ತೈಲ ಹಡಗುಗಳು 
ವಿದೇಶ

West Asia Conflict: ಇರಾನ್ ಆರ್ಥಿಕ ಬೆನ್ನೆಲುಬಿಗೆ ಅಮೆರಿಕ ಪೆಟ್ಟು: ಸಮುದ್ರದ ಮಧ್ಯದಲ್ಲೇ 5 ಬೃಹತ್ ತೈಲ ಹಡಗುಗಳು ಗುರಿಯಾಗಿಸಿ ದಾಳಿ, ಜಾಗತಿಕ ತೈಲ ಮಾರುಕಟ್ಟೆಯಲ್ಲಿ ತಲ್ಲಣ..!

ಒಮಾನ್ ಕೊಲ್ಲಿಯಲ್ಲಿ ಐಆರ್‌ಜಿಸಿ ಜೊತೆ ಸಂಪರ್ಕ ಹೊಂದಿರುವ ನಾಲ್ಕು ತೈಲ ಟ್ಯಾಂಕರ್‌ಗಳನ್ನು ಗುರಿಯಾಗಿಸಲಾಗಿದ್ದು, ಇರಾನ್‌ನ ಕೊಲ್ಲಿ ಕರಾವಳಿಯ ಪ್ರಮುಖ ತೈಲ ರಫ್ತು ಕೇಂದ್ರವಾಗಿರುವ ಖಾರ್ಗ್ ದ್ವೀಪದ ಸಮೀಪ ಮತ್ತೊಂದು ಟ್ಯಾಂಕರ್‌ ಮೇಲೂ ದಾಳಿ ನಡೆಸಲಾಗಿದೆ.

ಟೆಹ್ರಾನ್: ಕಳೆದ ಎರಡು ದಿನಗಳಲ್ಲಿ ಇರಾನ್ ಎರಡು ಬಾರಿ ಅಮೆರಿಕದ ಯುದ್ಧನೌಕೆಯನ್ನು ಗುರಿಯಾಗಿಸಿಕೊಂಡ ಹಿನ್ನೆಲೆಯಲ್ಲಿ, ಅಮೆರಿಕದ ಪಡೆಗಳು ಐದು ಇರಾನಿನ ತೈಲ ಟ್ಯಾಂಕರ್‌ಗಳ ಮೇಲೆ ದಾಳಿ ನಡೆಸಿವೆ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್‌ (ಸೆಂಟ್ಕಾಮ್) ತಿಳಿಸಿದೆ.

ಒಮಾನ್ ಕೊಲ್ಲಿಯಲ್ಲಿ ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ಸ್ ಕಾರ್ಪ್ಸ್‌ (ಐಆರ್‌ಜಿಸಿ) ಜೊತೆ ಸಂಪರ್ಕ ಹೊಂದಿರುವ ನಾಲ್ಕು ತೈಲ ಟ್ಯಾಂಕರ್‌ಗಳನ್ನು ಗುರಿಯಾಗಿಸಲಾಗಿದ್ದು, ಇರಾನ್‌ನ ಕೊಲ್ಲಿ ಕರಾವಳಿಯ ಪ್ರಮುಖ ತೈಲ ರಫ್ತು ಕೇಂದ್ರವಾಗಿರುವ ಖಾರ್ಗ್ ದ್ವೀಪದ ಸಮೀಪ ಮತ್ತೊಂದು ಟ್ಯಾಂಕರ್‌ ಮೇಲೂ ದಾಳಿ ನಡೆಸಲಾಗಿದೆ ಎಂದು ಸೆಂಟ್ಕಾಮ್ ತಿಳಿಸಿದೆ.

ಇದಕ್ಕೆ ಪ್ರತಿಯಾಗಿ ಇರಾನ್, ಜೋರ್ಡಾನ್‌ನಲ್ಲಿರುವ ಅಮೆರಿಕದ ಸೇನಾ ನೆಲೆಯತ್ತ ಕ್ಷಿಪಣಿಗಳನ್ನು ಉಡಾಯಿಸಿದೆ. ಆದರೆ, ಇರಾನ್‌ನ 20 ಕ್ಷಿಪಣಿಗಳ ಪೈಕಿ 18 ಕ್ಷಿಪಣಿಗಳನ್ನು ತನ್ನ ವಾಯು ರಕ್ಷಣಾ ವ್ಯವಸ್ಥೆಗಳ ಮೂಲಕ ಹೊಡೆದುರುಳಿಸಿರುವುದಾಗಿ ಜೋರ್ಡಾನ್ ಹೇಳಿದೆ.

