ವಾಷಿಂಗ್ಟನ್: ಶ್ವೇತಭವನದಲ್ಲಿ ಗುರುವಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ನಡುವೆ ಮಹತ್ವದ ಸಭೆ ನಡೆದಿದ್ದು, ಕೃತಕ ಬುದ್ಧಿಮತ್ತೆ (AI), ವ್ಯಾಪಾರ, ತೈವಾನ್ ಮತ್ತು ಇರಾನ್‌ನಂತಹ ವಿಷಯಗಳ ಬಗ್ಗೆ ಉಭಯ ನಾಯಕರು ಚರ್ಚೆ ನಡೆಸಿದ್ದಾರೆ. ಚೀನಾ ಅಧ್ಯಕ್ಷರ ಜೊತೆಗಿನ ಸ್ನೇಹವನ್ನು ಟ್ರಂಪ್ ಕೊಂಡಾಡಿದ್ದಾರೆ.
ಹಲವು ವರ್ಷಗಳ ನಂತರ ಶ್ವೇತಭವನಕ್ಕೆ ಆಗಮಿಸಿದ ಚೀನಾ ಅಧ್ಯಕ್ಷರಿಗೆ ಟ್ರಂಪ್ ಭವ್ಯ ಸ್ವಾಗತ ನೀಡಿದ್ದಾರೆ. ಚರ್ಚಿಸಲು ಹಲವು ಜಟಿಲ ವಿಷಯಗಳಿದ್ದರೂ ಅವರ ದೀರ್ಘಕಾಲದ ಬಾಂಧವ್ಯದ ಮೇಲೆ ಟ್ರಂಪ್ ಗಮನಹರಿಸಿದ್ದಾರೆ.
2016ರಲ್ಲಿ ಮೊದಲ ಬಾರಿಗೆ ಆಯ್ಕೆಯಾದಾಗಿನಿಂದ, ಕ್ಸಿ ಜೊತೆಗೆ ಪರಸ್ಪರ ಗೌರವವಿದೆ. ನಮ್ಮ ಜನರ ಪ್ರಮುಖ ಹಿತಾಸಕ್ತಿಗಳ ಆಧಾರದ ಮೇಲೆ ನಿಜಕ್ಕೂ ಉತ್ತಮವಾದ ಸ್ನೇಹವನ್ನು ಬೆಳೆಸಿಕೊಂಡಿದ್ದೇವೆ ಎಂದು ಟ್ರಂಪ್ ಹೇಳಿಕೊಂಡಿದ್ದಾರೆ.
ಕೃತಕ ಬುದ್ಧಿಮತ್ತೆ (AI) ಸೇರಿದಂತೆ "ತುರ್ತು ವಿಷಯಗಳ" ಬಗ್ಗೆಯೂ ಮಾತುಕತೆ ನಡೆಯಲಿದೆ ಅವರು ತಿಳಿಸಿದರು. ಈ ಭೇಟಿಯ ಸಂದರ್ಭದಲ್ಲಿ, ನಾವು ಭದ್ರತೆ, ತಂತ್ರಜ್ಞಾನ ಮತ್ತು ಸೂಪರ್ ಇಂಟೆಲಿಜೆನ್ಸ್ (SI) ಗೆ ಸಂಬಂಧಿಸಿದ ತುರ್ತು ವಿಷಯಗಳ ಬಗ್ಗೆಯೂ ಚರ್ಚಿಸುತ್ತೇವೆ. ಈ ಕ್ಷೇತ್ರಗಳಲ್ಲಿ ಇಂದು ನಾವು ತೆಗೆದುಕೊಳ್ಳುವ ನಿರ್ಧಾರಗಳು ಮುಂಬರುವ ದಶಕಗಳವರೆಗೆ ಶಾಂತಿ ಮತ್ತು ಸಮೃದ್ಧಿಯನ್ನು ಉತ್ತೇಜಿಸಬಲ್ಲವು ಎಂದು ಅವರು ಹೇಳಿದರು.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಟ್ರಂಪ್ ಪೋಸ್ಟ್ ಮಾಡಿದ್ದು, AI ಅಥವಾ "ಸೂಪರ್ ಇಂಟೆಲಿಜೆನ್ಸ್" - ಕಾರ್ಯಸೂಚಿಯಲ್ಲಿ ಪ್ರಮುಖ ಸ್ಥಾನ ಪಡೆಯಲಿದೆ. ಈ ತಂತ್ರಜ್ಞಾನವು ಉದ್ಯೋಗಗಳನ್ನು ನಾಶಪಡಿಸಬಹುದು ಅಥವಾ ಮಾನವಕುಲವನ್ನೇ ನಿರ್ನಾಮ ಮಾಡಬಹುದು ಎಂಬ ಜಾಗತಿಕ ಆತಂಕ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಚರ್ಚೆ ಮಹತ್ವದ್ದಾಗಿದೆ. ನಾನು ಅದನ್ನು ಈಗಿರುವ ಸ್ಥಿತಿಯಲ್ಲೇ ಉಳಿಸಿಕೊಳ್ಳಲು ಬಯಸುತ್ತೇನೆ. ಚೀನಾದ ನಿಲುವೂ ಕೂಡ ಇದೇ ಆಗಿದೆ ಎಂದು ಅವರು ಬರೆದುಕೊಂಡಿದ್ದಾರೆ.
