ಇಸ್ರೇಲ್‌ನ ದಂತವೈದ್ಯ ಡಾ. ಶೋಟಾ ಮುಸೇವ್ 
ವಿದೇಶ

'ದಯವಿಟ್ಟು ಮಲಗಬೇಡಿ, ನಮಗೆ ನೀವು ಬೇಕು': ಸಾವಿನ ದವಡೆಯಲ್ಲಿದ್ದ ಸ್ಮಿತ್ ಮಚ್ಚರ್'ಗೆ ಧೈರ್ಯ ತುಂಬಿದ ದಂತ ವೈದ್ಯ; Flydubai ವಿಮಾನದಲ್ಲಿ ಆ 45 ನಿಮಿಷಗಳಲ್ಲಿ ನಡೆದಿದ್ದೇನು..?

ವೈದ್ಯಕೀಯ ವೃತ್ತಿಪರರಾದ ಇಸ್ರೇಲ್‌ನ ದಂತವೈದ್ಯ ಡಾ. ಶೋಟಾ ಮುಸೇವ್ ತಕ್ಷಣವೇ ಮುಂದೆ ಬಂದರು. ವಿಮಾನದಲ್ಲಿ ಯಾವುದೇ ಸೂಕ್ತ ವೈದ್ಯಕೀಯ ಉಪಕರಣಗಳು ಇಲ್ಲದಿದ್ದರೂ, ಅವರು ಧೈರ್ಯ ಕಳೆದುಕೊಳ್ಳಲಿಲ್ಲ. ಪ್ರಯಾಣಿಕರ ಟಿ-ಶರ್ಟ್‌ಗಳನ್ನು ಗಾಯಗಳಿಗೆ ಕಟ್ಟಿ ರಕ್ತಸ್ರಾವವನ್ನು ನಿಯಂತ್ರಿಸಿದರು.

ದುಬೈ: ದುಬೈನಿಂದ ಇಸ್ರೇಲ್‌ನ ಟೆಲ್ ಅವೀವ್‌ಗೆ ಹಾರುತ್ತಿದ್ದ ಫ್ಲೈದುಬೈ (flydubai) ವಿಮಾನದಲ್ಲಿ ನಡೆದ ಆತಂಕಕಾರಿ ಘಟನೆಯಲ್ಲಿ ಇಸ್ರೇಲ್ ಮೂಲದ ದಂತವೈದ್ಯರೊಬ್ಬರು ಸಮಯಪ್ರಜ್ಞೆ ಮೆರೆದು ಭಾರತೀಯ ಮೂಲದ ಮುಖ್ಯ ಪೈಲಟ್ ಅವರ ಜೀವ ಉಳಿಸಿದ್ದಾರೆ.

ಫ್ಲೈದುಬೈ ಎಫ್‌ಜೆಡ್ 1073 ವಿಮಾನವು ಆಕಾಶದಲ್ಲಿ ಹಾರಾಟ ನಡೆಸುತ್ತಿದ್ದಾಗ, ಓಮನ್ ಮೂಲದ ಸಹ-ಪೈಲಟ್ ಇದ್ದಕ್ಕಿದ್ದಂತೆ ವಿಮಾನದ ಮುಖ್ಯ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರ ಮೇಲೆ ತುರ್ತು ಕೊಡಲಿಯಿಂದ (Crash Axe) ಭೀಕರವಾಗಿ ಹಲ್ಲೆ ನಡೆಸಿದ್ದ.

ಯುಎಇ ಅಧಿಕಾರಿಗಳು ಇದನ್ನು "ಭಯೋತ್ಪಾದನಾ ದಾಳಿಯ ಯತ್ನ" ಎಂದು ಶಂಕಿಸಿದ್ದಾರೆ. ದಾಳಿಯ ತೀವ್ರತೆಗೆ ವಿಮಾನವು ಕೇವಲ 30 ಸೆಕೆಂಡುಗಳಲ್ಲಿ ಬರೋಬ್ಬರಿ 14,000 ಅಡಿಗಳಷ್ಟು ಕೆಳಗೆ ಜಿಗಿದು, ಪ್ರಯಾಣಿಕರಲ್ಲಿ ತೀವ್ರ ಆತಂಕ ಸೃಷ್ಟಿಸಿತ್ತು.