ಕಳೆದ ವಾರದಲ್ಲಿ ಅಮೆರಿಕ ಮತ್ತು ಇರಾನ್ ನಡುವಿನ ಪರಸ್ಪರ ದಾಳಿಗಳು ಮತ್ತಷ್ಟು ತೀವ್ರಗೊಂಡಿವೆ. ಫೆಬ್ರವರಿ 28ರಂದು ಅಮೆರಿಕ ಮತ್ತು ಇಸ್ರೇಲ್ ಇರಾನ್ ಮೇಲೆ ದಾಳಿ ಆರಂಭಿಸಿ ಆರು ತಿಂಗಳಿಗೂ ಹೆಚ್ಚು ಕಾಲ ಕಳೆದ ಬಳಿಕ ಸಂಘರ್ಷ ಮತ್ತಷ್ಟು ಉಲ್ಬಣಗೊಂಡಿದೆ.

ಏರಿಕೆಯಾದ ಕಚ್ಚಾ ತೈಲ ಬೆಲೆ

ಏಷ್ಯಾದ ಮಾರುಕಟ್ಟೆಗಳಲ್ಲಿ ಬುಧವಾರ ಆರಂಭಿಕ ವಹಿವಾಟಿನಲ್ಲೇ ತೈಲ ಬೆಲೆ ಏರಿಕೆಯಾಯಿತು. ಅಂತಾರಾಷ್ಟ್ರೀಯ ಮಾನದಂಡವಾಗಿರುವ ಬ್ರೆಂಟ್ ಕಚ್ಚಾ ತೈಲದ ಬೆಲೆ 1.5ರಷ್ಟು ಏರಿಕೆಯಾಗಿ ಬ್ಯಾರೆಲ್‌ಗೆ 99.41 ಡಾಲರ್ ತಲುಪಿತು. ಅಮೆರಿಕದ ಮಾರುಕಟ್ಟೆಯಲ್ಲಿ ವಹಿವಾಟಾಗುವ ಕಚ್ಚಾ ತೈಲದ ಬೆಲೆ 1.6ರಷ್ಟು ಏರಿಕೆಯಾಗಿ 94.55 ಡಾಲರ್ ತಲುಪಿತು.

ಜೋರ್ಡಾನ್ ಸೇನೆಯ ಅಧಿಕೃತ ವಕ್ತಾರರ ಪ್ರಕಾರ, ಇರಾನ್ ಜೋರ್ಡಾನ್ ಕಡೆಗೆ ಉಡಾಯಿಸಿದ್ದ ಎರಡು ಕ್ಷಿಪಣಿಗಳು ಜನವಸತಿ ಇಲ್ಲದ ಪ್ರದೇಶಗಳಲ್ಲಿ ಬಿದ್ದಿವೆ.

ಇದೇ ವೇಳೆ, ಮತ್ತಷ್ಟು ಪ್ರತೀಕಾರದ ದಾಳಿಗಳನ್ನು ನಡೆಸುವುದಾಗಿ ಇರಾನ್ ಎಚ್ಚರಿಕೆ ನೀಡಿದೆ. ಕುವೈತ್ ಮತ್ತು ಬಹ್ರೇನ್ ಬಂದರುಗಳ ಸಮೀಪದಲ್ಲಿರುವ ಅಮೆರಿಕದೊಂದಿಗೆ ಸಂಪರ್ಕ ಹೊಂದಿರುವ ತೈಲ ಟ್ಯಾಂಕರ್‌ಗಳ ಸಿಬ್ಬಂದಿ, ಅವು ಲಂಗರು ಹಾಕಿದ್ದರೂ ಅಥವಾ ಬಂದರಿನಲ್ಲಿದ್ದರೂ ತಕ್ಷಣ ಹಡಗುಗಳನ್ನು ತೊರೆಯುವಂತೆ ಇರಾನ್ ಸೂಚಿಸಿದೆ. ಇಲ್ಲದಿದ್ದರೆ ಅವುಗಳನ್ನು ಗುರಿಯಾಗಿಸಲಾಗುವುದು ಎಂದು ಎಚ್ಚರಿಸಿದೆ.

