ಡೊನಾಲ್ಡ್ ಟ್ರಂಪ್  
ವಿದೇಶ

ಮಧ್ಯಪ್ರಾಚ್ಯ ಸಂಘರ್ಷ: ಮಧ್ಯಾವಧಿ ಚುನಾವಣೆಗೂ ಮುನ್ನ ಇರಾನ್ ಮೇಲೆ ಅಮೆರಿಕ ದಾಳಿ?: ಟ್ರಂಪ್ ಸ್ಫೋಟಕ ಹೇಳಿಕೆ..!

ಇರಾನ್ ಪರಮಾಣು ಅಸ್ತ್ರ ಹೊಂದುವುದನ್ನು ತಡೆಯುವುದು ಅಮೆರಿಕದ ಪ್ರಮುಖ ಉದ್ದೇಶವಾಗಿದೆ. ಸಂಘರ್ಷ ಅಂತ್ಯಗೊಂಡ ಬಳಿಕ ಜಾಗತಿಕ ತೈಲ ಬೆಲೆಗಳು ಗಣನೀಯವಾಗಿ ಇಳಿಯಲಿವೆ. ನಾವು ಈ ಯುದ್ಧವನ್ನು ಶೀಘ್ರದಲ್ಲೇ ಗೆಲ್ಲಲಿದ್ದೇವೆ ಎಂದು ನಾನು ಭಾವಿಸುತ್ತೇನೆ.

ವಾಷಿಂಗ್ಟನ್: ಅಮೆರಿಕ ಮತ್ತು ಇರಾನ್ ನಡುವಿನ ಸೈನಿಕ ಸಂಘರ್ಷ ತಾರಕಕ್ಕೇರಿದೆ. ನವೆಂಬರ್‌ನಲ್ಲಿ ನಡೆಯಲಿರುವ ಅಮೆರಿಕದ ಮಧ್ಯಾವಧಿ ಚುನಾವಣೆಗೂ ಮುನ್ನವೇ ಇರಾನ್ ಮೇಲೆ ಮತ್ತೊಂದು ಸುತ್ತಿನ ಭೀಕರ ಮಿಲಿಟರಿ ದಾಳಿ ನಡೆಸುವ ಸಾಧ್ಯತೆಯಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹೇಳಿದ್ದಾರೆ.

ಭಾನುವಾರ ಫಾಕ್ಸ್ ನ್ಯೂಸ್ ವಾಹಿನಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಅವರು, ಇರಾನ್ ವಿರುದ್ಧದ ಯುದ್ಧವನ್ನು ಅಮೆರಿಕ ಶೀಘ್ರದಲ್ಲೇ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇರಾನ್ ಪರಮಾಣು ಅಸ್ತ್ರ ಹೊಂದುವುದನ್ನು ತಡೆಯುವುದು ಅಮೆರಿಕದ ಪ್ರಮುಖ ಉದ್ದೇಶವಾಗಿದೆ. ಸಂಘರ್ಷ ಅಂತ್ಯಗೊಂಡ ಬಳಿಕ ಜಾಗತಿಕ ತೈಲ ಬೆಲೆಗಳು ಗಣನೀಯವಾಗಿ ಇಳಿಯಲಿವೆ. ನಾವು ಈ ಯುದ್ಧವನ್ನು ಶೀಘ್ರದಲ್ಲೇ ಗೆಲ್ಲಲಿದ್ದೇವೆ ಎಂದು ನಾನು ಭಾವಿಸುತ್ತೇನೆ. ನಾವು ಗೆದ್ದ ತಕ್ಷಣ ತೈಲ ಬೆಲೆ ಯುದ್ಧಕ್ಕೂ ಮುನ್ನ ಇದ್ದ ಮಟ್ಟಕ್ಕಿಂತಲೂ ಬಹಳ ಕೆಳಗೆ ಇಳಿಯಲಿದೆ ಎಂದು ಹೇಳಿದ್ದಾರೆ.

ಮಧ್ಯಂತರ ಚುನಾವಣೆಗೂ ಮುನ್ನ ಅಮೆರಿಕ ಮತ್ತೆ ಇರಾನ್ ಮೇಲೆ ಸೇನಾ ದಾಳಿ ನಡೆಸಬಹುದೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಸಾಧ್ಯತೆಯನ್ನು ತಳ್ಳಿಹಾಕಲು ನಿರಾಕರಿಸಿದರು.

