ರಿಯಾದ್ (ಸೌದಿ ಅರೇಬಿಯಾ): ಕೇವಲ ಒಂದು ತಿಂಗಳ ಹಿಂದೆಯಷ್ಟೆ ಸೌದಿ ಅರೇಬಿಯಾ, ಟರ್ಕಿ ಮತ್ತು ಪಾಕಿಸ್ತಾನದ ನಡುವೆ ರಚನೆಯಾದ 'ಮೆಕ್ಕಾ ರಕ್ಷಣಾ ಒಪ್ಪಂದ'ವು (Mecca Defense Pact) ಮುರಿದು ಬಿತ್ತಾ? ಮುಸ್ಲಿಂ ರಾಷ್ಟ್ರಗಳನ್ನು ಒಂದುಗೂಡಿಸಿ ಮುಸ್ಲಿಂ ನ್ಯಾಟೋ ಕಟ್ಟುತ್ತೇವೆ ಎಂದು ಹೊರಟಿದ್ದ ಸೌದಿ ಅರೇಬಿಯಾದ ಪ್ಲಾನ್ ಫ್ಲಾಪ್ ಆಯ್ತಾ? ಎನ್ನುವ ಪ್ರಶ್ನೆ ಮುನ್ನೆಲೆಗೆ ಬಂದಿದೆ. ಯಾಕಂದ್ರೆ, ಇರಾನ್ - ಅಮೆರಿಕ ಯುದ್ಧದ ನಡುವೆಯೇ, ಮಧ್ಯಪ್ರಾಚ್ಯದ ಯೆಮೆನ್‌ನಲ್ಲಿ ಸೌದಿ ಅರೇಬಿಯಾ ಹಾಗೂ ಹೌತಿ ಬಂಡುಕೋರರ ನಡುವೆ ಭೀಕರ ಯುದ್ಧ ಪ್ರಾರಂಭವಾಗಿದೆ. ಅದರಲ್ಲೂ, ಈ ಯುದ್ಧದಲ್ಲಿ ಸೌದಿ ಪರ ನಿಲ್ಲಬೇಕಿದ್ದ ಟರ್ಕಿ ಮತ್ತು ಪಾಕಿಸ್ತಾನ ಮಾತ್ರ ಸೈಲೆಂಟ್ ಆಗಿದೆ. ಇದರ ಪರಿಣಾಮ, ಸೌದಿ ಅರೇಬಿಯಾದ ಯುವರಾಜ ಮೊಹಮ್ಮದ್ ಬಿನ್ ಸಲ್ಮಾನ್, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಕರೆ ಮಾಡಿದ್ದಾರೆ ಎನ್ನಲಾಗಿದೆ. ಆದರೆ ಎರಡು ಬಾರಿಯೂ ಟ್ರಂಪ್, ಸಲ್ಮಾನ್ ಅವರ ಮನವಿಯನ್ನು ತಿರಸ್ಕರಿಸಿದ್ದಾರೆ. ಆ ಕುರಿತ ವರದಿ ಇಲ್ಲಿದೆ:
ಸೌದಿಗೆ ಪಾಕ್-ಟರ್ಕಿ ದ್ರೋಹ!
ಕಳೆದ ತಿಂಗಳಷ್ಟೇ ಸೌದಿ ಅರೇಬಿಯಾ, ಪಾಕಿಸ್ತಾನ ಮತ್ತು ಟರ್ಕಿ ದೇಶಗಳು ಪರಸ್ಪರ ಸೇನಾ ರಕ್ಷಣೆ ಒದಗಿಸುವ 'ಮೆಕ್ಕಾ ರಕ್ಷಣಾ ಒಪ್ಪಂದ'ಕ್ಕೆ ಸಹಿ ಹಾಕಿದ್ದವು. ಈ ಒಪ್ಪಂದದ ಪ್ರಕಾರ ಯಾವುದೇ ಒಂದು ದೇಶದ ಮೇಲೆ ದಾಳಿಯಾದರೆ ಅದನ್ನು ಮೂರೂ ದೇಶಗಳ ಮೇಲಿನ ದಾಳಿ ಎಂದು ಪರಿಗಣಿಸಬೇಕಿತ್ತು. ಆದರೆ, ಇರಾನ್ ಬೆಂಬಲಿತ ಹೌತಿ ಬಂಡುಕೋರರು ಸೌದಿ ನಗರಗಳು ಮತ್ತು ತೈಲ ನೆಲೆಗಳ ಮೇಲೆ ಕ್ಷಿಪಣಿ ದಾಳಿಗಳನ್ನು ತೀವ್ರಗೊಳಿಸಿದಾಗ, ಪಾಕಿಸ್ತಾನ ಮತ್ತು ಟರ್ಕಿ ಕೇವಲ ಹೇಳಿಕೆ ನೀಡಿ ಸುಮ್ಮನಾದವು. ಅದರಲ್ಲೂ, ಹೌತಿಗಳ ವಿರುದ್ಧ ನೇರ ಸೇನಾ ಕಾರ್ಯಾಚರಣೆ ನಡೆಸಲು ಈ ಎರಡೂ ದೇಶಗಳು ಸ್ಪಷ್ಟವಾಗಿ ನಿರಾಕರಿಸಿದ್ದರಿಂದ ಸೌದಿ ಅರೇಬಿಯಾಗೆ ಭಾರೀ ಮುಖಭಂಗವಾಗಿದೆ.
