ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ಗುರುವಾರ ಶ್ವೇತಭವನದಲ್ಲಿ ಮಹತ್ವದ ಮಾತುಕತೆ ನಡೆಸಿದರು.
ಕೃತಕ ಬುದ್ಧಿಮತ್ತೆ (AI), ವ್ಯಾಪಾರ, ತೈವಾನ್, ಇರಾನ್ ಯುದ್ಧ ಸೇರಿದಂತೆ ಹಲವು ಸೂಕ್ಷ್ಮ ವಿಚಾರಗಳು ಚರ್ಚೆಯ ಪ್ರಮುಖ ಅಂಶಗಳಾಗಿದ್ದವು. ಇದೇ ವೇಳೆ ಕ್ಸಿ ಜಿನ್‌ಪಿಂಗ್, ಅಮೆರಿಕ ಮತ್ತು ಚೀನಾ ನಡುವಿನ ಸ್ಪರ್ಧೆ ಆರೋಗ್ಯಕರವಾಗಿರಬೇಕು ಹಾಗೂ AI ಸದಾ ಮಾನವರ ನಿಯಂತ್ರಣದಲ್ಲಿರಬೇಕು ಎಂದು ಒತ್ತಿ ಹೇಳಿದರು.
ಟ್ರಂಪ್, ಷಿ ಜಿನ್‌ಪಿಂಗ್ ಅವರನ್ನು ಸ್ವಾಗತಿಸುವ ವೇಳೆ ತಮ್ಮ ನಡುವಿನ “ನಿಜಕ್ಕೂ ಉತ್ತಮ ಸ್ನೇಹ”ವನ್ನು ಕೊಂಡಾಡಿದರು.
2016ರಲ್ಲಿ ತಾವು ಮೊದಲ ಬಾರಿಗೆ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆದ್ದ ಸಮಯದಿಂದ ಇಬ್ಬರ ನಡುವೆ ಪರಸ್ಪರ ಗೌರವ ಹಾಗೂ ಎರಡೂ ದೇಶಗಳ ಜನರ ಹಿತಾಸಕ್ತಿಗಳನ್ನು ಆಧರಿಸಿದ ಸ್ನೇಹ ಬೆಳೆದಿದೆ ಎಂದು ಟ್ರಂಪ್ ಹೇಳಿದರು.
ಆದರೆ, ಉಭಯ ದೇಶಗಳ ನಡುವೆ ಹಲವು ಕಗ್ಗಂಟಿನ ವಿಚಾರಗಳು ಮುಂದುವರಿದಿವೆ. ಇರಾನ್ ವಿರುದ್ಧದ ಸುಮಾರು ಏಳು ತಿಂಗಳ ಯುದ್ಧವನ್ನು ಅಂತ್ಯಗೊಳಿಸಲು ಅಮೆರಿಕದ ಷರತ್ತುಗಳಿಗೆ ಒಪ್ಪಿಕೊಳ್ಳುವಂತೆ ಇರಾನ್ ಮೇಲೆ ಪ್ರಭಾವ ಬೀರುವಂತೆ ಚೀನಾವನ್ನು ಟ್ರಂಪ್ ಆಡಳಿತ ಒತ್ತಾಯಿಸುತ್ತಿದೆ.
ಮತ್ತೊಂದೆಡೆ, ತೈವಾನ್‌ಗೆ ಅಮೆರಿಕ ಶಸ್ತ್ರಾಸ್ತ್ರ ಮಾರಾಟವನ್ನು ಶಾಶ್ವತವಾಗಿ ನಿಲ್ಲಿಸುವುದು ಹಾಗೂ ಅತ್ಯಾಧುನಿಕ ಚಿಪ್‌ಗಳ ರಫ್ತಿನ ಮೇಲಿನ ನಿರ್ಬಂಧಗಳನ್ನು ಸಡಿಲಿಸುವಂತೆ ಚೀನಾ ಬಯಸುತ್ತಿದೆ.
