ವಿತ ಜನರ ಮೇಲೆ ಒತ್ತಡ ಹೇರುವ ಉದ್ದೇಶದಿಂದ ದೇಶದ ಪ್ರಮುಖ ಜೀವನಾಡಿಗಳನ್ನು ಕಡಿತಗೊಳಿಸುವುದಾಗಿತ್ತು.

ಟೆಹ್ರಾನ್: ಅಮೆರಿಕ ವಿಧಿಸಿರುವ ಅತ್ಯಂತ ಕಠಿಣ ಆರ್ಥಿಕ ನಿರ್ಬಂಧಗಳು ಮತ್ತು ನೌಕಾಪಡೆಯ ದಿಗ್ಬಂಧನವನ್ನು ಎದುರಿಸಲು ಇರಾನ್ ಸರ್ಕಾರವು "ಹೊಸ ಆರ್ಥಿಕ ಮತ್ತು ಕಾರ್ಯತಾಂತ್ರಿಕ ವ್ಯವಸ್ಥೆಯನ್ನು" ಅಳವಡಿಸಿಕೊಂಡಿದೆ ಎಂದು ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯನ್ ಶನಿವಾರ ಘೋಷಿಸಿದ್ದಾರೆ.

ಅಮೆರಿಕದ ತೀವ್ರ ಒತ್ತಡದ ನಡುವೆಯೂ ದೇಶದ ಪ್ರಮುಖ ವಾಣಿಜ್ಯ ಮತ್ತು ಇಂಧನ ಸಂಪರ್ಕಗಳು ಕಡಿತಗೊಳ್ಳದಂತೆ ಇರಾನ್ ಯಶಸ್ವಿಯಾಗಿ ತಡೆದಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.

ಈ ಕುರಿತು ‘ಎಕ್ಸ್‌’ನಲ್ಲಿ ಪೋಸ್ಟ್ ಮಾಡಿರುವ ಅವರು, ಇರಾನ್‌ನ ಜನರ ಮೇಲೆ ಒತ್ತಡ ಹೇರಲು ದೇಶದ ಪ್ರಮುಖ ಆರ್ಥಿಕ ಜೀವನಾಡಿಗಳನ್ನು ಕಡಿತಗೊಳಿಸುವುದು ಅಮೆರಿಕ ಸೇರಿದಂತೆ ವಿರೋಧಿಗಳ ಉದ್ದೇಶವಾಗಿದೆ. ಹೆಚ್ಚುತ್ತಿರುವ ಒತ್ತಡದ ನಡುವೆಯೂ ಜನರ ಬೆಂಬಲ ಹಾಗೂ ಸರ್ಕಾರ ಕೈಗೊಂಡ ಕ್ರಮಗಳಿಂದ ಆ ಉದ್ದೇಶಗಳನ್ನು ಈಡೇರಿಸಲು ಅವಕಾಶ ನೀಡಿಲ್ಲ.

ಈ ಪರಿಸ್ಥಿತಿಯನ್ನು ನಿರ್ವಹಿಸಲು ಸರ್ಕಾರ ಹೊಸ ವ್ಯವಸ್ಥೆಯನ್ನು ಅಳವಡಿಸಿಕೊಂಡಿದೆ. ಇತ್ತೀಚಿನ ತಿಂಗಳುಗಳಲ್ಲಿ ಶತ್ರುಗಳ ಯೋಜನೆ ಇರಾನ್‌ನ ಗೌರವಾನ್ವಿತ ಜನರ ಮೇಲೆ ಒತ್ತಡ ಹೇರುವ ಉದ್ದೇಶದಿಂದ ದೇಶದ ಪ್ರಮುಖ ಜೀವನಾಡಿಗಳನ್ನು ಕಡಿತಗೊಳಿಸುವುದಾಗಿತ್ತು. ಆರ್ಥಿಕ ಒತ್ತಡ ತೀವ್ರಗೊಂಡಿದೆ. ಆದರೆ, ದೇವರ ಕೃಪೆಯಿಂದ ಜನರ ಬೆಂಬಲ ಹಾಗೂ ಸರ್ಕಾರದ ಸಹೋದ್ಯೋಗಿಗಳು ಕೈಗೊಂಡ ಕ್ರಮಗಳ ನೆರವಿನಿಂದ ಆರ್ಥಿಕ ಯುದ್ಧದಲ್ಲಿ ಶತ್ರುಗಳ ಉದ್ದೇಶಗಳು ಈಡೇರುವುದಕ್ಕೆ ನಾವು ಅವಕಾಶ ನೀಡಿಲ್ಲ ಎಂದು ತಿಳಿಸಿದ್ದಾರೆ.