ತಲೆ ಮತ್ತು ಕೈಗಳಿಗೆ ಆಳವಾದ ಗಾಯಗಳಾಗಿ ತೀವ್ರ ರಕ್ತಸ್ರಾವವಾಗುತ್ತಿದ್ದರೂ, ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಹೇಗೋ ಕಷ್ಟಪಟ್ಟು ಕಾಕ್‌ಪಿಟ್‌ನ ಬಾಗಿಲನ್ನು ಅನ್‌ಲಾಕ್ ಮಾಡಿದ್ದಾರೆ. ಇದರಿಂದಾಗಿ ವಿಮಾನದ ಸಿಬ್ಬಂದಿ ಮತ್ತು ಪ್ರಯಾಣಿಕರು ಒಳಗೆ ಪ್ರವೇಶಿಸಲು ಸಾಧ್ಯವಾಯಿತು.

ವಿಮಾನದಲ್ಲಿದ್ದ ಪ್ರಯಾಣಿಕರು ಒಟ್ಟಾಗಿ ದಾಳಿಕೋರ ಸಹ-ಪೈಲಟ್‌ನನ್ನು ಹೆಡ್‌ಫೋನ್ ಕೇಬಲ್‌ಗಳಿಂದ ಕಟ್ಟಿಹಾಕಿ ಹತೋಟಿಗೆ ತಂದರು. ವಿಮಾನದಲ್ಲಿದ್ದ ಮತ್ತೊಬ್ಬ ಪ್ರಯಾಣಿಕ (ವೃತ್ತಿಯಲ್ಲಿ ಪ್ಲಂಬರ್) ಮತ್ತು ಇಬ್ಬರು ಆಫ್-ಡ್ಯೂಟಿ ಪೈಲಟ್‌ಗಳು ತಕ್ಷಣ ಕಾಕ್‌ಪಿಟ್ ಪ್ರವೇಶಿಸಿ ವಿಮಾನವನ್ನು ಸುರಕ್ಷಿತವಾಗಿ ನಿಯಂತ್ರಣಕ್ಕೆ ತೆಗೆದುಕೊಂಡರು. ಬಳಿಕ ವಿಮಾನವನ್ನು ಸೌದಿ ಅರೇಬಿಯಾದ ತಬೂಕ್ ನಗರಕ್ಕೆ ತುರ್ತು ಲ್ಯಾಂಡಿಂಗ್ ಮಾಡಲಾಯಿತು.

ಈ ನಡುವೆ ವಿಮಾನದಲ್ಲಿದ್ದ ಪ್ರಯಾಣಿಕರ ಕಿರುಚಾಟ ಕೇಳಿ, ಅಲ್ಲಿಯೇ ಪ್ರಯಾಣಿಸುತ್ತಿದ್ದ ಏಕೈಕ ವೈದ್ಯಕೀಯ ವೃತ್ತಿಪರರಾದ ಇಸ್ರೇಲ್‌ನ ದಂತವೈದ್ಯ ಡಾ. ಶೋಟಾ ಮುಸೇವ್ ತಕ್ಷಣವೇ ಮುಂದೆ ಬಂದರು. ವಿಮಾನದಲ್ಲಿ ಯಾವುದೇ ಸೂಕ್ತ ವೈದ್ಯಕೀಯ ಉಪಕರಣಗಳು ಇಲ್ಲದಿದ್ದರೂ, ಅವರು ಧೈರ್ಯ ಕಳೆದುಕೊಳ್ಳಲಿಲ್ಲ. ಪ್ರಯಾಣಿಕರ ಟಿ-ಶರ್ಟ್‌ಗಳನ್ನು ಗಾಯಗಳಿಗೆ ಕಟ್ಟಿ ರಕ್ತಸ್ರಾವವನ್ನು ನಿಯಂತ್ರಿಸಿದರು. ಕ್ಯಾಬಿನ್ ಸಿಬ್ಬಂದಿ ನೀಡಿದ ಐಸ್ ಪ್ಯಾಕ್‌ಗಳಿಂದ ಗಾಯಗಳಿಗೆ ಪ್ರಥಮ ಚಿಕಿತ್ಸೆ ನೀಡಿದರು.

