ರಿಯಾದ್: ಸೌದಿ ಅರೇಬಿಯಾದ ರಿಯಾದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ಅಕ್ಟೋಬರ್ 10ರಂದು ನಡೆದ ಭೀಕರ ಕ್ಷಿಪಣಿ ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಭಾರತೀಯ ಪ್ರಜೆಯೊಬ್ಬರು ಇಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಈ ಮೂಲಕ ರಿಯಾದ್ ದಾಳಿಯಲ್ಲಿ ಮೃತರಾದವರ ಸಂಖ್ಯೆ ಹೆಚ್ಚಳವಾಗಿದ್ದು, ಭಾರತೀಯ ರಾಯಭಾರ ಕಚೇರಿಯು ಈ ದುಃಖದ ಸುದ್ದಿಯನ್ನು ದೃಢಪಡಿಸಿದೆ. ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಈ ಘಟನೆಗೆ ತೀವ್ರ ಸಂತಾಪ ಸೂಚಿಸಿದ್ದು, ಮೃತರ ಕುಟುಂಬಕ್ಕೆ ಕಂಬನಿ ಮಿಡಿದಿದ್ದಾರೆ.
ಮೃತರನ್ನು ಹೈದರಾಬಾದ್‌ನ ನಿವಾಸಿ ಮೊಹಮ್ಮದ್ ಯೂಸುಫ್ ಅಲಿ ಎಂದು ಗುರುತಿಸಲಾಗಿದೆ; ಅವರು ಉಮ್ರಾ ಯಾತ್ರೆಗಾಗಿ ಮದೀನಾಕ್ಕೆ ಪ್ರಯಾಣಿಸುತ್ತಿದ್ದಾಗ ಈ ಘಟನೆ ಸಂಭವಿಸಿದೆ. ದಾಳಿಯಲ್ಲಿ ಗಾಯಗೊಂಡವರಲ್ಲಿ ಅಲಿ ಅವರ ಪತ್ನಿ ಮತ್ತು ಮಕ್ಕಳು ಕೂಡ ಸೇರಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಅಕ್ಟೋಬರ್ 10 ರಂದು ರಿಯಾದ್ ವಿಮಾನ ನಿಲ್ದಾಣದ ಮೇಲೆ ನಡೆದ ದಾಳಿಯಲ್ಲಿ ಗಾಯಗೊಂಡಿದ್ದ ಭಾರತೀಯ ಪ್ರಜೆಯೊಬ್ಬರು ದುರದೃಷ್ಟವಶಾತ್ ಇಂದು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಮೃತರ ಕುಟುಂಬಕ್ಕೆ ನಾವು ನಮ್ಮ ಸಂತಾಪವನ್ನು ಸೂಚಿಸುತ್ತೇವೆ.
ನಾವು ಕುಟುಂಬದೊಂದಿಗೆ ಸಂಪರ್ಕದಲ್ಲಿದ್ದೇವೆ ಮತ್ತು ಮೃತದೇಹವನ್ನು ಶೀಘ್ರವಾಗಿ ತವರಿಗೆ ರವಾನಿಸಲು ಅಗತ್ಯವಿರುವ ಎಲ್ಲ ಬೆಂಬಲವನ್ನು ನೀಡುತ್ತೇವೆ," ಎಂದು ಭಾರತೀಯ ರಾಯಭಾರ ಕಚೇರಿ 'ಎಕ್ಸ್' (X) ನಲ್ಲಿ ಬರೆದುಕೊಂಡಿದೆ. ಮೃತರ ಪಾರ್ಥಿವ ಶರೀರವನ್ನು ಶೀಘ್ರವಾಗಿ ಭಾರತಕ್ಕೆ ತರಲು ಸೌದಿ ಆಡಳಿತ ಮತ್ತು ಮೃತರ ಕುಟುಂಬದೊಂದಿಗೆ ಸಂಪೂರ್ಣ ಸಹಕಾರ ನೀಡಲಾಗುತ್ತಿದೆ.
ಕಳೆದ ಕೆಲವು ದಿನಗಳಲ್ಲಿ ರಿಯಾದ್‌ನ ಕಿಂಗ್ ಖಾಲಿದ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ನಡೆದ ಪುನರಾವರ್ತಿತ ದಾಳಿಗಳಲ್ಲಿ ಅಕ್ಟೋಬರ್ 10 ರಂದು ನಡೆದ ಹೇಯ ಕೃತ್ಯವೂ ಸೇರಿದೆ ಇದನ್ನು ನಾವು ಬಲವಾಗಿ ಖಂಡಿಸುತ್ತೇವೆ. ಈ ದಾಳಿಗಳು ಜೀವಹಾನಿ, ಗಾಯಗಳು ಮತ್ತು ಆಸ್ತಿಪಾಸ್ತಿಗೆ ಹಾನಿಯನ್ನು ಉಂಟುಮಾಡಿವೆ," ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.