ವ್ಯಾಪಾರ ವಿಚಾರದಲ್ಲೂ ಎರಡೂ ದೇಶಗಳು ಬುಧವಾರ ಮಹತ್ವದ ಹೆಜ್ಜೆ ಇಟ್ಟಿವೆ. ನವೆಂಬರ್ 10ರಂದು ಮುಕ್ತಾಯಗೊಳ್ಳಬೇಕಿದ್ದ ಒಂದು ವರ್ಷದ ವ್ಯಾಪಾರ ಕದನ ವಿರಾಮವನ್ನು ಇನ್ನೂ ಎರಡು ತಿಂಗಳು ವಿಸ್ತರಿಸಲು ಉಭಯ ರಾಷ್ಟ್ರಗಳು ಒಪ್ಪಿಕೊಂಡಿವೆ. ಹೆಚ್ಚು ದೀರ್ಘಕಾಲಿಕ ಒಪ್ಪಂದಕ್ಕೆ ಬರಲು ಎರಡೂ ದೇಶಗಳು ಮಾತುಕತೆ ಮುಂದುವರಿಸಲಿವೆ.
ಮಾತುಕತೆಯ ವೇಳೆ ಕ್ಸಿ ಜಿನ್‌ಪಿಂಗ್ ತುಸು ಎಚ್ಚರಿಕೆಯ ಧಾಟಿಯಲ್ಲಿ ಮಾತನಾಡಿದರು. ಅಮೆರಿಕ ಮತ್ತು ಚೀನಾದ ಹಿತಾಸಕ್ತಿಗಳು “ಆಳವಾಗಿ ಪರಸ್ಪರ ಬೆಸೆದುಕೊಂಡಿವೆ” ಎಂದ ಅವರು, ಉಭಯ ರಾಷ್ಟ್ರಗಳ ನಡುವಿನ ಸ್ಪರ್ಧೆ ಆರೋಗ್ಯಕರವಾಗಿರಬೇಕು ಮತ್ತು ಅದು ನಿರ್ದಿಷ್ಟ ಮಿತಿಯೊಳಗೆ ಉಳಿಯಬೇಕು ಎಂದು ಹೇಳಿದರು.
ಅಮೆರಿಕ-ಚೀನಾ ಸಂಬಂಧಗಳು ‘ಥ್ಯೂಸಿಡಿಡಿಸ್ ಟ್ರ್ಯಾಪ್’ಗೆ ಸಿಲುಕದಂತೆ ನೋಡಿಕೊಳ್ಳಬೇಕು ಎಂಬ ತಮ್ಮ ಹಿಂದಿನ ಎಚ್ಚರಿಕೆಯನ್ನೂ ಚೀನಾ ಅಧ್ಯಕ್ಷರು ಪುನರುಚ್ಚರಿಸಿದರು.
ಪ್ರಬಲ ರಾಷ್ಟ್ರವನ್ನು ಹಿಂದಿಕ್ಕಲು ಬೆಳೆಯುತ್ತಿರುವ ಶಕ್ತಿ ಮುಂದಾದಾಗ ಸಂಘರ್ಷ ಅಥವಾ ಯುದ್ಧಕ್ಕೆ ಕಾರಣವಾಗಬಹುದು ಎಂಬ ಪರಿಕಲ್ಪನೆಯೇ ‘ಥ್ಯೂಸಿಡಿಡಿಸ್ ಟ್ರ್ಯಾಪ್’. ಉಭಯ ದೇಶಗಳ ನಡುವಿನ ಸಂಬಂಧ “ಒಬ್ಬರು ಗೆದ್ದು ಮತ್ತೊಬ್ಬರು ಸೋಲುವ ಕುಸ್ತಿಯಾಗಬಾರದು; ಪರಸ್ಪರ ಒಬ್ಬರನ್ನೊಬ್ಬರು ಮೀರಿಸುವ ಆರೋಗ್ಯಕರ ಸ್ಪರ್ಧೆಯಾಗಿರಬೇಕು” ಎಂದು ಕ್ಸಿ ಜಿನ್ ಪಿಂಗ್ ಹೇಳಿದರು.