ತೀವ್ರ ರಕ್ತಸ್ರಾವದಿಂದಾಗಿ ಕ್ಯಾಪ್ಟನ್ ಮಚ್ಚಾರ್ ಅವರ ರಕ್ತದೊತ್ತಡ ತೀವ್ರವಾಗಿ ಕುಸಿಯುತ್ತಿತ್ತು. ಈ ವೇಳೆ ತೀವ್ರ ಆಘಾತಕ್ಕೊಳಗಾಗಿದ್ದ ಕ್ಯಾಪ್ಟನ್, "ದಯವಿಟ್ಟು ನನಗೆ ಸಹಾಯ ಮಾಡಿ, ನಾನು ಇಲ್ಲಿ ಸಾಯಲು ಬಯಸುವುದಿಲ್ಲ, ನನಗೆ ಬದುಕಬೇಕು" ಎಂದು ವೈದ್ಯರಲ್ಲಿ ವಿನಂತಿಸುತ್ತಿದ್ದರು.

ಪೈಲಟ್ ಪ್ರಜ್ಞೆ ಕಳೆದುಕೊಂಡು ಕೋಮಾ ಸ್ಥಿತಿಗೆ ತಲುಪಬಾರದು ಎಂಬ ಕಾರಣಕ್ಕೆ, ಡಾ. ಮುಸೇವ್ ಸುಮಾರು 45 ನಿಮಿಷಗಳ ಕಾಲ ಅವರೊಂದಿಗೆ ನಿರಂತರವಾಗಿ ಮಾತನಾಡುತ್ತಾ, ಅವರ ಕುಟುಂಬ ಮತ್ತು ಮಕ್ಕಳನ್ನು ನೆನಪಿಸಿಕೊಳ್ಳುವಂತೆ ಧೈರ್ಯ ತುಂಬಿದರು.

47 ವರ್ಷದ ಡಾ. ಶೋಟಾ ಮುಸಾಯೆವ್ ಅವರು ‘ದಿ ನ್ಯಾಷನಲ್’ಗೆ ನೀಡಿದ ಸಂದರ್ಶನದಲ್ಲಿ, ಕ್ಯಾಪ್ಟನ್ ಮಚ್ಚರ್ ಅವರ ತಲೆ ಮತ್ತು ಕೈಗಳಿಗೆ ಆಗಿದ್ದ ಇರಿತದ ಗಾಯಗಳಿಂದ ಅಪಾರ ಪ್ರಮಾಣದಲ್ಲಿ ರಕ್ತಸ್ರಾವವಾಗುತ್ತಿದ್ದ ಸಂದರ್ಭದಲ್ಲಿ ಸುಮಾರು 45 ನಿಮಿಷಗಳ ಕಾಲ ಅದನ್ನು ನಿಯಂತ್ರಿಸಲು ತಾವು ನಡೆಸಿದ ಹೋರಾಟ ಹಾಗೂ ಘಟನೆಯ ಬಳಿಕ ತಮಗೆ ಕಾಡುತ್ತಿರುವ ಆಘಾತದ ಬಗ್ಗೆ ವಿವರಿಸಿದ್ದಾರೆ.

