ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 
ವಿದೇಶ

ವಿದೇಶಿ ನೌಕರರ ನೇಮಕಾತಿಗೆ ಅಮೆರಿಕ ಕತ್ತರಿ: H-1B ವೀಸಾ ನಿರ್ಬಂಧ ಮತ್ತೊಂದು ವರ್ಷಕ್ಕೆ ಮುಂದುವರಿಕೆ..!

ಶುಕ್ರವಾರ ಹೊರಡಿಸಿದ ಅಧ್ಯಕ್ಷೀಯ ಘೋಷಣೆಯಲ್ಲಿ, 2025ರಲ್ಲಿ 1 ಲಕ್ಷ ಡಾಲರ್ ಶುಲ್ಕ ವಿಧಿಸುವ ನಿರ್ಧಾರ ಕೈಗೊಂಡ ಬಳಿಕ ದೊಡ್ಡ ಐಟಿ ಹೊರಗುತ್ತಿಗೆ ಸಂಸ್ಥೆಗಳಿಂದ ಸಲ್ಲಿಕೆಯಾಗುತ್ತಿದ್ದ ಎಚ್-1ಬಿ ನೋಂದಣಿಗಳಲ್ಲಿ ಶೇ.92ರಷ್ಟು ಇಳಿಕೆಯಾಗಿದೆ.

ವಾಷಿಂಗ್ಟನ್: ವಿದೇಶಿ ನೌಕರರ ನೇಮಕಾತಿಗೆ ಕಠಿಣ ನಿಯಮಗಳನ್ನು ಜಾರಿಗೆ ತರುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ಹೊಸ ಎಚ್-1ಬಿ (H-1B) ವೀಸಾಗಳ ಮೇಲಿನ $1,00,000 ಭಾರಿ ಶುಲ್ಕದ ಆದೇಶವನ್ನು ಮತ್ತೊಂದು ವರ್ಷಕ್ಕೆ ವಿಸ್ತರಿಸಿದ್ದಾರೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹೊಸ ಎಚ್-1ಬಿ ವೀಸಾ ಅರ್ಜಿಗಳಿಗೆ ವಿಧಿಸಲಾಗುತ್ತಿರುವ 1 ಲಕ್ಷ ಅಮೆರಿಕನ್ ಡಾಲರ್ ಶುಲ್ಕದ ನಿಯಮವನ್ನು 2027ರ ಸೆಪ್ಟೆಂಬರ್ 21ರವರೆಗೆ ವಿಸ್ತರಿಸುವ ಕಾರ್ಯಕಾರಿ ಆದೇಶಕ್ಕೆ ಸಹಿ ಹಾಕಿದ್ದಾರೆ.

ಶುಕ್ರವಾರ (ಸೆಪ್ಟೆಂಬರ್ 18, 2026) ಹೊರಡಿಸಲಾದ ಈ ಹೊಸ ಆದೇಶದ ಅನ್ವಯ, ಈ ಕಟ್ಟುನಿಟ್ಟಿನ ನಿಯಮವು 21 ಸೆಪ್ಟೆಂಬರ್ 2027 ರವರೆಗೆ ಜಾರಿಯಲ್ಲಿರಲಿದೆ. ಇದರೊಂದಿಗೆ, ಅಮೆರಿಕದ ಸ್ಥಳೀಯ ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕುವ ಕಂಪನಿಗಳ ಮೇಲೆಯೂ ತೀವ್ರ ನಿಗಾ ವಹಿಸುವಂತೆ ಟ್ರಂಪ್ ಮತ್ತೊಂದು ಆದೇಶ ಹೊರಡಿಸಿದ್ದಾರೆ.

ಅಮೆರಿಕದ ಎಚ್-1ಬಿ ವೀಸಾ ಕಾರ್ಯಕ್ರಮದ ಅತಿದೊಡ್ಡ ಫಲಾನುಭವಿ ಸಮುದಾಯವಾಗಿ ಭಾರತೀಯರು ಮುಂದುವರಿದಿದ್ದಾರೆ.