ಇದೇ ವೇಳೆ, ಮುಂದಿನ ಐದು ವರ್ಷಗಳಲ್ಲಿ 1 ಲಕ್ಷ ಅಮೆರಿಕ ಯುವಕರನ್ನು ಅಧ್ಯಯನ ಮತ್ತು ವಿನಿಮಯ ಕಾರ್ಯಕ್ರಮಗಳಿಗಾಗಿ ಚೀನಾಕ್ಕೆ ಆಹ್ವಾನಿಸುವುದಾಗಿ ಷಿ ಘೋಷಿಸಿದರು. ಅಲ್ಲದೆ, ಅಟ್ಲಾಂಟಾ ಮೃಗಾಲಯಕ್ಕೆ ಎರಡು ಪಾಂಡಾಗಳನ್ನು ಕಳುಹಿಸುವುದಾಗಿಯೂ ತಿಳಿಸಿದರು. ಪಾಂಡಾಗಳನ್ನು “ಸ್ನೇಹದ ರಾಯಭಾರಿಗಳು” ಎಂದು ಬಣ್ಣಿಸಿದ ಅವರು, ಕೆಲವೇ ದಿನಗಳಲ್ಲಿ ಅವು ಅಮೆರಿಕನ್ನರನ್ನು ಭೇಟಿ ಮಾಡಲಿವೆ ಎಂದರು.
AI ವಿಚಾರದಲ್ಲೂ ಕ್ಸಿ ಎಚ್ಚರಿಕೆ
ಕೃತಕ ಬುದ್ಧಿಮತ್ತೆ ಉಭಯ ನಾಯಕರ ಮಾತುಕತೆಯಲ್ಲಿ ಪ್ರಮುಖ ವಿಷಯವಾಗಿತ್ತು. AIಯನ್ನು “ಸೂಪರ್ ಇಂಟೆಲಿಜೆನ್ಸ್” ಎಂದು ಮರುಬ್ರ್ಯಾಂಡ್ ಮಾಡಲು ಪ್ರಯತ್ನಿಸುತ್ತಿರುವ ಟ್ರಂಪ್, ಉದ್ಯೋಗಗಳ ಮೇಲೆ ತಂತ್ರಜ್ಞಾನದ ಪರಿಣಾಮ ಹಾಗೂ ಮಾನವಕುಲಕ್ಕೆ ಎದುರಾಗಬಹುದಾದ ಅಪಾಯಗಳ ಹಿನ್ನೆಲೆಯಲ್ಲಿ AI ವಿಚಾರ ಚರ್ಚೆಯ ಪ್ರಮುಖ ಅಂಶವಾಗಲಿದೆ ಎಂದು ಹೇಳಿದರು.
ಮಾತುಕತೆಯ ಆರಂಭಿಕ ಹೇಳಿಕೆಯಲ್ಲಿ ಕ್ಸಿ, AIಯನ್ನು ಅಭಿವೃದ್ಧಿಪಡಿಸುವ ಮತ್ತು ನಿರ್ವಹಿಸುವ ಸಾಮರ್ಥ್ಯ ಹಾಗೂ ಜವಾಬ್ದಾರಿ ಎರಡೂ ದೇಶಗಳಿಗಿದೆ ಎಂದು ಹೇಳಿದರು.
AI ಅಭಿವೃದ್ಧಿ ಸದಾ ಮಾನವರ ನಿಯಂತ್ರಣದಲ್ಲಿರಬೇಕು ಮತ್ತು ಜನರ ಕಲ್ಯಾಣಕ್ಕೆ ಸೇವೆ ಸಲ್ಲಿಸಬೇಕು ಎಂದು ಅವರು ಒತ್ತಿ ಹೇಳಿದರು.
ಈ ವಾರದ ಆರಂಭದಲ್ಲಿ ಎರಡೂ ದೇಶಗಳ ಹಣಕಾಸು ಸಚಿವರು ಕೂಡ ಮಾತುಕತೆ ನಡೆಸಿದ್ದರು. AIಗೆ ಸಂಬಂಧಿಸಿದ ಘಟನೆಗಳ ಕುರಿತು ಅಮೆರಿಕ ಮತ್ತು ಚೀನಾ ನಡುವೆ ಹೊಸ “ಮಾಹಿತಿ ನೀಡುವ ವ್ಯವಸ್ಥೆ” ರೂಪಿಸುವ ಪ್ರಸ್ತಾವವನ್ನು ಅಮೆರಿಕ ಮುಂದಿಟ್ಟಿದೆ.