ಅವರ ತಲೆ ಮತ್ತು ಎಡಗೈಯಿಂದ ತೀವ್ರ ರಕ್ತಸ್ರಾವವಾಗುತ್ತಿತ್ತು. ನಾನು ಗಾಯಗಳ ಮೇಲೆ ಟಿ-ಶರ್ಟ್‌ಗಳನ್ನು ಒತ್ತಿ ಹಿಡಿದೆ. ಆದರೆ, ರಕ್ತಸ್ರಾವ ನಿಲ್ಲಲಿಲ್ಲ. ಹೀಗಾಗಿ ವಿಮಾನದ ಸಿಬ್ಬಂದಿಯಿಂದ ಐಸ್ ಪ್ಯಾಕ್ ಕೇಳಿದೆ. ವರಿಗೆ ಅತ್ಯಂತ ಆಳವಾದ ಗಾಯಗಳಾಗಿದ್ದವು. ನಮಗೆ ಸಾಕಷ್ಟು ಐಸ್ ಪ್ಯಾಕೆಟ್‌ಗಳು ಬೇಕಾದವು. ಪ್ರತಿಬಾರಿ ರಕ್ತಸ್ರಾವ ಹೇಗಿದೆ ಎಂದು ನೋಡಲು ಟಿ-ಶರ್ಟ್ ತೆಗೆದಾಗ ಮತ್ತೆ ಹೆಚ್ಚು ರಕ್ತ ಬರುತ್ತಿತ್ತು. ಹೀಗಾಗಿ ಹೆಚ್ಚು ಬಲವಾಗಿ ಒತ್ತದೆ, ಐಸ್ ಇಟ್ಟು ಒತ್ತಡ ನೀಡುತ್ತಲೇ ಇದ್ದೆ. 45 ನಿಮಿಷಗಳ ಕಾಲ ಇದೇ ರೀತಿ ಮಾಡಿದೆ.

ಆಳವಾಗಿ ಗಾಯವಾಗಿದ್ದ ಹಿನ್ನೆಲೆಯಲ್ಲಿ ಕ್ಯಾಪ್ಟನ್ ಮಚ್ಚರ್ ಕೋಮಾ ಸ್ಥಿತಿಗೆ ಜಾರುವ ಸಾಧ್ಯತೆ ಇತ್ತು. ಹೀಗಾಗಿ, ಅವರೊಂದಿಗೆ ನಿರಂತರವಾಗಿ ಮಾತನಾಡುತ್ತಿದ್ದೆ. ದಯವಿಟ್ಟು ಕಣ್ಣು ಮುಚ್ಚಬೇಡಿ, ನಮಗೆ ನೀವು ಬೇಕು’ ಎಂದು ಅವರಿಗೆ ಹೇಳಿದೆ. ಅವರಿಗೆ ಎಷ್ಟು ಮಕ್ಕಳಿದ್ದಾರೆ, ಅವರ ಹೆಸರುಗಳೇನು ಎಂದು ಕೇಳಿದೆ.

‘ಭಯಪಡಬೇಡಿ, ನೀವು ನಿಮ್ಮ ಕುಟುಂಬದ ಬಳಿಗೆ ಮರಳುತ್ತೀರಿ. ನಾವು ಶೀಘ್ರದಲ್ಲೇ ಕೆಳಗಿಳಿಯಲಿದ್ದೇವೆಂದು ದೇಪದೇ ಹೇಳುತ್ತಿದ್ದೆ.

ಕ್ಯಾಪ್ಟನ್ ಮಚ್ಚರ್ ತಮ್ಮ ಹೆಸರು ಮತ್ತು ವಯಸ್ಸನ್ನು ತಿಳಿಸಿ, ತಾವು ದುಬೈನಲ್ಲಿ ವಾಸಿಸುತ್ತಿದ್ದು, ಭಾರತದಿಂದ ಬಂದವರು ಎಂದು ಹೇಳಿದ್ದರು. ನೋವು ಕಡಿಮೆ ಮಾಡಲು ಸಹಾಯ ಮಾಡುವಂತೆ ವೈದ್ಯರಲ್ಲಿ ಮನವಿ ಮಾಡಿದ್ದರು.

ದಯವಿಟ್ಟು ನನಗೆ ಸಹಾಯ ಮಾಡಿ. ನನ್ನ ದೇವರು ನನ್ನೊಂದಿಗಿದ್ದಾನೆ. ನಾನು ಬದುಕಬೇಕು. ಇಲ್ಲೇ ಸಾಯಲು ನನಗೆ ಇಷ್ಟವಿಲ್ಲ ಎಂದು ಅವರು ಹೇಳುತ್ತಿದ್ದರು. ಪ್ರತಿಬಾರಿ ಮಾತನಾಡಿದಾಗಲೂ ‘ನನ್ನ ತಲೆಗೆ ನೋವಾಗುತ್ತಿದೆ’ ಎಂದು ಹೇಳುತ್ತಿದ್ದರು.