ಇರಾನ್‌ನ ಆರ್ಥಿಕತೆ ಹಾಗೂ ಇರಾನ್ ಆಡಳಿತ ಮತ್ತು ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್‌ (IRGC)ಗೆ ಬೆಂಬಲ ನೀಡುತ್ತವೆ ಎಂದು ವಾಷಿಂಗ್ಟನ್ ಆರೋಪಿಸುವ ಜಾಲಗಳ ವಿರುದ್ಧ ಅಮೆರಿಕ ವ್ಯಾಪಕ ನಿರ್ಬಂಧ ಅಭಿಯಾನ ನಡೆಸುತ್ತಿರುವ ಸಂದರ್ಭದಲ್ಲೇ ಪೆಜೆಶ್ಕಿಯಾನ್ ಈ ಹೇಳಿಕೆ ನೀಡಿದ್ದಾರೆ.

ಆಗಸ್ಟ್‌ನಲ್ಲಿ ಅಮೆರಿಕದ ಖಜಾನೆ ಇಲಾಖೆ ‘ಆಪರೇಷನ್ ಎಕನಾಮಿಕ್ ಔಟ್‌ಕಾಸ್ಟ್’ ಎಂಬ ಕಾರ್ಯಾಚರಣೆ ಆರಂಭಿಸಿತ್ತು. ಇದನ್ನು ಇರಾನ್ ಮತ್ತು ಅದರ ಬೆಂಬಲಿಗರ ವಿರುದ್ಧ “ಅಭೂತಪೂರ್ವ, ಇಡೀ ಸರ್ಕಾರದ ಆರ್ಥಿಕ ಅಭಿಯಾನ” ಎಂದು ಅಮೆರಿಕ ಬಣ್ಣಿಸಿತ್ತು.

ಕಾರ್ಯಾಚರಣೆ ಆರಂಭವಾದ ಬಳಿಕ ಇರಾನ್ ವಿರುದ್ಧ ಕ್ರಮ ಕೈಗೊಳ್ಳುವಂತೆ ವಿವಿಧ ದೇಶಗಳ ಸರ್ಕಾರಗಳಿಗೆ ಮನವರಿಕೆ ಮಾಡಲು ಖಜಾನೆ ಇಲಾಖೆಯ ಅಧಿಕಾರಿಗಳನ್ನು ವಿಶ್ವದ ವಿವಿಧ ಭಾಗಗಳಿಗೆ ಕಳುಹಿಸಲಾಗಿದೆ ಎಂದು ಅಮೆರಿಕದ ಆರ್ಥಿಕ ಸಚಿವ ಸ್ಕಾಟ್ ಬೆಸೆಂಟ್ ತಿಳಿಸಿದ್ದರು.

ಇರಾನ್ ಆಡಳಿತ ಮತ್ತು IRGCಗೆ ಆರ್ಥಿಕ ನೆರವು ನೀಡುವ ಜೀವನಾಡಿಗಳನ್ನು ಕಡಿತಗೊಳಿಸುವುದು ‘ಆಪರೇಷನ್ ಎಕನಾಮಿಕ್ ಔಟ್‌ಕಾಸ್ಟ್’ನ ಉದ್ದೇಶವಾಗಿದೆ ಎಂದು ಅಮೆರಿಕದ ಆರ್ಥಿಕ ಇಲಾಖೆ ಹೇಳಿದೆ.