ಮಾನವ ಅಭಿವೃದ್ಧಿಯನ್ನು ಮುನ್ನಡೆಸುವಲ್ಲಿ ವಿಶ್ವದ ಎರಡು ಅತಿದೊಡ್ಡ ಆರ್ಥಿಕತೆಗಳು ಜಂಟಿ ಜವಾಬ್ದಾರಿಯನ್ನು ಹೊಂದಿವೆ ಎಂದು ಕ್ಸಿ ಹೇಳಿದ್ದಾರೆ. ಚೀನಾ ಮತ್ತು ಅಮೆರಿಕಗಳು ಪ್ರಮುಖ ರಾಷ್ಟ್ರಗಳಾಗಿ, ಮಾನವ ಅಭಿವೃದ್ಧಿ ಮತ್ತು ಪ್ರಗತಿಯನ್ನು ಮುನ್ನಡೆಸುವ ಐತಿಹಾಸಿಕ ಜವಾಬ್ದಾರಿಯನ್ನು ಹೊತ್ತಿವೆ ಎಂದು ಅವರು ಶ್ವೇತಭವನದಲ್ಲಿ ನುಡಿದರು.ನಾವು ಮಾತುಕತೆಯನ್ನು ಬಲಪಡಿಸಬೇಕು. ಪ್ರತಿಸ್ಪರ್ಧಿಗಳಾಗಿರುವ ಈ ದೇಶಗಳು ಸಂಘರ್ಷ ಮತ್ತು ಮುಖಾಮುಖಿಯಿಂದ ದೂರವಿರಬೇಕು ಎಂದು ಅವರು ಪ್ರತಿಪಾದಿಸಿದ್ದಾರೆ.
"ನಮ್ಮ ನಡುವೆ ಯಾವುದೇ ಸಂಘರ್ಷ ಅಥವಾ ಮುಖಾಮುಖಿ ಉಂಟಾಗದಂತೆ ನೋಡಿಕೊಳ್ಳುವ ನಿಲುವಿಗೆ ಚೀನಾ ಮತ್ತು ಅಮೆರಿಕ ಬದ್ಧವಾಗಿರಬೇಕು."ನಮ್ಮ ಎರಡೂ ದೇಶಗಳ ಸೇನೆಗಳು ನಿಯಮಿತ ಸಂವಾದವನ್ನು ನಡೆಸಬೇಕು ಹಾಗೂ ಬಿಕ್ಕಟ್ಟಿನ ಸಂದರ್ಭದ ಮಾತುಕತೆ ಮತ್ತು ಅದನ್ನು ತಡೆಗಟ್ಟುವ ಕಾರ್ಯವಿಧಾನಗಳನ್ನು ಸುಧಾರಿಸಬೇಕು ಎಂದಿದ್ದಾರೆ. ಸ್ಪರ್ಧೆಯು ಆರೋಗ್ಯಕರವಾಗಿರಬೇಕು ಮತ್ತು ಮಿತಿಯೊಳಗೆ ಇರಬೇಕು. ಇದು ಒಬ್ಬರು ಗೆಲ್ಲುವ ಅಥವಾ ಸೋಲುವ ಕುಸ್ತಿಯಂತಲ್ಲದೆ, ಪರಸ್ಪರರನ್ನು ಸರಿಗಟ್ಟುವ ಅಥವಾ ಮುನ್ನಡೆಯುವ ಓಟದಂತಿರಬೇಕು ಎಂದು ಅವರು ಹೇಳಿದ್ದಾರೆ.
ಕೃತಕ ಬುದ್ಧಿಮತ್ತೆ (AI) ಬಗ್ಗೆ ಅವರು ಪ್ರಸ್ತಾಪಿಸಿದ್ದು,ಈ ತಂತ್ರಜ್ಞಾನದ ಮೇಲಿನ ನಿಯಂತ್ರಣವು ಯಾವಾಗಲೂ ಮಾನವನ ಕೈಯಲ್ಲಿಯೇ ಇರುವಂತೆ ನೋಡಿಕೊಳ್ಳುವ ಜವಾಬ್ದಾರಿ ಎರಡೂ ದೇಶಗಳ ಮೇಲಿದೆ ಎಂದು ಹೇಳಿದರು.
ಒಳಿತಿಗಾಗಿ ಕೃತಕ ಬುದ್ಧಿಮತ್ತೆಯನ್ನು ಅಭಿವೃದ್ಧಿಪಡಿಸುವ ಹಾಗೂ ನಿರ್ವಹಿಸುವ ಸಾಮರ್ಥ್ಯ ಮತ್ತು ಜವಾಬ್ದಾರಿ ನಮ್ಮಲ್ಲಿದೆ. ಜೊತೆಗೆ, ಇದರ ಅಭಿವೃದ್ಧಿಯು ಯಾವಾಗಲೂ ಮಾನವನ ನಿಯಂತ್ರಣದಲ್ಲಿರುವಂತೆ ಮತ್ತು ಜನರ ಒಳಿತಿಗಾಗಿ ಬಳಕೆಯಾಗುವಂತೆ ನೋಡಿಕೊಳ್ಳುವುದು ನಮ್ಮ ಕರ್ತವ್ಯವಾಗಿದೆ ಎಂದು ಅವರು ತಿಳಿಸಿದ್ದಾರೆ.