ಶುಕ್ರವಾರ ಹೊರಡಿಸಿದ ಅಧ್ಯಕ್ಷೀಯ ಘೋಷಣೆಯಲ್ಲಿ, 2025ರಲ್ಲಿ 1 ಲಕ್ಷ ಡಾಲರ್ ಶುಲ್ಕ ವಿಧಿಸುವ ನಿರ್ಧಾರ ಕೈಗೊಂಡ ಬಳಿಕ ದೊಡ್ಡ ಐಟಿ ಹೊರಗುತ್ತಿಗೆ ಸಂಸ್ಥೆಗಳಿಂದ ಸಲ್ಲಿಕೆಯಾಗುತ್ತಿದ್ದ ಎಚ್-1ಬಿ ನೋಂದಣಿಗಳಲ್ಲಿ ಶೇ.92ರಷ್ಟು ಇಳಿಕೆಯಾಗಿದೆ ಎಂದು ಟ್ರಂಪ್ ಹೇಳಿದ್ದಾರೆ.

2025ರ ಘೋಷಣೆಯನ್ನು ವಿಸ್ತರಿಸುವುದರಿಂದ ಅಮೆರಿಕದ ಆರ್ಥಿಕ ಮತ್ತು ರಾಷ್ಟ್ರೀಯ ಭದ್ರತಾ ಹಿತಾಸಕ್ತಿಗಳನ್ನು ರಕ್ಷಿಸುವುದು, ಅಮೆರಿಕದ ಕಾರ್ಮಿಕರು ಹಾಗೂ ಪದವೀಧರರಿಗೆ ಉದ್ಯೋಗ ಮಾರುಕಟ್ಟೆ ಪ್ರವೇಶವನ್ನು ಸುಧಾರಿಸುವುದು ಮತ್ತು ಕಾರ್ಯಕ್ರಮದ ಮೂಲ ಉದ್ದೇಶಕ್ಕೆ ಅನುಗುಣವಾಗಿ ಅಗತ್ಯವಿದ್ದಾಗ ಅತ್ಯಂತ ಕೌಶಲ್ಯ ಹೊಂದಿರುವ ಹಾಗೂ ಪ್ರಮುಖ ವಿದೇಶಿ ಉದ್ಯೋಗಿಗಳನ್ನು ಮಾತ್ರ ನೇಮಕ ಮಾಡಿಕೊಳ್ಳುವುದನ್ನು ಖಚಿತಪಡಿಸಬಹುದು ಎಂದು ತಿಳಿಸಿದ್ದಾರೆ..

2025ರಲ್ಲಿ 1 ಲಕ್ಷ ಡಾಲರ್ ಶುಲ್ಕ ವಿಧಿಸುವ ನಿರ್ಧಾರ ಕಾನೂನು ಸವಾಲನ್ನು ಎದುರಿಸುತ್ತಿದ್ದು, ಈ ವಿಚಾರ ಎರಡು ಪ್ರತ್ಯೇಕ ಫೆಡರಲ್ ನ್ಯಾಯಾಲಯಗಳ ಮುಂದೆ ವಿಚಾರಣೆಯಲ್ಲಿದೆ.

2025ರಲ್ಲಿ ಶುಲ್ಕ ಹೆಚ್ಚಿಸುವ ಕುರಿತು ಹೊರಡಿಸಿದ್ದ ಆದೇಶದ ಅವಧಿ ಈ ತಿಂಗಳು ಮುಕ್ತಾಯಗೊಳ್ಳಬೇಕಿತ್ತು. ಅಮೆರಿಕದಲ್ಲಿ ಈಗಾಗಲೇ ವಿದ್ಯಾರ್ಥಿ ವೀಸಾದಡಿ ನೆಲೆಸಿರುವ ವಿದೇಶಿ ನಾಗರಿಕರಿಗೆ ನೀಡಲಾಗುವ ವೀಸಾಗಳಿಗೆ ಈ ಶುಲ್ಕ ಅನ್ವಯವಾಗುತ್ತಿರಲಿಲ್ಲ. ಹೊಸ ಎಚ್-1ಬಿ ವೀಸಾ ಪಡೆಯುವವರಲ್ಲಿ ಇವರು ದೊಡ್ಡ ಸಂಖ್ಯೆಯಲ್ಲಿದ್ದಾರೆ. ಪ್ರಸ್ತುತ ವೀಸಾಗಳ ನವೀಕರಣಕ್ಕೂ ಈ ಶುಲ್ಕ ಅನ್ವಯವಾಗುವುದಿಲ್ಲ.