“ಅವರ ಕೈಗಳಿಗೆ ತೀವ್ರವಾಗಿ ಗಾಯವಾಗಿತ್ತು. ‘ನನ್ನ ಕೈಗಳು ಬಿಸಿಯಾಗುತ್ತಿವೆ’ ಎಂದು ಹೇಳುತ್ತಿದ್ದರು. ನಾನು ಅವರು ಚೆನ್ನಾಗಾಗುತ್ತಾರೆ ಎಂದು ನಿರಂತರವಾಗಿ ಧೈರ್ಯ ತುಂಬುತ್ತಿದ್ದೆ.

ಕ್ಯಾಪ್ಟನ್ ಅವರ ಆರೋಗ್ಯ ಸ್ಥಿತಿ ಹದಗೆಟ್ಟಾಗ ವೈದ್ಯರು ಅವರ ಕಾಲುಗಳನ್ನು ಮೇಲಕ್ಕೆತ್ತಿ ಇರಿಸಿದ್ದರು. ಒಂದು ಹಂತದಲ್ಲಿ ಅವರ ನಾಡಿಮಿಡಿತ ತುಂಬಾ ಕಡಿಮೆಯಾಗಿತ್ತು. ನಾನು ಅವರ ಕಾಲುಗಳನ್ನು ಮೇಲಕ್ಕೆತ್ತಿದೆ. ಆಗ ನಾಡಿಮಿಡಿತ ಮತ್ತೆ ಸಾಮಾನ್ಯವಾಯಿತು. ಅವರ ತುಟಿಗಳು ನೀಲಿ ಬಣ್ಣಕ್ಕೆ ತಿರುಗಿರುವುದನ್ನು ನೋಡಿದಾಗ, ‘ನಾವು ಬೇಗ ಇಳಿಯಬೇಕು. ಅವರಿಗೆ ಹೆಚ್ಚು ಸಮಯವಿಲ್ಲ’ ಎಂದು ವಿಮಾನ ಸಿಬ್ಬಂದಿಗೆ ಹೇಳಿದೆ ಎಂದು ವಿವರಿಸಿದ್ದಾರೆ.

ಆರಂಭದಲ್ಲಿ ಅವರನ್ನು ಮೇಲಕ್ಕೆತ್ತಲು ಹಿಂಜರಿದೆ. ಅವರನ್ನು ಅಲುಗಾಡಿಸುವುದು ಅಥವಾ ಔಷಧ ನೀಡುವುದು ಅಪಾಯಕಾರಿ. ಸಿಬ್ಬಂದಿ ಔಷಧ ನೀಡಲು ಬಯಸಿದ್ದರು, ಆದರೆ ನಾನು ಒಪ್ಪಲಿಲ್ಲ.

ಕ್ಯಾಪ್ಟನ್ ಜೀವಂತವಾಗಿರುವುದನ್ನು ಖಚಿತಪಡಿಸಿಕೊಳ್ಳಲು ಅವರ ಆರೋಗ್ಯದ ಪ್ರಮುಖ ಲಕ್ಷಣಗಳನ್ನು ನಿರಂತರವಾಗಿ ಗಮನಿಸುತ್ತಿದ್ದೆ. “ಅವರು ಮಾತನಾಡುತ್ತಿದ್ದಾರೆಯೇ, ನಿದ್ರೆಗೆ ಜಾರುತ್ತಿಲ್ಲವೇ, ನಾಡಿಮಿಡಿತ ಹೇಗಿದೆ, ತುಟಿಗಳ ಬಣ್ಣ ಹೇಗಿದೆ ಎಂಬುದೇ ನನ್ನ ಬಳಿ ಇದ್ದ ಪ್ರಮುಖ ಸೂಚಕಗಳಾಗಿದ್ದವು.