ಇರಾನ್‌ಗೆ ನೆರವಾಗುವ ಪ್ರತಿಯೊಂದು ಹಣಕಾಸು ಸಂಪನ್ಮೂಲವನ್ನು ಬಂದ್ ಮಾಡುವ ನಿರಂತರ ಹಾಗೂ ವ್ಯವಸ್ಥಿತ ಅಭಿಯಾನದ ಭಾಗವಾಗಿ ಈ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಇಲಾಖೆ ತಿಳಿಸಿದೆ. ಇರಾನ್‌ನ್ನು ಭಯೋತ್ಪಾದನೆಗೆ ಪ್ರಮುಖ ಪ್ರಾಯೋಜಕ ರಾಷ್ಟ್ರ ಎಂದು ಅಮೆರಿಕ ಪರಿಗಣಿಸಿದೆ.

ತೈಲ ಕಳ್ಳಸಾಗಣೆ, ನಿರ್ಬಂಧಗಳಿಂದ ತಪ್ಪಿಸಿಕೊಳ್ಳುವುದು ಹಾಗೂ ಭಯೋತ್ಪಾದನೆಗೆ ಹಣಕಾಸು ಒದಗಿಸಲು ಇರಾನ್ ಬಳಸುವ ಜಾಲಗಳು, ಮಧ್ಯವರ್ತಿಗಳು ಮತ್ತು ಹಣಕಾಸು ಮಾರ್ಗಗಳನ್ನು ಗುರುತಿಸಲಾಗಿದೆ. ಆಡಳಿತದ ಅಕ್ರಮ ಆದಾಯದ ಯಾವುದೇ ಮೂಲವನ್ನು ಗುರಿಯಾಗಿಸುವಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಹೇಳಿದೆ.

ಇತ್ತೀಚಿನ ಒತ್ತಡ ಇರಾನ್‌ನ ವಿಮಾನಯಾನ ಕ್ಷೇತ್ರಕ್ಕೂ ವಿಸ್ತರಿಸಿದೆ. ಇರಾನ್‌ನ ವಿಮಾನಯಾನ ಸಂಸ್ಥೆಗಳಿಗೆ ನಿರಂತರವಾಗಿ ಬೆಂಬಲ ನೀಡುವ ವಿದೇಶಿ ಕಂಪನಿಗಳು ಮತ್ತು ಸೇವಾ ಪೂರೈಕೆದಾರರು ದ್ವಿತೀಯ ಹಂತದ ನಿರ್ಬಂಧಗಳನ್ನು ಎದುರಿಸಬೇಕಾಗಬಹುದು ಎಂದು ವಾಷಿಂಗ್ಟನ್ ಎಚ್ಚರಿಸಿದೆ.

ಕಳೆದ ತಿಂಗಳು, ಈ ಹಿಂದೆ ನಿರ್ಬಂಧಕ್ಕೆ ಒಳಪಡದ ಕೆಲವು ಇರಾನ್ ವಿಮಾನಯಾನ ಸಂಸ್ಥೆಗಳು ಹಾಗೂ ಇರಾನ್‌ನ ವಿಮಾನಯಾನ ಕ್ಷೇತ್ರಕ್ಕೆ ಬೆಂಬಲ ನೀಡುತ್ತಿವೆ ಎಂದು ಆರೋಪಿಸಲಾದ ಇರಾನ್ ಹೊರಗಿನ ಕಂಪನಿಗಳ ಮೇಲೂ ಅಮೆರಿಕದ ಆರ್ಥಿಕ ಇಲಾಖೆ ನಿರ್ಬಂಧ ಹೇರಿತ್ತು.