ಇದೇ ವೇಳೆ, ಕಾರ್ಮಿಕ ಕಾರ್ಯದರ್ಶಿಯು ವೇತನ ಮತ್ತು ಕೆಲಸದ ಅವಧಿ ವಿಭಾಗದ ಮೂಲಕ ಈ ಹಿಂದೆ ಸಲ್ಲಿಸಲಾದ ಕಾರ್ಮಿಕ ಷರತ್ತು ಅರ್ಜಿಗಳ ದತ್ತಾಂಶವನ್ನು ಪರಿಶೀಲಿಸುವ ಪ್ರಕ್ರಿಯೆ ಆರಂಭಿಸಲು 30 ದಿನಗಳ ಗಡುವನ್ನು ಆದೇಶದಲ್ಲಿ ನಿಗದಿಪಡಿಸಲಾಗಿದೆ.

ಪ್ರಾಯೋಜಕ ಸಂಸ್ಥೆಗಳ ವಿರುದ್ಧ ಮತ್ತಷ್ಟು ಕ್ರಮ ಕೈಗೊಳ್ಳುವ ಅಗತ್ಯವಿದೆಯೇ ಎಂಬುದನ್ನು ಈ ಪರಿಶೀಲನೆ ನಿರ್ಧರಿಸಲಿದೆ.

ಎಚ್-1ಬಿ ವೀಸಾ ಅರ್ಜಿಗಳ ಪರಿಶೀಲನೆಯನ್ನು ಮತ್ತಷ್ಟು ಬಿಗಿಗೊಳಿಸುವ ನಿಟ್ಟಿನಲ್ಲಿ ವಿವಿಧ ಸರ್ಕಾರಿ ಇಲಾಖೆಗಳ ನಡುವಿನ ಸಮನ್ವಯವನ್ನು ಹೆಚ್ಚಿಸುವ ಪ್ರತ್ಯೇಕ ಘೋಷಣೆಯನ್ನೂ ಅಧ್ಯಕ್ಷರು ಹೊರಡಿಸಿದ್ದಾರೆ.

“ಅಮೆರಿಕದ ಉದ್ಯೋಗಿಗಳು ಕೆಲಸ ಕಳೆದುಕೊಳ್ಳುವ ಹೆಚ್ಚಿನ ಅಪಾಯವಿರುವ ಸಂದರ್ಭಗಳಲ್ಲಿ ಎಚ್-1ಬಿ ವೀಸಾ ಅರ್ಜಿಗಳ ಪರಿಶೀಲನೆಯನ್ನು ಹೆಚ್ಚಿಸುವ ಮೂಲಕ ಹಾಗೂ ವಿವಿಧ ಸರ್ಕಾರಿ ಸಂಸ್ಥೆಗಳ ನಡುವಿನ ಸಮನ್ವಯವನ್ನು ಸುಧಾರಿಸುವ ಮೂಲಕ ಈ ಆದೇಶವು ಎಚ್-1ಬಿ ವೀಸಾ ಕಾರ್ಯಕ್ರಮದ ಸಮಗ್ರತೆಯನ್ನು ಬಲಪಡಿಸುತ್ತದೆ” ಎಂದು ಶ್ವೇತಭವನ ಬಿಡುಗಡೆ ಮಾಡಿರುವ ಮಾಹಿತಿ ಪತ್ರದಲ್ಲಿ ತಿಳಿಸಲಾಗಿದೆ.

ಎಚ್-1ಬಿ ವೀಸಾ ಅರ್ಜಿಗಳನ್ನು ಪರಿಶೀಲಿಸುವಾಗ ಅರ್ಜಿ ಸಲ್ಲಿಸುವ ಸಂಸ್ಥೆಗಳು ಇತ್ತೀಚೆಗೆ ಅಥವಾ ಮುಂದಿನ ದಿನಗಳಲ್ಲಿ ಸಮಾನ ಹುದ್ದೆಯಲ್ಲಿರುವ ಅಮೆರಿಕದ ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿದ್ದಾರೆಯೇ ಎಂಬುದನ್ನು ಪರಿಗಣಿಸುವಂತೆ ವಿದೇಶಾಂಗ ಸಚಿವರು, ಕಾರ್ಮಿಕ ಸಚಿವರು ಹಾಗೂ ಗೃಹ ಭದ್ರತಾ ಸಚಿವರಿಗೆ ಆದೇಶಿಸಲಾಗಿದೆ.