ಅಮೆರಿಕದ ಯುದ್ಧನೌಕೆಯನ್ನು ಗುರಿಯಾಗಿಸಿಕೊಂಡಿದ್ದ ಇರಾನ್

ಇತ್ತೀಚಿನ ಸಂಘರ್ಷಕ್ಕೆ ಕಾರಣವಾಗಿದ್ದು, ಇರಾನ್ ಬ್ಯಾಲಿಸ್ಟಿಕ್ ಕ್ಷಿಪಣಿಗಳ ಮೂಲಕ ಅಮೆರಿಕದ ಯುದ್ಧನೌಕೆಯ ಮೇಲೆ ದಾಳಿ ನಡೆಸಿದ್ದಾಗಿದೆ. ಈ ದಾಳಿಯನ್ನು ಅಮೆರಿಕದ ಪಡೆಗಳು ಯಶಸ್ವಿಯಾಗಿ ತಪ್ಪಿಸಿಕೊಂಡಿದ್ದು, ಯಾವುದೇ ಅಮೆರಿಕ ಸೈನಿಕರಿಗೆ ಗಾಯವಾಗಿಲ್ಲ ಎಂದು ಸೆಂಟ್ಕಾಮ್ ತಿಳಿಸಿದೆ.

ಇದಕ್ಕೆ ಪ್ರತಿಯಾಗಿ ಅಮೆರಿಕ, ತಾನು ಗುರಿಯಾಗಿಸಿಕೊಂಡ ಐದು ಇರಾನಿನ ತೈಲ ಟ್ಯಾಂಕರ್‌ಗಳು ಐಆರ್‌ಜಿಸಿ ಮತ್ತು ಅದರ ಪ್ರಾದೇಶಿಕ ಸಹಚರ ಸಂಘಟನೆಗಳಿಗೆ ಹಣಕಾಸು ಒದಗಿಸುವ ಬಹುಕೋಟಿ ಡಾಲರ್‌ಗಳ ಅಕ್ರಮ ಜಾಲದ ಭಾಗವಾಗಿದ್ದವು ಎಂದು ಹೇಳಿದೆ.

ಇತ್ತೀಚಿನ ಅಮೆರಿಕದ ದಾಳಿಯಲ್ಲಿ ಇರಾನಿನ ಒಂದು ತೈಲ ಟ್ಯಾಂಕರ್‌ ಗುರಿಯಾದ ಖಾರ್ಗ್ ದ್ವೀಪ, ಇರಾನ್‌ನ ಪ್ರಮುಖ ತೈಲ ರಫ್ತು ಕೇಂದ್ರವಾಗಿದೆ.

ಇರಾನ್‌ನ ಒಟ್ಟು ಕಚ್ಚಾ ತೈಲದ ಸುಮಾರು 90ರಷ್ಟು ಈ ದ್ವೀಪದ ಮೂಲಕ ರಫ್ತಾಗುತ್ತದೆ. ದೇಶದ ಒಳಭಾಗದಿಂದ ಪೈಪ್‌ಲೈನ್‌ಗಳ ಮೂಲಕ ತೈಲವನ್ನು ಖಾರ್ಗ್ ದ್ವೀಪಕ್ಕೆ ಸಾಗಿಸಲಾಗುತ್ತದೆ.

ಸೌದಿ ಅರೇಬಿಯಾದ ಇಂಧನ ಮೂಲಸೌಕರ್ಯಗಳ ಮೇಲೂ ದಾಳಿ

ಪ್ರಾದೇಶಿಕ ಅಸ್ಥಿರತೆಯಿಂದಾಗಿ ತೈಲ ಬೆಲೆಗಳ ಮೇಲಿನ ಒತ್ತಡ ಮತ್ತಷ್ಟು ಹೆಚ್ಚಾಗಿದೆ.ಮಂಗಳವಾರ ಇರಾನ್ ಬೆಂಬಲಿತ ಯೆಮನ್‌ನ ಹೌತಿ ಸಂಘಟನೆ ಸೌದಿ ಅರೇಬಿಯಾದ ಇಂಧನ ಮೂಲಸೌಕರ್ಯಗಳು ಮತ್ತು ನಾಗರಿಕ ಪ್ರದೇಶಗಳ ಮೇಲೆ ದಾಳಿ ನಡೆಸಿದೆ. ಈ ದಾಳಿಯಲ್ಲಿ 73 ಮಂದಿ ಗಾಯಗೊಂಡಿದ್ದಾರೆ ಎಂದು ಸೌದಿ ಅಧಿಕಾರಿಗಳು ತಿಳಿಸಿದ್ದಾರೆ.