ವರ್ಷಗಳ ಕಾಲ ಜಾರಿಯಲ್ಲಿರುವ ಅಮೆರಿಕದ ನಿರ್ಬಂಧಗಳಿಂದ ಇರಾನ್‌ನ ವಿಮಾನಯಾನ ಕ್ಷೇತ್ರ ಈಗಾಗಲೇ ತೀವ್ರ ನಿರ್ಬಂಧಗಳನ್ನು ಎದುರಿಸುತ್ತಿದೆ. ಹೊಸ ವಿಮಾನಗಳನ್ನು ಖರೀದಿಸುವುದು, ಬಿಡಿಭಾಗಗಳನ್ನು ಪಡೆಯುವುದು ಹಾಗೂ ನಿರ್ವಹಣಾ ಸೇವೆಗಳನ್ನು ಪಡೆಯುವಲ್ಲಿ ಇರಾನ್ ವಿಮಾನಯಾನ ಸಂಸ್ಥೆಗಳಿಗೆ ಇದರಿಂದ ತೊಂದರೆಯಾಗಿದೆ.

ಇತ್ತೀಚಿನ ಕ್ರಮಗಳು ಇರಾನ್‌ನ ಆರ್ಥಿಕತೆಯ ವಿರುದ್ಧದ ಅಮೆರಿಕದ ವ್ಯಾಪಕ ನಿರ್ಬಂಧ ವ್ಯವಸ್ಥೆಯ ಭಾಗವಾಗಿದ್ದು, ಇಂಧನ, ಸಾಗಣೆ, ತಂತ್ರಜ್ಞಾನ, ಚಿನ್ನ ಮತ್ತು ಡಿಜಿಟಲ್ ಆಸ್ತಿ ಕ್ಷೇತ್ರಗಳನ್ನೂ ಗುರಿಯಾಗಿಸಿಕೊಂಡಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಯೋತ್ಪಾದಕ ದಾಳಿ ವಿಫಲಗೊಳಿಸಿದ ಭಾರತೀಯ ಪೈಲಟ್‌ಗೆ Israel ಅತ್ಯುನ್ನತ ಗೌರವ: ಸ್ವಾತಂತ್ರ್ಯ ದಿನಾಚರಣೆಗೆ ಪ್ರಧಾನಿ ಮೋದಿ, ಕ್ಯಾಪ್ಟನ್ ಸ್ಮಿತ್‌ಗೆ ಆಹ್ವಾನ..!

4 IAS ಅಧಿಕಾರಿಗಳ ವರ್ಗಾವಣೆ ಮಾಡಿ ಸರ್ಕಾರ ಆದೇಶ; ಯಾರಿಗೆಲ್ಲಾ ಬದಲಾವಣೆ

ಆಧಾರ ರಹಿತ ಆರೋಪ ಸರಿಯಲ್ಲ, ‘ದಾಖಲೆ ತೋರಿಸಿ, ಜಮೀನನ್ನೇ ನಿಮ್ಮ ಕುಟುಂಬಕ್ಕೆ ಕೊಡ್ತೀನಿ; HDK NICE ಆರೋಪಕ್ಕೆ ಸಚಿವ ಬಾಲಕೃಷ್ಣ ತಿರುಗೇಟು

SIR ಅಕ್ರಮಗಳ ಕುರಿತು ರಾಜ್ಯದಿಂದ ಪ್ರತ್ಯೇಕ ತನಿಖೆ ಇಲ್ಲ: CM ಡಿ.ಕೆ. ಶಿವಕುಮಾರ್ ಸ್ಪಷ್ಟನೆ

ಪಾಕಿಸ್ತಾನದ ಉನ್ನತ ರಾಜತಾಂತ್ರಿಕರಿಗೆ ಭಾರತದ ಸಮನ್ಸ್; ಗಡಿಯಾಚೆಗಿನ ಒಳನುಸುಳುವಿಕೆಯ ವಿರುದ್ಧ ಪ್ರತಿಭಟನೆ