ಕ್ಸಿಗೆ ಅದ್ಧೂರಿ ಸ್ವಾಗತ ನೀಡಿದ ಟ್ರಂಪ್
ಕ್ಸಿ ಜಿನ್‌ಪಿಂಗ್ ಅವರ ಭೇಟಿಯನ್ನು ಯಶಸ್ವಿಗೊಳಿಸಲು ಟ್ರಂಪ್ ಆಡಳಿತ ಭರ್ಜರಿ ಸಿದ್ಧತೆ ನಡೆಸಿತ್ತು. ಶ್ವೇತಭವನದ ದಕ್ಷಿಣ ಹುಲ್ಲುಗಾವಲಿನಲ್ಲಿ ಹೊಸ ಹೆಲಿಕಾಪ್ಟರ್ ಲ್ಯಾಂಡಿಂಗ್ ಪ್ಯಾಡ್ ನಿರ್ಮಾಣ ಕಾಮಗಾರಿಯನ್ನು ಅವರ ಭೇಟಿಗೂ ಮುನ್ನ ಪೂರ್ಣಗೊಳಿಸಲಾಯಿತು.
ಬುಧವಾರ ಕ್ಸಿ ಜಿನ್ ಪಿಂಗ್ ಹಾಗೂ ಅವರ ಪತ್ನಿ ಪೆಂಗ್ ಲಿಯುವಾನ್ ವಾಷಿಂಗ್ಟನ್‌ಗೆ ಆಗಮಿಸಿದಾಗ ಟ್ರಂಪ್ ದಂಪತಿ ಅವರನ್ನು ಜಾಯಿಂಟ್ ಬೇಸ್ ಆಂಡ್ರ್ಯೂಸ್‌ನಲ್ಲಿ ಸ್ವಾಗತಿಸಿದ್ದರು.
ಗುರುವಾರ ಶ್ವೇತಭವನದಲ್ಲಿ ಉಭಯ ನಾಯಕರು ಹಾಗೂ ಅವರ ಪತ್ನಿಯರು ಸೇನಾ ಗೌರವ ವಂದನೆ ವೀಕ್ಷಿಸಿದರು. ಬಳಿಕ ಮೆಲಾನಿಯಾ ಟ್ರಂಪ್ ಅವರು ಪೆಂಗ್ ಲಿಯುವಾನ್ ಅವರೊಂದಿಗೆ ಸ್ಮಿತ್ಸೋನಿಯನ್ ನ್ಯಾಷನಲ್ ಮ್ಯೂಸಿಯಂ ಆಫ್ ಏಷ್ಯನ್ ಆರ್ಟ್‌ಗೆ ಭೇಟಿ ನೀಡಿದರು.
ಸುಮಾರು 90 ನಿಮಿಷಗಳ ಮಾತುಕತೆ ಬಳಿಕ ಟ್ರಂಪ್, ಕ್ಸಿ ಅವರನ್ನು ದಕ್ಷಿಣ ಹುಲ್ಲುಗಾವಲಿಗೆ ಕರೆದೊಯ್ದು ಹೊಸ ಹೆಲಿಪ್ಯಾಡ್ ತೋರಿಸಿದರು. ಬಳಿಕ ಮೆರೈನ್ ಒನ್ ಹೆಲಿಕಾಪ್ಟರ್‌ನ್ನೂ ಷಿಗೆ ಪರಿಚಯಿಸಿದರು. ಇಬ್ಬರೂ ದೂರದಲ್ಲಿದ್ದ ಬಾಲ್‌ರೂಮ್ ನಿರ್ಮಾಣ ಸ್ಥಳವನ್ನು ವೀಕ್ಷಿಸಿದರು. “ನಮ್ಮ ಮಾತುಕತೆ ಅತ್ಯಂತ ಉತ್ತಮವಾಗಿತ್ತು” ಎಂದು ಟ್ರಂಪ್ ಸುದ್ದಿಗಾರರಿಗೆ ಸಂಕ್ಷಿಪ್ತವಾಗಿ ಹೇಳಿದರು.
ನಂತರ ಶ್ವೇತಭವನದ ಈಸ್ಟ್ ರೂಮ್‌ನಲ್ಲಿ ಷಿ ಗೌರವಾರ್ಥ ಕಪ್ಪು-ಟೈ ಔತಣಕೂಟ ಆಯೋಜಿಸಲಾಯಿತು. 1972ರಲ್ಲಿ ಅಮೆರಿಕದ ಆಗಿನ ಅಧ್ಯಕ್ಷ ರಿಚರ್ಡ್ ನಿಕ್ಸನ್ ಚೀನಾಕ್ಕೆ ನೀಡಿದ ಐತಿಹಾಸಿಕ ಭೇಟಿಯನ್ನು ಸ್ಮರಿಸುವ ಕಾರ್ಯಕ್ರಮವೂ ನಡೆಯಿತು. ಆ ಭೇಟಿಯೇ 1979ರಲ್ಲಿ ಅಮೆರಿಕ-ಚೀನಾ ರಾಜತಾಂತ್ರಿಕ ಸಂಬಂಧ ಸ್ಥಾಪನೆಗೆ ಪ್ರಮುಖ ಕಾರಣವಾಗಿತ್ತು.
