ಸೌದಿ ಮೇಲೆ ಹೌತಿ ಬಂಡುಕೋರರ ದಾಳಿ 
ವಿದೇಶ

ಅಮೆರಿಕಾ ವಿರುದ್ಧ ಯುದ್ಧವಿಲ್ಲ, ಸೌದಿ ವಿರುದ್ಧ ಸಮರ ನಿಲ್ಲಲ್ಲ: ಟ್ರಂಪ್‌ಗೆ ಹೌತಿಗಳ ಖಡಕ್ ಸಂದೇಶ, ಮಧ್ಯಪ್ರಾಚ್ಯದಲ್ಲಿ ಮತ್ತೊಂದು ಯುದ್ಧದ ಆತಂಕ..!

ಸೌದಿ ಅರೇಬಿಯಾ ಬಂಡುಕೋರರ ನಿಯಂತ್ರಣದಲ್ಲಿರುವ ಪ್ರದೇಶಗಳ ಮೇಲಿನ ದಶಕದಷ್ಟು ಹಳೆಯ ದಿಗ್ಬಂಧನವನ್ನು ತೆರವುಗೊಳಿಸಿ, ಹೌತಿ ನಿಯಂತ್ರಿತ ಕೆಂಪು ಸಮುದ್ರದ ಬಂದರುಗಳಿಗೆ ಹಡಗುಗಳ ಪ್ರವೇಶಕ್ಕೆ ಅವಕಾಶ ನೀಡುವವರೆಗೆ ಸೌದಿ ವಿರುದ್ಧದ ದಾಳಿಗಳು ಮುಂದುವರಿಯಲಿವೆ.

ದುಬೈ: ಯೆಮನ್‌ನ ಇರಾನ್ ಬೆಂಬಲಿತ ಹೌತಿ ಬಂಡುಕೋರರು ಜಾಗತಿಕ ರಾಜತಾಂತ್ರಿಕತೆಯಲ್ಲಿ ಭಾರಿ ಸಂಚಲನ ಮೂಡಿಸುವಂತಹ ನಿರ್ಧಾರವೊಂದನ್ನು ಪ್ರಕಟಿಸಿದ್ದಾರೆ.

ರೆಡ್ ಸೀ (ಕೆಂಪು ಸಮುದ್ರ) ಪ್ರದೇಶದಲ್ಲಿ ಅಮೆರಿಕದ ಹಡಗುಗಳ ಮೇಲೆ ನಾವು ಯಾವುದೇ ದಾಳಿ ನಡೆಸುವುದಿಲ್ಲ ಎಂದು ಹೌತಿ ಬಂಡುಕೋರರು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತಕ್ಕೆ ಭರವಸೆ ನೀಡಿದೆ. ಆದರೆ, ಇದೇ ವೇಳೆ ಮಧ್ಯಪ್ರಾಚ್ಯದಲ್ಲಿ ಸೌದಿ ಅರೇಬಿಯಾ ಮಾತ್ರ ತಮ್ಮ ಏಕೈಕ ಶತ್ರು ಎಂದು ಘೋಷಿಸುವ ಮೂಲಕ ಸೌದಿ ಮೈತ್ರಿಕೂಟಕ್ಕೆ ಕಠಿಣ ಎಚ್ಚರಿಕೆ ನೀಡಿದೆ.

ಸಂಘರ್ಷವನ್ನು ಅಂತ್ಯಗೊಳಿಸುವ ಕುರಿತು ಅಮೆರಿಕದ ಪ್ರತಿಕ್ರಿಯೆಗಾಗಿ ಇರಾನ್ ಕಾಯುತ್ತಿರುವ ಸಂದರ್ಭದಲ್ಲೇ ಹೌತಿ ರಾಜಕೀಯ ಬ್ಯೂರೋ ಸದಸ್ಯ ಮೊಹಮ್ಮದ್ ಅಲ್-ಬುಖೈತಿ ಅಸೋಸಿಯೇಟೆಡ್ ಪ್ರೆಸ್‌ಗೆ ನೀಡಿದ ಸಂದರ್ಶನದಲ್ಲಿ ಈ ಹೇಳಿಕೆ ನೀಡಿದ್ದಾರೆ.

ಯೆಮೆನ್‌ನ ಪಶ್ಚಿಮ ಕರಾವಳಿಯಲ್ಲಿ ಆಯಕಟ್ಟಿನ ಬಾಬ್ ಎಲ್-ಮಂದೆಬ್ ಜಲಸಂಧಿಯತ್ತ ಹೌತಿಗಳು ವೇಗವಾಗಿ ಮುನ್ನಡೆಯುತ್ತಿದ್ದ ಹಿನ್ನೆಲೆಯಲ್ಲಿ ವಾಷಿಂಗ್ಟನ್ ತಮ್ಮನ್ನು ಸಂಪರ್ಕಿಸಿತ್ತು ಎಂದು ಅಲ್-ಬುಖೈತಿ ಹೇಳಿದ್ದಾರೆ.