ನಾನು ಅದನ್ನು ಹೇಳಲು ಬಯಸುವುದಿಲ್ಲ. ಆದರೆ, ಅದು ಸಾಧ್ಯ. ನಾನು ಅದರ ಬಗ್ಗೆ ಹೇಳಲು ಬಯಸುವುದಿಲ್ಲ ಎಂದು ತಿಳಿಸಿದ್ದಾರೆ.

ಮುಖ್ಯ ವಿಷಯವೆಂದರೆ ಇರಾನ್ ಪರಮಾಣು ಅಸ್ತ್ರ ಹೊಂದುವುದಿಲ್ಲ. ಪರಮಾಣು ತಡೆ ಸಾಮರ್ಥ್ಯವೇ ಇಡೀ ವಿಚಾರದ ಪ್ರಮುಖ ಅಂಶ ಎಂದಿದದಾರೆ.

‘ಆಪರೇಷನ್ ಎಕನಾಮಿಕ್ ಔಟ್‌ಕಾಸ್ಟ್’ ಎಂದು ಅವರು ಉಲ್ಲೇಖಿಸಿದ ಆರ್ಥಿಕ ನಿರ್ಬಂಧಗಳು ಮತ್ತು ಸೇನಾ ಕಾರ್ಯಾಚರಣೆಗಳ ಮೂಲಕ ಅಮೆರಿಕ ಪ್ರಗತಿ ಸಾಧಿಸುತ್ತಿದೆಯೇ ಎಂಬ ಪ್ರಶ್ನೆಗೆ, ಎರಡೂ ರೀತಿಯ ಒತ್ತಡದಲ್ಲೂ ಅಮೆರಿಕ ಯಶಸ್ವಿಯಾಗುತ್ತಿದೆ ಎಂದು ಹೇಳಿದ್ದಾರೆ. .

ಎರಡೂ ರೀತಿಯಲ್ಲೂ ನಾವು ಗೆಲ್ಲುತ್ತೇವೆ. ಸೇನಾ ದೃಷ್ಟಿಯಿಂದ ಈಗಾಗಲೇ ಗೆದ್ದಿದ್ದೇವೆ. ಆದರೆ ಅದರಿಂದ ಕಾರ್ಯಾಚರಣೆ ನಿಂತಿದೆ ಎಂದರ್ಥವಲ್ಲ. ಅಮೆರಿಕದ ಒತ್ತಡದಿಂದ ಇರಾನ್ ಆರ್ಥಿಕತೆ ತೀವ್ರವಾಗಿ ಹಾನಿಗೊಳಗಾಗಿದೆ. ಇರಾನ್‌ನಲ್ಲಿ ಹಣದುಬ್ಬರ ಏರಿಕೆಯಾಗಿದ್ದು, ದೇಶದ ಕರೆನ್ಸಿ ಮೌಲ್ಯ ಕುಸಿದಿದೆ.

“ವರ ಹಣದ ಮೌಲ್ಯವೇ ಇಲ್ಲದಂತಾಗಿದೆ. ನಮ್ಮಲ್ಲೂ ಹಣದುಬ್ಬರವಿದೆ. ಆದರೆ ಅವರಲ್ಲಿ ಈಗ ಸುಮಾರು ಶೇ.300ರಷ್ಟು ಹಣದುಬ್ಬರವಿದೆ. ಇಂದು ಬೆಳಗ್ಗೆ ಶೇ.318 ಎಂದು ಕೇಳಿದ್ದೇನೆ. ಅವರ ಹಣ, ಆರ್ಥಿಕತೆ ಮತ್ತು ಸೇನಾ ಸಾಮರ್ಥ್ಯ ಎಲ್ಲವೂ ಸಂಕಷ್ಟದಲ್ಲಿವೆ ಎಂದು ಹೇಳಿದ್ದಾರೆ.