ವಿಶಿಷ್ಟ ಕೌಶಲ್ಯ ಹಾಗೂ ಅತ್ಯಂತ ಪರಿಣತಿ ಹೊಂದಿರುವ ವಿದೇಶಿ ತಾತ್ಕಾಲಿಕ ಉದ್ಯೋಗಿಗಳನ್ನು ಗುರುತಿಸಿ, ಅಮೆರಿಕದ ಆರ್ಥಿಕತೆಗೆ ಅಗತ್ಯವಿರುವ ಸಂದರ್ಭದಲ್ಲಿ ಅವರ ಸೇವೆಯನ್ನು ಬಳಸಿಕೊಳ್ಳುವ ಉದ್ದೇಶದಿಂದ ಎಚ್-1ಬಿ ವಲಸೆ ರಹಿತ ವೀಸಾ ಕಾರ್ಯಕ್ರಮವನ್ನು ರೂಪಿಸಲಾಗಿದೆ ಎಂದು ಟ್ರಂಪ್ ಕಾರ್ಯಕಾರಿ ಆದೇಶದಲ್ಲಿ ಹೇಳಿದ್ದಾರೆ.

ಆದರೆ, ಕೆಲವು ಉದ್ಯೋಗದಾತರು, ಮೂರನೇ ವ್ಯಕ್ತಿಯ ನೇಮಕಾತಿ ಸಂಸ್ಥೆಗಳು ಹಾಗೂ ಹೊರಗುತ್ತಿಗೆ ಸಂಸ್ಥೆಗಳು ಅಮೆರಿಕದ ಕೌಶಲ್ಯ ಹೊಂದಿರುವ ಕಾರ್ಮಿಕರ ಉದ್ಯೋಗಾವಕಾಶಗಳನ್ನು ಕುಗ್ಗಿಸಲು ಮತ್ತು ಅವರನ್ನು ಕೆಲಸದಿಂದ ಬದಲಿಸಲು ಈ ಕಾರ್ಯಕ್ರಮವನ್ನು ವ್ಯಾಪಕವಾಗಿ ದುರುಪಯೋಗಪಡಿಸಿಕೊಂಡಿವೆ ಎಂದು ಆರೋಪಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಷ್ಯಾಗೆ ಟ್ರಂಪ್‌ ಬಿಗ್ ಶಾಕ್: ಶೇ.100ರಷ್ಟು ಸುಂಕಕ್ಕೆ ಅಸ್ತು, ಭಾರತ-ಚೀನಾ ಮೇಲೂ ನಿರ್ಬಂಧದ ತೂಗುಗತ್ತಿ..!

ಮಂಗಳೂರಿನಲ್ಲಿ ಡಿಕೆಶಿ ಸಂಪುಟ ಸಭೆ, ತುಮಕೂರಿನಲ್ಲಿ ಸಿದ್ದರಾಮಯ್ಯ ಡಿನ್ನರ್ ಮೀಟಿಂಗ್: ಕೈ ಪಾಳಯದಲ್ಲಿ ಶುರುವಾಯ್ತಾ ಹೊಸ ಆಂತರಿಕ ತಂತ್ರಗಾರಿಕೆ..?

ರಾಜ್ಯದ 32,611 ಕೋಟಿ ರೂ. ಯೋಜನೆಗಳಿಗೆ ಗ್ರೀನ್‌ ಸಿಗ್ನಲ್‌: ಮಂಗಳೂರು ಸಂಪುಟ ಸಭೆಯಲ್ಲಿ ಸರ್ಕಾರ ಮಹತ್ವದ ಘೋಷಣೆ..!

ಕರಾವಳಿಯಲ್ಲಿ ಅಭಿವೃದ್ಧಿಯ ಅಲೆ: 16 ಸಾವಿರ ಕೋಟಿ ರೂ. ಪ್ಯಾಕೇಜ್‌ಗೆ ಸಂಪುಟ ಒಪ್ಪಿಗೆ, ಪ್ರವಾಸೋದ್ಯಮ, ಮೂಲಸೌಕರ್ಯಕ್ಕೆ ಹೆಚ್ಚಿನ ಒತ್ತು..!

ಸರ್ಕಾರದ ಎಲ್ಲ ಘೋಷಣೆಗಳೂ ಕಾಗದದ ಮೇಲೆಯೇ ಉಳಿಯಲಿವೆ: ಆರ್. ಅಶೋಕ್