ನಾವು ಅಮೆರಿಕ ಅಥವಾ ಜಲಸಂಧಿಯಲ್ಲಿರುವ ಯಾವುದೇ ದೇಶದ ಮೇಲೆ ದಾಳಿ ನಡೆಸುತ್ತಿಲ್ಲ, ಸೌದಿ ಶತ್ರುವನ್ನು ಹೊರತುಪಡಿಸಿ. ಈ ನಿಲುವು ಮುಂದುವರಿಯಲಿದೆ ಎಂದು ನಾವು ಸ್ಪಷ್ಟಪಡಿಸಿದ್ದೇವೆ ಎಂದು ಹೇಳಿದ್ದಾರೆ.

ಇದೇ ವೇಳೆ ಸೌದಿ ಅರೇಬಿಯಾದೊಂದಿಗೆ ನಡೆಯುತ್ತಿರುವ ಸಂಘರ್ಷದಲ್ಲಿ ಇತರ ದೇಶಗಳು ಸೇರಿಕೊಳ್ಳದಂತೆ ಅಲ್-ಬುಖೈತಿ ಎಚ್ಚರಿಕೆ ನೀಡಿದ್ದಾರೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ಈ ಹಿಂದೆ ತಮ್ಮ ಆಡಳಿತ ಹೌತಿಗಳೊಂದಿಗೆ ಸಂಪರ್ಕದಲ್ಲಿದೆ ಎಂದು ದೃಢಪಡಿಸಿದ್ದರು. ಹೌತಿಗಳು ಅಮೆರಿಕದೊಂದಿಗೆ ಸಂಘರ್ಷ ಬಯಸುತ್ತಿಲ್ಲ ಎಂದೂ ಅವರು ಹೇಳಿದ್ದರು.

ಅಸೋಸಿಯೇಟೆಡ್ ಪ್ರೆಸ್ ವರದಿ ಪ್ರಕಾರ, ಕಳೆದ ವಾರಾಂತ್ಯದಲ್ಲಿ ಓಮನ್‌ನಲ್ಲಿ ಅಮೆರಿಕ ಮತ್ತು ಹೌತಿ ಪ್ರತಿನಿಧಿಗಳ ನಡುವೆ ಸಭೆ ನಡೆದಿತ್ತು. ಆದರೆ, ಓಮನ್ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಅದರ ಮೂಲಕ ಪರೋಕ್ಷ ಸಂಪರ್ಕಗಳು ನಡೆದಿರುವುದನ್ನು ಮಾತ್ರ ಅಲ್-ಬುಖೈತಿ ದೃಢಪಡಿಸಿದ್ದಾರೆ.

ಇದೇ ವೇಳೆ ಕೆಂಪು ಸಮುದ್ರ ಮತ್ತು ಅಡೆನ್ ಕೊಲ್ಲಿಯನ್ನು ಸಂಪರ್ಕಿಸುವ ಪ್ರಮುಖ ಸಮುದ್ರ ಮಾರ್ಗವಾಗಿರುವ ಬಾಬ್ ಎಲ್-ಮಂದೆಬ್ ಜಲಸಂಧಿಯನ್ನು ಬಂದ್ ಮಾಡುವ ಉದ್ದೇಶ ಹೌತಿಗಳಿಗೆ ಇಲ್ಲ ಎಂದು ಅಲ್-ಬುಖೈತಿ ಹೇಳಿದ್ದಾರೆ.

ನಮ್ಮ ಸೇನಾ ಕಾರ್ಯಾಚರಣೆಗಳ ಉದ್ದೇಶ ಬಾಬ್ ಎಲ್-ಮಂದೆಬ್ ಜಲಸಂಧಿಯನ್ನು ಮುಚ್ಚುವುದಲ್ಲ. ಬದಲಿಗೆ ಯೆಮೆನ್ ಸೇರಿದಂತೆ ಎಲ್ಲರಿಗೂ ಅದರ ಮೂಲಕ ಮುಕ್ತ ನೌಕಾಯಾನವನ್ನು ಖಚಿತಪಡಿಸುವುದಾಗಿದೆ” ಎಂದು ತಿಳಿಸಿದ್ದಾರೆ.

ಅದೇ ವೇಳೆ, ಸೌದಿ ಅರೇಬಿಯಾದ ಪರವಾಗಿ ಸಂಘರ್ಷಕ್ಕೆ ಮತ್ತಷ್ಟು ದೇಶಗಳು ಸೇರ್ಪಡೆಯಾದರೆ ಯುದ್ಧವನ್ನು ವಿಸ್ತರಿಸಲು ಹೌತಿಗಳು ಸಿದ್ಧರಿದ್ದಾರೆ ಎಂದು ಅವರು ಎಚ್ಚರಿಸಿದ್ದಾರೆ.