“ನಾವು ವಿಮಾನದ ನಿರ್ಗಮನ ದ್ವಾರದ ಬಳಿ, ಕಾಕ್‌ಪಿಟ್‌ನ ಎದುರು ಇದ್ದೆವು. ಪ್ರತಿಬಾರಿ ಸುತ್ತಲೂ ಗಮನಿಸಿದಾಗ ವಿಮಾನದಲ್ಲಿ ಇನ್ನಷ್ಟು ದಾಳಿಕೋರರು ಇರಬಹುದೇ ಎಂಬ ಆತಂಕವಿತ್ತು. ಸೌದಿ ಅರೇಬಿಯಾದಲ್ಲಿ ವಿಮಾನ ಇಳಿಯುವವರೆಗೂ ಕೆಲವರು ನಿರಂತರವಾಗಿ ಸುತ್ತಮುತ್ತ ಪರಿಶೀಲಿಸುತ್ತಿದ್ದರು.

ವಿಮಾನ ಸೌದಿ ಅರೇಬಿಯಾ ತಲುಪಿದ ಬಳಿಕ ಕ್ಯಾಪ್ಟನ್‌ರನ್ನು ಟಬುಕ್‌ನಲ್ಲಿದ್ದ ವೈದ್ಯರಿಗೆ ಒಪ್ಪಿಸಿ, “ನನ್ನ ಸ್ನೇಹಿತ, ಶುಭವಾಗಲಿ. ಎಲ್ಲವೂ ಚೆನ್ನಾಗಿರುತ್ತದೆ” ಎಂದು ಬೀಳ್ಕೊಟ್ಟಿದ್ದೆ.

ಆದರೆ, ಘಟನೆಯ ಬಳಿಕ ತಮಗೂ ತಮ್ಮ ಪತ್ನಿಗೂ ತೀವ್ರ ಆಘಾತದ ಪರಿಣಾಮಗಳು ಎದುರಾಗಿವೆ ಎಂದು ಅವರು ಹೇಳಿದ್ದಾರೆ.

ಆ ಭಯ ಇನ್ನೂ ದೂರಾಗಿಲ್ಲ. ನಾವು ರಾತ್ರಿ ಎರಡು ಗಂಟೆ ಮಾತ್ರ ನಿದ್ರೆ ಮಾಡುತ್ತಿದ್ದೇವೆ. ಕಳೆದ ಮೂರು ದಿನಗಳಲ್ಲಿ ನನ್ನ ತೂಕ ಮೂರು ಕಿಲೋ ಕಡಿಮೆಯಾಗಿದೆ. ನಮಗೆ ಏನಾಯಿತು ಎಂಬುದು ಈಗ ಅರ್ಥವಾಗುತ್ತಿರುವುದರಿಂದ ಘಟನೆಯ ನಂತರದ ಆಘಾತದ ಪರಿಣಾಮಗಳು ಈಗ ಆರಂಭವಾಗುತ್ತಿವೆ ಎಂದು ತಿಳಿಸಿದ್ದಾರೆ.

ವಿಮಾನದಲ್ಲಿದ್ದ ಪ್ರತಿಯೊಬ್ಬ ಪ್ರಯಾಣಿಕರೂ ಸಂಭವಿಸಬಹುದಾಗಿದ್ದ ಭೀಕರ ದುರಂತವನ್ನು ತಪ್ಪಿಸುವಲ್ಲಿ ತಮ್ಮದೇ ಪಾತ್ರ ವಹಿಸಿದ್ದಾರೆ. ಅಪಾಯವನ್ನು ಮೊದಲು ಗಮನಿಸಿ ಎಚ್ಚರಿಕೆ ನೀಡಿದ ಮಹಿಳಾ ಪ್ರಯಾಣಿಕೆಯಿಂದ ಹಿಡಿದು, ರಕ್ತಸ್ರಾವ ತಡೆಯಲು ಟಿ-ಶರ್ಟ್‌ಗಳನ್ನು ನೀಡಿದವರವರೆಗೆ ಎಲ್ಲರೂ ನೆರವಾಗಿದ್ದಾರೆ ಎಂದು ತಿಳಿಸಿದ್ದಾರೆ.