ಇದೇ ವೇಳೆ, ಅಮೆರಿಕದೊಂದಿಗೆ ದೀರ್ಘಕಾಲದ ಸಂಘರ್ಷಕ್ಕೂ ಇರಾನ್ ಸಿದ್ಧವಿದೆ ಎಂದು ಇರಾನ್ ವಿದೇಶಾಂಗ ಸಚಿವ ಸೆಯ್ಯದ್ ಅಬ್ಬಾಸ್ ಅರಾಘ್ಚಿ ಹೇಳಿದ್ದಾರೆ. ಇರಾನ್ ರಾಜತಾಂತ್ರಿಕ ಮಾತುಕತೆಗೆ ಇನ್ನೂ ಮುಕ್ತವಾಗಿದೆ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.

ಎನ್‌ಬಿಸಿ ನ್ಯೂಸ್‌ನ ‘ಮೀಟ್ ದಿ ಪ್ರೆಸ್’ ಕಾರ್ಯಕ್ರಮದಲ್ಲಿ ಮಾತನಾಡಿದ ಅರಾಘ್ಚಿ, ಹೋರ್ಮುಜ್ ಜಲಸಂಧಿಯನ್ನು ಮತ್ತೆ ತೆರೆಯುವ ಇರಾನ್‌ನ ಪ್ರಸ್ತಾವವನ್ನು ಟ್ರಂಪ್ ಸಾರ್ವಜನಿಕವಾಗಿ ತಿರಸ್ಕರಿಸಿದ ಬಳಿಕವೂ ಇರಾನ್ ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಸಿದ್ಧವಾಗಿದೆ ಎಂದು ಹೇಳಿದ್ದಾರೆ.

ಯುದ್ಧ ಮತ್ತೆ ಆರಂಭವಾದರೂ ನಾವು ಸಂಪೂರ್ಣವಾಗಿ ಸಿದ್ಧರಾಗಿದ್ದೇವೆ. ಯಾವುದೇ ಹೊಸ ಆಕ್ರಮಣ ಎದುರಾದರೂ, ಅದು ಡೂಮ್ಸ್‌ಡೇ ಯುದ್ಧದ ಮಟ್ಟಕ್ಕೆ ತಲುಪಿದರೂ ನಾವು ದೃಢವಾಗಿ ಎದುರಿಸುತ್ತೇವೆ. ಅಮೆರಿಕದ ಮಧ್ಯಂತರ ಚುನಾವಣೆಗಳ ಬಗ್ಗೆ ನಮಗೆ ಕಾಳಜಿಯಿಲ್ಲ. ನಮ್ಮ ರಾಷ್ಟ್ರೀಯ ಹಿತಾಸಕ್ತಿಗಳೇ ನಮಗೆ ಮುಖ್ಯ. ಅದೇ ಸಮಯದಲ್ಲಿ ರಾಜತಾಂತ್ರಿಕತೆಗೆ ನಾವು ಸಿದ್ಧರಿದ್ದೇವೆ. ಆಯ್ಕೆ ಮಾಡಬೇಕಿರುವುದು ಅಧ್ಯಕ್ಷ ಟ್ರಂಪ್ ಎಂದು ತಿಳಿಸಿದ್ದಾರೆ.

ಟ್ರಂಪ್ ಅವರ ಪ್ರಸ್ತಾವ ತಿರಸ್ಕಾರದ ವಿಚಾರವನ್ನು ಅಧಿಕೃತ ರಾಜತಾಂತ್ರಿಕ ಮಾರ್ಗಗಳ ಮೂಲಕ ಇರಾನ್‌ಗೆ ಇನ್ನೂ ತಿಳಿಸಲಾಗಿಲ್ಲ. ಯುದ್ಧ ಅಂತ್ಯಗೊಳಿಸುವ ಕುರಿತ ಒಪ್ಪಂದದ ಭಾಗವಾಗಿ ಹಾರ್ಮುಜ್ ಜಲಸಂಧಿಯನ್ನು ಮತ್ತೆ ತೆರೆಯಲು ಇರಾನ್ ಸಿದ್ಧವಿದೆ ಎಂದು ಪುನರುಚ್ಚರಿಸಿದ್ದಾರೆ.

ನಮ್ಮ ಹಣ, ಅಕ್ರಮವಾಗಿ ಸ್ಥಗಿತಗೊಳಿಸಿರುವ ನಮ್ಮ ಆಸ್ತಿಗಳನ್ನು ಬಿಡುಗಡೆ ಮಾಡಬೇಕು. ನಮ್ಮ ತೈಲವನ್ನು ಮಾರಾಟ ಮಾಡಲು ನಮಗೆ ಅವಕಾಶ ನೀಡಬೇಕು ಎಂದಿದ್ದಾರೆ.