ಇಂದು ಯೆಮೆನ್ ಕೇವಲ ಆಂತರಿಕ ಸಂಘರ್ಷವಲ್ಲ, ಅಂತರರಾಷ್ಟ್ರೀಯ ಮಟ್ಟದ ಯುದ್ಧವನ್ನೂ ನಡೆಸುವ ಸಾಮರ್ಥ್ಯ ಹೊಂದಿದೆ” ಎಂದು ಹೇಳಿದ್ದಾರೆ.

ಸೌದಿ ಅರೇಬಿಯಾ ಬಂಡುಕೋರರ ನಿಯಂತ್ರಣದಲ್ಲಿರುವ ಪ್ರದೇಶಗಳ ಮೇಲಿನ ದಶಕದಷ್ಟು ಹಳೆಯ ದಿಗ್ಬಂಧನವನ್ನು ತೆರವುಗೊಳಿಸಿ, ಹೌತಿ ನಿಯಂತ್ರಿತ ಕೆಂಪು ಸಮುದ್ರದ ಬಂದರುಗಳಿಗೆ ಹಡಗುಗಳ ಪ್ರವೇಶಕ್ಕೆ ಅವಕಾಶ ನೀಡುವವರೆಗೆ ಸೌದಿ ವಿರುದ್ಧದ ದಾಳಿಗಳು ಮುಂದುವರಿಯಲಿವೆ ಎಂದು ಹೌತಿ ನಾಯಕ ಹೇಳಿದ್ದಾರೆ. ಈ ಕ್ರಮ ಕೈಗೊಂಡರೆ ಮಾತುಕತೆಗೆ ಸಿದ್ಧವಿರುವುದಾಗಿ ತಿಳಿಸಿದ್ದಾರೆ.

ಇದೇ ವೇಳೆ ಕಳೆದ 24 ಗಂಟೆಗಳಲ್ಲಿ ಸೌದಿ ವಾಯುಪಡೆ ಯೆಮೆನ್‌ನ ವಿವಿಧ ಪ್ರದೇಶಗಳಲ್ಲಿ 28 ವಾಯುದಾಳಿಗಳನ್ನು ನಡೆಸಿದೆ ಎಂದು ಹೌತಿ ಸೇನಾ ವಕ್ತಾರ ಯಾಹ್ಯಾ ಸರಿ ಹೇಳಿದ್ದಾರೆ.

ಎಕ್ಸ್‌ನಲ್ಲಿ ಪ್ರಕಟಿಸಿದ ಹೇಳಿಕೆಯಲ್ಲಿ, ತೈಜ್, ಅಲ್-ಜೌಫ್ ಮತ್ತು ಮಾರಿಬ್ ಪ್ರಾಂತ್ಯಗಳನ್ನು ಗುರಿಯಾಗಿಸಿಕೊಂಡು ದಾಳಿಗಳು ನಡೆದಿವೆ ಎಂದು ತಿಳಿಸಿದ್ದಾರೆ.

ಇತ್ತೀಚಿನ ಸಂಘರ್ಷ ತೀವ್ರಗೊಂಡ ಬಳಿಕ ಸೌದಿ ನೇತೃತ್ವದ ಒಕ್ಕೂಟವು ಕನಿಷ್ಠ 760 ವಾಯುದಾಳಿಗಳನ್ನು ನಡೆಸಿದೆ ಎಂದು ಅವರು ಆರೋಪಿಸಿದ್ದಾರೆ.

ಸಂಘರ್ಷ ಉಲ್ಬಣಕ್ಕೆ ಸೌದಿ ಹೊಣೆ ಎಂದ ಹೌತಿಗಳು

ಏತನ್ಮಧ್ಯೆ ಸಂಘರ್ಷ ಮತ್ತೆ ತೀವ್ರಗೊಳ್ಳಲು ಸೌದಿ ಅರೇಬಿಯಾವೇ ಕಾರಣ ಎಂದು ಅಲ್-ಬುಖೈತಿ ಆರೋಪಿಸಿದ್ದಾರೆ. ಸೌದಿ ನೇತೃತ್ವದ ಒಕ್ಕೂಟ ನಡೆಸಿದೆ ಎನ್ನಲಾದ ವಾಯುದಾಳಿಯಲ್ಲಿ ಸನಾ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹಾನಿಯಾಗಿದ್ದು, ಹೌತಿ ನಿಯೋಗವನ್ನು ಹೊತ್ತಿದ್ದ ಇರಾನ್‌ನ ವಿಮಾನ ಇಳಿಯುವುದನ್ನು ತಡೆಯಲಾಯಿತು ಎಂದು ಹೇಳಿದ್ದಾರೆ.