ಆದರೆ, ಕ್ಸಿಗೆ ನೀಡಲಾದ ಅದ್ಧೂರಿ ಸ್ವಾಗತಕ್ಕೆ ಅಮೆರಿಕದ ಕೆಲ ಸಂಸದರು ಹಾಗೂ ಶ್ವೇತಭವನದ ಮಿತ್ರರಿಂದಲೇ ಟೀಕೆ ವ್ಯಕ್ತವಾಗಿದೆ.
ರಿಪಬ್ಲಿಕನ್ ಪಕ್ಷದ ಸೆನೆಟರ್ ರೋಜರ್ ವಿಕ್ಕರ್, ಅಮೆರಿಕ-ಚೀನಾ ಸಂಬಂಧದಲ್ಲಿರುವ ಹಲವು ಸಮಸ್ಯೆಗಳ ಹಿನ್ನೆಲೆಯಲ್ಲಿ ಚೀನಾ ಅಧ್ಯಕ್ಷರನ್ನು ಇಷ್ಟು ಅದ್ಧೂರಿಯಾಗಿ ಆಹ್ವಾನಿಸದಂತೆ ತಾವು ಸಲಹೆ ನೀಡುತ್ತಿದ್ದೆ ಎಂದು ಹೇಳಿದ್ದಾರೆ.
ವ್ಯಾಪಾರ ಕದನ ವಿರಾಮ ವಿಸ್ತರಣೆ
ಚೀನಾ ಅಧ್ಯಕ್ಷರು ವಾಷಿಂಗ್ಟನ್‌ಗೆ ಆಗಮಿಸಿದ ಕೆಲವೇ ಸಮಯದಲ್ಲಿ ಅಮೆರಿಕದ ಹಣಕಾಸು ಸಚಿವ ಸ್ಕಾಟ್ ಬೆಸೆಂಟ್, ವ್ಯಾಪಾರ ಕದನ ವಿರಾಮವನ್ನು ವಿಸ್ತರಿಸುವ ಕುರಿತು ಎರಡೂ ದೇಶಗಳು ಒಪ್ಪಂದಕ್ಕೆ ಬಂದಿರುವುದಾಗಿ ಫಾಕ್ಸ್ ನ್ಯೂಸ್‌ಗೆ ತಿಳಿಸಿದರು.
ವ್ಯಾಪಾರ ಕದನ ವಿರಾಮ ಮುಂದುವರಿಸುವುದು ಟ್ರಂಪ್ ಮತ್ತು ಕ್ಸಿ ಜಿನ್ ಪಿಂಗ್ ಇಬ್ಬರಿಗೂ ಮುಖ್ಯವಾಗಿದೆ. ನವೆಂಬರ್‌ನಲ್ಲಿ ನಡೆಯಲಿರುವ ಮಧ್ಯಂತರ ಚುನಾವಣೆಗಳಲ್ಲಿ ಕಾಂಗ್ರೆಸ್ ಮೇಲಿನ ನಿಯಂತ್ರಣ ಉಳಿಸಿಕೊಳ್ಳಲು ಟ್ರಂಪ್ ಅವರ ರಿಪಬ್ಲಿಕನ್ ಪಕ್ಷಕ್ಕೆ ಆರ್ಥಿಕ ಅಸ್ಥಿರತೆ ಮತ್ತಷ್ಟು ಸವಾಲಾಗಬಹುದು. ಮತ್ತೊಂದೆಡೆ, ಚೀನಾದ ಆಂತರಿಕ ಆರ್ಥಿಕತೆ ಸವಾಲುಗಳನ್ನು ಎದುರಿಸುತ್ತಿದ್ದರೂ ಅದರ ಉನ್ನತ ತಂತ್ರಜ್ಞಾನ ರಫ್ತುಗಳು ಬಲವಾಗಿವೆ.