ಸ್ಮಿತ್ ನಮ್ಮ ಪ್ರಾಣ ಉಳಿಸಿದರು. ಸ್ಮಿತ್ ಒಬ್ಬ ಹೀರೋ. ನನ್ನ ಕುಟುಂಬ ಹಾಗೂ ಎಲ್ಲ ಪ್ರಯಾಣಿಕರ ಪ್ರಾಣ ಉಳಿಸಲು ಅವರು ಮಾಡಿದ ಎಲ್ಲ ಕಾರ್ಯಗಳಿಗೆ ನಾನು ಕೃತಜ್ಞ. ಅವರು ನಮ್ಮ ಪ್ರಾಣ ಉಳಿಸಿದರು, ನಾವು ಅವರ ಪ್ರಾಣ ಉಳಿಸಿದೆವು ಎಂದು ವೈದ್ಯರು ಹೇಳಿದ್ದಾರೆ.

“ವಿಮಾನದಲ್ಲಿದ್ದ ಪ್ರತಿಯೊಬ್ಬರೂ ಹೀರೋಗಳು. ಕಾಕ್‌ಪಿಟ್‌ನಲ್ಲಿ ಏನೋ ತಪ್ಪಾಗಿದೆ ಎಂದು ಗಮನಿಸಿ ಕೂಗಿ ಎಚ್ಚರಿಸಿದ ಮಹಿಳೆಯೂ ಹೀರೋ. ಈ ವಿಮಾನದಲ್ಲಿದ್ದ ಪ್ರತಿಯೊಬ್ಬರಿಗೂ ಹೀರೋ ಸ್ಥಾನಮಾನವಿದೆ.

ವೈದ್ಯಕೀಯ ನೆರವು ದೊರೆಯದಿದ್ದರೆ ರಕ್ತಸ್ರಾವದಿಂದ ಸ್ಮಿತ್ ಬದುಕುಳಿಯುತ್ತಿರಲಿಲ್ಲ. ಆದರೆ, ನಾನು ವಿಶೇಷವಾದದ್ದೇನೂ ಮಾಡಿಲ್ಲ. ರಕ್ತಸ್ರಾವ ನಿಲ್ಲಿಸಿ, ಅವರ ನಾಡಿಮಿಡಿತವನ್ನು ಸ್ಥಿರಗೊಳಿಸಿದೆ ಅಷ್ಟೇ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

CM ಆಗಲು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಸ್ಟಿಂಗ್ ಆಪರೇಷನ್; ಈಗ ಸಚಿವರ ವಿರುದ್ಧವೂ ಅದೇ ತಂತ್ರ: ಕುಮಾರಸ್ವಾಮಿ ಗಂಭೀರ ಆರೋಪ

SIR ವೇಳೆ ಡಿಲೀಟ್ ಆಗಿರುವ 13.3 ಕೋಟಿ ಮತದಾರರ ಪತ್ತೆಗೆ ಕಾಂಗ್ರೆಸ್‌ನಿಂದ ‘ಮತ ರಕ್ಷಕ’ರ ನೇಮಕ!

'ಸ್ಪಾದಲ್ಲಿ ಅಕ್ರಮ ಚಟುವಟಿಕೆ' ಎಂದು ಆರೋಪಿಸಿ ದಾಂಧಲೆ; 5 ಲಕ್ಷ ರೂ ಗೆ ಬೇಡಿಕೆ, 1 ಲಕ್ಷ ವಸೂಲಿ! ಶಾಕಿಂಗ್ ಘಟನೆ

'ಇತಿಹಾಸ ನಿಮ್ಮನ್ನು ಇನ್ನಷ್ಟು ಗೌರವದಿಂದ ನೆನಪಿಸಿಕೊಳ್ಳಲಿದೆ'; Agarkarಗೆ ಗೇಟ್ ಪಾಸ್`, ಗಂಭೀರ್‌ ಭಾವುಕ ಸಂದೇಶ!

Bigg Boss Kannada: ಟಾಸ್ಕ್ ವೇಳೆ ಕುಸಿದು ಬಿದ್ದ ನಟಿ ಸಂಗೀತಾ ಭಟ್; ಆರೋಗ್ಯದಲ್ಲಿ ಏರುಪೇರು! ವಿಡಿಯೋ ವೈರಲ್