ಡ್ರೋನ್‌ಗಳು ಮತ್ತು ಕ್ಷಿಪಣಿಗಳ ಮೂಲಕ ನಡೆದ ದಾಳಿಯಿಂದ ತೈಲ ಸೌಲಭ್ಯಗಳು ಹಾಗೂ ಇತರ ಮೂಲಸೌಕರ್ಯಗಳಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕಾರ್ಯಾಚರಣೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಬೇಕಾಯಿತು ಎಂದು ಸೌದಿ ಸೇನೆ ಮತ್ತು ಇಂಧನ ಸಚಿವಾಲಯ ತಿಳಿಸಿದೆ.

‘ಇರಾನ್ ದಾಳಿ ಮಾಡಿದಾಗಲೆಲ್ಲ ತೈಲ ಟ್ಯಾಂಕರ್‌ಗಳನ್ನು ಕಳೆದುಕೊಳ್ಳಲಿದೆ’

ಅಮೆರಿಕ ಮತ್ತು ಇರಾನ್ ನಡುವಿನ ಇತ್ತೀಚಿನ ಪರಸ್ಪರ ದಾಳಿಗಳ ಕುರಿತು ಸುದ್ದಿಗಾರರು ಪ್ರಶ್ನಿಸಿದಾಗ, ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಪರಿಸ್ಥಿತಿ “ಸರಳವಾಗಿದೆ” ಎಂದು ಹೇಳಿದ್ದಾರೆ.

ಕೊಲಂಬಿಯಾ ಪ್ರವಾಸದಲ್ಲಿದ್ದ ರೂಬಿಯೊ, ಇರಾನ್ ನಿರಂತರವಾಗಿ ಅಮೆರಿಕದ ನೌಕಾಪಡೆಯ ಹಡಗುಗಳನ್ನು ಗುರಿಯಾಗಿಸಲು ಪ್ರಯತ್ನಿಸುತ್ತಿದೆ. ಪ್ರತಿಬಾರಿ ಇರಾನ್ ಇಂತಹ ದಾಳಿ ನಡೆಸಿದಾಗ ಅಥವಾ ನಡೆಸಲು ಪ್ರಯತ್ನಿಸಿದಾಗ, “ಅವರು ತೈಲ ಟ್ಯಾಂಕರ್‌ಗಳನ್ನು ಕಳೆದುಕೊಳ್ಳಲಿದ್ದಾರೆ” ಎಂದು ಹೇಳಿದ್ದಾರೆ.

ಹಾರ್ಮುಜ್‌ನಲ್ಲಿ ಅಮೆರಿಕದ ಮಾನವರಹಿತ ಜಲಾಂತರ್ಗಾಮಿ ವಶಕ್ಕೆ

ಮಂಗಳವಾರ ಅಮೆರಿಕದ ದಾಳಿಗೆ ಕೆಲವೇ ಗಂಟೆಗಳ ಮೊದಲು, ಹೋರ್ಮುಜ್ ಜಲಸಂಧಿಯಲ್ಲಿ ಅಮೆರಿಕದ ಮಾನವರಹಿತ ಜಲಾಂತರ್ಗಾಮಿ ವಾಹನವನ್ನು ವಶಪಡಿಸಿಕೊಂಡಿರುವುದಾಗಿ ಇರಾನ್ ನೌಕಾಪಡೆ ಹೇಳಿಕೊಂಡಿತ್ತು.