ಟ್ರಂಪ್‌ಗೆ MBS ಕರೆ: ಎರಡು ಬಾರಿಯೂ ತಿರಸ್ಕಾರ!
ಹೌತಿ ಬಂಡುಕೋರರು ಕೆಂಪು ಸಮುದ್ರದ ತೀರದ ಆಯಕಟ್ಟಿನ ಮೊಖಾ ಬಂದರು ನಗರವನ್ನು ವಶಪಡಿಸಿಕೊಂಡು ಮುನ್ನುಗ್ಗುತ್ತಿದ್ದಂತೆ ಸೌದಿ ಬೆಂಬಲಿತ ಪಡೆಗಳು ಹಿಮ್ಮೆಟ್ಟಿದವು. ಇನ್ನು, ಪರಿಸ್ಥಿತಿ ಗಂಭೀರತೆಯನ್ನು ಕಂಡು ಗಾಬರಿಗೊಂಡ ಸೌದಿ ಯುವರಾಜ ಮೊಹಮ್ಮದ್ ಬಿನ್ ಸಲ್ಮಾನ್, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಎರಡು ಬಾರಿ ಫೋನ್ ಮಾಡಿ ಹೌತಿಗಳ ಮೇಲೆ ನೇರ ಅಮೆರಿಕನ್ ವಾಯುದಾಳಿ ನಡೆಸುವಂತೆ ಬೇಡಿಕೊಂಡರು ಎಂದು ವರದಿಗಳು ತಿಳಿಸಿವೆ. ಆದರೆ, ಸದ್ಯಕ್ಕೆ ಇರಾನ್ ಪರ ಬಂಡುಕೋರರ ವಿರುದ್ಧ ಹೊಸ ಯುದ್ಧ ಆರಂಭಿಸಲು ಅಮೆರಿಕ ಸಿದ್ಧವಿಲ್ಲ ಎಂದು ತಿಳಿಸಿದ ಡೊನಾಲ್ಡ್ ಟ್ರಂಪ್, ನೇರ ಸೇನಾ ಹಸ್ತಕ್ಷೇಪ ಮಾಡುವ MBS ಅವರ ಬೇಡಿಕೆಯನ್ನು ತಿರಸ್ಕರಿಸಿದ್ದಾರೆ ಎನ್ನಲಾಗಿದೆ.
ಏತನ್ಮಧ್ಯೆ, ನೇರ ಬಾಂಬ್ ದಾಳಿ ನಡೆಸಲು ನಿರಾಕರಿಸಿದರೂ, ಅಮೆರಿಕವು ಗುಪ್ತಚರ ಮಾಹಿತಿ ಹಾಗೂ ಹೌತಿಗಳ ನೆಲೆಗಳ ಗುರಿ ಡೇಟಾವನ್ನು ಸೌದಿಗೆ ಹಂಚಿಕೊಳ್ಳುವುದಾಗಿ ಭರವಸೆ ನೀಡಿದೆ. ಅಲ್ಲದೆ ಯುಎಸ್ ಸೆಂಟ್ರಲ್ ಕಮಾಂಡ್ ಅಧಿಕಾರಿಗಳು ರಿಯಾದ್‌ನಲ್ಲಿ ಬೀಡುಬಿಟ್ಟು ಸಮನ್ವಯ ನಡೆಸುತ್ತಿದ್ದಾರೆ.