ಒಕ್ಕೂಟದ ವಾಯು ಮತ್ತು ನೌಕಾ ದಿಗ್ಬಂಧನಕ್ಕೆ ಸವಾಲೊಡ್ಡುವ ಉದ್ದೇಶದಿಂದ ಆ ವಿಮಾನ ಸಂಚಾರ ನಡೆಸಲಾಗುತ್ತಿತ್ತು ಎಂದು ತಿಳಿಸಿದ್ದಾರೆ.

ಇದಾದ ಬಳಿಕ ಹೌತಿಗಳು ಸೌದಿ ಗುರಿಗಳ ಮೇಲೆ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳನ್ನು ನಡೆಸಿದರು. ಶನಿವಾರ ರಿಯಾದ್‌ನ್ನು ಗುರಿಯಾಗಿಸಿಕೊಂಡು ನಡೆಸಿದ ದಾಳಿಯೊಂದನ್ನು ತಡೆಗಟ್ಟಲಾಗಿದೆ. ಹೌತಿ ಡ್ರೋನ್‌ನ ಅವಶೇಷಗಳು ಬಿದ್ದು ಓರ್ವ ನಾಗರಿಕ ಮೃತಪಟ್ಟಿದ್ದು, ಇತರರು ಗಾಯಗೊಂಡಿದ್ದಾರೆ ಎಂದು ಸೌದಿ ಅಧಿಕಾರಿಗಳು ತಿಳಿಸಿದ್ದಾರೆ.

ಬಾಬ್ ಎಲ್-ಮಂದೆಬ್ ಜಲಸಂಧಿ ಮತ್ತು ಕೆಂಪು ಸಮುದ್ರದಲ್ಲಿ ಸೌದಿ ಹಡಗುಗಳ ಸಂಚಾರದ ಮೇಲೂ ದಿಗ್ಬಂಧನ ಹೇರಿರುವುದಾಗಿ ಹೌತಿಗಳು ಘೋಷಿಸಿದ್ದಾರೆ. ಸೌದಿ ಸಂಪರ್ಕ ಹೊಂದಿರುವ ಹಡಗುಗಳು ಹಾಗೂ ದೇಶದೊಳಗಿನ ತೈಲ ಮೂಲಸೌಕರ್ಯಗಳನ್ನೂ ಗುರಿಯಾಗಿಸಿಕೊಂಡಿರುವುದಾಗಿ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಮಧ್ಯಪ್ರಾಚ್ಯದಲ್ಲಿ ಯುದ್ಧದ ಭೀತಿ: ಷರತ್ತು ಒಪ್ಪದ ಹೊರತು ಹಾರ್ಮುಜ್ ಜಲಸಂಧಿ ತರೆಯಲ್ಲ ಎಂದ ಇರಾನ್; ದಿಗ್ಬಂಧನ ಮತ್ತಷ್ಟು ಬಿಗಿಗೊಳಿಸಿದ ಅಮೆರಿಕ..!

ಮಧ್ಯಪ್ರಾಚ್ಯದಲ್ಲಿ ಯುದ್ಧದ ಕಾರ್ಮೋಡ: ‘ದೊಡ್ಡ ಘಟನೆ ನಡೆಯಲಿದೆ’ ಎಂದ ಟ್ರಂಪ್; ಇರಾನ್ ವಿರುದ್ಧ ಅಮೆರಿಕಾ ನಡೆಸಿರುವ ಗೇಮ್‌ಪ್ಲ್ಯಾನ್ ಏನು..?

ದೆಹಲಿ SIR: ವಿದೇಶಾಂಗ ಸಚಿವ ಜೈಶಂಕರ್, ಎಲ್.ಕೆ ಅಡ್ವಾಣಿ ಸೇರಿದಂತೆ ಹಲವು ಮತದಾರರಿಗೆ ನೋಟಿಸ್; CEO ಕೊಟ್ಟ ಸ್ಪಷ್ಟನೆ ಏನು?

ಇದು ಎಂತಹ ವಿಶೇಷ ತೀವ್ರ ಪರಿಷ್ಕರಣೆ? ಅರ್ಹರನ್ನು ಕಿತ್ತುಹಾಕಿ, ಅನರ್ಹರನ್ನು ಸೇರಿಸುವುದೇ SIR: ಕಪಿಲ್ ಸಿಬಲ್ ಕಿಡಿ!

ಟಾಟಾ ಸನ್ಸ್ ಅಧ್ಯಕ್ಷರಾಗಿ ಎನ್ ಚಂದ್ರಶೇಖರನ್ ಮರುನೇಮಕ ಪ್ರಶ್ನಿಸಿದ ಟಾಟಾ ಟ್ರಸ್ಟ್ಸ್!