ಜೂನ್‌ನಲ್ಲಿ ತಾತ್ಕಾಲಿಕ ಕದನ ವಿರಾಮಕ್ಕಾಗಿ ಸಹಿ ಮಾಡಲಾಗಿದ್ದ ತಿಳಿವಳಿಕೆ ಒಪ್ಪಂದದಲ್ಲಿಯೂ ಇದೇ ರೀತಿಯ ಷರತ್ತುಗಳಿದ್ದವು ಎಂದು ಅವರು ಹೇಳಿದರು. ಆದರೆ ಬಳಿಕ ಎರಡೂ ಬದಿಗಳಿಂದ ನಡೆದ ಪರಸ್ಪರ ದಾಳಿಗಳ ಹಿನ್ನೆಲೆಯಲ್ಲಿ ಆ ಕದನ ವಿರಾಮ ವಿಫಲವಾಗಿತ್ತು.

ನಮ್ಮನ್ನು ಕೇಳಿದರೆ, ಮತ್ತೆ ರಾಜತಾಂತ್ರಿಕತೆಗೆ ಮರಳದಿರಲು ಯಾವುದೇ ಕಾರಣವಿಲ್ಲ. ಆದರೆ, ನಾನು ಇನ್ನೂ ರಾಜತಾಂತ್ರಿಕ ಪ್ರಯತ್ನ ಮುಂದುವರಿಸುತ್ತಿದ್ದೇನೆ. ಏಕೆಂದರೆ ಶಾಂತಿಗಾಗಿ ಇರುವ ಯಾವುದೇ ಅವಕಾಶವನ್ನು ನಾವು ಕಳೆದುಕೊಳ್ಳಬಾರದು ಎಂದು ನಾನು ಭಾವಿಸುತ್ತೇನೆ ಎಂದು ಅರಾಘ್ಚಿ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಗ್ರಾಹಕರಿಗೆ ಗುಡ್‌ನ್ಯೂಸ್: ಪ್ರಸ್ತಾವಿತ ಬ್ಯಾಂಕ್ ಮುಷ್ಕರ ಮುಂದೂಡಿಕೆ, IBA- UFBU ಮಾತುಕತೆ ಬಳಿಕ ಮಹತ್ವದ ನಿರ್ಧಾರ

LPU ಕ್ಯಾಂಪಸ್‌ನಲ್ಲಿ ಮತ್ತೆ ಹಿಂಸಾಚಾರ: ಪೊಲೀಸ್ ವಾಹನಗಳಿಗೆ ಬೆಂಕಿ, ಪೊಲೀಸರಿಗೆ ಗಾಯ, ತನಿಖೆಗೆ SIT ರಚನೆ!

ಅಕ್ಟೋಬರ್ 7 ರ ದಾಳಿಯ ಮೊದಲು ಹಮಾಸ್‌ ಎಚ್ಚರಿಕೆ ನೀಡಿತ್ತು: ಇಸ್ರೇಲ್‌ನ ಮಾಜಿ ರಕ್ಷಣಾ ಸಚಿವ ಸ್ಫೋಟಕ ಮಾಹಿತಿ

"ಆಪ್ ಕಾರ್ಯಕರ್ತ ನನ್ನ ಕುಟುಂಬವನ್ನು ನಿಂದಿಸಿದ, ಅವರದ್ದೇ ಭಾಷೆಯಲ್ಲಿ ಉತ್ತರ ಕೊಟ್ಟೆ: ಕಪಾಳಮೋಕ್ಷ ವಿವಾದದ ಬಗ್ಗೆ ದೆಹಲಿ ಸಚಿವ ಪರ್ವೇಶ್ ವರ್ಮಾ

'ದಾಖಲೆಗಳ ಹಿಂದೆ ಎಂದೂ ಓಡಿಲ್ಲ, ಹೊಸ ಅವತಾರ ಅನ್ಲಾಕ್‌ ಮಾಡಬೇಕು': Virat Kohli ಮಾತಿನ ಮರ್ಮವೇನು?