ತೈವಾನ್, ಇರಾನ್ ವಿಚಾರದಲ್ಲೂ ಚರ್ಚೆ
ಓವಲ್ ಕಚೇರಿಯಲ್ಲಿ ನಡೆದ ಮಾತುಕತೆಯ ವೇಳೆ ಕ್ಸಿ ಜಿನ್ ಪಿಂಗ್, ತೈವಾನ್ ಸ್ವಾತಂತ್ರ್ಯವನ್ನು ವಿರೋಧಿಸುವಂತೆ ಟ್ರಂಪ್ ಅವರನ್ನು ಒತ್ತಾಯಿಸಿದರು.
ಬೀಜಿಂಗ್ ತನ್ನ ಭಾಗವೆಂದು ಪರಿಗಣಿಸುವ ಸ್ವಯಂ ಆಡಳಿತದ ತೈವಾನ್ ಅಮೆರಿಕ-ಚೀನಾ ಸಂಬಂಧದ ಪ್ರಮುಖ ಸೂಕ್ಷ್ಮ ವಿಚಾರವಾಗಿದೆ.
ಇರಾನ್‌ನೊಂದಿಗೆ ಸಂಪರ್ಕ ಹೊಂದಿರುವ ಚೀನಾ, ಮಾತುಕತೆಯ ಮೂಲಕ ಇರಾನ್ ಯುದ್ಧವನ್ನು ಸಾಧ್ಯವಾದಷ್ಟು ಶೀಘ್ರ ಅಂತ್ಯಗೊಳಿಸುವಂತೆ ಟ್ರಂಪ್‌ಗೆ ಕ್ಸಿ ಜಿನ್ ಪಿಂಗ್ ಅವರು ಸಲಹೆ ನೀಡಿದರು.
ಈ ಭೇಟಿಯಿಂದ ದೊಡ್ಡ ಮಟ್ಟದ ಒಪ್ಪಂದಗಳು ಅಥವಾ ಮಹತ್ವದ ನಿರ್ಣಯಗಳು ಹೊರಬರುವ ನಿರೀಕ್ಷೆ ಕಡಿಮೆ ಇದ್ದರೂ, ವಿಶ್ವದ ಎರಡು ಅತಿದೊಡ್ಡ ಆರ್ಥಿಕತೆಗಳ ನಡುವಿನ ವ್ಯಾಪಾರ, ತಂತ್ರಜ್ಞಾನ, ಭದ್ರತೆ ಮತ್ತು ಭೌಗೋಳಿಕ ರಾಜಕೀಯದ ಹಲವು ಕಗ್ಗಂಟುಗಳನ್ನು ನಿರ್ವಹಿಸುವ ಪ್ರಯತ್ನವಾಗಿ ಈ ಭೇಟಿಯನ್ನು ಕಾಣಲಾಗುತ್ತಿದೆ.
ಮಾತುಕತೆಯ ವೇಳೆ ಟ್ರಂಪ್ ಚೀನಾದ ಮಾಧ್ಯಮ ತಂಡವನ್ನು “ಅತ್ಯಂತ ಸ್ನೇಹಪರ ಪತ್ರಿಕಾ ಬಳಗ” ಎಂದು ಹಾಸ್ಯ ಮಾಡಿದರು.
ಶ್ವೇತಭವನದಲ್ಲಿ ಸಿಎನ್‌ಎನ್, ಎಂಎಸ್ ನೌ ಮತ್ತು ಪಾಲಿಟಿಕೊ ಸೇರಿದಂತೆ ಕೆಲವು ಮಾಧ್ಯಮ ಸಂಸ್ಥೆಗಳಿಗೆ ಪ್ರವೇಶ ನಿರ್ಬಂಧಿಸಿದ್ದ ಕೆಲವೇ ದಿನಗಳ ಬಳಿಕ ಈ ಹೇಳಿಕೆ ಬಂದಿದೆ. ನ್ಯಾಯಾಲಯದ ಆದೇಶದ ನಂತರ ಆ ಮಾಧ್ಯಮ ಸಂಸ್ಥೆಗಳು ಗುರುವಾರ ಮತ್ತೆ ಶ್ವೇತಭವನ ಪ್ರವೇಶಿಸಿವೆ.