ರಿಯಾದ್: ಸೌದಿ ಅರೇಬಿಯಾದ ತೈಲ ಸಂಸ್ಥೆ 'ಸೌದಿ ಅರಾಮ್ಕೋ'ದ ಪ್ರಮುಖ ತೈಲಕ್ಷೇತ್ರದ ಮೇಲೆ ನಡೆದ ಮಾರಕ ಡ್ರೋನ್ ದಾಳಿಯ ಬೆನ್ನಲ್ಲೇ ಮಧ್ಯಪ್ರಾಚ್ಯದಲ್ಲಿ ಭಾರಿ ರಾಜತಾಂತ್ರಿಕ ಸಂಚಲನ ಸೃಷ್ಟಿಯಾಗಿದೆ.
ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿರುವುದನ್ನು ಮನಗಂಡಿರುವ ಅಮೆರಿಕ ಸರ್ಕಾರವು ಸೌದಿ ಅರೇಬಿಯಾದಲ್ಲಿರುವ ತನ್ನ ರಾಯಭಾರ ಕಚೇರಿಯ (US Embassy) ತುರ್ತು ರಹಿತ ಸಿಬ್ಬಂದಿ ಮತ್ತು ಅವರ ಕುಟುಂಬಸ್ಥರನ್ನು ತಕ್ಷಣವೇ ದೇಶ ತೊರೆಯುವಂತೆ (Ordered Departure) ಆದೇಶಿಸಿದೆ.
ಈ ಹಿಂದೆ ಹಲವು ಬಾರಿ ತಿಳಿಸಿರುವಂತೆ, ಪ್ರಸ್ತುತ ಸಂಘರ್ಷಗಳು ತ್ವರಿತವಾಗಿ ಉಲ್ಬಣಗೊಳ್ಳುವ ಸಾಧ್ಯತೆಯಿದೆ. ಅದರ ಪರಿಣಾಮಗಳು ಸಂಘರ್ಷ ನಡೆಯುತ್ತಿರುವ ತಕ್ಷಣದ ಪ್ರದೇಶವನ್ನೂ ಮೀರಿ ಹರಡಬಹುದು ಎಂದು ಅಮೆರಿಕದ ವಿದೇಶಾಂಗ ಇಲಾಖೆಯ ವಕ್ತಾರರು ‘ದಿ ಹಿಲ್’ ಸುದ್ದಿವಾಹಿನಿಗೆ ತಿಳಿಸಿದ್ದಾರೆ.
ಇಲಾಖೆಯ ಸಿಬ್ಬಂದಿ ಮತ್ತು ಅವರ ಕುಟುಂಬಗಳ ಸುರಕ್ಷತೆಯೇ ನಮ್ಮ ಮೊದಲ ಆದ್ಯತೆಯಾಗಿದೆ. ಅವರು ಅಮೆರಿಕಕ್ಕೆ ಮರಳುವ ಸಂದರ್ಭದಲ್ಲಿ ಅವರ ರಕ್ಷಣೆ ಮತ್ತು ನೆರವಿಗಾಗಿ ಅಗತ್ಯವಿರುವ ಎಲ್ಲ ಕ್ರಮಗಳನ್ನು ಮುಂದುವರಿಸುತ್ತೇವೆ ಎಂದು ತಿಳಿಸಿದ್ದಾರೆ.
ಸೌದಿ ಅರೇಬಿಯಾ ಬೆಂಬಲಿತ ಯೆಮನ್ ಸರ್ಕಾರದ ವಿರುದ್ಧ ಹೌತಿ ಬಂಡುಕೋರರು ಯುದ್ಧ ನಡೆಸುತ್ತಿದ್ದಾರೆ. ಸೌದಿ ಅರೇಬಿಯಾದ ನಾಗರಿಕ ವಿಮಾನ ನಿಲ್ದಾಣಗಳು ಸೇರಿದಂತೆ ಪ್ರಮುಖ ಮೂಲಸೌಕರ್ಯಗಳ ಮೇಲೆ ಅವರು ದಾಳಿ ನಡೆಸುತ್ತಿದ್ದು, ಈ ದಾಳಿಗಳಿಂದ ನಾಗರಿಕರು ಪ್ರಾಣ ಕಳೆದುಕೊಂಡಿದ್ದಾರೆ. ಈ ಬೆಳವಣಿಗೆಗಳ ನಡುವೆಯೇ ಅಮೆರಿಕದ ಈ ಆದೇಶ ಹೊರಬಿದ್ದಿದೆ.
ಬುಧವಾರ ಸೌದಿ ಅರೇಬಿಯಾದ ಶೈಬಾ ತೈಲಕ್ಷೇತ್ರವನ್ನು ಗುರಿಯಾಗಿಸಿಕೊಂಡು ಬಂದ ಡ್ರೋನ್ ಅನ್ನು ದೇಶದ ವಾಯು ರಕ್ಷಣಾ ವ್ಯವಸ್ಥೆ ಹೊಡೆದುರುಳಿಸಿದೆ. ಆದರೆ, ಡ್ರೋನ್ನ ಅವಶೇಷಗಳು ಬಿದ್ದ ಪರಿಣಾಮ ಇಬ್ಬರು ಮೃತಪಟ್ಟಿದ್ದು, ಮತ್ತಿಬ್ಬರು ಗಾಯಗೊಂಡಿದ್ದಾರೆ ಎಂದು ಸೌದಿ ಅರೇಬಿಯಾದ ಇಂಧನ ಸಚಿವಾಲಯ ತಿಳಿಸಿದೆ.