ಆದರೆ, ಸೆಂಟ್ಕಾಮ್ ವಕ್ತಾರ ಅಮೆರಿಕದ ನೌಕಾಪಡೆಯ ಕ್ಯಾಪ್ಟನ್ ಟಿಮ್ ಹಾಕಿನ್ಸ್, ಅಮೆರಿಕದ ಪಡೆಗಳು ಬಳಸುತ್ತಿದ್ದ ನೀರಿನೊಳಗಿನ ಡ್ರೋನ್ ಒಂದು ದಿನಕ್ಕೂ ಹೆಚ್ಚು ಸಮಯದ ಹಿಂದೆ ತಾಂತ್ರಿಕ ದೋಷಕ್ಕೆ ಒಳಗಾಗಿತ್ತು ಎಂದು ಹೇಳಿದ್ದಾರೆ.

ಪ್ರಾದೇಶಿಕ ನೀರಿನ ಪ್ರದೇಶಗಳ ಮೇಲ್ವಿಚಾರಣೆ ನಡೆಸಲು ಮತ್ತು ನಡೆಯುತ್ತಿರುವ ಕಾರ್ಯಾಚರಣೆಗಳಿಗೆ ಬೆಂಬಲ ನೀಡಲು ಈ ಡ್ರೋನ್ ಬಳಸಲಾಗುತ್ತಿತ್ತು ಎಂದು ಅವರು ತಿಳಿಸಿದ್ದಾರೆ.

ದೋಷಕ್ಕೆ ಒಳಗಾದ ಡ್ರೋನ್ ಹಳೆಯ ಮಾದರಿಯದ್ದಾಗಿದ್ದು, ಯಾವುದೇ ಸೂಕ್ಷ್ಮ ಮಾಹಿತಿಯನ್ನು ಸಂಗ್ರಹಿಸಿರಲಿಲ್ಲ. ಅಲ್ಲದೆ, ಯಾವುದೇ ರಹಸ್ಯ ಸೋನಾರ್ ಅಥವಾ ರೇಡಾರ್ ಉಪಕರಣಗಳನ್ನು ಹೊಂದಿರಲಿಲ್ಲ ಎಂದು ಹಾಕಿನ್ಸ್ ಸ್ಪಷ್ಟಪಡಿಸಿದ್ದಾರೆ. ಇದೇ ವೇಳೆ, ಈ ಪ್ರದೇಶದ ನೀರಿನಲ್ಲಿ ಅಮೆರಿಕದ ಕಾರ್ಯಾಚರಣೆಗಳು ಮುಂದುವರಿದಿವೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಖರ್ಗೆ ಕಾರ್ಯಕ್ರಮ ಜಾಗದಲ್ಲಿ 'ಶುದ್ಧೀಕರಣ' ಪ್ರಕರಣ: ಒಂದು ತಿಂಗಳ ನಂತರ SC/ST ಕಾಯ್ದೆಯಡಿ FIR ದಾಖಲು!

ಶುರುವಾಗಿ 2 ದಿನಕ್ಕೆ Biggboss ಮನೆಯ ಗೋಡೆ ಹಾರಿ ಓಡಿಹೋದ ಸ್ಪರ್ಧಿ.. ಏನಾಯಿತು?

APMCಗೆ CM ಡಿಕೆಶಿ ದಿಢೀರ್ ಭೇಟಿ ಬೆನ್ನಲ್ಲೇ ಫೀಲ್ಡಿಗಿಳಿದ ಪೊಲೀಸರು; 19 ಬಾಲ ಕಾರ್ಮಿಕರ ರಕ್ಷಣೆ; ನಾಲ್ಕು ಅಂಗಡಿ ಮಾಲೀಕರ ಬಂಧನ!

ವಿಧಾನಸಭೆಯಲ್ಲಿ ವಿಜಯ್ ಸನ್ನೆಗೆ ಕೆರಳಿದ DMK; ಬಾಡಿ ಶೇಮಿಂಗ್ ಆರೋಪಕ್ಕೆ ಸಿಎಂ ಜೋಸೆಫ್ ವಿಜಯ್ ಸ್ಪಷ್ಟನೆ!

ರಾಹುಲ್‌ ಗಾಂಧಿ ಪ್ರಯಾಣಿಸುತ್ತಿದ್ದ ವಿಮಾನ 10 ನಿಮಿಷ ಆಗಸದಲ್ಲೇ ಗಿರಕಿ; 2ನೇ ಪ್ರಯತ್ನದಲ್ಲಿ ಸೇಫ್‌ ಲ್ಯಾಂಡಿಂಗ್!