ಗಲ್ಫ್ ರಾಷ್ಟ್ರಗಳಲ್ಲಿರುವ ಅಮೆರಿಕ ರಾಯಭಾರ ಕಚೇರಿಗಳಿಂದ ಕೆಲವು ಸಿಬ್ಬಂದಿ ಮತ್ತು ಅವರ ಕುಟುಂಬ ಸದಸ್ಯರನ್ನು ಹಿಂದಕ್ಕೆ ಕರೆಸಿಕೊಳ್ಳಲು ಅಮೆರಿಕ ಸರ್ಕಾರ ಸಿದ್ಧತೆ ನಡೆಸುತ್ತಿದೆ ಎಂದು ರಾಯಿಟರ್ಸ್ ಬುಧವಾರ ಮೊದಲು ವರದಿ ಮಾಡಿತ್ತು. ಆದರೆ, ಈ ವರದಿ “ತಪ್ಪಾಗಿದೆ” ಎಂದು ಅಮೆರಿಕದ ವಿದೇಶಾಂಗ ಇಲಾಖೆಯ ವಕ್ತಾರ ಟಾಮಿ ಪಿಗಾಟ್ ಹೇಳಿದ್ದಾರೆ.
ಇದಾದ ಬಳಿಕ, ಯುನೈಟೆಡ್ ಅರಬ್ ಎಮಿರೇಟ್ಸ್, ಜೋರ್ಡಾನ್, ಕತಾರ್ ಮತ್ತು ಬಹ್ರೇನ್ನಲ್ಲಿರುವ ಅಮೆರಿಕ ರಾಯಭಾರ ಕಚೇರಿಗಳ ಸಿಬ್ಬಂದಿಯ ಕುಟುಂಬ ಸದಸ್ಯರು ದೇಶಗಳನ್ನು ತೊರೆಯುವಂತೆ ಅಮೆರಿಕ ಆದೇಶಿಸಿದೆ ಎಂದು ರಾಜತಾಂತ್ರಿಕ ಮೂಲವನ್ನು ಉಲ್ಲೇಖಿಸಿ ಎಎಫ್ಪಿ ವರದಿ ಮಾಡಿದೆ.
ಈ ವರದಿಗಳ ಕುರಿತು ಬುಧವಾರ ಪ್ರತಿಕ್ರಿಯಿಸಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಅವರು ಹಾಗೆ ಮಾಡುತ್ತಿದ್ದಾರೆಯೇ ಎಂಬುದು ನನಗೆ ತಿಳಿದಿಲ್ಲ. ನೀವು ನನಗೆ ಈ ವಿಷಯವನ್ನು ಹೇಳುತ್ತಿದ್ದೀರಿ; ಇದರ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದು ಹೇಳಿದ್ದಾರೆ.
ಇದೇ ವೇಳೆ, ಸೌದಿ ಅರೇಬಿಯಾದ ಮೇಲೆ ಹೌತಿ ಬಂಡುಕೋರರಿಂದ ಮತ್ತಷ್ಟು ದಾಳಿಗಳು ನಡೆಯುವ ಸಾಧ್ಯತೆಯ ಕುರಿತು ಅಮೆರಿಕದ ರಾಯಭಾರ ಕಚೇರಿ ಬುಧವಾರ ಭದ್ರತಾ ಎಚ್ಚರಿಕೆ ಹೊರಡಿಸಿದೆ.
ಸೌದಿ ಅರೇಬಿಯಾದ ನಾಗರಿಕ ರಕ್ಷಣಾ ಇಲಾಖೆ ಮೊಬೈಲ್ ಸಂದೇಶಗಳ ಮೂಲಕ ನೀಡುವ ರಾಷ್ಟ್ರೀಯ ಎಚ್ಚರಿಕೆಗಳು ಮತ್ತು ಮಾರ್ಗಸೂಚಿಗಳನ್ನು ಪಾಲಿಸುವಂತೆ ಅಮೆರಿಕದ ನಾಗರಿಕರಿಗೆ ನೆನಪಿಸಲಾಗುತ್ತಿದೆ ಎಂದು ರಾಯಭಾರ ಕಚೇರಿ ತಿಳಿಸಿದೆ.
ಇತ್ತೀಚಿನ ಕ್ಷಿಪಣಿ ಮತ್ತು ಮಾನವರಹಿತ ವೈಮಾನಿಕ ವಾಹನಗಳ ದಾಳಿಗಳ ಹಿನ್ನೆಲೆಯಲ್ಲಿ, ಸೌದಿ ಅರೇಬಿಯಾದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಮೆರಿಕ ಸರ್ಕಾರಿ ನೌಕರರು ದೇಶದ ಯಾವುದೇ ವಿಮಾನ ನಿಲ್ದಾಣವನ್ನು ಬಳಸಲು ರಾಯಭಾರ ಕಚೇರಿಯ ಮುಖ್ಯಸ್ಥರಿಂದ ವಿಶೇಷ ಅನುಮತಿ ಪಡೆಯುವುದು ಕಡ್ಡಾಯವಾಗಿದೆ ಎಂದೂ ತಿಳಿಸಿದೆ.